ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೀರಾವರಿ ಜಾಗೃತಿ ಜಾಥಾ 18ರಿಂದ

ಬಯಲು ಸೀಮೆಯ ಆರು ಜಿಲ್ಲೆಗಳ ಜಲ ಸಂಪನ್ಮೂಲ ಪುನಶ್ಚೇತನಕ್ಕೆ ಆಗ್ರಹ
Last Updated 3 ಫೆಬ್ರುವರಿ 2017, 7:42 IST
ಅಕ್ಷರ ಗಾತ್ರ

ರಾಮನಗರ: ‘ಬಯಲುಸೀಮೆಯ ಆರು ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಇದೇ 18ರಿಂದ ಮೂರು ತಿಂಗಳು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುವುದು’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ತಿಳಿಸಿದರು.

‘ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಚಿತ್ರದುರ್ಗಗಳಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ. ಇಲ್ಲಿನ ಜಲಮೂಲ ರಕ್ಷಿಸಿ ಪುನಶ್ಚೇತನಗೊಳಿಸುವ ಪ್ರಯತ್ನ ಮಾಡದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ಉಳಿಗಾಲವಿಲ್ಲ. ಇದಕ್ಕಾಗಿ ಪಕ್ಷಾತೀತ ಹೋರಾಟ ಸಂಘಟಿಸಲಾಗುತ್ತಿದೆ. ಮೊದಲ ಹಂತದಲ್ಲಿ ಸರ್ಕಾರವನ್ನು ಎಚ್ಚರಿಸುವ ಜೊತೆಗೆ ವಿದ್ಯಾರ್ಥಿ ಯುವಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಶ್ವಿಮ ಘಟ್ಟಗಳಲ್ಲಿ ಸರಾಸರಿ 2.5 ಸಾವಿರ ಟಿಎಂಸಿಯಷ್ಟು ನೀರು ಸಮುದ್ರದ ಪಾಲಾಗುತ್ತಿದೆ. ಇನ್ನೊಂದೆಡೆ ಅಣೆಕಟ್ಟೆಗಳಲ್ಲಿನ ಜಲಸಂಪನ್ಮೂಲವೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆ, ಲಿಂಗನಮಕ್ಕಿ  ಜಲಾಶಯಗಳ ಸುಮಾರು 165 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದೆ. ಪ್ರವಾಹದ ಸಂದರ್ಭದಲ್ಲಿ ಹೇಮಾವತಿ ನದಿಯಿಂದ ಕನಿಷ್ಠ 50 ಟಿಎಂಸಿ ನೀರು ಆಂಧ್ರಕ್ಕೆ ಹರಿಯುತ್ತಿದೆ. ಮೇಕೆದಾಟು ಯೋಜನೆ ಈವರೆಗೂ ಪ್ರಾರಂಭಗೊಂಡಿಲ್ಲ. ದೇಶದಲ್ಲೇ ಬೃಹತ್ ಜಲ ಸಂಪನ್ಮೂಲ ಹೊಂದಿರುವ ಕರ್ನಾಟಕ ಅವುಗಳ ಸಮರ್ಪಕ ಬಳಕೆಯಲ್ಲಿ ವಿಫಲಗೊಂಡಿದೆ’ ಎಂದು ಅವರು ದೂರಿದರು.

ನೀರಾವರಿ ಯೋಜನೆಗಳು ಕೇವಲ ಉತ್ತರ ಕರ್ನಾಟಕ, ಹಳೇ ಮೈಸೂರು ಭಾಗಗಳಿಗೆ ಮಾತ್ರ ಸೀಮಿತವಾಗುತ್ತಿವೆ. ಆದರೆ ಬಯಲುಸೀಮೆಯ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನವೂ ನಡೆದಿಲ್ಲ. ಸರ್ಕಾರವು ಈ ವಿಚಾರದಲ್ಲಿ ಉದಾಸೀನ ತಾಳಿದೆ. ರೈತ ಪರ ಸಂಘಟನೆಗಳು, ಹೋರಾಟ ಸಮಿತಿಗಳು ವಿವಿಧ ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳುತ್ತಾ ಬಂದಿದ್ದರೂ ಪ್ರಯೋಜನ ಆಗಿಲ್ಲ. ಈ ನಿಟ್ಟಿನಲ್ಲಿ ಇಲ್ಲಿನ ಜನರು ಸಂಘಟಿತರಾಗುವ ಅಗತ್ಯವಿದೆ. ಪಕ್ಷಾತೀತ, ಜಾತ್ಯತೀತ ಹೋರಾಟಗಳಿಂದ ಮಾತ್ರ ಪ್ರತಿಫಲ ಕಂಡುಕೊಳ್ಳಲು ಸಾಧ್ಯವಿದೆ. ಈ ಭಾಗದ ಜಿಲ್ಲೆಗಳಿಗೆ ಕನಿಷ್ಠ 150 ಟಿಎಂಸಿ ನೀರು ಹರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಹೋರಾಟ ನಡೆಯಲಿದೆ’ ಎಂದರು.

ರೈತ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿ ‘ಪಶ್ಚಿಮ ಘಟ್ಟದಲ್ಲಿ ವ್ಯರ್ಥವಾಗಿ ಹರಿಯುತ್ತಿರುವ 2.5 ಸಾವಿರ ಟಿಎಂಸಿ ನೀರಿನಲ್ಲಿ ಶೇ10 ರಷ್ಟು ಮರುಬಳಕೆ ಮಾಡಿದರೂ ನಮಗೆ ನೀರು ಒದಗಿಸಲು ಸಾಧ್ಯವಿದೆ. ಜಿಲ್ಲೆಯಲ್ಲಿ ಸಾವಿರ ಅಡಿ ಆಳಕ್ಕೆ ಭೂಮಿ ಕೊರೆದರೂ ನೀರು ದಕ್ಕದಾಗಿದೆ. 100ರಲ್ಲಿ ಕೇವಲ 10 ಕೊಳವೆ ಬಾವಿಗಳ ನೀರು ಮಾತ್ರ ಕುಡಿಯಲು ಯೋಗ್ಯ ಎಂಬ ವರದಿ ಆತಂಕ ಮೂಡಿಸಿದೆ’ ಎಂದರು.

‘ಸರ್ಕಾರಗಳು ಪ್ರತಿಭಟಿಸುವವರನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಮುಂದಾಗಿದೆ. ರಾಜಕೀಯ ಕೆಸರಾಟವನ್ನು ಬದಿಗೊತ್ತಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮುಖ್ಯವಾಗಿ ಬಯಲು ಸೀಮೆಗಳಲ್ಲಿ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಗೆ ಮುಂದಾಗಬೇಕು. ರೈತರ ಕಣ್ಣೊರೆಸುವ ಸಲುವಾಗಿ ತಾತ್ಕಾಲಿಕ ಯೋಜನೆಗಳನ್ನು ಜಾರಿಗೊಳಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಶಾಶ್ವತ ನೀರಾವರಿ ಹೋರಾಟ ಸಮಿತಿಯ ಉಪಾಧ್ಯಕ್ಷ ಮಳ್ಳೂರು ಹರೀಶ್, ಮುಖಂಡರಾದ ವಾಸು, ಜೋಗಯ್ಯ, ಹಾಲೂರು ದೇವರಾಜ್, ರೈತ ಸಂಘದ ಕೆ.ಮಲ್ಲಯ್ಯ, ಕೃಷ್ಣಪ್ಪ ಸೇರಿದಂತೆ ಇತರರು ಗೋಷ್ಠಿಯಲ್ಲಿದ್ದರು.

ಛಾಯಾಚಿತ್ರಗಳ ಪ್ರದರ್ಶನ
ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿ ಜೊತೆಗೆ ಬರ ಪರಿಸ್ಥಿತಿಯನ್ನು ಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನವೂ ನಡೆಯಿತು. ಬಯಲು ಸೀಮೆಯ ಜಿಲ್ಲೆಗಳು ಕುಡಿಯುವ ನೀರಿಗಾಗಿ ಎದುರಿಸುತ್ತಿರುವ ಸಂಕಷ್ಟ, ಬತ್ತಿದ ನದಿ, ಒಣಗಿದ ಕೆರೆಗಳು, ಫ್ಲೋರೈಡ್‌ಯುಕ್ತ ನೀರಿನ ಬಳಕೆಯ ಅನಿವಾರ್ಯತೆ ಹಾಗೂ ಅದರಿಂದ ಆಗುವ ದುಷ್ಪರಿಣಾಮಗಳ ಬಗೆಗಿನ ಚಿತ್ರಣವನ್ನು ಈ ಚಿತ್ರಗಳು ಕಟ್ಟಿಕೊಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT