ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ

ವಿಧಾನ ಪರಿಷತ್‌ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ, ಜಿಲ್ಲಾ ಕೇಂದ್ರದಲ್ಲಿಯೇ ಕಡಿಮೆ ಮತ
Last Updated 4 ಫೆಬ್ರುವರಿ 2017, 6:03 IST
ಅಕ್ಷರ ಗಾತ್ರ
ಕೋಲಾರ: ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿದ್ದು, 17 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
 
ಜಿಲ್ಲೆಯ ಆರೂ ಮತಗಟ್ಟೆಗಳಲ್ಲಿ ನಿಗದಿತ ಸಮಯದಂತೆ ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತು. ಮೊದಲ ಎರಡು ತಾಸು ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಮತದಾನ ಮಂದ ಗತಿಯಲ್ಲಿ ಸಾಗಿತ್ತು.
 
ಕೆಜಿಎಫ್‌ ಹೊರತುಪಡಿಸಿ ಇತರೆ ಐದೂ ಕಡೆ ತಹಶೀಲ್ದಾರ್‌ ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಕೆಜಿಎಫ್‌ನಲ್ಲಿ ಮಾತ್ರ ನಗರಸಭೆಯಲ್ಲಿ ಮತಗಟ್ಟೆ ತೆರೆಯಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಅರ್ಹ ಶಿಕ್ಷಕ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡಲಾಗಿತ್ತು.
 
ಬೆಳಿಗ್ಗೆ 10 ಗಂಟೆಯ ನಂತರ ಮತದಾನ ಪ್ರಕ್ರಿಯೆ ಚುರುಕುಗೊಂಡಿತು. ಜಿಲ್ಲೆಯ ಸರ್ಕಾರಿ, ಖಾಸಗಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರದಲ್ಲಿನ ಅರ್ಹ ಶಿಕ್ಷಕ ಮತದಾರರು ತಂಡೋಪತಂಡವಾಗಿ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.
 
ಸಮಯ ಕಳೆದಂತೆ ಮತಗಟ್ಟೆಗಳ ಬಳಿ ಮತದಾರರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕೋಲಾರ ತಾಲ್ಲೂಕಿನ ಮತಗಟ್ಟೆಯ ಬಳಿ ಮತದಾರರ ದೊಡ್ಡ ಸಾಲು ಕಂಡು ಬಂತು. ಮಹಿಳಾ ಹಾಗೂ ಪುರುಷ ಮತದಾರರು ಪ್ರತ್ಯೇಕ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತಗಟ್ಟೆ ಸಿಬ್ಬಂದಿ ಮತದಾರರ ಬಲಗೈನ ಮಧ್ಯದ ಬೆರಳಿಗೆ ಶಾಯಿ ಗುರುತು ಹಾಕಿದರು.
 
ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಪ್ರಮುಖ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಮತಗಟ್ಟೆಗಳಿಂದ ಸ್ವಲ್ಪ ದೂರದಲ್ಲಿ ಪೆಂಡಾಲ್‌ ನಿರ್ಮಿಸಿ, ಮತದಾರರಿಗೆ ಅಭ್ಯರ್ಥಿಗಳ ಕ್ರಮಸಂಖ್ಯೆ ಹಾಗೂ ಇತರೆ ವಿವರಗಳನ್ನು ಒಳಗೊಂಡ ಕರಪತ್ರ ಕೊಟ್ಟು ಮತ ಯಾಚಿಸುತ್ತಿದ್ದ ದೃಶ್ಯ ಕಂಡುಬಂತು. ಅಲ್ಲದೇ, ಮತದಾರರಿಗೆ ಊಟ, ತಿಂಡಿ, ಕಾಫಿ, ಟೀ, ನೀರು, ಮಜ್ಜಿಗೆ ಹಾಗೂ ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು.
 
ಬ್ಯಾನರ್‌ ತೆರವು: ಕೋಲಾರದ ಮತಗಟ್ಟೆ ಬಳಿಯ ಪೆಂಡಾಲ್‌ಗಳಲ್ಲಿ ಹಾಕಿದ್ದ ಅಭ್ಯರ್ಥಿಗಳ ಭಾವಚಿತ್ರ, ಹೆಸರು, ಕ್ರಮಸಂಖ್ಯೆ ಹಾಗೂ ಪಕ್ಷದ ವಿವರವುಳ್ಳ ಬ್ಯಾನರ್‌ಗಳನ್ನು ತಹಶೀಲ್ದಾರ್‌ ವಿಜಯಣ್ಣ ನೇತೃತ್ವದ ಮಾದರಿ ಚುನಾವಣಾ ನೀತಿಸಂಹಿತೆ ತಂಡವು ತೆರವುಗೊಳಿಸಿತು.
 
ವಿಡಿಯೋ ಚಿತ್ರೀಕರಣ: ಪೊಲೀಸರು ಮತಗಟ್ಟೆಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿ ವ್ಯಕ್ತಿಯನ್ನು ತಪಾಸಣೆ ಮಾಡಿದ ನಂತರವಷ್ಟೇ ಒಳ ಹೋಗಲು ಅವಕಾಶ ನೀಡಿದರು. 
 
ಎಲ್ಲಾ ಮತಗಟ್ಟೆಗಳಲ್ಲೂ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಯಿತು. ಅಲ್ಲದೇ, ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.
 
ತಹಶೀಲ್ದಾರ್‌ಗಳ ನೇತೃತ್ವದ ಮಾದರಿ ಚುನಾವಣಾ ನೀತಿಸಂಹಿತೆ ತಂಡ ಮತ್ತು ಸಂಚಾರ ದಳದ (ಫ್ಲೈಯಿಂಗ್‌ ಸ್ಕ್ವಾಡ್‌) ಅಧಿಕಾರಿಗಳು ಹಾಗೂ ವೀಕ್ಷಕರು ನಿಯಮಿತವಾಗಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಉಪ ವಿಭಾಗಾಧಿಕಾರಿ ಸಿ.ಎನ್‌.ಮಂಜುನಾಥ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌ ಮತಗಟ್ಟೆಗಳಿಗೆ ಭೇಟಿ ನೀಡಿದರು.
 
ಪ್ರವೇಶ ನಿರಾಕರಣೆ: ಈ ಹಿಂದಿನ ಚುನಾವಣೆಯಲ್ಲಿ ಕ್ಷೇತ್ರದಿಂದ ಆಯ್ಕೆಯಾಗಿ ಬಳಿಕ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕರಾದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಮಧ್ಯಾಹ್ನ ಕೋಲಾರ ಮತಗಟ್ಟೆಯ ಬಳಿ ಬಂದರು. ಆದರೆ, ಅವರು ಮತದಾರರಲ್ಲದ ಕಾರಣ ಮತ್ತು ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಅವರಿಗೆ ಮತಗಟ್ಟೆ ಪ್ರವೇಶಿಸಲು ತಹಶೀಲ್ದಾರ್‌ ಅವಕಾಶ ನೀಡಲಿಲ್ಲ. ಹೀಗಾಗಿ ಅವರು ಮತಗಟ್ಟೆಯಿಂದ ದೂರದಲ್ಲೇ ನಿಂತು ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಿದರು.
 
ಕೆಜಿಎಫ್‌ನಲ್ಲಿ ತುರುಸು
ಕೆಜಿಎಫ್‌: ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆ ತುರುಸಿನ ಮತದಾನ ನಡೆಯಿತು. ಒಟ್ಟು 405 ಮತದಾರರ ಪೈಕಿ 363 ಮತದಾರರು ಮತ ಚಲಾವಣೆ ಮಾಡಿದರು. ನೌಕರರ ಸಂಘದ ಅಧ್ಯಕ್ಷ ರವಿರೆಡ್ಡಿ, ಮಾಜಿ ಶಾಸಕ ವೈ.ಸಂಪಂಗಿ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.
 
**
ಶೇ. 88 ರಷ್ಟು ಮತದಾನ
ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೆ ಶೇ 88 ರಷ್ಟು ಮತದಾನವಾಗಿದೆ. ಮುಳಬಾಗಿಲು ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ 91 94ರಷ್ಟು ಮತದಾನವಾಗಿದೆ. ಕೋಲಾರ ತಾಲ್ಲೂಕಿನಲ್ಲಿ ಕಡಿಮೆ ಶೇ 85  ಮತದಾನವಾಗಿದೆ.
 
ಉಳಿದಂತೆ ಬಂಗಾರಪೇಟೆ ಶೇ 89 ಕೆಜಿಎಫ್‌ ಶೇ 89  ಶ್ರೀನಿವಾಸಪುರ ಶೇ 90 ಹಾಗೂ ಮಾಲೂರು ತಾಲ್ಲೂಕಿನಲ್ಲಿ ಶೇ 90 ಮತದಾನವಾಗಿದೆ. ಯಾವುದೇ ಚುನಾವಣಾ ಅಕ್ರಮದ ಬಗ್ಗೆ ವರದಿಯಾಗಿಲ್ಲ.
–ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾಧಿಕಾರಿ
 
**
ಸುಸೂತ್ರ  
ಮುಳಬಾಗಿಲು: ನಗರದಲ್ಲಿ ಶುಕ್ರವಾರ ನಡೆದ  ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ಸುಸೂತ್ರವಾಗಿ ನಡೆಯಿತು.
 
ತಾಲ್ಲೂಕಿನಲ್ಲಿ 546 ಮತದಾರರ ಪೈಕಿ 502 ಮಂದಿ ಮತದಾನ ಮಾಡಿದ್ದಾರೆ. ಮತದಾನ ಕೇಂದ್ರವಾದ ತಾಲ್ಲೂಕು ಕಚೇರಿ ಬಳಿ ಶುಕ್ರವಾರ ಬೆಳಿಗ್ಗೆಯಿಂದಲೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.
 
ಡಿವೈಎಸ್‌ಪಿ ಪ್ರಭಾಕರ್ ಬಾಯಿರಿ, ಸರ್ಕಲ್ ಇನ್‌ಸ್ಪೆಕ್ಟರ್‌ ರಾಜಣ್ಣ, ನಗರ ಠಾಣೆ ಇನ್‌ಸ್ಪೆಕ್ಟರ್‌  ಬೈರಾ, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಬಿ.ಟಿ.ಗೋವಿಂದು ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದರು.
 
**
ಮತದಾರರಿಗೆ ಮನವೊಲಿಕೆ
ಮಾಲೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಶುಕ್ರವಾರ ನಡೆದ ಉಪ ಚುನಾವಣೆಯಲ್ಲಿ ಶೇ 90 ರಷ್ಟು ಮತದಾರರು ಮತಗಳನ್ನು ಚಲಾಯಿಸಿದರು.
 
ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ನಡೆದ ಉಪ ಚುನಾವಣೆಗೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮತಗಟ್ಟೆಯನ್ನು ತೆರೆಯಲಾಗಿತ್ತು. ತಹಶೀಲ್ದಾರ್ ಗಿರೀಶ್  ಮತಗಟ್ಟೆಯ ಮೇಲ್ವಿಚಾರಣೆ ವಹಿಸಿದ್ದರು. 
 
ಮತಗಟ್ಟೆ ಅಧಿಕಾರಿಗಳಾಗಿ ನಾಗೇಶ್, ಪ್ರಸಾದ್ ಸೇರಿದಂತೆ ನಾಲ್ವರು ಕಾರ್ಯನಿರ್ವಹಿಸಿದರು.
 
ಅಭ್ಯರ್ಥಿಗಳ ಪರವಾಗಿ ವಿವಿಧ ಪಕ್ಷಗಳ ಬೆಂಬಲಿಗರು ಮತಗಟ್ಟೆಯ ಬಳಿ ಪೆಂಡಾಲ್‌ ಹಾಕಿ ಮತದಾರರಲ್ಲಿ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದರು. 
 
ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್ ನೇತೃತ್ವದಲ್ಲಿ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT