ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಪ್ರದೇಶದಲ್ಲಿ ಮಳಿಗೆಗಳದ್ದೇ ದರ್ಬಾರು!

l ಪ್ರಮುಖ ರಸ್ತೆಗಳಿಗೆ ಅಭಿವೃದ್ಧಿಯ ಭಾಗ್ಯ l ಖಾಲಿ ನಿವೇಶನಗಳಲ್ಲಿ ಕಸದ ರಾಶಿ l ಕುಡಿಯುವ ನೀರಿನ ಸಮಸ್ಯೆ
ಅಕ್ಷರ ಗಾತ್ರ

ದಾವಣಗೆರೆ: ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖರು ವಾಸಿಸುವಂತಹ  ಬೃಹತ್‌ ಮನೆಗಳನ್ನು ಒಳಗೊಂಡಿರುವ ವಸತಿ ಪ್ರದೇಶವಿದು. ಆದರೆ, ಇಲ್ಲಿ ಉತ್ತಮ ಒಳಚರಂಡಿ ವ್ಯವಸ್ಥೆ ಇಲ್ಲ. ರಸ್ತೆ ಕಾಮಗಾರಿ ನೆಪದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ ಹಾಗೂ ಒಳಚರಂಡಿಯ ಪೈಪ್‌ಗಳನ್ನು ಅಲ್ಲಲ್ಲಿ ಒಡೆದು ಹಾಕಲಾಗಿದೆ. ಇದರ ನಡುವೆಯೇ ಸಾಲು ಸಾಲು ವಾಣಿಜ್ಯ ಬೃಹತ್‌ ಮಳಿಗೆಗಳು ತಲೆ ಎತ್ತಿವೆ. ಬಹುತೇಕ ಮಳಿಗೆಗಳು ಪಾಲಿಕೆಯಿಂದ ಪರವಾನಗಿ ಪಡೆಯದೇ ತೆರಿಗೆ ಹಣವನ್ನೂ ಭರಿಸದೇ ನಿತ್ಯ ಲಕ್ಷಾಂತರ ಮೊತ್ತದ ವಹಿವಾಟು ನಡೆಸುತ್ತಿವೆ! 
–ಇದು ಪಾಲಿಕೆಯ 32ನೇ ವಾರ್ಡ್‌ಗೆ ಒಳಪಡುವ ಎಂಸಿಸಿ (Middle Class  Colony) ‘ಬಿ’ ಬ್ಲಾಕ್‌ನ ಸಂಕ್ಷಿಪ್ತ ಚಿತ್ರಣ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಶಾಸಕ ಯಜಮಾನ್‌ ಮೋತಿ ವೀರಣ್ಣ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಇಲ್ಲಿ ವಾಸಿಸುತ್ತಿದ್ದಾರೆ. ವಾರ್ಡ್‌ನ ಸುತ್ತಲಿನ ರಸ್ತೆಗಳನ್ನು ಸಿಮೆಂಟ್‌ ರಸ್ತೆಗಳನ್ನಾಗಿ ಪರಿವರ್ತಿಸ ಲಾಗಿದೆ. ಆದರೆ, ಒಳ ರಸ್ತೆಗಳಿಗೆ ಸಿಮೆಂಟ್‌ ಭಾಗ್ಯವನ್ನು ಕರುಣಿಸಿಲ್ಲ. ವಸತಿ ಪ್ರದೇಶವಾದರೂ ಇಲ್ಲಿ ವಾಣಿಜ್ಯ ಮಳಿಗೆಗಳದ್ದೇ ದರ್ಬಾರು. ಡೆಂಟಲ್‌ ಕಾಲೇಜು ರಸ್ತೆ, ಯುಬಿಡಿಟಿ ಎಂಜಿನಿಯರಿಂಗ್‌ ಕಾಲೇಜು ರಸ್ತೆ, ಜೆಜೆಎಂ ವೈದ್ಯಕೀಯ ವಿದ್ಯಾರ್ಥಿ ನಿಲಯ ರಸ್ತೆ, ಮಾಮಾಸ್‌ ಜಾಯಿಂಟ್‌ ರಸ್ತೆ ಸೇರಿದಂತೆ ಇಲ್ಲಿನ ಬಹುತೇಕ ರಸ್ತೆಗಳಲ್ಲಿ ನೂರಾರು ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ನಿತ್ಯ ವಾಹನಗಳ ಸಂಚಾರ ದಟ್ಟಣೆ ತುಸು ಹೆಚ್ಚು ಇದೆ ಎನ್ನಬಹುದು.

‘ಅಗತ್ಯ ಮೂಲಸೌಲಭ್ಯಗಳೊಂದಿಗೆ ಸುಸಜ್ಜಿತವಾದ ಬಡಾವಣೆಯನ್ನು ನಿರ್ಮಿಸಲಾಯಿತು. ಆದರೆ, ಇತ್ತೀಚಿನ ದಿನಗಳಲ್ಲಿ ಇದು ವಾಣಿಜ್ಯ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ. ಇಲ್ಲಿನ ಪಾಲಿಕೆ ನಿವೇಶನ ಹಾಗೂ ಖಾಸಗಿ ನಿವೇಶನಗಳು ತ್ಯಾಜ್ಯ ಸುರಿಯುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ರಸ್ತೆಯ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದಾಗಿ ಜನರ ಓಡಾಟಕ್ಕೆ ತೊಂದರೆ ಯಾಗುತ್ತಿದೆ’ ಎಂದು ಎಂಸಿಸಿ ‘ಬಿ’ ಬ್ಲಾಕ್‌ 4ನೇ ಮುಖ್ಯರಸ್ತೆಯ ನಿವಾಸಿ ಬಿ.ಎಂ. ರೇವಣಸಿದ್ದಪ್ಪ ದೂರಿದರು.

‘ವೈದ್ಯಕೀಯ, ನರ್ಸಿಂಗ್‌ ಹಾಗೂ ಎಂಜಿನಿಯರಿಂಗ್‌ ಪದವಿ ಶಿಕ್ಷಣ  ಪಡೆಯುತ್ತಿರುವ ಬೇರೆ ರಾಜ್ಯಗಳ ನೂರಾರು  ವಿದ್ಯಾರ್ಥಿಗಳು  ಇಲ್ಲಿ ವಾಸ ಮಾಡುತ್ತಿದ್ದಾರೆ. ಇದರಿಂದಾಗಿ  ಹೆಸರಾಂತ ಕಂಪೆನಿಗಳ ಹತ್ತಾರು ಬಗೆಯ ಬ್ರಾಂಡೆಡ್‌ ಸಿದ್ಧಉಡುಪು ಹಾಗೂ ಪಾದರಕ್ಷೆ ಮಾರಾಟದ ಬೃಹತ್‌ ಮಳಿಗೆಗಳು ಈ ಪ್ರದೇಶದಲ್ಲಿ ತಲೆಎತ್ತಿವೆ. ಕೆಲ ಮಳಿಗೆಗಳು ಪಾಲಿಕೆಯಿಂದ ಪರವಾನಗಿ ಪಡೆದು ವಾಣಿಜ್ಯ ವಹಿವಾಟು ನಡೆಸಿದರೆ, ಇನ್ನು ಕೆಲವು ಮಳಿಗೆಗಳು ಪರವಾನಗಿ ಪಡೆಯದೇ ವಹಿವಾಟು ನಡೆಸುತ್ತಿವೆ. ಇದರಿಂದ ಪಾಲಿಕೆಯ ಬೊಕ್ಕಸಕ್ಕೆ ವಾರ್ಷಿಕ ಸುಮಾರು ₹ 40 ಲಕ್ಷದಿಂದ ₹ 50 ಲಕ್ಷದವರೆಗೆ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಗೊತ್ತಿದ್ದರೂ ಅವರು ಜಾಣ ಕಿವುಡರಾಗಿದ್ದಾರೆ. ಇನ್ನು 10 ವರ್ಷಗಳ ಅವಧಿಯಲ್ಲಿಯೇ ಇಲ್ಲಿನ ಪ್ರದೇಶವು ಸಂಪೂರ್ಣವಾಗಿ ವಾಣಿಜ್ಯ ಕೇಂದ್ರವಾಗಿ ಬದಲಾದರೂ ಆಶ್ಚರ್ಯವಿಲ್ಲ’ ಎಂದು ಇಲ್ಲಿನ ನಿವಾಸಿ ಮಾಜಿ ಶಾಸಕ ಯಜಮಾನ್‌ ಮೋತಿ ವೀರಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆ ನಿಯಮ ಉಲ್ಲಂಘನೆ: ‘ವಾಸಯೋಗ್ಯ ಪ್ರದೇಶದಲ್ಲಿ ಜೀವನಕ್ಕೆ ಅಗತ್ಯ ವಸ್ತುಗಳ ಮಾರಾಟಕ್ಕಾಗಿ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅವಕಾಶವಿದೆ. ಆದರೆ, ಇಲ್ಲಿ ಅನಧಿಕೃತವಾಗಿ ಬೃಹತ್‌ ವಾಣಿಜ್ಯ ಮಳಿಗೆಗಳನ್ನು ತೆರೆಯುವ ಮೂಲಕ ಪಾಲಿಕೆಯ ನಿಯಮವನ್ನು ಸಂಪೂರ್ಣ ವಾಗಿ ಉಲ್ಲಂಘನೆ ಮಾಡಲಾಗಿದೆ’ ಎಂದು ಅವರು ದೂರಿದರು.

‘ಸಚಿವರು ಹಾಗೂ ಶಾಸಕರು ವಾಸಿಸುವ ಸುತ್ತಮುತ್ತಲಿನ ಪ್ರದೇಶವನ್ನು ನಿತ್ಯ ಸ್ವಚ್ಛವಾಗಿ ಇಡಲಾಗುತ್ತಿದೆ. ಆದರೆ, ವಾಣಿಜ್ಯ ಮಳಿಗೆಗಳಿರುವ ಪ್ರದೇಶ ಗಳಲ್ಲಿನ ಖಾಲಿ ನಿವೇಶನದಲ್ಲಿ  ವೈದ್ಯಕೀಯ ತ್ಯಾಜ್ಯ,  ಹೋಟೆಲ್‌ ಹಾಗೂ ಮನೆಗಳ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಪೌರಕಾರ್ಮಿಕರು ಸಕಾಲಕ್ಕೆ ಅದನ್ನು ವಿಲೇವಾರಿ ಕೂಡ ಮಾಡುವುದಿಲ್ಲ. ಇದರಿಂದಾಗಿ ಹಂದಿಗಳ ಹಾವಳಿ ಇಲ್ಲಿ ಹೆಚ್ಚಾಗಿದೆ’ ಎಂದು 11ನೇ ಮುಖ್ಯರಸ್ತೆಯ ನಿವಾಸಿ ಶಿವಾನಂದ ದೂರಿದರು.

‘ಇಲ್ಲಿನ  ಈಜುಕೊಳದ  ರಸ್ತೆ ಹಾಗೂ  ಜೆಜೆಎಂ  ವೈದ್ಯಕೀಯ  ವಿದ್ಯಾರ್ಥಿನಿಲಯ ರಸ್ತೆ ಸೇರಿದಂತೆ ವಾರ್ಡ್‌ನ ಕೆಲ ಪ್ರಮುಖ ರಸ್ತೆಗಳನ್ನು ಸಿಮೆಂಟ್‌ ರಸ್ತೆಗಳನ್ನಾಗಿ ಪರಿವರ್ತಿಸ ಲಾಗಿದೆ. ಇದರಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಕಾಸಲ್‌ ವಿಠಲ್‌ ರಾವ್‌
ಉದ್ಯಾನ, ಹಿರಿಯ ನಾಗರಿಕರ ಉದ್ಯಾನ ಹಾಗೂ ಪಾಲಿಕೆಯ ಈಜುಕೊಳವನ್ನು ಅಭಿವೃದ್ಧಿ ಪಡಿಸಲಾಗಿದ್ದು, ವಾರ್ಡ್‌ನ ಹಿರಿಯ ನಾಗರಿಕರಿಗೆ ಹಾಗೂ ವಾಯುವಿಹಾರಿಗಳಿಗೆ ತುಂಬಾ ಅನುಕೂಲವಾಗಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ಪ್ರಕಾಶ್‌.

₹ 1ಲಕ್ಷದವರೆಗೆ ಬಾಡಿಗೆ: ‘ವಾರ್ಡ್‌ನಲ್ಲಿ ಸುಮಾರು 4 ಸಾವಿರ ವಾಣಿಜ್ಯ ಮಳಿಗೆಗಳಿದ್ದು, ತಿಂಗಳಿಗೆ ₹ 10 ಸಾವಿರದಿಂದ ₹ 1 ಲಕ್ಷದವರೆಗೆ ಬಾಡಿಗೆ ನಿಗದಿ ಮಾಡಲಾಗಿದೆ. ಇವುಗಳಲ್ಲಿ ಕೆಲ ಮಳಿಗೆಗಳು ಪಾಲಿಕೆಯಿಂದ ಪರವಾನಗಿ ಪಡೆಯದೇ ವಾಹಿವಾಟು ನಡೆಸುತ್ತಿವೆ. ಈ ಮಳಿಗೆಗಳ ಮಾಲೀಕರು ಪಾಲಿಕೆಗೆ ಕಂದಾಯ ಶುಲ್ಕ ತುಂಬದೇ ವಂಚಿಸುತ್ತಿದ್ದಾರೆ. ಇಲ್ಲಿನ ಭಾರತ ಸೇವಾದಳ ಕೇಂದ್ರದ ಬಳಿ ಕೋಟ್ಯಂತರ ಮೌಲ್ಯದ ನಿವೇಶನವಿದ್ದು, ಅಲ್ಲಿ ವಾರ್ಡ್‌ನ ಮನೆಗಳ ಹಾಗೂ ಹೋಟೆಲ್‌ಗಳ ತ್ಯಾಜ್ಯ ಸುರಿಯಲಾ ಗುತ್ತಿದೆ. ಇದನ್ನು ನಿಯಂತ್ರಿಸಿ, ವಾಣಿಜ್ಯ ಮಳಿಗೆ ಕಟ್ಟಡಗಳನ್ನು ನಿರ್ಮಿಸಿ, ಬಾಡಿಗೆ ನೀಡಿದರೆ ಪಾಲಿಕೆ ಬೊಕ್ಕಸಕ್ಕೆ ವಾರ್ಷಿಕ   ₹ 1 ಕೋಟಿಗೂ ಹೆಚ್ಚು  ಬಾಡಿಗೆ ಬರುತ್ತದೆ’  ಎಂದು ವಾರ್ಡ್‌  ಸದಸ್ಯರಾದ ಶೋಭಾ ಶಿವಾನಂದ ಪಲ್ಲಾಗಟ್ಟಿ ಅವರ  ಪತಿ ಪಲ್ಲಗಟ್ಟಿ  ಶಿವಾನಂದಪ್ಪ ಹೇಳುತ್ತಾರೆ.

ವಾರ್ಡ್‌ನಲ್ಲಿ ಉತ್ತಮ ಒಳಚರಂಡಿ ವ್ಯವಸ್ಥೆ ಇಲ್ಲ. ಪ್ರಮುಖ ರಸ್ತೆಗಳನ್ನು ಮಾತ್ರ ಅಭಿವೃದ್ಧಿ ಪಡಿಸಲಾಗಿದೆ. ಖಾಲಿ ನಿವೇಶನದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಪಾಲಿಕೆ ಸಿಬ್ಬಂದಿ ಸಕಾಲಕ್ಕೆ ವಿಲೇವಾರಿ ಮಾಡುವುದಿಲ್ಲ’ ಎಂದು ಇಂದೂಧರ್‌ ನಿಶಾನಿಮಠ ದೂರಿದರು.

ವಾರ್ಡ್‌ ಸದಸ್ಯರು ಏನಂತಾರೆ?
ಎಂಸಿಸಿ ‘ಬಿ’ ಬ್ಲಾಕ್‌ನ 1ನೇ ಮುಖ್ಯರಸ್ತೆಯಿಂದ 11ನೇ ಮುಖ್ಯರಸ್ತೆವರೆಗಿನ 7ಕ್ರಾಸ್‌ಗಳು ವಾರ್ಡ್‌ 32ರ ವ್ಯಾಪ್ತಿಗೆ ಒಳಪಡುತ್ತವೆ. ಈಗಾಗಲೇ ₹ 10 ಕೋಟಿ ವೆಚ್ಚದ ಅನುದಾನದಲ್ಲಿ ಸದ್ಯೋಜಾತ ಶಿವಾಚಾರ್ಯ ಹಿರೇಮಠ ರಸ್ತೆ, ಡೆಂಟಲ್‌ ಕಾಲೇಜು ವಿದ್ಯಾರ್ಥಿನಿಲಯದ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳನ್ನು ಸಿಮೆಂಟ್‌ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. ಇದರೊಂದಿಗೆ ಕಾಸಲ್‌ ವಿಠಲ್‌ರಾವ್‌ ಉದ್ಯಾನ, ಪಾಲಿಕೆಯ ಈಜುಕೊಳ, ಹಿರಿಯ ನಾಗರಿಕರ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮಕ್ಕಳ ಉದ್ಯಾನದ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ವಾರ್ಡ್‌ನ ಪ್ರತಿ ರಸ್ತೆಗೆ ನಾಮಫಲಕಗಳನ್ನು ಅಳವಡಿಸುವ ಹಾಗೂ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಿಂದ ದೃಶ್ಯ ಕಲಾ ಕಾಲೇಜುವರೆಗೆ ನಗರ ಸಾರಿಗೆ ಬಸ್‌ಗಳ ಸ್ಯಾಟ್‌ಲೈಟ್‌ ನಿಲ್ದಾಣ ಆರಂಭಿಸುವ ಚಿಂತನೆ ಇದೆ. ಇದಕ್ಕಾಗಿ ಇನ್ನೂ ₹ 3 ಕೋಟಿ ಹೆಚ್ಚಿನ ಅನುದಾನದ ಅಗತ್ಯವಿದೆ. ಉಳಿದ ಅವಧಿಯೊಳಗೆ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗುವುದು. ವಾರ್ಡ್‌ನಲ್ಲಿ ಅನಧಿಕೃತ ಮಳಿಗೆಗಳು ಹೆಚ್ಚಾಗಿದ್ದು, ಅವುಗಳಿಂದಲೇ ಪಾಲಿಕೆಗೆ ವಾರ್ಷಿಕವಾಗಿ ಸುಮಾರು ₹ 50ಲಕ್ಷ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

–ಪಿ.ಎಸ್‌. ಶೋಭಾ ಶಿವಾನಂದ ಪಲ್ಲಾಗಟ್ಟಿ. ಪಾಲಿಕೆ ಸದಸ್ಯೆ, 32ನೇ ವಾರ್ಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT