ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮಿಷ ತರವಲ್ಲ

ಆಯುಷ್- ಅಲೋಪಥಿ ವೈದ್ಯರ ಮುಸುಕಿನ ಗುದ್ದಾಟ
Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ನೀಗಿಸಲು ಆಯುಷ್‌ (ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ) ವೈದ್ಯರಿಗೆ ತರಬೇತಿ ನೀಡಿ, ಅವರು ತುರ್ತು ಸಂದರ್ಭದಲ್ಲಿ ಅಲೋಪಥಿ ಚಿಕಿತ್ಸೆ ನೀಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಆರೋಗ್ಯ ವಲಯದಲ್ಲಿ ಈಗ ಬಹು ಚರ್ಚಿತ ವಿಷಯ. ಆಯುಷ್‌ ಮತ್ತು ಅಲೋಪಥಿ ವೈದ್ಯರ ಮಧ್ಯೆ ಮುಸುಕಿನ ಗುದ್ದಾಟ, ಸವಾಲು- ಪ್ರತಿಸವಾಲಿಗೆ ಇದು ವೇದಿಕೆಯಾಗಿದೆ.

ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ವೈದ್ಯರಿಲ್ಲದೆ ಸೊರಗಿವೆ. ಮೂಲಸೌಲಭ್ಯ ಕೊರತೆ ಸೇರಿದಂತೆ ನೂರಾರು ಸಬೂಬುಗಳನ್ನು ಹೇಳಿ ಈ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಎಂಬಿಬಿಎಸ್‌ ವೈದ್ಯರು ಹಿಂಜರಿಯುತ್ತಿದ್ದಾರೆ, ಹೀಗಾಗಿ ವೈದ್ಯರ ಕೊರತೆ ತುಂಬಲು ಈ ಕ್ರಮ ಅನಿವಾರ್ಯ ಎನ್ನುವುದು ಸರ್ಕಾರದ ಸಮರ್ಥನೆ. ಇಂಥದ್ದೊಂದು ನಿರ್ಧಾರಕ್ಕೆ ಬರುವ ಮೊದಲು ಔಷಧ ನಿಯಂತ್ರಕರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಆಂತರಿಕ ಇಲಾಖಾ ಸಮಿತಿ ರಚಿಸಿ ಸರ್ಕಾರ ಅಧ್ಯಯನ ನಡೆಸಿದೆ. ಮಹಾರಾಷ್ಟ್ರ ಸೇರಿದಂತೆ 13 ರಾಜ್ಯಗಳಲ್ಲಿ ಆಯುಷ್‌ ವೈದ್ಯರು ಆಲೋಪಥಿ ಔಷಧಿ ನೀಡುವ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಬಹುದು ಎಂದು ಈ ಸಮಿತಿ ಶಿಫಾರಸು ಮಾಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ಸಂದರ್ಭಗಳಲ್ಲಿ ಅಲೋಪಥಿ ವೈದ್ಯ ಪದ್ಧತಿಯ ಔಷಧಿ ನೀಡಬೇಕಾದ ಅನಿವಾರ್ಯ ಇದೆ ಎಂಬ ಅಭಿಪ್ರಾಯವನ್ನು ಸಮಿತಿ ವ್ಯಕ್ತಪಡಿಸಿದೆ.

ಹಳ್ಳಿಗಳಲ್ಲಿ ವೈದ್ಯರ ಕೊರತೆ ನಿವಾರಿಸಲು ಈ ಹಿಂದಿನಿಂದಲೂ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. 2006 ಮತ್ತು 2012ರಲ್ಲಿ ಹೊರಡಿಸಿದ ನಿಬಂಧನೆಗಳ ಅನ್ವಯ, ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್‌ ಪೂರ್ತಿಗೊಳಿಸಿದವರು 2 ವರ್ಷ ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡಬೇಕು, ಇಲ್ಲದಿದ್ದರೆ ದಂಡ ಪಾವತಿಸಬೇಕು. ಈ ಷರತ್ತು ವಿಧಿಸಿದ ಹೊರತಾಗಿಯೂ ಗ್ರಾಮೀಣ ಸೇವೆಗೆ ಬಂದ ವೈದ್ಯರ ಸಂಖ್ಯೆ ಶೇ 10ಕ್ಕಿಂತಲೂ ಕಡಿಮೆ. ನಿಯಮ ಪಾಲಿಸದಿದ್ದರೂ ದಂಡ ನೀಡದವರ ಸಂಖ್ಯೆಯೂ ವಿರಳ!

ಸರ್ಕಾರ 2014ರಲ್ಲಿ ರೂಪಿಸಿದ ಕಾಯ್ದೆಯ ಪ್ರಕಾರ, ಎಂಬಿಬಿಎಸ್‌ ಮುಗಿಸಿದವರು ಕರ್ನಾಟಕ ವೈದ್ಯಕೀಯ ಪರಿಷತ್‌ನಲ್ಲಿ (ಕೆಎಂಸಿ) ನೋಂದಾಯಿಸಿಕೊಳ್ಳುವ ಮೊದಲು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಆದರೆ, ಈ ಕಾಯ್ದೆ ಅನುಷ್ಠಾನಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಖಾಲಿ ಇರುವ ವೈದ್ಯಾಧಿಕಾರಿಗಳು ಮತ್ತು ತಜ್ಞ ವೈದ್ಯರ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸಿದರೂ ಶೇ 50ರಷ್ಟು ಮಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸೂಕ್ತ ವಸತಿ ಸೌಲಭ್ಯ ಹಾಗೂ ಸಹಾಯಕ ಸಿಬ್ಬಂದಿಯ ಕೊರತೆ, ಸಾಧನ, ಸಲಕರಣೆಗಳ ನ್ಯೂನತೆ ಮತ್ತಿತರ ಕಾರಣ ಮುಂದಿಟ್ಟು ಉಳಿದ ವೈದ್ಯರು ಗ್ರಾಮೀಣ ಸೇವೆಗೆ ಸೇರಿಲ್ಲ. ಮೂಲಸೌಲಭ್ಯ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ರೋಗ ಪತ್ತೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಸಲಕರಣೆಗಳನ್ನು ಒದಗಿಸಿ ಬಹುತೇಕ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಿದೆ. ಸಿಬ್ಬಂದಿಯನ್ನು ಒದಗಿಸಿದೆ. ಕೇಂದ್ರ ಕಾರ್ಯಸ್ಥಳದಲ್ಲಿ ವಸತಿಗೃಹಗಳನ್ನು ದುರಸ್ತಿಗೊಳಿಸಲಾಗುತ್ತಿದೆ. ಗ್ರಾಮೀಣ ಸೇವೆಗೆ ವಿಶೇಷ ಭತ್ಯೆ ನೀಡಲಾಗುತ್ತಿದೆ. ಆದರೂ ಹಳ್ಳಿಗಳಲ್ಲಿ ಸೇವೆ ನೀಡಲು ವೈದ್ಯರು ಮನಸ್ಸು ಮಾಡುತ್ತಿಲ್ಲ.

ಹಳ್ಳಿ ಜನರು ವೈದ್ಯಕೀಯ ಸೇವೆಯಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಪಿಎಚ್‌ಸಿಗಳಿಗೆ ಆಯುಷ್‌ ವೈದ್ಯರನ್ನು ಸರ್ಕಾರ ನೇಮಿಸಿಕೊಳ್ಳುತ್ತಿದೆ. ಎಂಬಿಬಿಎಸ್‌ ವೈದ್ಯರು ಇಲ್ಲದ ಕಡೆಗಳಲ್ಲಿ ಆಯುಷ್‌ ವೈದ್ಯರು ಲಭ್ಯ ಇದ್ದರೆ ನೇಮಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಲೋಪಥಿ ಔಷಧಿ ಬಳಕೆಗೆ ಅನುಮತಿ ನೀಡಬೇಕು ಎನ್ನುವುದು ಆಯುಷ್ ವೈದ್ಯರ ದಶಕದ ಬೇಡಿಕೆ. ಈ ನಿಟ್ಟಿನಲ್ಲಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ (ಎಎಫ್​ಐ) ಹೋರಾಟ ನಡೆಸುತ್ತಲೇ ಬಂದಿದ್ದು, ಯಶಸ್ಸು ಸಿಕ್ಕಿದ ಸಂಭ್ರಮದಲ್ಲಿದೆ. ಆದರೆ, ಸರ್ಕಾರದ ಕ್ರಮವನ್ನು ಒಪ್ಪಿಕೊಳ್ಳಲು ಅಲೋಪಥಿ ವೈದ್ಯರು ಮಾತ್ರ ಸಿದ್ಧರಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಕಡಿಮೆ ಮಾಡಲು ಕೇಂದ್ರ ಆರೋಗ್ಯ ಇಲಾಖೆಯು ಇಗ್ನೊ (ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ) ಸಹಭಾಗಿತ್ವದಲ್ಲಿ ಆಯುಷ್‌ ವೈದ್ಯರಿಗೆ ಅಲೋಪಥಿ ವೈದ್ಯ ಪದ್ಧತಿ ಕುರಿತು ತರಬೇತಿ ಕಾರ್ಯಕ್ರಮವನ್ನು ಸಂಪರ್ಕ ಸೇವೆ ಮಾದರಿಯಲ್ಲಿ ಈಗಾಗಲೇ ಹಮ್ಮಿಕೊಂಡಿದೆ. ಆಯುಷ್ ವೈದ್ಯರು ಅಲೋಪಥಿ ಔಷಧಿ ನೀಡಬಹುದು ಎಂಬ ವಿಷಯದಲ್ಲಿ ಡಾ. ಮುಕ್ತಿಯಾರ್‌ ಚಾಂದ್‌ ಮತ್ತು ಪಂಜಾಬ್ ರಾಜ್ಯ ಸರ್ಕಾರದ ನಡುವಿನ ಪ್ರಕರಣದಲ್ಲಿ (1987) ಔಷಧ ಮತ್ತು ಕಾಂತಿವರ್ಧಕ ಕಾಯ್ದೆ (ಡ್ರಗ್ಸ್‌ ಅಂಡ್ ಕಾಸ್ಮೆಟಿಕ್ಸ್‌ ಆ್ಯಕ್ಟ್‌)– 1940 ಮತ್ತು 1945ರ ನಿಯಮ 2 ಇಇ (3)ರಲ್ಲಿ ಉಲ್ಲೇಖಿಸಲಾಗಿರುವ ಅಂಶಗಳನ್ನು ಆಧರಿಸಿ ಹಲವು ರಾಜ್ಯಗಳು ಹೊರಡಿಸಿದ ಆದೇಶಗಳು ನ್ಯಾಯಸಮ್ಮತವಾಗಿವೆ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.

‘ಔಷಧ ಮತ್ತು ಕಾಂತಿವರ್ಧಕ ಕಾಯ್ದೆಯಲ್ಲಿರುವ ಅವಕಾಶದಂತೆ ಪಿಎಚ್‌ಸಿಗಳಲ್ಲಿ ಕರ್ತವ್ಯ ನಿರ್ವಹಿಸುವ ಆಯುಷ್‌ ವೈದ್ಯರು ತುರ್ತು ಮತ್ತು ಅವಶ್ಯ ಇದ್ದರೆ ಹಾಗೂ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟುವ ಹಿತದೃಷ್ಟಿಯಿಂದ ತರಬೇತಿ, ನವಜಾತ ಶಿಶು ಸುರಕ್ಷಾ ಕಾರ್ಯಕ್ರಮ ಹಾಗೂ ಪಿಪಿಐಯುಸಿ (ಪ್ರಸವೋತ್ತರ ಕುಟುಂಬ ಕಲ್ಯಾಣ) ಸಾಧನ ಅಳವಡಿಸುವ ಸಂದರ್ಭದಲ್ಲಿ ಅಲೋಪಥಿ ಔಷಧಿ ಬಳಸಲು ಅನುಮತಿ ನೀಡಲಾಗಿದೆ. ಹೀಗಾಗಿ, ಈ ನಿರ್ಧಾರ ಹೊಸತೂ ಅಲ್ಲ, ನಿರಂಕುಶವೂ ಅಲ್ಲ’ ಎಂದು ವಾದಿಸುತ್ತಾರೆ ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌.

ಯಾವುದೇ ರಾಜ್ಯ ಸರ್ಕಾರ ಕಾಯ್ದೆ ಮಾಡಿ ಒಪ್ಪಿಕೊಂಡ ಇಂಟಿಗ್ರೇಟೆಡ್‌ ಕೋರ್ಸ್‌ (ಸಂಯೋಜಿತ ತರಬೇತಿ) ಪದವೀಧರರಾದ ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಯ ವೃತ್ತಿನಿರತರು ಕೂಡ ಆಯಾ ರಾಜ್ಯಗಳ ವೈದ್ಯಕೀಯ ದಾಖಲೆಗಳಲ್ಲಿ ನೋಂದಣಿ ಮಾಡಿಕೊಂಡಿದ್ದರೆ ಅಲೋಪಥಿ ಔಷಧಿ ನೀಡಬಹುದು. ತಮಗೆ ಅನನುಕೂಲವಾಗುತ್ತದೆ ಎಂಬ ಕಾರಣಕ್ಕೆ ಎಂಬಿಬಿಎಸ್‌ ವೈದ್ಯರು ಕರ್ತವ್ಯದಿಂದ ವಿಮುಖರಾದ ಮಾತ್ರಕ್ಕೆ ಗ್ರಾಮೀಣ ಜನರು ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗುವುದು ಉಚಿತವೇ ಎಂದು ಅವರು ಕೇಳುತ್ತಾರೆ.

ಆಧುನಿಕ, ವೈಜ್ಞಾನಿಕ ವೈದ್ಯಶಾಸ್ತ್ರದಲ್ಲಿ ವೃತ್ತಿನಿರತರಾಗಿರುವ 70 ಸಾವಿರಕ್ಕೂ ಹೆಚ್ಚು ವೈದ್ಯರನ್ನು ಹೊಂದಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೇರಿದಂತೆ ಸುಮಾರು 20 ವೈದ್ಯ ಸಂಘಟನೆಗಳು ಸರ್ಕಾರದ ಈ ನಿರ್ಧಾರವನ್ನು ಒಕ್ಕೊರಲಿನಿಂದ ವಿರೋಧಿಸಿವೆ. ಇದು ತೀರಾ ಏಕಪಕ್ಷೀಯ; ವಿವೇಚನಾರಹಿತ ಎನ್ನುವುದು ಐಎಂಎ ರಾಜ್ಯ ಘಟಕದ ಆರೋಪ. ಇದರ ಸಾಧಕ– ಬಾಧಕಗಳ ಕುರಿತು ಅಧ್ಯಯನ, ವಿಮರ್ಶೆ ನಡೆಸಿಲ್ಲ; ಈ ತೀರ್ಮಾನ ಬಡಜನರು, ಮಹಿಳೆಯರು, ಮಕ್ಕಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದೂ ಅದು ಆತಂಕ ವ್ಯಕ್ತಪಡಿಸಿದೆ.

ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ನಿಯಮಗಳಿಗೆ ವೈದ್ಯ ವೃತ್ತಿ ಬದ್ಧವಾಗಿದೆಯೇ ಹೊರತು ಔಷಧ ಮತ್ತು ಕಾಂತಿವರ್ಧಕ ಕಾಯ್ದೆಯ ನಿಯಮಕ್ಕೆ ಯಾವುದೇ ಸಂಬಂಧ ಇಲ್ಲ. ಅದರ ಆಧಾರದಲ್ಲಿ ಆಯುಷ್‌ ವೈದ್ಯರು ಆಧುನಿಕ ಚಿಕಿತ್ಸೆ ನೀಡುವಂತಿಲ್ಲ ಎಂದು ಹಲವು ರಾಜ್ಯಗಳ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿವೆ ಎನ್ನುವ ವಾದವನ್ನೂ ಐಎಂಎ ಮಂಡಿಸುತ್ತಿದೆ. ಆಧುನಿಕ ವೈದ್ಯ ವಿಜ್ಞಾನದಲ್ಲಿ ತರಬೇತಿ ಪಡೆದವರು ಮಾತ್ರ ರಾಜ್ಯ ವೈದ್ಯಕೀಯ ನೋಂದಣಿ ಕಾಯ್ದೆ 1961 (2003ರ ತಿದ್ದುಪಡಿ) ಅಡಿ ನೋಂದಣಿ ಮಾಡಿಕೊಳ್ಳಲು ಮತ್ತು ಅಲೋಪಥಿ ಔಷಧ ಬಳಸಲು ಅರ್ಹರು. ತುರ್ತು ಸಂದರ್ಭಗಳಲ್ಲಿ ಔಷಧ ಬಳಸುವುದಷ್ಟೇ ತುರ್ತು ಚಿಕಿತ್ಸೆ ಅಲ್ಲ. ಅದು ವಿಶೇಷ ಪರಿಣತಿಯಾಗಿ ಬೆಳೆದಿದೆ. ಎಂಬಿಬಿಎಸ್‌ ಬಳಿಕ 3 ವರ್ಷಗಳ ಕಠಿಣ ತರಬೇತಿ ಪಡೆಯಬೇಕು. ತುರ್ತುಸ್ಥಿತಿಗಳ ಲಕ್ಷಣ ಮತ್ತು ಚಿಕಿತ್ಸೆ ಬಗ್ಗೆ ಅರಿವು ಇಲ್ಲದೆ ಆಯುಷ್‌ ವೈದ್ಯರು ಕೇವಲ 6 ತಿಂಗಳಲ್ಲಿ ಅವೆಲ್ಲವನ್ನೂ ಕಲಿಯಲು ಸಾಧ್ಯವೇ ಎನ್ನುವ ಪ್ರಶ್ನೆ– ಗೊಂದಲ ಹಲವರಲ್ಲಿದೆ.

ಆಧುನಿಕ ವೈದ್ಯ ವಿಜ್ಞಾನ ಮತ್ತು ಬದಲಿ ಪದ್ಧತಿಗಳಲ್ಲಿ ದೇಹ ಮತ್ತು ರೋಗಗಳ ಪರಿಕಲ್ಪನೆಗಳು, ಪರಿಭಾಷೆಗಳು, ರೋಗಿಯನ್ನು ಪರೀಕ್ಷಿಸುವ ವಿಧಾನಗಳು, ಚಿಕಿತ್ಸಾ ಕ್ರಮಗಳು ಬೇರೆ ಬೇರೆ. ಒಂದರ ಪರೀಕ್ಷಾ ವಿಧಾನ ಮತ್ತು ಚಿಕಿತ್ಸಾ ವಿಧಾನವನ್ನು ಇನ್ನೊಂದಕ್ಕೆ ಅನ್ವಯಿಸಲು ಸಾಧ್ಯ ಇಲ್ಲ. ಒಂದೊಮ್ಮೆ ಆ ರೀತಿ ಮಾಡಿದರೆ ಅಮಾಯಕ ರೋಗಿಗಳಿಗೆ ಅನ್ಯಾಯವಾಗುವುದಷ್ಟೇ ಅಲ್ಲ, ಪ್ರಾಚೀನ ವೈದ್ಯ ಪದ್ಧತಿಗಳಿಗೆ ಅಪಚಾರ ಮಾಡಿದಂತಾಗುತ್ತದೆ ಎಂದು ಐಎಂಎ ರಾಜ್ಯ ಘಟಕದ ಅಧ್ಯಕ್ಷ ರಾಜಶೇಖರ ಎಸ್‌. ಬಳ್ಳಾರಿ ಅಭಿಪ್ರಾಯಪಡುತ್ತಾರೆ.

ಆಯುಷ್‌ ವೈದ್ಯರಿಗೆ ಯಾರಿಂದಲೋ ಅರೆಬರೆಯಾಗಿ ತರಬೇತಿ ನೀಡಿ, ಇನ್ಯಾರಿಂದಲೋ ಪ್ರಮಾಣಪತ್ರ ಒದಗಿಸಿ, ಬೇರೆ ಯಾವುದೋ ನಿಯಮದಂತೆ ಅನುಮತಿ ನೀಡುವ ನಿರ್ಧಾರ ಸರಿಯಲ್ಲ. ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಬದಲು ಹೆಚ್ಚಿನ ವೇತನ, ಸವಲತ್ತು ನೀಡಿ ಎಂಬಿಬಿಎಸ್‌ ವೈದ್ಯರನ್ನು ಪಿಎಚ್‌ಸಿಗಳಲ್ಲಿ ನಿಯೋಜಿಸಬೇಕು. ಬಿಹಾರ, ಜಾರ್ಖಂಡ್, ರಾಜಸ್ತಾನ, ಕೇರಳದಂತಹ ರಾಜ್ಯಗಳಲ್ಲಿ ಇದು ಸಾಧ್ಯವಾಗಿರುವಾಗ ಕರ್ನಾಟಕದಂತಹ ಮುಂದುವರಿದ ರಾಜ್ಯದಲ್ಲಿ ಕಷ್ಟವಲ್ಲ ಎಂದೂ ಅವರು ಹೇಳುತ್ತಾರೆ.
‘ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ವೈದ್ಯರು ಯಾಕೆ ಮುಂದಾಗುತ್ತಿಲ್ಲ ಎನ್ನುವ ಬಗ್ಗೆ ಸರ್ಕಾರ ಅಧ್ಯಯನ ನಡೆಸಬೇಕು. ಬದಲಿ ಚಿಕಿತ್ಸಾ ವಿಧಾನವನ್ನು ಗ್ರಾಮೀಣ ಪ್ರದೇಶಕ್ಕೆ ತಂದು ವೈದ್ಯರ ಕೊರತೆ ನೀಗಿಸಲು ಮುಂದಾಗಿರುವುದು ಅನಪೇಕ್ಷಣೀಯ’ ಎನ್ನುವ ಆಕ್ಷೇಪ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ್ದು.

‘ಔಷಧ ಯಾರು ಬೇಕಿದ್ದರೂ ಕೊಡಬಹುದು. ಆದರೆ ರೋಗ ಪತ್ತೆ ಸುಲಭವಲ್ಲ. ಐದೂವರೆ ವರ್ಷ ಔಷಧಶಾಸ್ತ್ರ (ಫಾರ್ಮಕಾಲಜಿ) ಕಲಿತ ನಮಗೇ ಸವಾಲು. ಹೀಗಿರುವಾಗ ಆರು ತಿಂಗಳು ತರಬೇತಿ ಪಡೆದವರು ರೋಗ ಗುರುತಿಸಲು ಹೇಗೆ ಸಾಧ್ಯ’ ಎನ್ನುವ ಪ್ರಶ್ನೆ ಸಂಘದ ಅಧ್ಯಕ್ಷ ರಂಗನಾಥ್ ಅವರದ್ದು.  

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ₹ 43 ಸಾವಿರ,  ಕಾಯಂ ವೈದ್ಯರಿಗೆ ₹ 63 ಸಾವಿರ ವೇತನ ಇದೆ. ಗುತ್ತಿಗೆ ಆಧಾರದಲ್ಲಿ 3 ವರ್ಷ ಕರ್ತವ್ಯ ನಿರ್ವಹಿಸುವವರನ್ನು ಕಾಯಂಗೊಳಿಸುವ ಆಮಿಷ ಸರ್ಕಾರದ್ದು. ವೇತನ ಹೆಚ್ಚಿಸಿ ವೈದ್ಯರನ್ನು ಆಕರ್ಷಿಸಬೇಕು. ಜೊತೆಗೆ ಹಳ್ಳಿಗಳಲ್ಲಿ 6 ತಿಂಗಳು ಕೆಲಸ ಮಾಡಿದವರನ್ನು ಕಾಯಂಗೊಳಿಸಬೇಕು. ಸೇವಾ ಭದ್ರತೆ ಆಸೆಯಿಂದ ಹೆಚ್ಚಿನವರು ಗ್ರಾಮೀಣ ವೃತ್ತಿಗೆ ಬರಬಹುದು ಎನ್ನುವ ನಿರೀಕ್ಷೆ ಅವರದ್ದು.

‘2008–09ರಲ್ಲಿ ಸಾವಿರಕ್ಕೂ ಹೆಚ್ಚು ವೈದ್ಯರ ಕೊರತೆ ಇತ್ತು. ಭತ್ಯೆಗಳ ರೂಪದಲ್ಲಿ ಸವಲತ್ತು ನೀಡಿದ ಕಾರಣಕ್ಕೆ ಹೆಚ್ಚಿನ ವೈದ್ಯರು ಸರ್ಕಾರಿ ಕೆಲಸಕ್ಕೆ ಬಂದರು. ಸರ್ಕಾರ ಸೌಲಭ್ಯ ಹೆಚ್ಚಿಸಲು ಮುಂದಾದರೆ ಎಲ್ಲ ಹುದ್ದೆಗಳೂ ಭರ್ತಿ ಆಗುತ್ತವೆ. ಸರ್ಕಾರಿ ವೈದ್ಯರಿಗೆ ಸ್ನಾತಕೋತ್ತರ ಪದವಿ ಕಲಿಯಲು ಪ್ರೋತ್ಸಾಹ ನೀಡಬೇಕು. ಆರೋಗ್ಯ ಇಲಾಖೆಯು ವೈದ್ಯರ ನೇಮಕಾತಿಗೆ ಕ್ಯಾಂಪಸ್‌ ಸಂದರ್ಶನ ನಡೆಸಬೇಕು’ ಎಂದೂ ಅವರು ಸಲಹೆ ನೀಡುತ್ತಾರೆ.

‘ಪಿಎಚ್‌ಸಿ ವೈದ್ಯಾಧಿಕಾರಿಗಳ ಕೆಲಸದ ಸ್ವರೂಪವೇ ಭಿನ್ನ. ಇಲ್ಲಿ ಕರ್ತವ್ಯನಿರತರು ವಿಶೇಷವಾಗಿ ಹೊರರೋಗಿಗಳಾಗಿ (ಒಪಿಡಿ) ಬಂದವರಿಗೆ ತಕ್ಷಣದ ಪರಿಹಾರವಾಗಿ ಔಷಧ ನೀಡುತ್ತಾರೆ. ರೋಗ ಜಾಗೃತಿ ಮೂಡಿಸುವುದರ ಜೊತೆಗೆ ಸಾಂಕ್ರಾಮಿಕ ಅಥವಾ ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ನಿಗಾ ಇಡಬೇಕು. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕು. ಗರ್ಭಿಣಿಯರ ಯೋಗಕ್ಷೇಮ ನೋಡಿಕೊಳ್ಳಬೇಕು. ಇವೆಲ್ಲ ಸಾಮಾನ್ಯ ಆರೋಗ್ಯ ಚಟುವಟಿಕೆ’ ಎನ್ನುತ್ತಾರೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್.

‘ದೇಹಶಾಸ್ತ್ರದ ಕುರಿತು ಆಯುಷ್‌ ವೈದ್ಯರು ನಾಲ್ಕು ವರ್ಷ ಕಲಿತರೆ ಎಂಬಿಬಿಎಸ್‌ ವೈದ್ಯರು 5 ವರ್ಷ ಕಲಿಯುತ್ತಾರೆ. ಎರಡೂ ಪದ್ಧತಿಯಲ್ಲಿ ಶಸ್ತ್ರಚಿಕಿತ್ಸಾ ವಿಧಾನ ಬೇರೆ. ಉಳಿದವೆಲ್ಲ ಸಮಾನ. ಹೀಗಿರುವಾಗ ಜೀವಕ್ಕೆ ಅಪಾಯ ಎದುರಾಗುವ ಸನ್ನಿವೇಶ ಎಲ್ಲಿದೆ? ಒಂದು ವರ್ಷದ ಕಲಿಕಾ ಅಂತರವನ್ನು 6 ತಿಂಗಳ ತರಬೇತಿಯಲ್ಲಿ ತುಂಬುತ್ತೇವೆ. ಹಾಗೆಂದು ಆಯುಷ್‌ ವೈದ್ಯರು ಅಲೋಪಥಿ ಚಿಕಿತ್ಸೆಯನ್ನೇ ನೀಡಬೇಕು ಎಂದಲ್ಲ. ಅಂಥ ಪ್ರಸಂಗ ಎದುರಾದಾಗ ಎಚ್ಚರ ವಹಿಸುವ ನಿಟ್ಟಿನಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ’ ಎನ್ನುತ್ತಾರೆ.
‘ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸುವ ಐಎಂಎಗೆ ವೈದ್ಯರಿಲ್ಲದ ಪಿಎಚ್‌ಸಿಗಳ ಪಟ್ಟಿ ನೀಡಿದ್ದೇವೆ. 175 ಸ್ಥಳೀಯ ಶಾಖೆಗಳನ್ನು ಸಂಪರ್ಕಿಸಿ ವೈದ್ಯರನ್ನು ಒದಗಿಸುವ ಫಲಿತಾಂಶದೊಂದಿಗೆ ಮತ್ತೆ ಸಂಪರ್ಕಿಸುತ್ತೇವೆ ಎಂದು ಸಂಘ ಪ್ರತಿಕ್ರಿಯಿಸಿದೆ. ಕಾಯುತ್ತಾ ಇದ್ದೇವೆ...’ ಎನ್ನುತ್ತಾರೆ ಶಾಲಿನಿ.

ತರಬೇತಿಗೆ ಶಿಫಾರಸು

‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಯುಷ್‌ ವೈದ್ಯರಿಗೆ ಔಷಧ ಶಾಸ್ತ್ರ (ಫಾರ್ಮಕಾಲಜಿ) ಸೇರಿದಂತೆ ಅಲೋಪಥಿಯ ವಿವಿಧ ಚಿಕಿತ್ಸಾ ಪದ್ಧತಿ ಮತ್ತು ವಿಧಾನಗಳ ಕುರಿತು ಆಯಾಯ ಜಿಲ್ಲಾ ಆಸ್ಪತ್ರೆಗಳಲ್ಲಿ 6 ತಿಂಗಳ ತರಬೇತಿ ನೀಡಬಹುದು. ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಮತ್ತು ಅವಶ್ಯ ಇದ್ದರೆ ಅಲೋಪಥಿ ಔಷಧ ಬಳಸಲು ಅನುಮತಿ ನೀಡುವುದು ಸೂಕ್ತ. ಈ ಕುರಿತು ಔಷಧ ಮತ್ತು ಕಾಂತಿವರ್ಧಕ ಕಾಯ್ದೆ 1940 ಮತ್ತು 1945ರ ನಿಯಮ 2 ಇಇ (3) ಅಡಿ ಸರ್ಕಾರ ವಿಶೇಷ ಅಧಿಸೂಚನೆ ಹೊರಡಿಸಬೇಕು’ ಎಂದು ರಾಜ್ಯ ಔಷಧ ನಿಯಂತ್ರಕರ ಅಧ್ಯಕ್ಷತೆಯ ಆಂತರಿಕ ಇಲಾಖಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಅದನ್ನು ಆಧರಿಸಿ ವಿಶೇಷ ಪ್ರಕರಣ ಎಂದು ಪರಿಗಣಿಸಿರುವ ಸರ್ಕಾರ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಮೂಲಕ 6 ತಿಂಗಳ ಅಲೋಪಥಿ ಔಷಧ ತರಬೇತಿ ನೀಡುತ್ತದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ನೋಂದಣಿ ಪ್ರಾಧಿಕಾರದ ಸಮಿತಿ ಸಭೆಯ ನಾಮನಿರ್ದೇಶಿತರೊಬ್ಬರಿಂದ ತರಬೇತಿ ಪ್ರಮಾಣಪತ್ರವನ್ನು ದೃಢೀಕರಿಸಿಕೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ. ಹಾಲಿ ಜಾರಿಯಲ್ಲಿರುವ ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಎಸ್ಟ್ಯಾಬ್ಲಿಷ್‌ಮೆಂಟ್ ಕಾಯ್ದೆ 2007 ಮತ್ತು ನಿಯಮಾವಳಿ 2009, ತಿದ್ದುಪಡಿ ಕಾಯ್ದೆ– 2010 ಕಲಂ 4ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಅಂಕಿ ಅಂಶ

1.7ಲಕ್ಷ
ಅಲೋಪಥಿ ವೈದ್ಯರಿದ್ದಾರೆ

43ಸಾವಿರ
ನೋಂದಾಯಿತ  ಆಯುಷ್‌ ವೈದ್ಯರಿದ್ದಾರೆ

6ಲಕ್ಷ
ವೈದ್ಯರ ಅಗತ್ಯವಿದೆ

1.50ಲಕ್ಷ
ವೈದ್ಯರಷ್ಟೇ ಇದ್ದಾರೆ  (ಎರಡೂ ಪ್ರಕಾರ ಸೇರಿ)

4.5ಲಕ್ಷ
ವೈದ್ಯರ ಕೊರತೆ ಇದೆ

ಸುಮಾರು 2ಲಕ್ಷ
ವೈದ್ಯರು ನೋಂದಾಯಿಸದೆ ಕೆಲಸ ಮಾಡುತ್ತಿದ್ದಾರೆ

ಇವರು ಏನಂತಾರೆ?

* ಆಯುಷ್‌ ಪದ್ಧತಿಗಳಲ್ಲಿ ಸಾಂಕ್ರಾಮಿಕ ರೋಗಗಳ ಪರಿಕಲ್ಪನೆಯೇ ಇಲ್ಲ. ಹೀಗಿರುವಾಗ ಅದನ್ನು ತಡೆಯುವುದಕ್ಕೂ ಸಾಧ್ಯವಿಲ್ಲ. ನವಜಾತ ಶಿಶುಗಳ ಚಿಕಿತ್ಸೆ, ಸುರಕ್ಷೆ ಕೂಡ ಅತ್ಯಂತ ಸಂಕೀರ್ಣವಾದ ಜವಾಬ್ದಾರಿ. ಆಯುಷ್‌ ವೈದ್ಯರ ಸುಪರ್ದಿಗೆ ಅದನ್ನು ಒಪ್ಪಿಸುವುದು ಬೇಜವಾಬ್ದಾರಿತನ.
-ರಾಜಶೇಖರ ಎಸ್‌. ಬಳ್ಳಾರಿ, ಅಧ್ಯಕ್ಷ, ಐಎಂಎ ರಾಜ್ಯ ಘಟಕ

* ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗ್ರಾಮೀಣ ಪ್ರದೇಶದ ಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಗ್ರಾಮೀಣ ಸೇವೆಗೆ ತಕ್ಷಣಕ್ಕೆ ಅಗತ್ಯವಾದ 200 ಎಂಬಿಬಿಎಸ್‌ ವೈದ್ಯರನ್ನು ಐಎಂಎ ಒದಗಿಸಲಿ. ಆಗ ಆಯುಷ್‌ ವೈದ್ಯರಿಗೆ ಆರು ತಿಂಗಳು ತರಬೇತಿ ನೀಡಿ ಅಲೋಪಥಿ ಔಷಧಿ ನೀಡುವಂತೆ ಮಾಡುವ ಪ್ರಮೇಯವೇ ಉದ್ಭವಿಸುವುದಿಲ್ಲ
- ಕೆ.ಆರ್‌.ರಮೇಶ್‌ ಕುಮಾರ್‌, ಆರೋಗ್ಯ ಸಚಿವ

* ಆಯುಷ್‌ ಮತ್ತು ಅಲೋಪಥಿ ಪದ್ಧತಿಯ ಸಂಯೋಜಿತ ಚಿಕಿತ್ಸಾ ವಿಧಾನ (ಇಂಟಿಗ್ರೇಟೆಡ್ ಅಪ್ರೋಚ್‌ ಟು ಹೆಲ್ತ್) ಪರಿಕಲ್ಪನೆಯಲ್ಲಿ ಆರೋಗ್ಯ ಗುಣಮಟ್ಟದ ಸುಧಾರಣೆ ಕಡೆಗೆ ಹೊಸ  ಹೆಜ್ಜೆ ಇಡಲು ಸರ್ಕಾರ ಚಿಂತಿಸಿದೆ. ಈ ವಿಷಯದಲ್ಲಿ ಅಲೋಪಥಿ ಮತ್ತು ಆಯುಷ್‌ ವೈದ್ಯರ ಮಧ್ಯೆ ಸಹಮತವಿದೆ. ಹೀಗಿರುವಾಗ ಅನಗತ್ಯವಾಗಿ ಆತಂಕಕ್ಕೆ ಆಸ್ಪದ ಇಲ್ಲ.
-ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ, ಆರೋಗ್ಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT