ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವಾಗದಿದ್ದರೆ ಕಾಮಗಾರಿ ಇಲ್ಲ

ಎರಡನೇ ಹಂತದ ‘ನಗರ ಪ್ರದಕ್ಷಿಣೆ’ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಎಚ್ಚರಿಕೆ
Last Updated 3 ಫೆಬ್ರುವರಿ 2017, 5:50 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನಗರದ ಹಲವು ಬಡಾವಣೆಗಳಲ್ಲಿ ನಾಗರಿಕರು ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ಗಮನಕ್ಕೆ ಬಂದಿದೆ. ಈ ಒತ್ತುವರಿಯನ್ನು ಸ್ವ ಇಚ್ಛೆಯಿಂದ ತೆರವುಗೊಳಿಸಬೇಕು. ಇಲ್ಲದಿದ್ದರೆ ಆ ಬಡಾವಣೆಗಳಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ಎರಡನೇ ಹಂತದ ‘ನಗರ ಪ್ರದಕ್ಷಿಣೆ’ ಕಾರ್ಯ ಕ್ರಮದಲ್ಲಿ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಒತ್ತುವರಿ ತೆರವುಗೊಳಿಸದಿದ್ದರೆ  ಬಲವಂತವಾಗಿ ತೆರವು ಗೊಳಿಸ ಬೇಕಾಗುತ್ತದೆ. ನಾಗರಿಕರು ನಗರದ ಅಭಿವೃದ್ಧಿಗೆ ಸಹಕಾರ ನೀಡುವ ಮೂಲಕ  ಅಭಿವೃದ್ಧಿಯ ಭಾಗವಾಗಬೇಕು. ಆಗ ಮಾತ್ರ ನಗರದ ಸೌಂದರ್ಯ ಕಾಪಾಡಲು ಸಾಧ್ಯ’ ಎಂದು ಸಲಹೆ ನೀಡಿದರು.

‘ಅಭಿವೃದ್ಧಿ ಕಾರ್ಯ ಕೈಗೊಳ್ಳ ಬೇಕಾದರೆ ನಾಗರಿಕರು ಪ್ರಾಮಾ ಣಿಕವಾಗಿ ತೆರಿಗೆ ಪಾವತಿಸಬೇಕು. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ನಾಗರಿಕರು ಆಸ್ತಿಯನ್ನು ಘೋಷಣೆ ಮಾಡಿಕೊಳ್ಳಬೇಕು. ಆದರೆ, ಕೆಲವರು ವಾಣಿಜ್ಯ ಉಪಯೋಗಕ್ಕೆ ಬಾಡಿಗೆ ನೀಡುತ್ತಿದ್ದರೂ ಅದನ್ನು ವಾಸದ ಮನೆ ಎಂದು ಘೋಷಣೆ ಮಾಡಿಕೊಂಡಿರುವ ಉದಾಹರಣೆಗಳು ಇವೆ. ಇದನ್ನು ನಗರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಥಳೀಯ ಸಂಸ್ಥೆಗೆ ಸಂಪ ನ್ಮೂಲವನ್ನು ಸಂಗ್ರಹಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ಎದುರು ₹ 50 ಲಕ್ಷ ವೆಚ್ಚದಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅವು ಸರಿಯಾದ ಸ್ಥಳದಲ್ಲಿ ನಿರ್ಮಾಣವಾಗದೇ  ಆ ಮಳಿಗೆಯನ್ನು ಬಾಡಿಗೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ಮಳಿಗೆ ಹರಾಜು ಬಗ್ಗೆ ನಗರಸಭೆ ಹೆಚ್ಚಿನ ಪ್ರಚಾರ ಮಾಡಬೇಕು. ಪಾರದರ್ಶಕ  ಹರಾಜು ಮೂಲಕ ವಿಲೇವಾರಿ ಮಾಡಲು ಪೌರಾಯುಕ್ತರಿಗೆ ಸೂಚಿಸಲಾಗಿದೆ’ ಎಂದರು. 

ಗಾಂಧಿ ವೃತ್ತದಿಂದ ಸಚಿವರ ನಗರ ವೀಕ್ಷಣೆ ಪ್ರಾರಂಭವಾಯಿತು. ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಸಂಕೀರ್ಣ ಕಾಮಗಾರಿ ವೀಕ್ಷಿಸಿದರು.  ಸಂತೆ ಹೊಂಡದ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಅತ್ಯಾಧುನಿಕ ಮಾರುಕಟ್ಟೆ ಸಂಕೀರ್ಣದ ಕಾಮಗಾರಿಯನ್ನೂ ಪರಿಶೀಲಿಸಿದರು.

ಖಾಸಗಿ ಬಸ್ ನಿಲ್ದಾಣ, ಮೆದೇಹಳ್ಳಿ ರಸ್ತೆಯಿಂದ ವೆಂಕಟೇಶ್ವರ ಟಾಕೀಸ್ ಮುಂಭಾಗದಿಂದ ಗೋಪಾಲಪುರ ರಸ್ತೆ ವೀಕ್ಷಣೆ ಮಾಡಿ ಮೆದೇಹಳ್ಳಿ ರಸ್ತೆಯಿಂದ ಗೋಪಾಲಪುರ ರಸ್ತೆ ಸಂಪರ್ಕಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಸೂಚಿಸಿದರು. ಷಾ ಸೈಕಲ್ ಶಾಪ್ ಮೆದೇಹಳ್ಳಿ ರಸ್ತೆಯಿಂದ ಅಂಜುಮಾನ್ ವೃತ್ತದ ಮೂಲಕ ಐಶ್ವರ್ಯ ಫೋರ್ಟ್ ಹೋಟೆಲ್‌ವರೆಗೆ ನಗರ ವೀಕ್ಷಣೆ ಮಾಡಿದರು. ಮುನ್ಸಿಪಲ್ ಕಾಲೊನಿಗೆ ಭೇಟಿ ನೀಡಿದ ವೇಳೆ ಅಸಮರ್ಪಕ ಸೇತುವೆ ಕಾಮಗಾರಿ ಕಂಡು, ತಕ್ಷಣವೇ ದುರಸ್ತಿಗೊಳಿಸು­ವಂತೆ ನಗರಸಭೆ ಎಂಜಿನಿಯರ್‌ಗೆ ಸೂಚನೆ ನೀಡಿದರು.

ಹೌಸಿಂಗ್ ಬೋರ್ಡ್‌ ಬಡಾವಣೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ ಮತ್ತು ಶಾಸಕರು, ನಗರಸಭೆ ಅಧ್ಯಕ್ಷರ ಎದುರು ನಾಗರಿಕರು ರಸ್ತೆ ಸಮಸ್ಯೆಯ ಬಗ್ಗೆ ಅಳಲು ತೋಡಿಕೊಂಡರು.  ಮಳೆಗಾಲ ಬಂದರೆ ಸಂಚಾರ ದುಸ್ತರ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಂಜನೇಯ . ‘ಇಡೀ ಹೌಸಿಂಗ್ ಬೋರ್ಡ್‌ ಬಡಾವಣೆಯ ರಸ್ತೆ ಅಭಿವೃದ್ಧಿಗೆ ಪ್ರತ್ಯೇಕ ಪ್ಯಾಕೇಜ್‌ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.
ಸಾದಿಕ್ ನಗರದಲ್ಲಿ ವಸತಿ ಯೋಜನೆಯಡಿ ನಿರ್ಮಾಣ ಮಾಡುತ್ತಿರುವ ಮನೆಗಳನ್ನು  ವೀಕ್ಷಿಸುವ ವೇಳೆ  ನಾಗರಿಕರು, ‘ಈ ಮನೆಗಳಿಗೆ ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ಕ್ಯೂರಿಂಗ್ ಮಾಡಲು ನೀರಿಲ್ಲ, ಕುಡಿಯುವ ನೀರು ಉಪ್ಪಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ’ ಎಂದು ಮನವಿ ಮಾಡಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ ‘ನಿವೇಶನ ಮತ್ತು ವಸತಿಗಾಗಿ ಸುಮಾರು 9,800 ಅರ್ಜಿಗಳು ಸಲ್ಲಿಕೆಯಾಗಿದ್ದು,  4ರಿಂದ 5ಸಾವಿರ ಅರ್ಜಿಗಳು ಅನರ್ಹವಾಗಿವೆ.   ಬಡವರಿಗೆ ವಸತಿ ನೀಡಲು ವಿವಿಧ ವಸತಿ ನಿಗಮಗಳಿಂದ ಸುಮಾರು 1,800 ಮನೆಗಳನ್ನು ನೀಡಲು ಅವಕಾಶವಿದೆ.  ಇದರಿಂದ ಸೂರು, ನಿವೇಶನ ಇಲ್ಲದ ಬಡವರಿಗೆ ಅನುಕೂಲವಾಗಲಿದೆ’ ಎಂದರು. 
 
ನಗರ ಪ್ರದಕ್ಷಿಣೆಯಲ್ಲಿ ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಉಪಾಧ್ಯಕ್ಷ ಮಲ್ಲೇಶಪ್ಪ, ನಗರಸಭೆ ಸದಸ್ಯೆ ಮಂಜುಳಾ, ಪೌರಾಯುಕ್ತ ಚಂದ್ರಪ್ಪ ಹಾಗೂ ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ಹನುಮಂತಪ್ಪ ಹಾಗೂ ವಿವಿಧ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT