ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ಬೇಕಿಲ್ಲ

ಆಯುಷ್- ಅಲೋಪಥಿ ವೈದ್ಯರ ಮುಸುಕಿನ ಗುದ್ದಾಟ
Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

* ಡಾ. ಸಿ.ಡಿ.ರವಿರಾಜ್ ಜೈನ್‌, ಆಯುರ್ವೇದ ವೈದ್ಯ

ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಹಲವು ದೇಶಗಳಲ್ಲಿ ನುರಿತ ಶುಶ್ರೂಷಕಿಯರಿಗೆ ವಿಶೇಷ ತರಬೇತಿ ನೀಡಿ, ವೈದ್ಯರ ಅನುಪಸ್ಥಿತಿಯಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು, ಔಷಧ ಬರೆದುಕೊಡಲು ಅವಕಾಶ ಕಲ್ಪಿಸಲಾಗಿದೆ. ಭಾರತದಲ್ಲಿ ಅಂಗನವಾಡಿ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ, ಕಬ್ಬಿಣಾಂಶ, ಫೋಲಿಕ್‌ ಆ್ಯಸಿಡ್‌ (ವಿಟಮಿನ್‌–ಬಿ) ಅಂಶವಿರುವ ಮಾತ್ರೆಗಳನ್ನು ನೀಡುವ ಜವಾಬ್ದಾರಿಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಲಾಗಿದೆ. ಸಾಮಾನ್ಯ ತಲೆನೋವು, ಶೀತ, ಕೆಮ್ಮಿಗೆ ಬಹುತೇಕ ಔಷಧ ಅಂಗಡಿಗಳಲ್ಲಿ (ಒಟಿಸಿ– ಓವರ್‌ ದಿ ಕೌಂಟರ್‌) ಕ್ರೋಸಿನ್‌, ವಿಕ್ಸ್‌ ಆ್ಯಕ್ಷನ್‌– 500 ಸೇರಿದಂತೆ ಹಲವು ಮಾತ್ರೆಗಳನ್ನು ವೈದ್ಯರ ಶಿಫಾರಸು ಇಲ್ಲದೇ ನೀಡಲಾಗುತ್ತದೆ. ಅಲೋಪಥಿಯ ಹಲವು ಟಾನಿಕ್‌, ಸಿರಪ್‌ಗಳನ್ನೂ ಕೇವಲ ಜಾಹೀರಾತು ಆಧಾರದ ಮೇಲೆ ಸಾರ್ವಜನಿಕರು ಖರೀದಿಸಿ, ಬಳಸುತ್ತಾರೆ.

ಶರೀರ ರಚನಾಶಾಸ್ತ್ರ, ಶರೀರ ಕ್ರಿಯೆ ಸೇರಿದಂತೆ ಎಂಬಿಬಿಎಸ್‌ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಭಾರತೀಯ ಔಷಧ ಕೇಂದ್ರ ಮಂಡಳಿ (ಸಿಸಿಐಎಂ) ನಿಗದಿಪಡಿಸಿದ ಪಠ್ಯಕ್ರಮಗಳನ್ನೇ ಬಿಎಎಂಎಸ್‌ (ಬ್ಯಾಚುಲರ್‌ ಆಫ್‌ ಆಯುರ್ವೇದ, ಮೆಡಿಸಿನ್‌ ಅಂಡ್‌ ಸರ್ಜರಿ) ಪದವೀಧರರೂ ಅಧ್ಯಯನ ಮಾಡುತ್ತಾರೆ. ಜತೆಗೆ ಚರಕ ಸಂಹಿತೆ, ಸುಶ್ರುತ ಸಂಹಿತೆ, ವಾಗ್ಭಟ ಸಂಹಿತೆ ಸೇರಿದಂತೆ ಸಾವಿರಾರು ಶ್ಲೋಕ ಪಠಣ ಕರಗತ ಮಾಡಿಕೊಂಡು ನಾವು ಪದವಿ ಪಡೆದಿರುತ್ತೇವೆ. ಇಷ್ಟೆಲ್ಲ ಅರ್ಹತೆ ಇರುವ ನಮಗೆ ಅಗತ್ಯ ಸಮಯದಲ್ಲಿ ಅಲೋಪಥಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸುವುದಕ್ಕೆ ವಿರೋಧ ಏಕೆ? ಇದು ನನ್ನೊಬ್ಬನ ಪ್ರಶ್ನೆಯಲ್ಲ. ರಾಜ್ಯದ ಎಲ್ಲ ಆಯುಷ್‌ ವೈದ್ಯರ ಪ್ರಶ್ನೆ.

ಕೇವಲ 10ನೇ ತರಗತಿ ಓದಿರುವ, ವೈದ್ಯಕೀಯ ಜ್ಞಾನ ಇಲ್ಲದ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಜಂತುಹುಳು ನಿವಾರಣಾ ಔಷಧ, ಮಾತ್ರೆ ಕೊಡುತ್ತಾರೆ. ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದರೆ ಲಿವರ್, ಕಿಡ್ನಿ, ಮೆದುಳಿಗೆ ಹಾನಿಯಾಗುತ್ತದೆ. ಅರ್ಹತೆ ಪಡೆಯದೇ ಔಷಧಿ ಅಂಗಡಿ ನಡೆಸುವ ಎಷ್ಟೋ ವ್ಯಾಪಾರಿಗಳು ವೈದ್ಯರ ಶಿಫಾರಸು ಇಲ್ಲದೇ ನೀಡುವ ಮಾತ್ರೆ, ಔಷಧಗಳ ಪರಿಣಾಮವಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಆಯುರ್ವೇದ ವೈದ್ಯನೊಬ್ಬ ತನ್ನ ಪದವಿಯಲ್ಲಿ ಹತ್ತಾರು ಆಯುರ್ವೇದ ಸಂಹಿತೆಗಳ ಜತೆಗೆ ಎಂಬಿಬಿಎಸ್ ಪದವಿಯಲ್ಲಿನ ಪಠ್ಯಕ್ರಮವನ್ನೂ ಕಲಿತು, ಆಧುನಿಕ ಪರೀಕ್ಷೆಗಳ ಮುಖಾಂತರ ಎಲ್ಲಾ ರೋಗಗಳನ್ನೂ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಕೊಡುವಷ್ಟು ಪಳಗಿದ್ದರೂ, ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಕೊಡದಿದ್ದರೆ ಕಣ್ಣೆದುರೇ ಆ ರೋಗಿ ಪ್ರಾಣ ಕಳೆದುಕೊಳ್ಳುತ್ತಾನೆ ಎಂದು ಗೊತ್ತಿದ್ದರೂ ಕಾನೂನಿನ ಪ್ರಕಾರ ಚಿಕಿತ್ಸೆ ಕೊಟ್ಟು ರೋಗಿಯನ್ನು ಬದುಕಿಸುವಂತಿಲ್ಲ!

ಕೊಳವೆ ಬಾವಿಗೆ ಬಿದ್ದ ಮಗುವನ್ನು ನೂರಾರು ಜನ ಸೇರಿ ಬದುಕಿಸಿದರೆ ಅದು ಶ್ಲಾಘನೀಯ. ಅದೇ ಒಬ್ಬ ಆಯುರ್ವೇದ ವೈದ್ಯ, ಮೃತ್ಯುವಿನ ಬಾಯಲ್ಲಿ ಸಿಲುಕಿರುವ ರೋಗಿಯನ್ನು ಬದುಕಿಸಿದರೆ ಪ್ರಶಂಸೆಯ ಬದಲು ಕೋರ್ಟ್‌, ಕಚೇರಿ ಅಲೆದಾಟದ ಶಿಕ್ಷೆ. ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗುತ್ತಿರುವಾಗ, ಬೆಂಕಿ ಅವಘಡದಲ್ಲಿ ಸಿಲುಕಿರುವಾಗ, ರಸ್ತೆ ಅಪಘಾತದ ಪರಿಣಾಮವಾಗಿ ಸಾವು- ಬದುಕಿನ ಮಧ್ಯೆ ಹೋರಾಡುತ್ತಿರುವಾಗ... ಇಂತಹ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಯಾರನ್ನೇ ಆದರೂ ಬದುಕಿಸುವುದು ಮುಖ್ಯ ಅಲ್ಲವೆ? ಆಯುರ್ವೇದ, ಅಲೋಪಥಿ ಎಂದು ನೋಡುತ್ತಾ ಕುಳಿತುಕೊಳ್ಳಲು ಸಾಧ್ಯವೇ?

ಸರ್ಕಾರವು ಅಲೋಪಥಿ ವೈದ್ಯರಿಗೆ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಿದರೂ, ಅದಕ್ಕೆ ತಪ್ಪಿದವರಿಗೆ ಭಾರಿ ದಂಡ ವಿಧಿಸಿದರೂ ದೇಶದ ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ತೀವ್ರವಾಗಿದೆ. ಸಣ್ಣ ಮಕ್ಕಳು, ಗರ್ಭಿಣಿಯರು, ವೃದ್ಧರು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಕಲುಷಿತ ನೀರು, ಬಯಲು ಶೌಚಾಲಯ ಬಳಕೆ, ಪೌಷ್ಟಿಕ ಆಹಾರದ ಕೊರತೆ ಕಾರಣದಿಂದ ಬಹುಬೇಗನೆ ರೋಗಗಳಿಗೆ ತುತ್ತಾಗುವ ಜನರು, ಬಡತನದಿಂದಾಗಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಸೇವೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ವೈದ್ಯ ವಿದ್ಯಾರ್ಥಿಗಳು ಕೋರ್ಟ್‌ ಮೆಟ್ಟಿಲು ಏರಿದ್ದಾರೆ. ಹಾಗಾದರೆ ಗ್ರಾಮೀಣ ಜನರಿಗೆ ವೈದ್ಯರ ಸೇವೆ ನೀಡುವವರು ಯಾರು ಎಂಬ ಆತಂಕ ನಿವಾರಣೆಗೆ ಬಿಎಎಂಎಸ್‌ ಪೂರೈಸಿದ ಆಯುರ್ವೇದ ವೈದ್ಯರು ಟೊಂಕಕಟ್ಟಿ ನಿಂತಿದ್ದಾರೆ.

ವೈದ್ಯರ ಕೊರತೆ ನೀಗಿಸಲು ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ, ಗುಜರಾತ್, ಉತ್ತರ ಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಆಯುರ್ವೇದ ವೈದ್ಯರಿಗೆ ಅಲೋಪಥಿ ಚಿಕಿತ್ಸೆಗೆ ಅವಕಾಶ ನೀಡಿರುವ ಕಾರಣ ಅಲ್ಲೆಲ್ಲ ವೈದ್ಯರ ಕೊರತೆ ನಿವಾರಣೆಯಾಗಿದೆ. ದೆಹಲಿ, ಹಿಮಾಚಲ ಪ್ರದೇಶಗಳಲ್ಲಿ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಆಯುಷ್ ವೈದ್ಯರಿಗೆ ಅಲೋಪಥಿ ಚಿಕಿತ್ಸೆ ನೀಡಲು ಅವಕಾಶ ನೀಡಬಾರದು ಎಂದು ಭಾರತೀಯ ವೈದ್ಯಕೀಯ ಮಂಡಳಿಯು 1986ರಿಂದಲೂ ಹಲವು ರಾಜ್ಯಗಳ ಮೇಲೆ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸುತ್ತಲೇ ಬಂದಿದೆ.

ಕರ್ನಾಟಕ ತಡವಾಗಿಯಾದರೂ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ.  ಭಾರತಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ಚೀನಾದಲ್ಲೂ ದಶಕದ ಹಿಂದೆ ವೈದ್ಯರ ಕೊರತೆ ತೀವ್ರವಾಗಿತ್ತು. ಅಲ್ಲಿನ ಕಮ್ಯುನಿಸ್ಟ್‌ ಸರ್ಕಾರ ದೇಶದಲ್ಲಿನ ಸಾಂಪ್ರದಾಯಿಕ  ಪದ್ಧತಿಯ ‘ಬೇರ್‌ಫುಟ್’ ವೈದ್ಯರಿಗೆ (ಗ್ರಾಮೀಣ ಪ್ರದೇಶದಲ್ಲಿನ ಸೇವೆಗಾಗಿ ಕನಿಷ್ಠ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ತರಬೇತಿ ಪಡೆದ ರೈತರು) ವಿಶೇಷ ತರಬೇತಿ ನೀಡಿ, ಪ್ರಾಥಮಿಕ ಹಂತದಲ್ಲಿ ಅಲೋಪಥಿ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ, ಇಂದು ಚೀನಾದಲ್ಲಿ ಪ್ರತಿ ಸಾವಿರ ಜನರಿಗೆ ಇಬ್ಬರು ವೈದ್ಯರು ಇದ್ದಾರೆ. ಚೀನಾದ ನೀತಿಯನ್ನೇ ಜಗತ್ತಿನ ಹಲವು ರಾಷ್ಟ್ರಗಳು ಅನುಸರಿಸಿವೆ.

ಅಲೋಪಥಿ, ಆಯುರ್ವೇದ ಸೇರಿದಂತೆ ಯಾವುದೇ ವೈದ್ಯ ಪ್ರಕಾರ ಇರಲಿ ರೋಗ ಪತ್ತೆಯೇ ಮುಖ್ಯ. ರೋಗ ಪತ್ತೆ ವಿಧಾನ ಎಲ್ಲ ಪ್ರಕಾರಗಳಲ್ಲೂ ಒಂದೇ ರೀತಿ ಇರುತ್ತದೆ. ಹಲವು ಸಂದರ್ಭಗಳಲ್ಲಿ ಅಲೋಪಥಿ ವೈದ್ಯರು ಅನುಸರಿಸುವ ರೋಗ ಪತ್ತೆ ವಿಧಾನಗಳನ್ನೇ ಆಯುರ್ವೇದ ವೈದ್ಯರೂ ಬಳಸಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ (ಎನ್‌ಆರ್‌ಎಚ್‌ಎಂ) ಆರಂಭಿಸಿರುವ ಬಾಲಸ್ವಾಸ್ಥ್ಯ ಯೋಜನೆಗೆ ಆಯುರ್ವೇದ ವೈದ್ಯರನ್ನೂ ಬಳಸಿಕೊಳ್ಳಲಾಗುತ್ತಿದೆ. ಆರೋಗ್ಯ ಸಮಸ್ಯೆಯಿಂದ ಬಳಲುವ ಮಕ್ಕಳನ್ನು ಸ್ಥಳದಲ್ಲೇ ಪರೀಕ್ಷಿಸಿ ಅಲೋಪಥಿ ಚಿಕಿತ್ಸೆ, ಔಷಧ ನೀಡಲು ಆಯುರ್ವೇದ ವೈದ್ಯರಿಗೆ ಅವಕಾಶ ಕಲ್ಪಿಸಲಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲೇ ಜಾರಿಗೆ ತಂದ ಔಷಧ ಮತ್ತು ಕಾಂತಿವರ್ಧಕ ಕಾಯ್ದೆ–1940 (ಡ್ರಗ್ಸ್‌ ಅಂಡ್‌ ಕಾಸ್ಮೆಟಿಕ್ಸ್ ಆ್ಯಕ್ಟ್‌), ಸ್ವಾತಂತ್ರ್ಯಾ ನಂತರ ಜಾರಿಗೆ ತಂದ ಭಾರತೀಯ ವೈದ್ಯಕೀಯ ಪರಿಷತ್‌ ಕಾಯ್ದೆ– 1956ರ (ಇಂಡಿಯನ್‌ ಮೆಡಿಕಲ್‌ ಕೌನ್ಸಿಲ್‌ ಆ್ಯಕ್ಟ್‌) ಮೂರನೇ ನಿಯಮದಲ್ಲಿ ಆರೋಗ್ಯ ಸಂಬಂಧಿತ ವಿಚಾರಗಳ ನಿರ್ವಹಣೆ ಆಯಾ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಸ್ಪಷ್ಟಪಡಿಸಲಾಗಿದೆ.

ವೈದ್ಯರ ಅರ್ಹತೆ ಆಧಾರದಲ್ಲಿ ಅಲೋಪಥಿ, ದಂತವೈದ್ಯ, ಆಯುರ್ವೇದ ಸೇರಿದಂತೆ ಯಾವುದೇ ವೈದ್ಯಕೀಯ ಪದವಿ ಪಡೆದವರನ್ನೂ ನೋಂದಣಿ ಮಾಡಿಕೊಂಡು ಪ್ರ್ಯಾಕ್ಟೀಸ್‌ ಮುಂದುವರಿಸಲು ಅವಕಾಶ ಕಲ್ಪಿಸಬಹುದು. ಇದೇ ಆಧಾರದ ಮೇಲೆ ದೇಶದ ಕೆಲವು ರಾಜ್ಯಗಳು ಅಲ್ಲಿನ ಆಯುರ್ವೇದ ಹಾಗೂ ಸಾಂಪ್ರದಾಯಿಕ ವೈದ್ಯರಿಗೆ ವಿಶೇಷ ಸಂದರ್ಭಗಳಲ್ಲಿ ಅಲೋಪಥಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಿವೆ.

ಇಂಟಿಗ್ರೇಟೆಡ್‌ ಮೆಡಿಕಲ್‌ ಆ್ಯಕ್ಟ್ ಅನ್ವಯ, ಬಿಎಎಂಎಸ್‌ ಆದ ಪದವೀಧರರ ನೋಂದಣಿ ಸ್ಥಗಿತಗೊಳಿಸಲಾಗಿದೆ. ಬಿಎಎಂಎಸ್ ಪದವಿಯಲ್ಲಿ ವೈದ್ಯ ವೃತ್ತಿಯ ಪಾಠವನ್ನು ಶಾಸ್ತ್ರಕ್ಕೆಂಬಂತೆ ಹೇಳಿಕೊಡುವುದಿಲ್ಲ. ಎಂಬಿಬಿಎಸ್‌ ವಿದ್ಯಾರ್ಥಿಗಳಂತೆಯೇ ಮೃತದೇಹ ಇಟ್ಟುಕೊಂಡೇ ಪ್ರತಿ ಅಂಗ, ಕಾಯಿಲೆಗಳ ಕುರಿತು ಅವರನ್ನೂ ಆಳವಾದ ಅಧ್ಯಯನದಲ್ಲಿ ತೊಡಗಿಸುತ್ತಾರೆ. ವೈದ್ಯಕೀಯ ಶಿಕ್ಷಣ ಎಂದರೆ ನಾಲ್ಕೈದು ವರ್ಷ ಪದವಿಯಲ್ಲಿ ಕಲಿತು ಬಿಡುವಂತಹುದಲ್ಲ. ಅದು ನಿರಂತರ. ಅಲೋಪಥಿ ವೈದ್ಯರಂತೆಯೇ ಆಯುರ್ವೇದ ವೈದ್ಯರೂ ವೃತ್ತಿ ಆರಂಭಿಸಿದ ನಂತರ ನಿರಂತರವಾಗಿ ಪ್ರ್ಯಾಕ್ಟೀಸ್‌ನಲ್ಲೇ ಇಡೀ ಜೀವನವನ್ನು ಕಲಿಯುತ್ತಲೇ ಕಳೆಯುತ್ತಾರೆ.

4 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಆಯುರ್ವೇದ ಪದ್ಧತಿಯಲ್ಲಿ ಎಲ್ಲ ಕಾಯಿಲೆಗಳಿಗೂ ಚಿಕಿತ್ಸೆಯ ಪರಿಹಾರ ಇದೆ. ಕೆಲವೇ ಸಂದರ್ಭಗಳಲ್ಲಿ ಅಲೋಪಥಿ ಬಳಸಬೇಕಾಗುತ್ತದೆ. ಈಗ ಸರ್ಕಾರ ಅಲೋಪಥಿ ಚಿಕಿತ್ಸೆ ನೀಡಲು ಅನುಮತಿ ನೀಡಿದ ನಂತರ 6 ತಿಂಗಳು ವಿಶೇಷ ತರಬೇತಿ ನೀಡುತ್ತಿದೆ. ಹಾಗಾಗಿ, ಈ ನಿರ್ಧಾರಕ್ಕೆ ವಿರೋಧ ಅನಗತ್ಯ. ಖಾಸಗಿ ಆಯುಷ್‌ ವೈದ್ಯರಿಗೂ ಅವಕಾಶ ನೀಡಬೇಕು ಎನ್ನುವುದಷ್ಟೇ ಈಗ ಉಳಿದ ಬೇಡಿಕೆ.

ಪರ್ಯಾಯವಾಗಿ ನಿಲ್ಲುವವರು

ಗ್ರಾಮೀಣ ಭಾಗದ ಒಬ್ಬ ರೈತನ ಕೈ ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಕತ್ತರಿಸಿದೆ. ರಕ್ತಸ್ರಾವ ನಿಲ್ಲದಿದ್ದರೆ ಜೀವಕ್ಕೇ ಅಪಾಯ. ತಕ್ಷಣ ಹೊಲಿಗೆ ಹಾಕಲು ಅರಿವಳಿಕೆ ಮದ್ದು ನೀಡಬೇಕಾಗುತ್ತದೆ. ಅಲೋಪಥಿ ಎನ್ನುವ ಕಾರಣಕ್ಕೆ ಅರಿವಳಿಕೆ ಬಳಸದೇ ಹೊಲಿಗೆ ಹಾಕಿದರೆ ಮಾನವೀಯತೆಗೆ ಬೆಲೆ ಇಲ್ಲದಂತೆ ಆಗುತ್ತದೆ.

ಅಗ್ನಿ ಆಕಸ್ಮಿಕದಲ್ಲಿ ತೀವ್ರ ಸುಟ್ಟಗಾಯಗಳಾದಾಗ, ಹೃದಯ ಸ್ತಂಭನವಾದಾಗ ಕಾರ್ಡಿಯೊ ಪಲ್ಮನರಿ ರಿಸಸಿಟೇಷನ್‌ ಮಾಡಬೇಕು. ಹೃದಯದ  ಮಸಾಜ್‌ ಮಾಡುವ ಜತೆಗೆ ಅಟ್ರೊಪಿನ್, ಅಡ್ರಿನಲಿನ್‌ ಚುಚ್ಚುಮದ್ದು ನೀಡಬೇಕಾಗುತ್ತದೆ. ನಾಯಿ, ಹಾವು ಕಚ್ಚಿದಾಗಲೂ ಜನರು ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆ ಇರುವಾಗ ಇಂತಹ ತುರ್ತು ಚಿಕಿತ್ಸೆಗಳಿಗೆ ಏನು ಮಾಡಬೇಕು ಎಂಬ ಯೋಚನೆಗೆ ಆಯುರ್ವೇದ ವೈದ್ಯರು ಪರ್ಯಾಯವಾಗಿ ನಿಲ್ಲುತ್ತಾರೆ.

ಅಪಪ್ರಚಾರ ಯಾಕೆ?

ನಕಲಿ ವೈದ್ಯರ ವಿರುದ್ಧ ಅಧಿಕಾರಶಾಹಿಯು ಕ್ರಮ ಕೈಗೊಳ್ಳುವಾಗ ಹಾಗೂ ಮಾಧ್ಯಮಗಳು ವರದಿ ಮಾಡುವಾಗ, ಆಯುರ್ವೇದ ವೈದ್ಯರನ್ನೂ ನಕಲಿ ವೈದ್ಯರು ಎಂದು ಘೋಷಿಸಿಬಿಡುವ ಅಪಾಯ ಎಷ್ಟೋ ಬಾರಿ ಎದುರಾಗಿದೆ. ಕನಿಷ್ಠ ಶಿಕ್ಷಣ ಪಡೆಯದ, ಅರೆಬರೆ ತಿಳಿದುಕೊಂಡು ವೈದ್ಯ ವೃತ್ತಿಗೆ ಇಳಿಯುವ ನಕಲಿ ವೈದ್ಯರ ಜತೆ ಐದೂವರೆ ವರ್ಷದ ಪದವಿ ಪಡೆದ ಬಿಎಎಂಎಸ್‌ ವೈದ್ಯರನ್ನೂ ನಕಲಿ ಎಂದು ಬಿಂಬಿಸಿಬಿಡುತ್ತಾರೆ. ಇಂತಹ ಎಡವಟ್ಟುಗಳ ಕುರಿತು ಜಾಗ್ರತೆ ವಹಿಸುವಂತೆ ಮುಕ್ತಿಯಾರ್ ಚಾಂದ್‌ ಮತ್ತು ಹರಿಯಾಣ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ.

ಅದೇ ಎಂಬಿಬಿಎಸ್‌ ವೈದ್ಯರು ಆಯುರ್ವೇದ ಚಿಕಿತ್ಸೆ ನೀಡಲು, ಔಷಧ, ಮಾತ್ರೆ ಬರೆದುಕೊಡಲು ಯಾವುದೇ ನಿರ್ಬಂಧ ಇಲ್ಲ. ಗರ್ಭಕೋಶ ಸಮಸ್ಯೆ, ಪೈಲ್ಸ್‌, ಲಿವರ್ ಜಾಂಡೀಸ್‌ ಮತ್ತಿತರ ಕಾಯಿಲೆಗಳಿಗೆ ಈಗಲೂ ಬಹುತೇಕ ಅಲೋಪಥಿ ವೈದ್ಯರು ಆಯುರ್ವೇದ ಚಿಕಿತ್ಸೆಗೆ ಶಿಫಾರಸು ಮಾಡುತ್ತಾರೆ.

1940 ಹಾಗೂ 1956ರ ಕಾಯ್ದೆಗಳಿಗೆ ತಿದ್ದುಪಡಿ ತರುವಂತೆ 2015ರಲ್ಲಿ ಆಯುರ್ವೇದ ವೈದ್ಯರೆಲ್ಲ ಸೇರಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಕೇಂದ್ರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಎಂಬಿಬಿಎಸ್‌ ಪಠ್ಯಕ್ರಮವನ್ನೇ ಓದಿ, ನಿರಂತರ ಪ್ರ್ಯಾಕ್ಟೀಸ್‌ ಮೂಲಕ ಜ್ಞಾನದ ಅರಿವು ಹೆಚ್ಚಿಸಿಕೊಂಡ ಆಯುರ್ವೇದ ವೈದ್ಯರ ಕೈ ಕಟ್ಟಿ ಹಾಕುವುದು ತರವೇ?

ಕೇಂದ್ರ ಸರ್ಕಾರವು ಭಾರತೀಯ ವೈದ್ಯಕೀಯ ಮಂಡಳಿ ಹಾಗೂ ಕೇಂದ್ರ ಔಷಧ ಪರಿಷತ್‌ನ ಸಹಯೋಗದಲ್ಲಿ ಎಲ್ಲ ಪ್ರಕಾರದ ವೈದ್ಯರಿಗೆ ಒಂದು ವರ್ಷದ ಸೇತುಬಂಧ ಶಿಕ್ಷಣ (ಬ್ರಿಡ್ಜ್‌ಕೋರ್ಸ್‌ ) ತರುವ ಪ್ರಯತ್ನ ಶ್ಲಾಘನೀಯ. ಅದು ಬೇಗನೆ ಕಾರ್ಯಗತವಾಗಲಿ.

ಇವರು ಹೀಗಂತಾರೆ...

* ಆಯುಷ್‌ ವೈದ್ಯರಿಗೂ ಅಲೋಪಥಿ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಆಯುಷ್‌ ಫೆಡರೇಷನ್‌ ಆಫ್‌ ಇಂಡಿಯಾ ನೇತೃತ್ವದಲ್ಲಿ ದಶಕಗಳಿಂದ ಹೋರಾಟ ನಡೆಸಲಾಗಿತ್ತು.

ಕಾನೂನಿನ ಪ್ರಕಾರ, ತುರ್ತುಚಿಕಿತ್ಸೆ ಸಮಯದಲ್ಲಿ ಅಲೋಪಥಿ ಔಷಧ, ಮಾತ್ರೆ ಬರೆದುಕೊಡುವಂತಿರಲಿಲ್ಲ. ರೋಗಿಯನ್ನು ಬದುಕಿಸಲು ಶ್ರಮಿಸಿದವರಿಗೆ ಕಾನೂನಿನ ರಕ್ಷಣೆ ಇರಲಿಲ್ಲ. ಈಗ ಸರ್ಕಾರ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ಅಲೋಪಥಿ ಬಳಸಲು ಸರ್ಕಾರಿ ಆಯುಷ್‌ ವೈದ್ಯರಿಗೆ ಅವಕಾಶ ನೀಡಿದೆ. ಇದನ್ನು ಎಲ್ಲ ಆಯುಷ್‌ ವೈದ್ಯರಿಗೂ ವಿಸ್ತರಿಸಬೇಕು.

–ಡಾ. ಶಶಿಕಾಂತ್, ಕಾರ್ಯದರ್ಶಿ, ಆಯುಷ್ ಫೆಡರೇಷನ್‌ ಆಫ್‌ ಇಂಡಿಯಾ

* 1962ರಲ್ಲಿ ಜಾರಿಗೆ ತಂದ ಕರ್ನಾಟಕ ಆಯುರ್ವೇದ, ಯುನಾನಿ ಚಿಕಿತ್ಸಕರ ಕಾಯ್ದೆ ಪ್ರಕಾರ, ಆಯುಷ್‌ ವೈದ್ಯರು ಅಲೋಪಥಿ ಔಷಧಿ ಬಳಸಲು ಅವಕಾಶವಿತ್ತು.

1973ಕ್ಕಿಂತ ಮುಂಚೆ ಎಲ್ಲ ಪ್ರಕಾರದ ವೈದ್ಯರನ್ನೂ ನೋಂದಣಿ ಮಾಡಲಾಗುತ್ತಿತ್ತು. ಈಗಿನ ಕಾಯ್ದೆಗೆ ತಿದ್ದುಪಡಿ ತಂದು ಮತ್ತೆ ಅಂತಹ ಅವಕಾಶ ನೀಡಬೇಕು.

ಅಧಿಕೃತ ಆಯುಷ್‌ ವೈದ್ಯರಿಗೆ ಅಲೋಪಥಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಿದರೆ ಅನಧಿಕೃತ ವೈದ್ಯರ ಹಾವಳಿ ಸ್ವಲ್ಪವಾದರೂ ಕಡಿಮೆಯಾಗುತ್ತದೆ.

–ಡಾ. ಸೋಮಶೇಖರ್ ಹುದ್ದಾರ್‌, ರಾಜ್ಯ ಸಂಘಟನಾ ಕಾರ್ಯದರ್ಶಿ, ಆಯುಷ್‌ ಫೆಡರೇಷನ್‌ ಆಫ್‌ ಇಂಡಿಯಾ

(ನಿರೂಪಣೆ: ಚಂದ್ರಹಾಸ ಹಿರೇಮಳಲಿ)

----------

* ಭಾರತದಲ್ಲಿರುವ ವೈದ್ಯ– ರೋಗಿ ಅನುಪಾತ 1: 2000

ಡಬ್ಲ್ಯುಎಚ್‌ಒ ಪ್ರಕಾರ ಇರಬೇಕಾದ ಅನುಪಾತ 1: 1000

ಅಂಕಿ ಅಂಶ

2334

ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ರಾಜ್ಯದಲ್ಲಿವೆ

2586
ವೈದ್ಯಾಧಿಕಾರಿ ಹುದ್ದೆಗಳು  ಮಂಜೂರು

1863
ಕಾಯಂ ವೈದ್ಯರಿದ್ದಾರೆ

723
ಪಿಎಚ್‌ಸಿಗಳಲ್ಲಿ ಕಾಯಂ ವೈದ್ಯರು ಇಲ್ಲ

407
ಗುತ್ತಿಗೆ ಆಯುಷ್‌ ವೈದ್ಯರಿದ್ದಾರೆ

264
ಗುತ್ತಿಗೆ ಎಂಬಿಬಿಎಸ್‌ ವೈದ್ಯರಿದ್ದಾರೆ

ಖಾಲಿ ವೈದ್ಯ ಹುದ್ದೆಗಳ ಸಂಖ್ಯೆ 52

(ಆಧಾರ: ಆರೋಗ್ಯ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT