ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಿಂದಲೇ ರಂಗ ಶಿಕ್ಷಣ ಕಡ್ಡಾಯವಾಗಲಿ

ನಾಟಕ ಪ್ರದರ್ಶನದಲ್ಲಿ ರಂಗಭೂಮಿ ಕಲಾವಿದ ಮಂಡ್ಯ ರಮೇಶ ಮನವಿ
Last Updated 3 ಫೆಬ್ರುವರಿ 2017, 5:57 IST
ಅಕ್ಷರ ಗಾತ್ರ

ಬೀದರ್: ಶಾಲಾ, ಕಾಲೇಜುಗಳಲ್ಲಿ ರಂಗ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಚಲನಚಿತ್ರ ನಟ ಮಂಡ್ಯ ರಮೇಶ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ರಂಗತೋರಣ ವತಿಯಿಂದ ‘ಸಂಕ್ರಾಂತಿ ರಂಗ ಸಂಭ್ರಮ’ ಪ್ರಯುಕ್ತ ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ನಡೆದ‘ಸಾಯೋ ಆಟ’ ನಾಟಕ ಪ್ರದರ್ಶನದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಎಲ್ಲ ಶಾಲಾ ಕಾಲೇಜುಗಳಲ್ಲಿ ಚಿತ್ರಕಲಾ ಶಿಕ್ಷಕರ ಮಾದರಿಯಲ್ಲಿ ರಂಗ ಶಿಕ್ಷಕರನ್ನು  ನೇಮಕ ಮಾಡಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ ರಂಗ ಕಲೆಯನ್ನೂ ಪರಿಚಯಿಸುವ ಕೆಲಸ ಮಾಡಬೇಕು. ರಂಗ ಶಿಕ್ಷಣದ ಮೂಲಕ ಮಕ್ಕಳಿಗೆ ಕಲೆ, ಸಂಸ್ಕೃತಿ ಹಾಗೂ ಇತಿಹಾಸವನ್ನೂ ಪರಿಚಯಿಸಬಹುದು. ಇದರಿಂದ ರಂಗ ಭೂಮಿಗೂ ಗಟ್ಟಿ ನೆಲೆ ಒದಗಿಸಿಕೊಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ನೀನಾಸಂ ಹಾಗೂ ರಂಗಾಯಣ ಸಂಸ್ಥೆಗಳು ರಂಗಭೂಮಿಗೆ ಜೀವ ತುಂಬುವ ಕೆಲಸವನ್ನು ಮಾಡುತ್ತ ಬಂದಿವೆ. ರಂಗತೋರಣವು ವಿದ್ಯಾರ್ಥಿಗಳಲ್ಲಿನ ರಂಗ ಧ್ವನಿಯನ್ನು ಹೊರಗೆಡವಲು ನಿರಂತರ ಪ್ರಯತ್ನ ನಡೆಸಿದೆ. ರಾಜಕೀಯ ಬೆರತುಕೊಳ್ಳದಂತೆ ಎಚ್ಚರಿಕೆ ವಹಿಸಿ, ಸ್ವಹಿತಾಸಕ್ತಿಯನ್ನು ಬದಿಗಿರಿಸಿ ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸಿದರೆ ಎಲ್ಲ ಸಂಸ್ಥೆಗಳು ಯಶದ ಮಾರ್ಗದಲ್ಲಿ ಸಾಗುತ್ತವೆ ಎಂದು ಹೇಳಿದರು.

ಏಷ್ಯಾದ ಅತಿದೊಡ್ಡ ನಾಟಕ ‘ಜಾಣತಾ ರಾಜಾ’ದಂತಹ ದೊಡ್ಡ ನಾಟಕಗಳು ಕನ್ನಡದಲ್ಲಿ ಬಂದಿಲ್ಲ. ರಂಗಭೂಮಿಯ ಸಿರಿವಂತಿಕೆಗೆ ‘ಜಾಣತಾ ರಾಜಾ’ ಒಂದು ನಿದರ್ಶನ. ಛತ್ರಪತಿ ಶಿವಾಜಿ ಬಗೆಗೆ ಇರುವ ಅಭಿಮಾನ ಹಾಗೂ ರಂಗ ಕಲೆಯ ಪ್ರೀತಿಯಿಂದಾಗಿ ಅದು ಮಹಾರಾಷ್ಟ್ರದಲ್ಲಿ ಹೆಚ್ಚು ಯಶ ಕಂಡಿದೆ.  ಕನ್ನಡದಲ್ಲೂ ಅಂತಹ ರಂಗಭೂಮಿಕೆ ಸಜ್ಜಾಗಬೇಕು. ಅದಕ್ಕೆ ಸರ್ಕಾರ ಹಾಗೂ ರಂಗಾಸಕ್ತರು ಸಹಕಾರ ನೀಡಬೇಕು ಎಂದು ಹೇಳಿದರು.

ಕಲಾತ್ಮಕ ಪ್ರಜ್ಞೆ ಇರುವವರು ಮುಂದೆ ಬಂದರೆ ಎಂತಹ ನಾಟಕಗಳನ್ನಾದರೂ ಮಾಡಬಹುದು. ನಮ್ಮಲ್ಲಿ ಬೃಹತ್‌ ಸೆಟ್‌ ಹಾಕಿ ನಾಟಕ ಮಾಡಲು ಸಂಪನ್ಮೂಲಗಳ ಕೊರತೆ ಇದೆ.  ಆದರೆ ರಂಗಕಲೆಗೆ ಇವತ್ತಿಗೂ ಪ್ರೋತ್ಸಾಹ ದೊರೆಯುತ್ತಿದೆ. ಹೈದರಾಬಾದ್‌ ಕರ್ನಾಟಕದಲ್ಲಿ ರಂಗಕಲೆಯನ್ನು ಪಸರಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಬೀದರ್‌ನಲ್ಲಿ ಪ್ರದರ್ಶನ ನೀಡಲು 28 ಕಲಾವಿದರ ತಂಡ ಬಂದಿದೆ. ಇದರಲ್ಲಿ ಏಳು ಹೆಣ್ಣುಮಕ್ಕಳೂ ಇದ್ದಾರೆ. ಬೇರೆ ಬೇರೆ ವೃತ್ತಿ, ವಯೋಮಾನದವರು ಇದ್ದಾರೆ. ಇವರಿಗೆ ಪಾಶ್ಚಾತ್ಯ, ದೇಸಿ ಹಾಗೂ ಆಧುನಿಕ ರಂಗ ಭೂಮಿ ನಡುವಿನ ವ್ಯತ್ಯಾಸ ಗುರುತಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಳೆದ ಬಾರಿ ಇಲ್ಲಿನ ಜಿಲ್ಲಾ ರಂಗ ಮಂದಿರದಲ್ಲಿ ಬೆಂಗಳೂರಲ್ಲೂ ಇಲ್ಲದ ಬಾಡಿಗೆ ಪಡೆಯಲಾಗಿತ್ತು. ಸರ್ಕಾರ, ರಂಗಭೂಮಿಗೆ ಉತ್ತೇಜನ ನೀಡುವ ದಿಸೆಯಲ್ಲಿ ರಾಜ್ಯದ ಎಲ್ಲ ರಂಗ ಮಂದಿರಗಳಲ್ಲಿ ಒಂದೇ ಬಗೆಯ ಶುಲ್ಕ ನಿಗದಿಪಡಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT