ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯಾಗದ ಶೌಚಾಲಯ ನಿರ್ಮಾಣ ಗುರಿ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾವೇರಿ ಅಸಮಾಧಾನ
Last Updated 3 ಫೆಬ್ರುವರಿ 2017, 7:18 IST
ಅಕ್ಷರ ಗಾತ್ರ

ಕೋಲಾರ: ಸ್ವಚ್ಛ ಭಾರತ್‌ ಯೋಜನೆಯಡಿ ಶೌಚಾಲಯ ನಿರ್ಮಾಣ ಗುರಿ ಸಾಧಿಸದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವಿರುದ್ಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ನಡೆದ ಪಿಡಿಒ ಮತ್ತು ಗ್ರಾ.ಪಂ ಕಾರ್ಯದರ್ಶಿಗಳ ಸಭೆಯಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ ಎಂದು ಹೇಳಿದರು.

ಶೌಚಾಲಯದ ಫಲಾನುಭವಿಗಳಿಗೆ ಇಎಫ್‍ಎಂಎಸ್ ಮೂಲಕ ಹಣ ಪಾವತಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ನೀಡುವುದು ಮತ್ತು ಹಣ ಪಾವತಿ ಜತೆ ಜತೆಯಾಗಿ ನಡೆಯಬೇಕು. ಮಾರ್ಜೇನಹಳ್ಳಿ ಗ್ರಾ.ಪಂ ಹೊರತುಪಡಿಸಿ ಹಣ ಪಾವತಿಯಲ್ಲಿ ಯಾವ ಪಂಚಾಯಿತಿಯಲ್ಲೂ ಅಧಿಕಾರಿಗಳು ಯಾಕೆ ಆಸಕ್ತಿ ತೋರಿಸಿಲ್ಲ ಎಂದು ಪ್ರಶ್ನಿಸಿದರು.

ತಾಲ್ಲೂಕಿನ ವೇಮಗಲ್, ಅರಾಭಿಕೊತ್ತನೂರು, ಕ್ಯಾಲನೂರು, ಮಣಿಘಟ್ಟ, ಮಾರ್ಜೇನಹಳ್ಳಿ, ನರಸಾಪುರ, ಹುತ್ತೂರು ಸೇರಿದಂತೆ 12 ಗ್ರಾ.ಪಂ. ಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾ.ಪಂಗಳಾಗಿ ಮಾಡಲು ಹೆಚ್ಚು ಗಮನಹರಿಸಿ. ಸಾಧ್ಯವಾದಷ್ಟು ಬೇಗನೆ ಉದ್ದೇಶಿತ ಗುರಿ ಸಾಧಿಸಿ. ಸ್ವಚ್ಛ ಭಾರತ್ ಯೋಜನೆಯ ನೋಡಲ್ ಅಧಿಕಾರಿಗಳು ಪಂಚಾಯಿತಿಗೆ ಭೇಟಿ ನೀಡದಿದ್ದರೆ ತಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಮಾಹಿತಿ ನೀಡಿ: ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಅವರು, ‘ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳು ನಗರಸಭೆ ವ್ಯಾಪ್ತಿಗೆ ಬರುತ್ತವೆ. ಆ ಗ್ರಾಮಗಳಿಗೆ ಪಂಚಾಯಿತಿಯಿಂದ ನೀರು ಸರಬರಾಜು ಮಾಡುವ ಅಗತ್ಯವಿಲ್ಲ. ಪಂಚಾಯಿತಿ ವ್ಯಾಪ್ತಿಯ ಮನೆಗಳು ಮತ್ತು ಜನಸಂಖ್ಯೆ ಬಗ್ಗೆ ಸಮಗ್ರ ಮಾಹಿತಿ ನೀಡಿ ಎಂದು ಪಿಡಿಒಗಳಿಗೆ ತಿಳಿಸಿದರು.

ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣಕ್ಕೆ ಜಾಗ ಒದಗಿಸುವಂತೆ ಸೂಚಿಸಿದ್ದರೂ ಕ್ರಮ ಕೈಗೊಳ್ಳದ ಬಗ್ಗೆ ಸಿಇಒ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾರ್ಜೇನಹಳ್ಳಿ ಪಿಡಿಒ, ‘ಗ್ರಾಮದಲ್ಲಿ ಕೆಲವರು ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಅರಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವ ಜಾಗದಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿರುವುದನ್ನು ತೆರವುಗೊಳಿಸಿ ಹೊಸದಾಗಿ ಬೇರೆ ಜಾಗದಲ್ಲಿ ಪಾಯ ಹಾಕಿ. ಈ ಹಿಂದೆ ಜೂಹಳ್ಳಿಯಲ್ಲಿ ಗುರುತಿಸಿದ್ದ ಜಾಗದಲ್ಲೇ ಘಟಕ ನಿರ್ಮಿಸಿ. ನರೇಗಾ ಯೋಜನೆಯಡಿ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕನಿಷ್ಠ ಒಂದೊಂದು ನೀರಿನ ತೊಟ್ಟಿ ನಿರ್ಮಿಸಬೇಕು ಎಂದು ಸಿಇಒ ಎಂಜಿನಿಯರ್‌ಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಬರುವ ಕರೆಗಳನ್ನು ಸ್ವೀಕರಿಸದ ಅರಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಕಾವೇರಿ, ‘ನಿಮಗಾಗಿ ಕಾಯೋಕ್ಕೆ ಆಗುತ್ತಾ? ಕರೆ ಬಂದಾಗ ಸ್ವೀಕರಿಸುವುದು ಶಿಷ್ಟಾಚಾರ. ಜಿ.ಪಂ ಕಚೇರಿಯಿಂದ ಕರೆ ಬಂದ ತಕ್ಷಣ ಸ್ವೀಕರಿಸಬೇಕು. ಕರೆ ಸ್ವೀಕರಿಸದ ವರ್ತನೆ ಪುನರಾವರ್ತನೆ ಆಗಬಾರದು’ ಎಂದು ಎಚ್ಚರಿಕೆ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಪ್ಪ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT