ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಸಿ ಮೇಲಿನ ಅನಂತ ನಡಿಗೆ

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ – 2017 ಮೆಚ್ಚುಗೆ ಗಳಿಸಿದ ಪ್ರಬಂಧ
Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮೀನಾಕ್ಷಿ ಹೆಂಗವಳ್ಳಿ

ಹೌದಲ್ಲ..? ನೀವೆಲ್ಲ ಬೀದಿ ಬದಿಯ ವಾಕಿಂಗ್ ನೋಡಿದ್ದೀರಿ. ಪಾರ್ಕಿನ ವಾಕಿಂಗ್ ಮಾಡಿದ್ದೀರಿ. ಹಾಗೆ ಲೇಕ್, ಕೊಳ, ಕೆರೆ - ಇವುಗಳ ಸುತ್ತಲೂ ಜನ ದೌಡಾಯಿಸುವುದನ್ನು ಕಂಡಿದ್ದೀರಿ. ಆದರೆ ನಾನೀಗ ಹೇಳಹೊರಟಿರುವುದು ನಮ್ಮ ನಮ್ಮ ತಾರಸಿ ಮೇಲಿನ ಅನಂತ ನಡಿಗೆಯ ಬಗ್ಗೆ! ನಮ್ಮ ಹೆಂಗಳೆಯರಿಗಂತೂ ಇದಕ್ಕಿಂತ ಬೇರೆ ನ್ಯಾಸದ ಜಾಗವಿರಲು ಖಂಡಿತ ಸಾಧ್ಯವಿಲ್ಲ! ಇಲ್ಲಿ ಸರಗಳ್ಳರ ಭಯವಿಲ್ಲ. ನೆಲ ನೋಡಿಕೊಂಡೇ ನಡೆಯಬೇಕೆಂಬ ಧಾವಂತವಿಲ್ಲ. ತಲೆಕೆದರಿಕೊಂಡಿದ್ದರೂ ಮುಖದಲ್ಲಿ ಪಾವು ಎಣ್ಣೆ ಸುರಿಯುತ್ತಿದ್ದರೂ ಪರಿಚಿತ ಮುಖಗಳು ಎದುರಿಗೆ ಸಿಗುವುದಿಲ್ಲವಾದ್ದರಿಂದ ಮೇಕಪ್ ಇಲ್ಲದ ನಮ್ಮ ಇರಸ್ತಿಕೆಯ ಬಗ್ಗೆ ಮುಜುಗರಪಟ್ಟುಕೊಳ್ಳಬೇಕಾದ ಸನ್ನಿವೇಶವಂತೂ ಬಿಲ್ಕುಲ್ ಇರುವುದಿಲ್ಲ! ಎಲ್ಲಕ್ಕಿಂತ ಹೆಚ್ಚಾಗಿ ಬೇಕಾಗಿಯೋ ಬೇಡಾಗಿಯೋ ಹಲವು ದೇಶಾವರಿಗಳ ವಿನಿಮಯದ ಹಂಗಿಲ್ಲ! ಏಕಾಂತ... ಕೇವಲ ಏಕಾಂತ... ಸ್ವರ್ಗೀಯ ಏಕಾಂತ..! ಇಂಥ ಏಕಾಂತದೊಳಗಿನ ಲೋಕಾಂತವನ್ನು ನೀವ್ಯಾವತ್ತೂ ಅನುಭವಿಸಿಲ್ಲವೆಂದಾದರೆ ನಡೆಯಿರಿ ನಮ್ಮ ತಾರಸಿಗೆ!

ಚುಮುಚುಮು ನಸುಕಿನ ಐದರಿಂದ ಆರೂವರೆಯ ಯಾವ ಸಮಯವಾದರೂ ಆದೀತು. ಈಗ ಇಬ್ಬನಿ ಕಾಲ ನೋಡಿ. ಕೊಂಚ ಲೇಟಾಗಿ ಬಂದರೇ ಒಳ್ಳೆಯದು. ಮುಂಗಾರು ಹಿಂಗಾರು ಕೈ ಕೊಟ್ಟಿದ್ದರೂ ಈ ವರ್ಷದ ಸೆಕೆಯ ಹಾಗೆ ಚಳಿಯೂ ಕೊಂಚ ಜೋರಾಗಿಯೆ ಇದೆಯಾದ್ದರಿಂದ ಸ್ವಲ್ಪ ಉಷ್ಣದ ಉಡುಪು ತೊಟ್ಟು ಬನ್ನಿ. ಅಂದಹಾಗೆ ಬೆಳಗಿನ ಶೌಚಾದಿಗಳನ್ನೆಲ್ಲ ಮುಗಿಸಿ ಒಂದು ದೊಡ್ಡ ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿದು ಬಂದಿದ್ದೀರಿ ತಾನೇ? ಒಳ್ಳೇದಾಯ್ತು. ಯಾಕೆಂದರೆ ದಿನದ ಆರಂಭಕ್ಕೆ ದೇಹದೊಳಗಿನ ಚರಂಡಿ ಕ್ಲೀನಾಗುವುದು ಬಹಳ ಮುಖ್ಯ ನೋಡಿ.

ಹ್ಞಾ! ಮೊಟ್ಟಮೊದಲು ಈ ಹದಿನೆಂಟು ಮೆಟ್ಟಿಲುಗಳ ಏರಿ ಬನ್ನಿ. ಇದೇನಿದು..! “ಇಷ್ಟು ಸಣ್ಣ ಜಾಗದಲ್ಲಿ ಅದೆಂಥಾ ವಾಕಿಂಗಪ್ಪಾ ಅಂತ ಮೂಗು ಮುರಿದಿರಾ?’ ಅಲ್ಲೇ ಇರೋದು ಗುಟ್ಟು! ತೋರಿಸ್ತೇನೆ ಬನ್ನಿ. ತಕ್ಷಣಕ್ಕೆ ಸಿಗುವ ಈ ವಾಯವ್ಯಮೂಲೆಯಿಂದ ಆ ಆಗ್ನೇಯಕ್ಕೆ ಹೆಜ್ಜೆ ಬರೆಯುತ್ತಾ ಹೋಗಿ. “ವಾಕಿಂಗ್‌ನಲ್ಲೂ ವಾಸ್ತೂನಾ’ ಅಂತ ಹುಬ್ಬೇರಿಸಬೇಡಿ. ವಾಸ್ತುಗೀಸ್ತು ಏನಿಲ್ಲ; ಇದ್ದುದರಲ್ಲೇ ಸ್ವಲ್ಪ ದೊಡ್ಡ ಹರವನ್ನು ಆರಿಸಿಕೊಳ್ಳುವ ಜಾಣತನವಿರಬೇಕಷ್ಟೆ. ನಿಮಗೆಲ್ಲ ಆಂಗ್ಲರ ಎಂಟಂಕಿಯ ಪರಿಚಯ ಉಂಟು ತಾನೆ! ಒಂದು ಚಿಕ್ಕ ಸೊಂಟದಿಂದ ಬೆಸೆಯಲ್ಪಟ್ಟ ಒಂದರ ಮೇಲೊಂದು ಪೇರಿಸಿದ ಎರಡು ಸಮನಾದ ಶೂನ್ಯದ ಹೊಟ್ಟೆಗಳು! ಆ ಶೂನ್ಯದ ಆರಂಭ ಮತ್ತು ಅಂತ್ಯ ಎಲ್ಲಿಂದ ಅಂತ ಪತ್ತೆ ಹಚ್ಚಲಾಗದಷ್ಟು ನಿಗೂಢ!

ಅಂಥ ನಿಗೂಢ ಶೂನ್ಯದ ಈ ವಾಯವ್ಯ ಹೊಟ್ಟೆಯಿಂದ ಹೆಜ್ಜೆ ಶುರು ಮಾಡಿ ಎಂಟನ್ನು ಬರೆಯುತ್ತಾ ಅದರ ಸೊಂಟ ಬಳಸಿ ಆಗ್ನೇಯ ಹೊಟ್ಟೆಗೆ ಕಾಲಿರಿಸಿ. ಅಲ್ಲೂ ಹಾಗೇ ಮಾಡಿ. ಪುನಃ ಶುರು ಮಾಡಿದಲ್ಲಿಗೇ ಬಂದು ಮುಟ್ಟಿ. ಹೀಗೆ ಮಿನಿಮಮ್ ಮೂವತ್ತು ನಿಮಿಷ ಎಡೆಬಿಡದೆ ಎಂಟಂಕಿಯ ಔಟ್‌ಲೈನ್ ಮೇಲೆ ಬ್ರಿಸ್ಕ್ ವಾಕ್ ಮಾಡಿ. ಆಗ ಅಪ್ರಜ್ಞಾಪೂರ್ವಕವಾಗಿ ಹೊಟ್ಟೆಗಳು ಸಣ್ಣದೊಡ್ಡವಾಗಿಯೂ ವಕ್ರವಕ್ರವಾಗಿಯೂ ಬದಲಾದರೆ ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡಿ! ಯಾಕೆಂದರೆ ಶಾನುಭೋಗರ ಮೋಜಣಿಯಂತಲ್ಲ ಈ ನಡಿಗೆ! ಬುದ್ಧತತ್ವದ ಹಾಗೆ ನಿತ್ಯ ನೂತನ - ಆಯೇಗಾ ಜಾಯೇಗಾ! ಕ್ರಾಸ್ ಮಾಡಲು ಚಿಕ್ಕದೊಂದು ಸೊಂಟವಿರಬೇಕಷ್ಟೆ! ಸಮಯದ ಅರಿವಿನ ಜೊತೆಗೆ ಕಲಾಸಂಗೀತದ ಆನಂದಾನುಭೂತಿಗಾಗಿ ಜಂಗಮವಾಣಿಯಲ್ಲಿ ನೋಟ್ ಮಾಡಿಕೊಂಡ ಹಾಡು ಮುಗಿದರೂ ಇನ್ನೂ ನಡೆಯುತ್ತಲೇ ಇರಬೇಕೆನ್ನುವ ಈ ಅಖಂಡ ಅನಂತತೆಯ (ಇನ್‌ಫಿನಿಟಿ) ಸೂತ್ರದ ನಡಿಗೆ ನಿಮಗೊಂದು ಒಳ್ಳೆಯ ನೃತ್ಯದ ಅನುಭವ ಕೊಡುವುದರ ಜೊತೆಗೆ ಸುತ್ತಮುತ್ತ ಮೇಲೆ ಕೆಳಗೆ ಕಣ್ಣು ಹಾಯಿಸಿದಲ್ಲೆಲ್ಲ ನೋಡ ಸಿಗುವ ಗಂಧವತಿ ಪೃಥಿವಿಯ ಕೌತುಕದಾಟದ ಮುಂದೆ ಯಾವ ಲೆಕ್ಕಾಚಾರವೂ ನಿಲ್ಲುವುದಿಲ್ಲ!

‘ಸಾ ಪಶ್ಯಾತ್ ಕೌಸಲ್ಯಾ ವಿಷ್ಣೂ ಸಾ ಪಶ್ಯಾತ್ ಕೌಸಲ್ಯಾ...’ ಓ ಅದಾವ ಹಾಡು ಅಂದಿರಾ?  ಅದೇ, ಪ್ರಸವಸದನದಲ್ಲಿದ್ದ ಕೌಸಲ್ಯಾದೇವಿ ತನ್ನ ಗರ್ಭದೊಳಕ್ಕೆ ಇಳಿಯುತ್ತಿರುವ ವಿಷ್ಣುವಿನ ಅಂಶವನ್ನು ಕಾಣುವ ಅದ್ಭುತ ದೃಶ್ಯದ ಜೋನ್ಪುರಿಯೊಂದಿಗೆ ನಮ್ಮ ಚಾಮುಂಡಿಬೆಟ್ಟದ ಮಂಜಿನ ಮುಸುಕನ್ನು ಕಿತ್ತೊಗೆದು ಹೊಂಬಣ್ಣದ ಬಾಲಸೂರ್ಯ ತನ್ನ ಗೆಣೆಕಾರ ಅರುಣನ ಕೆಂಪಿನೊಂದಿಗೆ ಇಣುಕುತ್ತಿದ್ದಾನೆ ನೋಡಿ. ಈ ಕಡೆ ಪಶ್ಚಿಮದಲ್ಲಿ ತಂಪಿನ ಚಂದ್ರಮ ತನ್ನ ಪಾಳಿ ಮುಗಿಯಿತೆಂದು ಮನೆಗೆ ಹೊರಟಿದ್ದಾನೆ. ಎಲ್ಲಿಂದಲೋ ಹಾರಿಬಂದ ಗರುಡಪಕ್ಷಿಗಳು ಒಂದಕ್ಕೊಂದು ಸೂಚನೆ ಕೊಡುತ್ತಾ ನಿರ್ದಿಷ್ಟ ಗಮದ ಕಡೆ ಸಾಗುತ್ತಾ ಇವೆ. ಹಾಗೇ ಪೈಲಟ್ ಹಕ್ಕಿಯ ಹಿಂದೆ ಹಂಸಪಾದಾಕೃತಿಯಲ್ಲಿ ಹಾರುತ್ತಿರುವ ವಿವಿಧ ಪಕ್ಷಿಸಾಲುಗಳು. ಓ! ಇಲ್ಲೇ ಪಕ್ಕದ ಬಿಲ್ಡಿಂಗಿನ ಇಳಿಜಾರು ಶೋ ಹೆಂಚಿನ ಮೇಲೆ ಕತ್ತು ಕೊಂಕಿಸಿ ಮೈಯುಬ್ಬಿಸಿ ಉರುಟುರುಟು ನರ್ತನ ಮಾಡುತ್ತಾ ಹೆಣ್ಣನ್ನು ಬೇಟಕ್ಕಾಗಿ ಆಹ್ವಾನಿಸುತ್ತಿರುವ ಗಂಡುಪಾರಿವಾಳಗಳು.

ಹಾಗೇ ಅಲ್ಲಿ ಆಗಸದ ಅನಂತದಲ್ಲಿ ಕಾಣುವ ಎರಡು ಧೂಮನದಿಗಳನ್ನೂ ನೋಡಿ! ಈಗಷ್ಟೇ ಎದುರಾ ಬದುರಾ ಹಾದು ಹೋದ ಲೋಹಹಕ್ಕಿಗಳ ಹೆದ್ದಾರಿಯದು. ಮತ್ತೆ ಆಕಾಶಕ್ಕೆ ಮುತ್ತಿಕ್ಕುವ - ನಾವೇ ಬೆಳೆಸಿದ - ಈ ಗುಂಪು ಮರಗಳನ್ನೂ ನೋಡಿ. ನಾಗರಿಕ ಜಗತ್ತಿನ ವಿಷಾನಿಲವನ್ನೆಲ್ಲ ಹೀರಿಕೊಂಡು ಶುದ್ಧ ಪ್ರಾಣವಾಯುವನ್ನು ಎಲ್ಲೆಡೆ ಪಸರಿಸುವ ಈ ಪಟಾಲಮ್ಮಿನ ಉಪಕಾರವನ್ನು ಎಷ್ಟು ಹೇಳಿದರೂ ಕಡಿಮೆಯೆ. ಕಾರ್ತಿಕದ ದೀಪಾವಳಿಯಲ್ಲಂತೂ ಸುಡುಮದ್ದಿನ ನಕಲಿ ವಾಯುಮಂಡಲವನ್ನು ಸೋಸಲು ಇಡೀ ಹಸಿರುವಲಯ ಕಷ್ಟಪಡುತ್ತಿದ್ದಾಗ ಈ ತ್ರಿವಳಿಗಳೂ ತಮ್ಮ ಕೈಲಾದ ಸೇವೆ ಸಲ್ಲಿಸಿ ಸದ್ಯಕ್ಕೆ ಬಡವಾಗಿ ನಿಂತಿವೆ. ಆದರೆ ಸರಿದ ಶ್ರಾವಣದಲ್ಲಿ ನೋಡಬೇಕಿತ್ತು ನೀವು - ಅಸಂಖ್ಯ ಕೇಸರಿ ಹೂಗುಚ್ಛಗಳನ್ನು ಬಿಟ್ಟ ಪಿಚಕಾರಿ ಮರ, ರೆಂಬೆ ತುಂಬಾ ಜೋತುಬಿದ್ದ ಬಿಳಿಹೂಗಳ ಸರಮಾಲೆಯ ಆಕಾಶಮಲ್ಲಿಗೆ ಮರ ಮತ್ತು ದಟ್ಟ ಹಸಿರಿನ ನಗು ಮುಕ್ಕಳಿಸುತ್ತಿದ್ದ ಹೊಂಗೆಮರ ಪರಸ್ಪರ ಮಾತಾಡಿಕೊಂಡು - ನಮ್ಮ ಬಾವುಟ ಹಬ್ಬಕ್ಕೆ ಸರಿಯಾಗಿ ತಮ್ಮ ವರ್ಣಚಿತ್ತಾರದಿಂದ ದೇಶಭಕ್ತಿ ಮೆರೆದದ್ದೇ ಮೆರೆದದ್ದು! ಇದೀಗ ಕಾಯಿ ಕಚ್ಚಿದ ಆ ಪಿಚಕಾರಿ ಮರದಲ್ಲಿ ಅದೆಷ್ಟು ಗಿಣಿರಾಮರಿದ್ದಾರೆ ಅಂತ ಲೆಕ್ಕ ಹಾಕಲು ಸಂಜೆಯ ಸಮಯ ಬರಬೇಕು ನೀವು! ಕಾಯಿಯೇ ಗಿಣಿಯಾಗಿ, ಗಿಣಿಯೇ ಕಾಯಿಯಾಗಿ ನಿಮ್ಮಂಥ ಲೆಕ್ಕಿಗರನ್ನು ದಾರಿ ತಪ್ಪಿಸುವುದು ಗ್ಯಾರಂಟಿ!

ಓ... ಕಲ್ಯಾಣಿ ಆಗಲೇ ಬಂದುಬಿಟ್ಟಳಾ..! ‘ನಗ್ನ ವಿಪಿನ ನಗ್ನ ಗಗನ ತಪೋಮಗ್ನ ಮೇದಿನಿ’. .ಆಹಾ! ಈ ಮಾಗಿಗೆ ಹೇಳಿ ಮಾಡಿಸಿದ ಹಾಡು! ‘ಮಂಜು ಮುಸುಕಿ ಬಿಳಿಚಿದಳಿಳೆ ಮಧು ಮಾಧವ ಗರ್ಭಿಣಿ’. ಓಹ್...ಎಂಥಾ ನೆರವಲ್...! ವಿಳಂಬಾತಿ ವಿಳಂಬದಲ್ಲೂ ರಸ ಹಿಂಡುವ ಪರಿ ಹೇಗಿದೆ ನೋಡಿ! ನಮ್ಮ ಪುತಿನ ಮತ್ತು ನೆರೆಯ ಟಿಎಮ್‌ ಕೃಷ್ಣನ ಅದ್ಭುತ ಜುಗಲ್ ಬಂದಿ! ಹಾಗೇ ಆ ಮರಗಳ ತುಂಬೆಲ್ಲ ಹರಡಿದ ಗಾಯನಗೋಷ್ಠಿ ಯಾವ ಹಕ್ಕಿಯದೆಂದು ಹೇಳಬಲ್ಲಿರಾ? ಮಡಿವಾಳ-ಪಿಕಳಾರ, ಗುಬ್ಬಿ-ಗೊರವಂಕ, ಕಾಗೆ-ಕೋಗಿಲೆ, ಟುವ್ವಿ-ಸೂರಕ್ಕಿ – ಹೀಗೆ ಎಷ್ಟೊಂದು ಜುಗಲ್ಬಂದಿಗಳು! ನಡುವೆ ಏಳರ ಗುಂಪಿನ ಹರಟೆಮಲ್ಲಿ ಅಕ್ಕತಂಗಿಯರ ಕಿಚಪಿಚದ ಜೊತೆಗೆ ಹೆಸರೇ ಗೊತ್ತಿಲ್ಲದ ಇನ್ನೂ ಅನೇಕ ಪಕ್ಷಿಗಳ ಕೂಜನ ಆಲಾಪನ. ಹಾಗೇ ಆಲಿಸುತ್ತಾ ಎಂಟರ ಹೊಟ್ಟೆಯ ದಕ್ಷಿಣಕ್ಕೆ ಬಂದಾಗ ಒಂದೇ ಒಂದು ಬಾರಿ ಕೆಳಗಡೆ ಬಗ್ಗಿ ನೋಡಿ. ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ಇನ್ನೊಂದೇ ಲೋಕದ ಬಣ್ಣದ ಅನಾವರಣ ನಿಮ್ಮ ಕಣ್ಣೊಳಗೆ ಕೂತುಬಿಟ್ಟಿತಲ್ಲ?!

ಹೌದು, ಅದುವೇ ನಮ್ಮ ಪುಟ್ಟ ಕೈತೋಟ. ಅಲ್ಲಿ ಏನುಂಟು ಏನಿಲ್ಲ ಕೇಳಬೇಡಿ! ಜುಟ್ಟಿನ ಆರೈಕೆಗಾಗಿ ಲೋಳೆಸರದಿಂದ ಹಿಡಿದು ಬಣ್ಣ ಬಣ್ಣದ ದಾಸವಾಳಗಳವರೆಗೆ... ನಡುವೆ ಪನೀರ್ ಗುಲಾಬಿಯೂ ಸೇರಿದಂತೆ ವಿವಿಧ ಗುಲಾಬಿಗಿಡಗಳು. ಮೈಸೂರುಮಲ್ಲಿಗೆ, ಮುತ್ತುಮಲ್ಲಿಗೆ, ಜಾಜಿ. ಬೇಲಿಯ ಪಶ್ಚಿಮಕ್ಕೆ ಹಬ್ಬಿಸಿರುವ ಬಿಳಿಹೂವಿನ ಗೌರಿಬಳ್ಳಿ ಮತ್ತು ದಕ್ಷಿಣದ ನೀಲಿ ಹೂಗಳ ಕಾಡುಬಳ್ಳಿ. ಈ ನೀಲಿ ಡಾನ್‌ನದ್ದೇ ಒಂದು ಕಥೆ! ನಮ್ಮನೆಯವರು ಒಮ್ಮೆ ಗೆಳೆಯರ ಜೊತೆ ಕೊಡೈಕೆನಾಲಿಗೆ ಹೋದಾಗ ಅಲ್ಲಿ ದಂಡಿಯಾಗಿ ಬೆಳೆದ ಈ ಸುಂದರಿಯ ಒಂದು ಸಣ್ಣ ಬಳ್ಳಿಯನ್ನು - ಅದೂ ಒಂದು ಚಿಕ್ಕ ಕಡ್ಡಿಗೆ ಸುತ್ತಿಕೊಂಡದ್ದು -ತಂದುಕೊಟ್ಟಿದ್ದರು..ನೆಟ್ಟರೆ ಬಂದೇಬಿಡುವುದಾ?! ಅದೀಗ ಹೆಂಟೆಗೊದ್ದ, ಹಾವುರಾಣಿಗಳ ಕಣ್ಣಾಮುಚ್ಚಾಲೆಯಾಟಕ್ಕೆ ಪ್ರಶಸ್ತ ಜಾಗ. ಹಾಗೇ ಆ ಮೂಲೆಯ ಪೊದೆಯಿದೆಯಲ್ಲ - ಅದು ನನ್ನ ತವರಕುಡಿ ಮಂಗಳೂರು ಮಲ್ಲಿಗೆಯದು! ವಸಂತನಿಗಾಗಿ ಗಮಗಮಾಂತ ಹೂ ಅರಳಿಸುವುದಕ್ಕೋಸ್ಕರ ಈಗ ಧ್ಯಾನಸ್ಥಳಾಗಿದ್ದಾಳೆ ಅಷ್ಟೆ! ಆದರೂ ಆಯಾಯ ಮಾಸಗಳಲ್ಲಿ ಪಿಕಳಾರ, ಮಡಿವಾಳ ಮುಂತಾದ ಹಕ್ಕಿಗಳಿಗೆ ಗೂಡು ಕಟ್ಟಲು ಜಾಗ ಕೊಡುತ್ತಾಳೆ!

ಅದರೆ ಹಾಳಾದ್ದು ಇದಿರು ಮನೆಯ ಆ ತೆಂಗಿನಮರದಲ್ಲಿ ಬೀಡುಬಿಟ್ಟ ಕೆಂಭೂತಕ್ಕೆ ತನ್ನ ಮರಿಗಳಿಗೆ ಔತಣ ಮಾಡಿಸಲು ಹೆಂಟೆಗೊದ್ದ, ಹಾವುರಾಣಿಯ ಜೊತೆಗೆ ಈ ಸಣ್ಣಹಕ್ಕಿಗಳ ಎಳೆಬೊಮ್ಮಟೆಗಳೇ ಬೇಕು... ಏನನ್ಯಾಯ ನೋಡಿ...? ಹಾಗೇ ಆ ತೆಂಗಿನ ಮರದ ಅಳಿಲು–ಸಂಸಾರಕ್ಕೆ ನಾವೇ ಸಾಕಿದ ಮುದ್ದಿನ ಬೆಕ್ಕು ‘ಸಿಬಿ’ಯೇ ಯಮದೂತೆ. ಈ ಸಿಬಿಯ ಹೊಟ್ಟೆಗೆ ನಾವೆಷ್ಟೇ ಷೋಡಶೋಪಚಾರ ಮಾಡಿದರೂ ಅದು ಮಾತ್ರ ಗುಬ್ಬಚ್ಚಿಗಳಿಗೆಂದು ಹಾಕಿದ ಅನ್ನವನ್ನು ತಿನ್ನಲು ಬರುವ ಪಾಪದ ಅಳಿಲು ಮರಿಗಳ ಬೇಟೆಯನ್ನು ಬಿಡುವುದಿಲ್ಲ. ಇನ್ನು ನಮ್ಮ ಜಲಸಸ್ಯಗಳಿಗಂಟಿಕೊಂಡ ಜೀವರಾಶಿಗಳದ್ದು ಮತ್ತೊಂದೇ ಕಥೆ. ಕಮಲದ ಅಂದಕ್ಕೆ ಮರುಳಾಗಿ ಆ ಬಾನಿಯಲ್ಲಿ ಬೆಳೆಸಿದರೆ ಹೂಗಳ ಜೊತೆ ಸೊಳ್ಳೆಗಳೂ ಮುಫತ್ತು! ಸೊಳ್ಳೆಯ ಮೊಟ್ಟೆಗಳನ್ನು ತಿನ್ನಲೆಂದು ಗಪ್ಪಿಮೀನುಗಳನ್ನು ಬಿಟ್ಟರೆ ಕಪ್ಪೆಗಳಿಗೂ ಅದೇ ಪ್ರಸವಸದನವಾಗಿ ಬಾನಿಯ ತುಂಬೆಲ್ಲ ಬರೀ ಗೊದಮೊಟ್ಟೆಗಳದೇ ಕಾರುಬಾರು! ಇನ್ನು ಆ ಕಪ್ಪೆಸಂತಾನಗಳೆಲ್ಲ - ಬಾಲ ಉದುರಿದ ನಂತರ ಬಾನಿಯಿಂದ ಜಂಪ್ ಮಾಡಿ ತೋಟದ ಮಣ್ಣೊಳಗೆ ಸೇರಿಕೊಂಡು ಹದವಾಗಿ ಬೆಳೆದ ಮೇಲೆ ಈಚೆ ಬಂದು - ಗಾಯನಗೋಷ್ಠಿ ಶುರುಮಾಡಿದರೆ ಅದೆಲ್ಲಿಂದಲೋ ಪ್ರತ್ಯಕ್ಷವಾಗುವ ಉರಗಪಡೆಗೆ ಇವೇ ಪುಷ್ಕಳ ಭೋಜನ! ಪ್ರಕೃತಿಯ ಈ ಆಟಕ್ಕೆ ಏನಂತ ಹೆಸರಿಡೋಣ, ನೀವೇ ಹೇಳಿ.

ಹಾಗೇ ಇನ್ನೊಂದು ರೌಂಡಲ್ಲಿ - ಆಹಾರವೇ ಔಷಧಿಯಾಗುವ ನನ್ನ ಸೊಪ್ಪಿನ ಗಿಡಗಳ ಕಡೆಗೊಮ್ಮೆ ದೃಷ್ಟಿ ಹಾಯಿಸಿಬಿಡಿ. ಹೌದು, ಈ ಕಡೆಯದು ನುಗ್ಗೇಗಿಡ. ಆ ಮೂಲೆಯಲ್ಲಿ ಚಕ್ರಮುನಿ. ಪಕ್ಕದಲ್ಲೇ ಎಲವರಿಗೆ. ಗೇಟಿಗೆ ಹಬ್ಬಿಸಿದ ಅಮೃತಬಳ್ಳಿ. ದೊಡ್ಡಪತ್ರೆ, ಬಸಳೆ, ಬಾಯಿಬಸಳೆ, ಕರಿಬೇವು, ಪುದಿನ, ಒಂದೆಲಗ, ತುಳಸಿ, ವೀಳ್ಯದೆಲೆ, ಮತ್ತೆ ತಾನೆ ತಾನಾಗಿ ಬೆಳೆವ ಗಣಿಕೆ - ಎಲ್ಲ ನಮಗೆ ಬೇಕಾದಷ್ಟೇ ಇವೆ. ಹಾಗೇ ಆ ಬಟ್ಟೆ ಒಗೆದ ನೀರು ಹೋಗುವ ಜಾಗದಲ್ಲಿರುವ ಕರಿಕೆಸುವನ್ನು ಕಂಡು ಪತ್ರೊಡೆಯ ನೆನಪಾಗಿ ಬಾಯಲ್ಲಿ ನೀರು ಬಂದರೆ ತಪ್ಪಿಲ್ಲ ಬಿಡಿ! ಇವನ್ನೆಲ್ಲ ಒಮ್ಮೆ ನೆಟ್ಟರೆ ಮುಗಿಯಿತು - ನಮ್ಮ ನಾಲಿಗೆಯ ಸೇವೆಗೆ ಸದಾ ಸಿದ್ಧವಾಗಿರುತ್ತವೆ. ಇವಕ್ಕೆಲ್ಲ ಔಷಧಿ, ಗೊಬ್ಬರ ಏನು ಅಂದಿರಾ? ಬೇವಿನ ಸೋಪಿನ ನೀರೇ ಔಷಧಿ; ಮರಗಳ ತರಗಲೆ, ನೆರಳಿಗಾಗಿ ಬರುವ ಹಸುಗಳ ಸಗಣಿ ಮತ್ತು ಅಡುಗೆಮನೆಯ ತ್ಯಾಜ್ಯ – ಇವುಗಳ ಕಾಂಬಿನೇಶನ್ನೇ ಸಾಕು ಬೇರುಗಳ ಭೂರಿ ಭೋಜನಕ್ಕೆ!

ಈ ನಡುವೆ ಅದೇನೊ ಬತ್ತೀಸ್ ರಾಗ ಎಳೆದಿರಲ್ಲ. ಯಾವ್ಯಾವ ವಾರ ಯಾವ್ಯಾವ ಪೂಜೆಗೆ, ಯಾವ್ಯಾವ ಹೂವಿನ ಸೇವೆ ಅಂತಲಾ? ಛೆ..ಛೆ.. ಚಿಟ್ಟೆ-ಜೇನ್ನೊಣಗಳೂ, ಸಣ್ಣಪುಟ್ಟ ಹಕ್ಕಿಗಳೂ ಹೂವಿಂದ ಹೂವಿಗೆ ಹಾರಾಡಿ ಮಧು ಹೀರುವ ಆಟದ ನೋಟಕ್ಕಿಂತ ಇನ್ನಾವ ಮಹಾಪೂಜೆ ಇರಲು ಸಾಧ್ಯ ಹೇಳಿ? ಹಾಗೇ ನಮ್ಮ ಪೂರ್ವಜರು ಭೇಟಿಕೊಡಲ್ವಾ ಅಂದ್ರಾ? ಕೊಡದೇ ಏನು! ಪುಣ್ಯಕ್ಕೆ ನಮ್ಮೆರಡು ನಾಯಿಗಳು ಅವುಗಳನ್ನೆಲ್ಲ ಅಟ್ಟಾಡಿಸಿಬಿಡುತ್ತವಾದರೂ ಅಷ್ಟರಲ್ಲೇ ಎಲ್ಲೆಂದರಲ್ಲಿ ಡ್ಯಾಮೇಜ್ ಮಾಡಿದ್ದಕ್ಕೆ ಕೈಯೇ ಮುರಿದಂತೆ ನಾನು ಪ್ರಲಾಪಿಸುತ್ತಿದ್ದರೆ, ‘ಪಾಪ, ಇಂಥಾ ಬರದಲ್ಲಿ ಅವು ತಾನೇ ಏನು ಮಾಡಿಯಾವು. ಅಂಥಾ ಅಶೋಕವನವನ್ನೇ ಬುಡಮೇಲು ಮಾಡಿದನಂತೆ ಹನುಮ. ಇನ್ನು ಇದ್ಯಾವ ಲೆಕ್ಕ’ – ಅಂತ ನನ್ನೆಡೆಗೇ ರಾಮಬಾಣ ಬಿಟ್ಟು ಒಳಗಿಂದ ಒಂದಷ್ಟು ಬಿಸ್ಕೇಟ್‌ಪ್ಯಾಕ್‌ಗಳನ್ನು ತಂದು ಅವುಗಳಿಗೆಲ್ಲ ಹಂಚಿಬಿಡುತ್ತಾರೆ ಈ ನನ್ನ ‘ಸಹಧರ್ಮಣ’! ಅಲ್ಲಿಗೆ ಮುಗಿದೇ ಹೋಯ್ತಲ್ಲ ಶ್ರೀಮದ್ ಹನುಮಪುರಾಣ!      

ಅರೆ! ಹೇಳಲು ಮರೆತಿದ್ದೆ. ಈ ನಡುವೆ ಕೆಲವು ಮಾನವನಿರ್ಮಿತ ಎಡವಟ್ಟುಗಳು ನಿಮ್ಮ ಕಣ್ಣಿಗೆ ಬಿದ್ದು ಧ್ಯಾನಕ್ಕೆ ಭಂಗಬರಬಹುದು. ಓವರ್‌ಹೆಡ್ ಟ್ಯಾಂಕ್ ತುಂಬಿ ಒಂದೇ ಸಮ ಸುರಿದು ಗಟಾರ ಸೇರುತ್ತಿರುವ ಜೀವಜಲ. ಬೆಳ್ಳಂಬೆಳಗಾದರೂ ಇನ್ನೂ ಬೆಳಗುತ್ತಿರುವ ಬೀದಿ ದೀಪಗಳು. ಎಲ್ಲೆಂದರಲ್ಲಿ ಕಸ ಚೆಲ್ಲುತ್ತಿರುವ ಮಹಾನ್ ಮತದಾರ ಪ್ರಭುಗಳು. ನಮ್ಮ ಎಡಪಕ್ಕದ ಖಾಲಿ ಸೈಟನ್ನೇ ನೋಡಿ - ಹೇಗೆ ಎಲ್ಲ ಥರದ ಪ್ಲಾಸ್ಟಿಕ್ಕಿನ ಹಾರಾಟ ನಡೆದಿದೆ! ನಗರಪಾಲಿಕೆಯಿಂದ ಮನೆ ಮನೆಗೆ ಎರಡೆರಡು ಬಕೀಟ್‌ಗಳ ಉಡುಗೊರೆ ಸಿಕ್ಕಿದ್ದರೂ ಅವನ್ನು ಸ್ವಂತಕ್ಕೆ ಉಪಯೋಗಿಸಿಕೊಂಡು ಅಲ್ಲಲ್ಲೇ ಕಸ ಹರಡುವ ಈ ಜನಗಳನ್ನ ಏನಂತ ಕರೆಯೋಣ ಹೇಳಿ?

ಓ, ಟೈಮಾಗೇ ಹೋಯ್ತಲ್ಲ! ‘ನೀ ನಾಮ ರೂಪಮುಲಕು ನಿತ್ಯ ಜಯ ಮಂಗಳಂ’- ಮುಕ್ತಾಯದೊಂದಿಗೆ ಹೊಟ್ಟೆಯೂ ತಾಳ ಹಾಕ್ತಾ ಇದೆ. ಮೊದಲೇ ಹೇಳಿದೆನಲ್ಲ - ಸಮಯ ಸರಿದದ್ದೇ ಗೊತ್ತಾಗಲ್ಲ ಅಂತ! ಇವತ್ತು ನಿಮ್ಮೊಡನೆ ಸೇರಿ ಕೊಂಚ ಜಾಸ್ತಿಯೇ ವಾಕ್ ಆಯಿತೆನ್ನಿ. ಇನ್ನೇನು ನಮ್ಮನೆಯವರು ಪಾರ್ಕಿನಿಂದ ಹಿಂದಿರುಗುವ ಹೊತ್ತು. ಆದ್ರೂ ಹರಿ ಬರಿ ಏನಿಲ್ಲ ಬಿಡಿ. ದೋಸೆ ಹಿಟ್ಟು ರೆಡಿ ಇದೆ; ಚಟ್ನಿಪುಡಿ ಹಾಕ್ಕೊಂಡು ತಿಂದರಾಯಿತು. ಪಾಪ, ಮೂರು ಹೊತ್ತೂ ‘ಅದೇ ಆಗಬೇಕು ಇದೇ ಆಗಬೇಕು’ ಅಂತ ಹೆಂಡತಿಯನ್ನು ಅಡುಗೆಮನೆಯಲ್ಲೇ ಸಾಯಿಸುವ ಹಿಟ್ಲರನ ಪೈಕಿಯಲ್ಲ ‘ನನ ಗಂಡ.’ ಮಕ್ಕಳು ಮರಿ ಅಂದಿರಾ? ಇದ್ದಾರೆ - ‘ಸಪ್ತಸಾಗರದಾಚೆ.’ ಇಬ್ಬರೂ ಹೆಣ್ಣುಮಕ್ಕಳಾದ್ದರಿಂದ ಗಂಡು ಹೆತ್ತವರ ಹಾಗೆ ನಮಗ್ಯಾವ ನಿರೀಕ್ಷೆಯೂ ಇಲ್ಲ.

ಅದೃಷ್ಟವಶಾತ್ ಸದ್ಯಕ್ಕೆ ಏನೂ ತೊಂದರೆಯಿಲ್ಲಬಿಡಿ. ದಿನ ಬೆಳಗಾದರೆ ಚಾಮುಂಡಿ ಬೆಟ್ಟದ ಕಡೆಗೊಮ್ಮೆ ದೃಷ್ಟಿಹಾಯಿಸಿದರೆ ಸಾಕು - ತಿಂಗಳ ಕೊನೆಗೆ ಅಷ್ಟೋ ಇಷ್ಟೋ ಪೆನ್ಶನ್ ಹಣ ಇವರ ಅಕೌಂಟಿಗೆ ಬಂದು ಬೀಳುತ್ತೆ. ಇರಲೊಂದು ಚಿಕ್ಕ ನೆಲೆಯಿದೆ. ಇನ್ನೇನು ಬೇಕು ಹೇಳಿ? ಎರಡೋ ಮೂರೋ ವರ್ಷಕ್ಕೊಮ್ಮೆ ಸ್ವದೇಶೀ ಸೆಳೆತಕ್ಕಾಗಿ ಬರುತ್ತಾರೆ ಮಕ್ಕಳು. ಹಾ ಹೂ ಅನ್ನುವಷ್ಟರಲ್ಲಿ ಬಂದೂ ಆಯ್ತು. ಹೋಗೂ ಆಯ್ತು. ಮತ್ತೆ ವಿದಾಯದ ಹಿಂಸೆ. ಅದರಲ್ಲೂ ಎರಡು ಮೊಮ್ಮಕ್ಕಳಿಗೆ ವಿದಾಯ ಹೇಳುವುದಿದೆಯಲ್ಲ - ಆ ಸಂಕಟವನ್ನು ಯಾವ ಶಬ್ದಗಳಲ್ಲೂ ಹಿಡಿದಿಡಲಾಗದು. ನಡುವೆ ವಾಟ್ಸ್ಯಾಪ್, ಸ್ಕೈಪ್‌ಗಳಲ್ಲಿ ಕಾಣ ಸಿಗುತ್ತಾರೆ, ನಿಜ. ಬಾಲಭಾಷೆಗಳಲ್ಲಿ ‘ಅಮ್ಮಮ್ಮ ’ ಅಂತವೆ. ‘ತಾತ’ ಅಂತವೆ. ‘ವಾತಾರ್ಯೂ ದೂಯಿಂಗ್’ ಅಂತವೆ.

ಆದರೆ ಮುಟ್ಟುವಂತಿಲ್ಲ, ಅಪ್ಪಿ. ಮುದ್ದಾಡುವಂತಿಲ್ಲ – ಕನ್ನಡಿಯೊಳಗಿನ ಗಂಟಿನಂತೆ. ಅಲ್ಲ, ಪಶುಪಕ್ಷಿಗಳಲ್ಲಿ ಕೇವಲ ವಂಶಾಭಿವೃದ್ಧಿಗಾಗಿ ಹುಟ್ಟಿಕೊಳ್ಳುವ ಮೋಹ ನಮ್ಮಲ್ಲಿ ಮೊಮ್ಮಕ್ಕಳ ತನಕವೂ ಕಾಡುವುದೇಕೆ? ಅಸಲಿಗಿಂತ ಬಡ್ಡಿಮೇಲೇ ಆಸೆ ಜಾಸ್ತಿ ಅನ್ನೋ ಹಾಗೆ? ಏನು ಮಾಡೋಣ ಹೇಳಿ? ಸುಮ್ಮನೆ ಮಕ್ಕಳನ್ನು ದೂರಿ ಪ್ರಯೋಜನವಿಲ್ಲ. ನಾವು ನಮ್ಮ ಸ್ವಂತ ನೆಲೆ ಬಿಟ್ಟು ಸಂಸಾರದ ಒಳ್ಳೆಯ ಭವಿಷ್ಯಕ್ಕಾಗಿ ಇಲ್ಲಿ ಬಂದ ಹಾಗೆ ಅವರೂ ಅವರ ಸಂಸಾರದ ಭವಿಷ್ಯ ರೂಪಿಸಿಕೊಳ್ಳಬೇಕಲ್ಲವಾ? (ಗಂಡುಮಕ್ಕಳಾಗಿದ್ದರೆ ಇಂಥ ಸಮನ್ವಯ ದೃಷ್ಟಿ ಸಾಧ್ಯವಾಗುತ್ತಿತ್ತಾ - ಕೇಳಬೇಡಿ! ಉತ್ತರಿಸಲಾರೆ!) ಪ್ರಕೃತಿಯ ಗುಟ್ಟೇ ಇಷ್ಟು ತಾನೆ? ಚಿಗುರು ಮೊಳಕೆಯೊಡೆವ ಹೊತ್ತಲ್ಲಿ ಹಣ್ಣೆಲೆ ತಾನಾಗಿಯೇ ಕಳಚಿಕೊಳ್ಳಬೇಕು. ಇಂಥಾ ಇಂಟೆಲಿಜೆನ್ಸಿನ ಪ್ರಕೃತಿಯಲ್ಲಿ ನಮ್ಮ ಕೋರಿಕೆ ಇಷ್ಟೇ - ಧೀರ್ಘಾಯುಷ್ಯ ನಮಗೆ ಬೇಕಿಲ್ಲ; ಇಲ್ಲದ್ದಕ್ಕೆಲ್ಲ ಕೊರಗಿ ನವೆಯುವುದರ ಬದಲು ಇದ್ದುದರಲ್ಲೇ ಖುಷಿ ಕಾಣುವ ಆರೋಗ್ಯವಂತ ಮನಸ್ಸು ಕೊನೆತನಕವೂ ನಮ್ಮದಾಗಿರಲಿ ಎಂದು. ಅದಕ್ಕೇ ಈ ಎಲ್ಲ ಹವ್ಯಾಸಗಳು... ಓಹ್... ಹೊಟ್ಟೆ ಚುರ್ ಜಾಸ್ತಿಯಾಯಿತು! ಇನ್ನು ಮೆಟ್ಟಲಿಳಿಯೋಣವೇ... ಬಾಯ್...         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT