ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸಾಮಾನ್ಯ ಸಭೆ ಬಹಿಷ್ಕಾರ

ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಪಟ್ಟಿ ರದ್ದತಿಗೆ ಸದಸ್ಯರ ಆಗ್ರಹ
Last Updated 3 ಫೆಬ್ರುವರಿ 2017, 6:21 IST
ಅಕ್ಷರ ಗಾತ್ರ

ವಿಜಯಪುರ: ಮಹಾನಗರ ಪಾಲಿಕೆ ಸದಸ್ಯರ ಗಮನಕ್ಕೆ ಬಾರದಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಆಶ್ರಯ ಮನೆಗಳ ಫಲಾನುಭವಿಗಳ ಪಟ್ಟಿ ತಯಾರಿಸಿ, ಪ್ರಕಟಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪಾಲಿಕೆ ಸದಸ್ಯರು ಗುರುವಾರ ಆಯೋಜನೆಗೊಂಡಿದ್ದ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

ಸಾಮಾನ್ಯ ಸಭೆ ಆರಂಭ ಗೊಳ್ಳುತ್ತಿದ್ದಂತೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ. ಸದಸ್ಯರ ಗಮನಕ್ಕೆ ಇದು ಬಂದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸದಸ್ಯ ಅಬ್ದುಲ್‌ ರಜಾಕ್‌ ಹೊರ್ತಿ ವಾಗ್ದಾಳಿ ನಡೆಸಿದರು.

ಸದಸ್ಯನ ಆರೋಪಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಅಧಿಕಾರಿಗಳು ಆಶ್ರಯ ಮನೆ ಹಂಚಿಕೆಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ನಗರ ಶಾಸಕರು, ನಾಗಠಾಣ ಮತಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇತರ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ಅವರ ಅನುಮತಿ ಮೇರೆಗೆ ಪಟ್ಟಿ ಅಂತಿಮಗೊಳಿಸಲಾಗಿದೆ. ಆದರೆ, ಇದೇ ಅಂತಿಮವಲ್ಲ, ಇದನ್ನು ಮಾರ್ಪಡಿಸುವುದಾಗಿ ತಿಳಿಸಿದರು.

ಇದಕ್ಕೆ ಹೊರ್ತಿ ಆಕ್ಷೇಪ ವ್ಯಕ್ತಪಡಿ ಸಿದರು. ಹೊರ್ತಿಗೆ ಬೆಂಬಲವಾಗಿ ಪ್ರೇಮಾನಂದ ಬಿರಾದಾರ, ರಾಜೇಶ ದೇವಗಿರಿ, ರವೀಂದ್ರ ಲೋಣಿ, ರಾಜಶೇಖರ ಮಗಿಮಠ ಪಾಲಿಕೆಯ ಅಧಿಕಾರಿಗಳು, ಮೇಯರ್‌ ವಿರುದ್ಧ ಹರಿಹಾಯ್ದರು.

ಮತ್ತೊಬ್ಬ ಸದಸ್ಯ ವಿಜಯಕುಮಾರ ಮಂಗಳವೇಡೆ ಮಾತನಾಡಿ ದಶಕದ ಬಳಿಕ ಅಪಾರ ಸಂಖ್ಯೆಯ ಮನೆ ನಗರಕ್ಕೆ ಮಂಜೂರಾಗಿವೆ. ಇದರಲ್ಲಿ ಪಾಲಿಕೆಯ ಪ್ರತಿ ಸದಸ್ಯರ ವ್ಯಾಪ್ತಿಗೆ ತಲಾ 15 ಮನೆ ಬರಲಿವೆ. ಶಾಸಕರಿಗೆ, ವಿಧಾನ ಪರಿಷತ್‌ ಸದಸ್ಯರಿಗೆ ತಲಾ 600 ಮನೆ ನೀಡಲಾಗಿದೆ.

ನಾವೂ ಜನಪ್ರತಿನಿಧಿಗಳೇ. ನಮಗೂ ಸಮನಾಗಿ ಹಂಚಿಕೆಯಾಗ ಬೇಕು. ಇದನ್ನು ಪ್ರಶ್ನಿಸುವ ಹಕ್ಕು ನಮ್ಮದಾಗಿದೆ. ಸದಸ್ಯರಿಗೆ ಹಂಚಿಕೆ ಮಾಡಲಾಗಿರುವ ಮನೆಗಳ ಸಂಖ್ಯೆ ಅತ್ಯಲ್ಪ. ವಿಪರ್ಯಾಸ ಎಂದರೇ ಆಶ್ರಯ ಮನೆಗೆ ಪಾಲಿಕೆ ಜಾಗ ಕೊಡಲಾಗುತ್ತಿದೆ. ಇದರಲ್ಲಿ ಸದಸ್ಯರಿಗೆ ಬರಬೇಕಾದ ಮನೆಗಳ ಸಂಖ್ಯೆ ಕಡಿಮೆ. ಶಾಸಕರ ಪಾಲಿನ ಮನೆಗಳ ಸಂಖ್ಯೆಯೇ ಹೆಚ್ಚು. ಇದು ಯಾವ ನ್ಯಾಯ. ಹಿಂಗಾದರೆ ಪಾಲಿಕೆ ಜಾಗೆ ಕೊಡಲು ತಮ್ಮ ಸಹಮತಿ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಧಿಕಾರಿಗಳು ಶಾಸಕರ ಮನೆಯಲ್ಲಿ ಕುಳಿತು ಮನಸೋ ಇಚ್ಛೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಇದರಲ್ಲಿ ಶಾಸಕರು, ಅಧಿಕಾರಿಗಳ ಕೈವಾಡವಿದೆ ಎಂದು ಸದಸ್ಯ ಆನಂದ ಧುಮಾಳೆ ಆರೋಪಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ರಾಹುಲ್ ಜಾಧವ್ ಮೇಯರ್ ರಬ್ಬರ್ ಸ್ಟ್ಯಾಂಪ್‌ಂತೆ ಕೆಲಸ ಮಾಡುವುದನ್ನು ಬಿಡಬೇಕು. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಪಕ್ಷೇತರ ಸದಸ್ಯ ರವೀಂದ್ರ ಲೋಣಿ ಮೇಯರ್, ಪಾಲಿಕೆ ಸದಸ್ಯರ ಗಮನಕ್ಕೆ ಬಾರದೆ ಫಲಾನುಭವಿಗಳ ಪಟ್ಟಿ ತಯಾರಿಸಿರುವುದು ಸರಿಯಲ್ಲ. ನಿಮಗೆ ಮಾಹಿತಿ ನೀಡಿದವರ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಮೇಯರ್‌ ಪ್ರಶ್ನಿಸಿ, ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜಶೇಖರ ಮಗಿಮಠ ಮಾತನಾಡಿ ಹೌಸಿಂಗ್ ಫಾರ್ ಆಲ್ ಮಹತ್ವದ ಯೋಜನೆ. ಮನೆ ಹಂಚಿಕೆ ಯಾರ ಕಾರ್ಯ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ಸ್ಪಷ್ಟವಾಗಿ ಸಭೆಯಲ್ಲಿ ಉತ್ತರಿಸಬೇಕು. ಇದರಲ್ಲಿ ಮನೆ ಇದ್ದವರಿಗೆ ಮನೆ ಸಿಕ್ಕಿವೆ ಎಂಬ ಆರೋಪವಿದೆ. ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು
ಉಪಮೇಯರ್ ಗೋಪಾಲ ಘಟಕಾಂಬಳೆ, ಪಾಲಿಕೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಮನಸ್ಸಿಗೆ ತೋಚಿದಂತೆ ಪಟ್ಟಿ..?’
ಆಶ್ರಯ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಪ್ರಾವಿಜನಲ್ ಲಿಸ್ಟ್ ತಯಾರು ಮಾಡಲಾಗಿದೆ. ಇದನ್ನು ಆಯುಕ್ತರ ಗಮನಕ್ಕೆ ತಂದು ಮಾರ್ಪಾಡು ಮಾಡಲಾಗುವುದು ಎಂದು ಪ್ರಭಾರ ಆಯುಕ್ತರು ಸಮಜಾಯಿಷಿ ನೀಡಿದರು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪಾಲಿಕೆ ಸದಸ್ಯ ವಿಜಯಕುಮಾರ ಮಂಗಳವೇಡೆ ಏನ್ರೀ ಪ್ರಾವಿಜನಲ್ ಲಿಸ್ಟ್‌, ಟೆಂಪರರಿ ಲಿಸ್ಟ್‌. ಫೈನಲ್ ಲಿಸ್ಟ್‌... ಎಂದು ಸಬೂಬು ಹೇಳಿ ಜವಾಬ್ದಾರಿಯಿಂದ ಜಾರಿಕೊಳ್ಳಬೇಡಿ, ಸಬೂಬು ಬಿಟ್ಟು ಸಮಸ್ಯೆ ಸರಿಪಡಿಸಿ ಎಂದು ಒತ್ತಾಯಿಸಿದರು.

***

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಶ್ರಯ ಮನೆ ಯೋಜನೆ ಕುರಿತು ಹಮ್ಮಿಕೊಂಡ ಪೂರ್ವಭಾವಿ ಸಭೆಯ ಕುರಿತು ನನಗೆ ಮಾಹಿತಿಯನ್ನು ಯಾರು ನೀಡಿಲ್ಲ
- ಅನೀಸ್‌ ಫಾತಿಮಾ ಬಕ್ಷಿ, ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT