ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳದ ಯುವಕನ ಬಂಧನ

ಮಂಗಳೂರು ವಿಮಾನ ನಿಲ್ದಾಣದಲ್ಲಿ ₹ 35 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶ
Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ಭೂಗತ ಪಾತಕಿಗಳಿಂದ ವಿದೇಶಿ ಕರೆನ್ಸಿಯನ್ನು ಖರೀದಿಸಿ ದುಬೈಗೆ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಭಟ್ಕಳ ಮೂಲದ ಯುವಕನನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬಂಧಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು, ಆತನಿಂದ ₹ 35 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ.

ಭಟ್ಕಳದ ಅಬ್ದೂರ್‌ ರಬ್‌ (21) ಬಂಧಿತ ಯುವಕ. ಗುರುವಾರ ರಾತ್ರಿ 10.30ಕ್ಕೆ ಜೆಟ್‌ ಏರ್‌ವೇಸ್‌ ವಿಮಾನದ ಮೂಲಕ ದುಬೈಗೆ ಹೊರಟಿದ್ದ. ಖಚಿತ ಮಾಹಿತಿ ಆಧರಿಸಿ ವಲಸೆ ವಿಭಾಗದ ಬಳಿ ಈತನನ್ನು ವಶಕ್ಕೆ ಪಡೆದು ಲಗ್ಗೇಜನ್ನು ತಪಾಸಣೆ ನಡೆಸಲಾಯಿತು. ಚಹಾ ಪುಡಿಯ ಪೊಟ್ಟಣ ಸೇರಿದಂತೆ ಹಲವು ಪ್ಲಾಸ್ಟಿಕ್‌ ತೊಟ್ಟೆಗಳಲ್ಲಿ ವಿದೇಶಿ ಕರೆನ್ಸಿಯನ್ನು ಅಡಗಿಸಿಟ್ಟುಕೊಂಡಿರುವುದು ಪತ್ತೆಯಾಯಿತು.

ಈತನಿಂದ ಅಮೆರಿಕದ ಡಾಲರ್‌ಗಳು, ಸೌದಿ ರಿಯಾಲ್‌ಗಳು, ಯುನೈಟೆಡ್‌ ಅರಬ್ ಎಮಿರೇಟ್ಸ್‌ನ ದಿರ್ಹಾಮ್‌ಗಳು ಮತ್ತು ಆಸ್ಟ್ರೇಲಿಯಾದ ಡಾಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ನಿರ್ದೇಶನಾಲಯದ ಮಂಗಳೂರು ಉಪ ನಿರ್ದೇಶಕ ವಿನಾಯಕ್‌ ಭಟ್‌ ತಿಳಿಸಿದ್ದಾರೆ.

‘ಭಟ್ಕಳದಲ್ಲಿ ಭೂಗತ ಪಾತಕಿಗಳಿಂದ ವಿದೇಶಿ ಕರೆನ್ಸಿಯನ್ನು ಖರೀದಿಸಿದ್ದು, ದುಬೈನಲ್ಲಿ ಸಿದ್ಧ ಉಡುಪು ಉದ್ದಿಮೆಗೆ ಹೂಡಿಕೆ ಮಾಡಲು ತೆಗೆದುಕೊಂಡು ಹೋಗುತ್ತಿದ್ದುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಆತನ ವಿರುದ್ಧ ಕಸ್ಟಮ್ಸ್‌ ಕಾಯ್ದೆ– 1962, ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ದೇಶನಗಳ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಭೂಗತ ಹವಾಲಾ ದಂದೆಕೋರರನ್ನು ಪತ್ತೆಮಾಡುವ ದಿಸೆಯಲ್ಲಿ ತನಿಖೆ ಮುಂದುವರಿದಿದೆ’ ಎಂದು ಮಾಹಿತಿ ನೀಡಿದ್ದಾರೆ.

ಒಂದು ತಿಂಗಳ ಅವಧಿಯಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಿ ಕರೆನ್ಸಿ ಕಳ್ಳಸಾಗಣೆಗೆ ಯತ್ನಿಸಿದ ಎರಡು ಪ್ರಕರಣಗಳು ಪತ್ತೆಯಾಗಿವೆ. ಜನವರಿ 5ರಂದು ಮೊಹಮ್ಮದ್ ಫಾರೂಕ್‌ ಅಮರ್‌ ಎಂಬಾತನನ್ನು ಬಂಧಿಸಿದ್ದ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು, ಆತನಿಂದ ₹ 25 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT