ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕೆಲಸ ಯುವಕರಿಗೆ ಪ್ರೇರಣೆ ನೀಡಿದ್ದು ಸಂತಸ ತಂದಿದೆ: ಆಮ್ಟೆ

Last Updated 3 ಫೆಬ್ರುವರಿ 2017, 6:57 IST
ಅಕ್ಷರ ಗಾತ್ರ

ಉಡುಪಿ: ‘ಆದಿವಾಸಿಗಳ ಕಲ್ಯಾಣಕ್ಕಾಗಿ ನಾವು ಮಾಡುತ್ತಿರುವ ಕೆಲಸ ಯುವಕರಿಗೆ ಪ್ರೇರಣೆ ನೀಡಿದ್ದು, ಕೆಲವರು ಇಂತಹುದೇ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಎಚ್‌ಐವಿ ಪೀಡಿತರಿಗಾಗಿ, ಅನಾಥರಿ ಗಾಗಿ ಕೆಲಸ ಮಾಡುತ್ತಿದ್ದಾರೆ, ಇದು ನಮಗೆ ಅತ್ಯಂತ ಸಂತೋಷದ ವಿಷಯ’ ಎಂದು ಮಹಾರಾಷ್ಟ್ರದ ಹೇಮಲ್‌ಕಸ್‌ ಪ್ರದೇಶದಲ್ಲಿ ಆದಿವಾಸಿಗಳಿಗಾಗಿ ಸತತ 43 ವರ್ಷಗಳಿಂದ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಡಾ.ಪ್ರಕಾಶ ಬಾಬಾ ಆಮ್ಟೆ ಹೇಳಿದರು.

ನಗರದ ಯಕ್ಷಗಾನ ಕಲಾ ಕೇಂದ್ರ ದಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು. ನಾನು ಎಂಬಿಬಿಎಸ್‌ ಪದವಿ ಪಡೆದ ನಂತರ ನಮ್ಮ ತಂದೆ ಬಾಬಾ ಆಮ್ಟೆ ಅವರು, ಆದಿವಾಸಿಗಳಿಗಾಗಿ ಏನಾದರೂ ಕೆಲಸ ಮಾಡಲು ಸಾಧ್ಯವೇ ಎಂದು ನನ್ನನ್ನು ಪ್ರಶ್ನಿಸಿದರು. ಆದಿವಾಸಿಗಳ ಕಲ್ಯಾಣಕ್ಕಾಗಿ ದುಡಿಯಲು ಸಿದ್ಧ ಎಂದು ಹೇಳಿದೆ. ಪತ್ನಿ ಮಂದಾಕಿನಿ ಜತೆ ಸೇರಿ 23ನೇ ವಯಸ್ಸಿನಿಂದಲೇ ಈ ಕೆಲಸ ಆರಂಭಿಸಿದೆ ಎಂದರು.

ಆದಿವಾಸಿಗಳಲ್ಲಿ ತುಂಬಾ ಬದಲಾವಣೆ ತರಲು ಸಾಧ್ಯವಾಗಿದೆ. ಅನಾರೋಗ್ಯವಾದರೆ ದೇವರ ಮೊರೆ ಹೋಗುವ ಪ್ರಾಣಿ ಬಲಿ ನೀಡುವ ಪದ್ಧತಿ ಅವರಲ್ಲಿತ್ತು. ಆದರೆ, ಈಗ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಎಲ್ಲರಲ್ಲಿ ಜ್ಞಾನ ಬಂದಿದೆ. ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಿದ್ದೆವು. ನಾವು ಮಾಡಿದ ಕೆಲಸದ ಬಗ್ಗೆ ನಾಲ್ಕು ಭಾಷೆಗಳಲ್ಲಿ ಪುಸ್ತಕ ಹೊರ ಬಂದ ನಂತರ ನಾವೇನು ಕೆಲಸ ಮಾಡುತ್ತಿದ್ದೇವೆ ಎಂದು ಜನರಿಗೆ ಗೊತ್ತಾಯಿತು. ತಂದೆ ಮತ್ತು ನಾವು ಮಾಡಿದ ಸೇವೆಯನ್ನು ಇಬ್ಬರು ಮಕ್ಕಳು  ಕೂಡಾ ಮುಂದುವರೆಸಲು ಮುಂದಾಗಿದ್ದಾರೆ ಎಂದು ಹೇಳಿದರು.

ಯಕ್ಷಗಾನ ಪ್ರಸಂಗ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಾನಪದ ಕಲೆ ಗಳು ನಶಿಸುತ್ತಿರುವ ಈ ಸಂದರ್ಭದಲ್ಲಿ ಯಕ್ಷಗಾನ ಕಲೆಯನ್ನು ಬೆಳೆಸಲು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.

ಜಯರಾಮ್‌ ಪಾಟೀಲ್ ಮಾತ ನಾಡಿ, ಪ್ರಕಾಶ ಆಮ್ಟೆ ದಂಪತಿ ಅವರು ಆದಿವಾಸಿಗಳ ಕಲ್ಯಾಣಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆದಿ ವಾಸಿಗಳ ಬದುಕಿನಲ್ಲಿ ದೊಡ್ಡ ಬದಲಾ ವಣೆ ತಂದಿದ್ದಾರೆ. ನಾವು, ನಮ್ಮ ಮಕ್ಕಳು, ಮೊಮ್ಮಕ್ಕಳು ಎಂದು ಯೋಚಿ ಸದೆ ಬೇರೆಯವರ ಬಗ್ಗೆ ಯೋಚಿಸಿ ಏನಾದರೂ ಕೆಲಸ ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದರು. ಯಕ್ಷಗಾನ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣಭಟ್‌, ಡಾ.ಪಿಎಲ್‌ಎನ್‌ ರಾವ್‌ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

***

ಆದಿವಾಸಿಗಳ ಮಕ್ಕಳೆಲ್ಲರೂ ಶಿಕ್ಷಣ ಪಡೆಯುತ್ತಿದ್ದಾರೆ. ನೂರಾರು ಮಂದಿ ವಕೀಲರು, ಶಿಕ್ಷಕರು ವೈದ್ಯರಾಗಿದ್ದಾರೆ.
- ಡಾ.ಪ್ರಕಾಶ ಬಾಬಾ ಆಮ್ಟೆ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT