ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಮೇವು, ರಾಸುಗಳಿಗೆ ಅನಾರೊಗ್ಯ: ರೈತರ ಆಕ್ರೋಶ

Last Updated 3 ಫೆಬ್ರುವರಿ 2017, 7:14 IST
ಅಕ್ಷರ ಗಾತ್ರ

ಶಿರಾ: ನಗರದ ಹೊರವಲಯದ ಉಲ್ಲಾಸ್ ತೋಪಿನಲ್ಲಿರುವ ಗೋಶಾಲೆಯಲ್ಲಿ ಕಳಪೆ ಗುಣ ಮಟ್ಟದ ಮೇವು ವಿತರಿಸಲಾಗುತ್ತಿದೆ ಹಾಗೂ ಸ್ವಚ್ಛತೆ ಇಲ್ಲದೆ ರಾಸುಗಳು ಅನಾರೊಗ್ಯ ತುತ್ತಾಗುತ್ತಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ.

ಗೋಶಾಲೆಯಲ್ಲಿದ್ದ ಚನ್ನನಕುಂಟೆ ಗ್ರಾಮದ ರೈತರ ನಿಂಗಪ್ಪ ಎನ್ನುವರಿಗೆ ಸೇರಿದ ಹಸುವೊಂದು ಕೆಚ್ಚಲು ಬಾವು ರೋಗದಿಂದಾಗಿ ಸಂಪೂರ್ಣವಾಗಿ ನಿತ್ರಾಣವಾಗಿ ಮೇಲೆ ಏಳಲು ಸಹ ಸಾಧ್ಯವಾಗದೆ ಮಲಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಯಿತು.

ತಾಲ್ಲೂಕಿನಲ್ಲಿ ತೀವ್ರ ಬರದಿಂದಾಗಿ 5 ಗೋಶಾಲೆ ತೆರೆಯಲಾಗಿದ್ದು ಇದರಲ್ಲಿ ಕಸಬಾ ಹೊಬಳಿ ವ್ಯಾಪ್ತಿಯಲ್ಲಿ ಬರುವ ಉಲ್ಲಾಸ್ ತೋಪು ಗೋಶಾಲೆ ಸಹ ಒಂದಾಗಿದೆ. ಇಲ್ಲಿ ನಿತ್ಯ ಸುಮಾರು 1200 ರಾಸುಗಳಿಗೆ ಮೇವು ವಿತರಿಸಲಾಗುತ್ತಿದೆ. ಪ್ರಾರಂಭದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತಿದ್ದ ಗೋಶಾಲೆಯಲ್ಲಿ ಈಗ ಕಳಪೆ ಗುಣ ಮಟ್ಟದ ಮೇವು ನೀಡುತ್ತಿದ್ದಾರೆ ಎನ್ನುವ ಆರೋಪ ರೈತರಿಂದ ಕೇಳಿ ಬರುತ್ತಿದೆ. ರೈತರ ದೂರುಗಳ ಕಾರಣ ಗುರುವಾರ ಬೆಳಿಗ್ಗೆ ಗೋಶಾಲೆಗೆ ಭೇಟಿ ನೀಡಿದ್ದ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಧನಂಜಯಾರಾಧ್ಯ ಹಾಗೂ ತಾಲ್ಲೂಕು ಅಧ್ಯಕ್ಷ ಪರಮಶಿವಯ್ಯ ರೈತರೊಂದಿಗೆ ಚರ್ಚೆ ನಡೆಸಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಧನಂಜಯಾರಾಧ್ಯ ಮಾತನಾಡಿ, ಗೋಶಾಲೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ ಗೋಶಾಲೆ ಪ್ರಾರಂಭದ ದಿನದಿಂದ ಇಲ್ಲಿ ಕಸ ತೆಗೆದಿಲ್ಲ. ಎಲ್ಲಿ ನೋಡಿದರೂ ಸಗಣಿ, ಗಂಜಲದಿಂದ ತಿಪ್ಪೇಗುಂಡಿಯಾಗಿದೆ. ಅಧಿಕಾರಿಗಳು ಸ್ವಚ್ಛತೆಗೆ ಗಮನ ನೀಡುತ್ತಿಲ್ಲ. ಇದರಿಂದ ರಾಸುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಜೊತೆಗೆ ರಾಸುಗಳಿಗೆ ನೀಡುತ್ತಿರುವ ಹುಲ್ಲು ಸಹ ಕಳಪೆಯಾಗಿದೆ. ಜೋಳದ ಕಡ್ಡಿಯನ್ನು ಮಾತ್ರ ರಾಸುಗಳಿಗೆ ನೀಡಲಾಗುತ್ತಿದೆ. ಹಸಿ ಕಡ್ಡಿ ಮುಗ್ಗಿದ್ದು ಇದು ರಾಸುಗಳ ಗರ್ಭಕೋಶದ ಮೇಲೆ ಪ್ರಭಾವ ಬೀರುವುದರಿಂದ ಹಲವು ಹಸುಗಳು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ ಎಂದರು.

ಪಶುಪಾಲನಾ ಇಲಾಖೆ ವಿಸ್ತರಣಾಧಿಕಾರಿ ಡಾ.ನಾಗೇಶ್ ಕುಮಾರ್, ಗೋಶಾಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ರೈತರ ಸಹಕಾರ ಅತ್ಯವಶ್ಯ. ಸ್ವಚ್ಛತೆ ಬಗ್ಗೆ ರೈತರು ಗಮನ ನೀಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತೊಂದರೆ ಇಲ್ಲ
ಅನಾರೋಗ್ಯಕ್ಕೆ ಗುರಿಯಾಗಿರುವ ಹಸುವಿಗೆ ಚಿಕಿತ್ಸೆ ನೀಡಲಾಗಿದೆ. ಯಾವುದೇ ಸಮಸ್ಯೆ ಇಲ್ಲ. ರೋಗದಿಂದ ಬಳಲುತ್ತಿರುವ ಹಸುವನ್ನು ಮನೆಗೆ ಕರೆದುಕೊಂಡು ಹೋಗಲು ತಿಳಿಸಲಾಗಿದೆ. ವೈದರು ಅಲ್ಲಿಗೆ ಭೇಟಿ ನೀಡಿ ಚಿಕಿತ್ಸೆ ನೀಡಲಿದ್ದಾರೆ. ಗೋಶಾಲೆಯಲ್ಲಿ ನೀಡುತ್ತಿರುವ ಮೇವನ್ನು ಪರಿಶೀಲನೆ ನಡೆಸಿ ನೀಡಲಾಗುತ್ತಿದೆ. ಮೇವು ಉತ್ತಮ ಗುಣ ಮಟ್ಟದಿಂದ ಕೂಡಿದೆ. ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ರಾಜಶೇಖರ್, ಸಹಾಯಕ ನಿರ್ದೇಶಕ ಡಾ.ನಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ರೀತಿಯ ತೊಂದರೆ ಇಲ್ಲ
- ಡಾ.ನಾಗೇಶ್ ಕುಮಾರ್, ಪಶುಪಾಲನಾ ಇಲಾಖೆ ವಿಸ್ತರಣಾಧಿಕಾರಿ

***

ಗೋಶಾಲೆ ಸ್ವಚ್ಛಗೊಳಿಸಿ  ಗುಣ ಮಟ್ಟದ ಮೇವು ನೀಡಬೇಕು. ಇಲ್ಲದಿದ್ದರೆ ಇಲ್ಲಿರುವ ರಾಸುಗಳನ್ನು ತಾಲ್ಲೂಕು ಕಚೇರಿ ಮುಂದೆ ಕಟ್ಟಿ ಪ್ರತಿಭಟನೆ ನಡೆಸಲಾಗುವುದು
-ಪರಮಶಿವಯ್ಯ, ತಾಲ್ಲೂಕು ರೈತ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT