ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಕೊಠಡಿಗಳ ಕಾಮಗಾರಿ ಕಳಪೆ

ಕಾಮಗಾರಿ ಸ್ಥಳದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ; ಪರಿಶೀಲನೆಗೆ ಒತ್ತಾಯ
Last Updated 3 ಫೆಬ್ರುವರಿ 2017, 7:21 IST
ಅಕ್ಷರ ಗಾತ್ರ

ಕೋಲಾರ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿರ್ಮಿಸುತ್ತಿರುವ ಕೊಠಡಿಗಳ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ಮಾಡಿದರು.

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕೊಠಡಿಗಳ ಸಮಸ್ಯೆಯಾಗಿತ್ತು. ಆದ ಕಾರಣ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ಮೂರು ಕೊಠಡಿ ನಿರ್ಮಿಸಲು ಸರ್ಕಾರ ಅನುಮತಿ ನೀಡಿತ್ತು. ಆದರೆ, ಕೊಠಡಿಗಳ ನಿರ್ಮಾಣದ ಟೆಂಡರ್‌ ಪಡೆದ ಗುತ್ತಿಗೆದಾರ ಗೋಪಿನಾಥ್‌ ಕಾಮಗಾರಿಯ ಗುಣಮಟ್ಟಕ್ಕೆ ಒತ್ತು ಕೊಟ್ಟಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ದೂರಿದರು.

‘ಗುತ್ತಿಗೆದಾರರು ಕಳಪೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಬಳಸಿ ಕೊಠಡಿಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ಕಾಮಗಾರಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲಲ್ಲಿ ಸಿಮೆಂಟ್‌ ಉದುರುತ್ತಿದ್ದು, ಯಾವುದೇ ಸಂದರ್ಭದಲ್ಲಿ ಕೊಠಡಿಗಳು ಕುಸಿದು ಬೀಳಬಹುದು’ ಎಂದು ವಿದ್ಯಾರ್ಥಿ ಜೆ.ಶ್ರೀಕಾಂತ್ ಆರೋಪಿಸಿದರು.

ಗುತ್ತಿಗೆದಾರ ಗೋಪಿನಾಥ್‌ ಸುಮಾರು ₹ 45 ಲಕ್ಷ ವೆಚ್ಚದಲ್ಲಿ ಆರು ತಿಂಗಳಿಂದ ಕೊಠಡಿಗಳನ್ನು ನಿರ್ಮಿಸುತ್ತಿದ್ದಾರೆ. ಸಿಮೆಂಟ್‌ ಗೋಡೆಗಳಿಗೆ ಕನಿಷ್ಠ 15ರಿಂದ 20 ದಿನ ನೀರು ಹಾಕಿ ಕ್ಯೂರಿಂಗ್‌ ಮಾಡಬೇಕು. ಆದರೆ, ಕೂಲಿ ಹಣ ಉಳಿಸುವ ಉದ್ದೇಶದಿಂದ ಗುತ್ತಿಗೆದಾರರು ಗೋಡೆಗಳಿಗೆ ಕ್ಯೂರಿಂಗ್‌ ಮಾಡಿಸಿಲ್ಲ. ಜತೆಗೆ ನಿಗದಿತ ಪ್ರಮಾಣದಲ್ಲಿ ಸಿಮೆಂಟ್‌ ಬಳಸದೆ ಗೋಡೆಗಳನ್ನು ನಿರ್ಮಿಸಿದ್ದಾರೆ ಎಂದು ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದ ಕೊಠಡಿಗಳ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನಕ್ಕೆ ಅನುಗುಣವಾಗಿ ಗುತ್ತಿಗೆದಾರರು ಕೊಠಡಿಗಳನ್ನು ನಿರ್ಮಿಸುತ್ತಿಲ್ಲ. ಬದಲಿಗೆ ಹಣ ಉಳಿಸಲು ಕಳಪೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಬಳಸಿ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಿ ಕೊಠಡಿಗಳ ಕಾಮಗಾರಿ ಪರಿಶೀಲಿಸಬೇಕು. ಜತೆಗೆ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳಾದ ಟಿ.ಎಲ್.ಪವನ್, ಎಂ.ಕೆ.ಪ್ರಮೋದ್, ಎಚ್.ಎಸ್.ಗಗನ್, ಅಜಯ್, ಕುಮಾರ್, ರಶ್ಮಿ, ಮಮತಾ, ಮೀನಾಕ್ಷಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT