ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪ್ರೇಮ ಮೆರೆದ ಆಂಗ್ಲಮಾಧ್ಯಮ ಮಕ್ಕಳು

ಕನ್ನಡ ಸಾಹಿತ್ಯ ಬಳಗದಿಂದ ದ.ರಾ.ಬೇಂದ್ರೆ ಭಾಷಣೆ ಸ್ಪರ್ಧೆ
Last Updated 3 ಫೆಬ್ರುವರಿ 2017, 7:25 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕು ಕನ್ನಡ ಸಾಹಿತ್ಯ ಬಳಗವು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಗುರುವಾರ ನಗರದಲ್ಲಿ ಆಯೋಜಿಸಿದ್ದ ದ.ರಾ.ಬೇಂದ್ರೆ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಬೇಂದ್ರೆಯ ಬದುಕು, ಬರಹ ಹಾಗೂ ಕೃತಿಗಳ ಕುರಿತು ಅರ್ಥಪೂರ್ಣವಾಗಿ ಮಾತನಾಡುವ ಮೂಲಕ ಕನ್ನಡದ ವರಕವಿಗೆ ನುಡಿನಮನ ಸಲ್ಲಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದ ಬಹುತೇಕ ವಿದ್ಯಾರ್ಥಿಗಳು ಬೇಂದ್ರೆಯ ಭಾವಗೀತೆಗಳ ಕೆಲವು ಸಾಲುಗಳನ್ನು ಉಲ್ಲೇಖಿಸಿದ್ದು ವಿಶೇಷವಾಗಿತ್ತು. ಆಂಗ್ಲಮಾಧ್ಯಮದ ವಿದ್ಯಾರ್ಥಿಗಳು ಸಹ ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ವಿಷಯವನ್ನು ಮಂಡಿಸುವ ಮೂಲಕ ಕನ್ನಡ ಪ್ರೇಮವನ್ನು ಮೆರೆದರು.

ಬಳಗದ ಅಧ್ಯಕ್ಷ ನಂಜಪ್ಪರೆಡ್ಡಿ ಮಾತನಾಡಿ, ಬಹುತೇಕ ಕವಿಗಳು ಬಡತನದ ಬೇಗೆಯಲ್ಲಿ ನೊಂದರೂ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕವಿಪುಂಗವರು ನೀಡಿರುವ ಸಾಹಿತ್ಯ ನಿಧಿಯನ್ನು ಕನ್ನಡ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪುಸ್ತಕಗಳನ್ನು ವ್ಯಾಸಂಗ ಮಾಡುವುದರಿಂದ ಜ್ಞಾನವಂತರು, ಸುಸಂಸ್ಕೃತರಾಗಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಓದಿನ ಜತೆಗೆ ಸಾಹಿತ್ಯಿಕ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಪ್ರತಿಭಾವಂತರಾಗಬೇಕು ಎಂದರು.

ಸಮಾಜಸೇವಕ ಬಿ.ವಿ.ರಾಮಚಂದ್ರರೆಡ್ಡಿ ಮಾತನಾಡಿ, ಮಕ್ಕಳಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ ಮೂಡಿಸಲು, ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಚುಟುಕು ಕವಿ ಶಿ.ಮ.ಮಂಜುನಾಥ್‌ ಮಾತನಾಡಿ, ಬೇಂದ್ರೆಯ ಬರಹಗಳು ಸರ್ವಕಾಲಿಕವಾಗಿದ್ದು, ನಿರಂತರವಾಗಿ ಹರಿಯುವ ಜಲಧಾರೆಯಂತಿವೆ ಎಂದರು. ಭಾಷಾ ಶಿಕ್ಷಕ ಜೆ.ವೆಂಕಟೇಶ್ವರರಾವ್‌ ಮಾತನಾಡಿ, ಶಬ್ದ ಗಾರುಡಿಗ ಎನಿಸಿರುವ ಬೇಂದ್ರೆ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ, ಕನ್ನಡಾಭಿಮಾನ, ಸ್ವಾಭಿಮಾನ, ಸಮಾನತೆ ಮತ್ತಿತರ ಅಂಶಗಳು ಅಡಗಿವೆ ಎಂದು ತಿಳಿಸಿದರು.

ಗಾಯಕ ಸ್ವಾರಪ್ಪಲ್ಲಿ ಚಂದ್ರಶೇಖರ್‌, ಕಾಗತಿ ಮಂಜುನಾಥ್‌, ಪೆದ್ದೂರು ಮುನಿರಾಜು ಬೇಂದ್ರೆ ರಚಿತ ಭಾವಗೀತೆಗಳನ್ನು ಹಾಡಿ ರಂಜಿಸಿದರು.
ಬಳಗದ ಪದಾಧಿಕಾರಿಗಳಾದ ಜಿ.ವಿ.ರಾಮಕೃಷ್ಣ ಮತ್ತು ರಾಜೇಂದ್ರ ತೀರ್ಪುಗಾರರಾಗಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಬಳಗದ ಕಾರ್ಯದರ್ಶಿ ಕೆ.ಎಸ್‌.ನೂರುಲ್ಲಾ, ಜೀನತ್‌ ಉನ್ನೀಸಾ, ಕೆ.ಎನ್‌.ಅಕ್ರಂಪಾಷಾ, ಸೈಯದ್‌ ನದೀಂ, ಗಂಗಾಧರ್‌, ಇಸಾಖ್‌ ಖಾನ್‌ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT