ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀರಲಾದ ‘ಚೌಕ’ದ ಹಂಗು

Last Updated 3 ಫೆಬ್ರುವರಿ 2017, 10:46 IST
ಅಕ್ಷರ ಗಾತ್ರ

ನಿರ್ಮಾಣ: ಬಿ.ಎಸ್‌. ದ್ವಾರಕೀಶ್, ಯೋಗೀಶ್ ದ್ವಾರಕೀಶ್ ಬಂಗಲೆ
ನಿರ್ದೇಶನ: ತರುಣ್ ಸುಧೀರ್  
ತಾರಾಗಣ: ಪ್ರಿಯಾಮಣಿ, ಐಂದ್ರಿತಾ ರೇ, ದೀಪಾ ಸನ್ನಿಧಿ, ಕಾಶಿನಾಥ್

ಭೂಮಿಯ ಹಂಗು ತೊರೆದಂತೆ ಆಕಾಶದಲ್ಲಿ ಹಾರುವ ಗಾಳಿಪಟ, ಒಂದಷ್ಟು ಕಾಲ ಆಕಾಶದಲ್ಲಿ ವಿಹರಿಸಿದರೂ ಕೊನೆಗೆ ನೆಲಕ್ಕೆ ಮರಳುತ್ತದೆ. ‘ಚೌಕ’ ಸಿನಿಮಾ ಕೂಡ ಇದೇ ಮಾದರಿಯದು. ಜನಪ್ರಿಯ ಚಿತ್ರಗಳ ಸೂತ್ರಬದ್ಧ ಚೌಕಟ್ಟನ್ನು ಮೀರಲು ಹಂಬಲಿಸುವ ಸಿನಿಮಾ ಕೊನೆಗೆ ಹಳೆಯದೇ ಚೌಕಕ್ಕೆ ಮರಳುತ್ತದೆ. ಇಂಥ ಹಂಬಲ ಕೂಡ ಅಪರೂಪವಾದುದರಿಂದ ‘ಚೌಕ’ ಚಿತ್ರವನ್ನು ‘ಗಮನಾರ್ಹ’ ಎನ್ನಬಹುದು.

ತರುಣ್‌ ಸುಧೀರ್‌ ತಮ್ಮ ಚೊಚ್ಚಿಲ ನಿರ್ದೇಶನದ ಸಿನಿಮಾದಲ್ಲಿಯೇ ಭಿನ್ನವಾದ ನಿರೂಪಣೆಗೆ ಪ್ರಯತ್ನಿಸಿದ್ದಾರೆ. ಕರ್ನಾಟಕದ ನಾಲ್ಕು ಭಾಗಗಳಲ್ಲಿ, ಬೇರೆ ಬೇರೆ ಸಮಯದಲ್ಲಿ ನಡೆಯುವ ನಾಲ್ಕು ಪ್ರಸಂಗಗಳನ್ನು ಹೇಳುತ್ತಲೇ ಅವುಗಳನ್ನು ಒಂದು ಸೂತ್ರಕ್ಕೆ ಅಳವಡಿಸುವ ಪ್ರಯತ್ನ ಅವರದು. ಈ ನಾಲ್ಕು ಪ್ರಸಂಗಗಳು ಬಿಡಿ ಬಿಡಿಯಾಗಿ ಚೆನ್ನಾಗಿಯೇ ಇವೆ. ಆದರೆ, ಅವುಗಳು ಒಟ್ಟಾಗಿ ಸೇರಿ ಹಿಡಿಯುವ ಜಾಡು ಈಗಾಗಲೇ ಸಾಕಷ್ಟು ಸವೆದದ್ದಾಗಿದೆ. ಅಲ್ಲದೆ, ಸಿನಿಮಾ ದೀರ್ಘವಾಗಿರುವುದು ಕೂಡ ಪ್ರೇಕ್ಷಕರ ದಣಿವಿಗೆ ಕಾರಣವಾಗುತ್ತದೆ.

ನಾಲ್ಕು ಪ್ರಸಂಗಗಳನ್ನು ಹೇಳಲು ನಾಲ್ವರು ಛಾಯಾಗ್ರಾಹಕರನ್ನು ಹಾಗೂ ಸಂಗೀತ ನಿರ್ದೇಶಕರನ್ನು ಬಳಸಿಕೊಂಡಿರುವುದು ತಂತ್ರದ ದೃಷ್ಟಿಯಿಂದ ಗಮನಸೆಳೆಯುತ್ತದೆ. ಆದರೆ, ಅಂತಿಮವಾಗಿ ಇದೊಂದು ತಾಂತ್ರಿಕ ಕಸರತ್ತಾಗಿಯಷ್ಟೇ ಪರಿಣಮಿಸಿದೆ. ಕಾಲಘಟ್ಟಗಳನ್ನು ಪುನರ್‌ ರೂಪಿಸಲು ಮುತುವರ್ಜಿ ವಹಿಸಿರುವ ಚಿತ್ರತಂಡ, ಪ್ರಾದೇಶಿಕ ಸೊಗಡನ್ನು ಒಳಗೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ವಿಜಯಪುರದ ಗೋಲಗುಂಬಜ್ ಹೊರತುಪಡಿಸಿದರೆ ಉಳಿದ ಊರುಗಳ ಚಹರೆಗಳು ಸಿನಿಮಾದಲ್ಲಿ ಗಾಢವಾಗಿಲ್ಲ.

‘ಚೌಕ’ದ ಮಹತ್ವ ಇರುವುದು ಸಮಾಜದಲ್ಲಿನ ಹುಳುಕುಗಳನ್ನು ಕಣ್ಣಿಗೆ ಹಿಡಿಯುವುದರಲ್ಲಿ ಹಾಗೂ ಸಾಮರಸ್ಯದ ಅಗತ್ಯವನ್ನು ಧ್ವನಿಸುವುದರಲ್ಲಿ. ತಮ್ಮದಲ್ಲದ ತಪ್ಪಿಗೆ ಬಲಿಪಶುಗಳಾಗುವ ನಾಲ್ವರು ತರುಣರು ಜೈಲಿನಲ್ಲಿ ಒಟ್ಟಾಗುತ್ತಾರೆ. ಈ ನಾಲ್ಕು ರೇಖೆಗಳ ಪಾತ್ರದಲ್ಲಿ ಪ್ರೇಮ್‌, ಪ್ರಜ್ವಲ್‌, ವಿಜಯ ರಾಘವೇಂದ್ರ ಹಾಗೂ ದಿಗಂತ್‌ ನಟನೆ ಚೆನ್ನಾಗಿದೆ. ಇವರಲ್ಲಿ ಹೆಚ್ಚು ಗಮನಸೆಳೆಯುವುದು ದೇಶಪ್ರೇಮಿ ಆಗಿದ್ದುಕೊಂಡು ದೇಶದ್ರೋಹದ ಆರೋಪಕ್ಕೆ ಗುರಿಯಾಗುವ ಪಾತ್ರದಲ್ಲಿನ ಪ್ರಜ್ವಲ್. ಪ್ರಿಯಾಮಣಿ, ಐಂದ್ರಿತಾ ರೇ, ದೀಪಾ ಸನ್ನಿಧಿ ಹಾಗೂ ಭಾವನಾ ಚೌಕಕ್ಕೆ ಒರಗಿಕೊಂಡಿರುವ ಸ್ತ್ರೀಪಾತ್ರಗಳು. ಇವರಲ್ಲಿ ಪ್ರಿಯಾಮಣಿ ಪಾತ್ರ ಬಿಟ್ಟರೆ ಉಳಿದ ಪಾತ್ರಗಳಿಗೆ ಹೆಚ್ಚಿನ ಅವಕಾಶವಿಲ್ಲ.

ಪಾತ್ರವರ್ಗದ ಪೈಕಿ ಹೆಚ್ಚು ಗಮನಸೆಳೆಯುವುದು ‘ಚೌಕ’ದ ಕೇಂದ್ರದಲ್ಲಿ ನಿಲ್ಲುವ ಕಾಶಿನಾಥ್‌. ತಮ್ಮ ಮ್ಯಾನರಿಸಂಗಳನ್ನು ಉಳಿಸಿಕೊಂಡೇ ನತದೃಷ್ಟ ಮೇಷ್ಟ್ರ ಪಾತ್ರದಲ್ಲಿನ ಅವರ ನಟನೆ, ಕನ್ನಡದ ನಿರ್ದೇಶಕರು ಅವರನ್ನು ಪೋಷಕನಟನಾಗಿ ಹೆಚ್ಚು ಹೆಚ್ಚು ಬಳಸಿಕೊಳ್ಳಲು ಪ್ರೇರೇಪಿಸುವಷ್ಟು ಚೆನ್ನಾಗಿದೆ. ಸರ್ವಾಂತರ್ಯಾಮಿಯಂತೆ ಕಾಣಿಸುವ ಚಿಕ್ಕಣ್ಣನವರದು, ನಿರೂಪಣೆಯ ಅನುಕೂಲಕ್ಕಾಗಿ ರೂಪಿಸಿಕೊಂಡಿರುವ ಬೆನ್ನುಮೂಳೆ ಇಲ್ಲದ ಪಾತ್ರ.
ಹಾಡುಗಳು ‘ಚೌಕ’ ಚಿತ್ರದ ಮತ್ತೊಂದು ಆಕರ್ಷಣೆ. ಅವು ಕಥೆಗೆ ಪೂರಕವಾಗಿಯೂ ಇವೆ.

‘ಏನಾದರೂ ಆಗು ಮೊದಲು ಮಾನವನಾಗು’ ಎನ್ನುವ ಸಿನಿಮಾದ ಆಶಯ ಈ ಹೊತ್ತಿನ ಅಗತ್ಯ, ನಿಜ. ಆದರೆ, ಇದನ್ನು ಹೇಳಲು ಬಳಸಿಕೊಂಡಿರುವ ಮಾರ್ಗ ಸವಕಲಾದುದು. ನಾಯಕರು ವಿಧಾನಮಂಡಲವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಭಾಷಣ ಮಾಡುತ್ತಾರೆ. ಪ್ರಜಾಸತ್ತಾತ್ಮಕವಲ್ಲದ ಇಂಥ ಮಾರ್ಗಗಳನ್ನು ಸೂಚಿಸುವುದು ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ದಾರಿಯೂ ಅಲ್ಲ, ‘ಚೌಕ’ಟ್ಟಿನಿಂದ ಹೊರಬರುವ ಸೃಜನಶೀಲತೆಯೂ ಅಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT