ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಸ್ನೇಹಿತರ ಮಂಡಳಿಗೆ ರಜತ ಸಂಭ್ರಮ

ಮೂವತ್ತು ಮಂದಿ ಗೆಳೆಯರ ಆಸಕ್ತಿಯ ಫಲ: ಇಂದು ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ನೃತ್ಯ ವೈಭವ
Last Updated 4 ಫೆಬ್ರುವರಿ 2017, 6:17 IST
ಅಕ್ಷರ ಗಾತ್ರ
ಕುಣಿಗಲ್: ತಾಲ್ಲೂಕಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀರೆರೆದು ಪೋಷಿಸುತ್ತಿರುವ ‘ಸ್ನೇಹ ಮಿತ್ರ ಮಂಡಳಿ’ಗೆ ಶನಿವಾರ (ಫೆ.4) ರಜತ ಮಹೋತ್ಸವದ ಸಂಭ್ರಮ.
 
25 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಈ ಹೊತ್ತಿನಲ್ಲಿ ‘ಸ್ನೇಹ ಮಿತ್ರ ಮಂಡಳಿ’, ‘ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ನೃತ್ಯ ವೈಭವ’ ಕಾರ್ಯಕ್ರಮ ಸಂಘಟನೆ ಹೊಣೆ ಹೊತ್ತುಕೊಳ್ಳುವ ಮೂಲಕ ರಜತ ಸಂಭ್ರಮವನ್ನು ವೈಭವಯುತವಾಗಿ ಆಚರಿಸಲು ಮುಂದಾಗಿದೆ. 
 
ಮಂಡಳಿಯ ಹುಟ್ಟು: 1990–91ರಲ್ಲಿ ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನ ಗಣೇಶ ಪ್ರತಿಷ್ಠಾಪನಾ ಕಾರ್ಯಕ್ರಮ ಮಂಡಳಿಯ ಹುಟ್ಟಿಗೆ ವೇದಿಕೆಯಾಯಿತು. ಗಣೇಶ ಪ್ರತಿಷ್ಠಾಪನೆಯ ವೇದಿಕೆ ಅಲಂಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸುವ ನೆಪದಲ್ಲಿ 30 ಯುವಕರು ಸಂಘಟಿತರಾದರು. ಆ ಕಾರ್ಯಕ್ರಮ ಮುಗಿದ ನಂತರವೂ ತಮ್ಮ ಕಾರ್ಯಗಳನ್ನು ಮುಂದುವರಿಸುವ ಸಂಕಲ್ಪವನ್ನು ಈ ಯುವಕರು ಮಾಡಿದರು. ಅದರ ಫಲವಾಗಿ ‘ಸ್ನೇಹ ಮಿತ್ರ ಮಂಡಳಿ’ ಅಸ್ತಿತ್ವಕ್ಕೆ ಬಂದಿತು. ಸಮಾನ ಮನಸ್ಕ ಈ ಗೆಳೆಯರು ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ತಾಲ್ಲೂಕಿನ ಜನರಿಗೆ ಸಾಂಸ್ಕೃತಿಕ ರಸದೌತಣ ಉಣಬಡಿಸುತ್ತಿದ್ದಾರೆ. ಅಲ್ಲದೆ ತಾಲ್ಲೂಕಿನ ಹಲವು ಕಲಾವಿದರಿಗೆ ವೇದಿಕೆಯನ್ನೂ ಮಿತ್ರ ಮಂಡಳಿ ಒದಗಿಸುತ್ತಿದೆ. 
 
ಪ್ರಮುಖ ಹೆಜ್ಜೆ ಗುರುತು: ಸ್ಥಳೀಯ ಗಾಯಕರನ್ನು ಗುರುತಿಸಲು ‘ಭಾವ ಸಿಂಚನ’ ಕಾರ್ಯಕ್ರಮವನ್ನು ಮಂಡಳಿ ಸಂಘಟಿಸಿತ್ತು.  ಇದರಿಂದ ಚಂದನ ವಾಹಿನಿಯಲ್ಲಿ ಜಿಲ್ಲೆಯಲ್ಲಿ ನಡೆಸಿದ ‘ಮಧುರ ಮಧುರವಿ ಮಂಜುಳಾ ಗಾನ’ ಕಾರ್ಯಕ್ರಮಕ್ಕೆ ತಾಲ್ಲೂಕಿನಿಂದ ಐದು ಗಾಯಕರು ಪಾಲ್ಗೊಂಡಿದ್ದರು. ಮಂಡಳಿ ಮೂರು ಆರ್ಕೆಸ್ಟ್ರಾ ತಂಡಗಳನ್ನು ಸ್ಥಾಪಿಸಿ ಕಾರ್ಯಕ್ರಮ ನೀಡುತ್ತಿದೆ. 
 
ದೊಡ್ಡಕೆರೆ ತುಂಬಿ ಕೋಡಿ ಹರಿದ ವೇಳೆ  ‘ಜಲಪಾತೋತ್ಸವ’, ಅಭಿನೇತ್ರಿ ಕಲಾ ತಂಡದಿಂದ ‘ಭಾಗೀರತಿ’ ನಾಟಕ ಪ್ರದರ್ಶನ, ಹಾಸ್ಯ ಕಲಾವಿದರನ್ನು ಪ್ರೋತ್ಸಾಹಿಸಲು ನಗೆ ಜಾಗರಣೆ, ಅಂಧ ಮಕ್ಕಳಿಗಾಗಿ ‘ಅಂತರ್ ದೃಷ್ಟಿ ಸ್ನೇಹ ಸೃಷ್ಟಿ’, ಡಾ.ರಾಜ್ ಕುಮಾರ್ ಸ್ಮರಣೆ ಅಂಗವಾಗಿ ‘ಹಾಡು ಬಾ ಕೋಗಿಲೆ ನಲಿದಾಡು ಬಾರೆ ನವಿಲೆ’ ಕಾರ್ಯಕ್ರಮಗಳನ್ನು ಸ್ನೇಹ ಮಿತ್ರ ಮಂಡಳಿ ಆಯೋಜಿಸಿತ್ತು. ಈ ಕಾರ್ಯಕ್ರಮಗಳು ಮಂಡಳಿಯ ಪ್ರಮುಖ ಹೆಜ್ಜೆ ಗುರುತುಗಳಾಗಿವೆ. ಮಂಡಳಿ ಸಾಹಿತ್ಯ, ಸಂಸ್ಕೃತಿ ಪೋಷಣೆಗೆ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ. ತನ್ನ ಕಾರ್ಯಕ್ರಮಗಳಿಗೆ ಯಾವುದೇ ರೀತಿಯಲ್ಲಿ ಹಣ ಸಂಗ್ರಹಿಸಿ ಠೇವಣಿ ಇಟ್ಟಿಲ್ಲ. ಕಾರ್ಯಕ್ರಮಕ್ಕೂ ಮುನ್ನ ಗೆಳೆಯರು ಕೂಡಿ ಅಂದಾಜು ವೆಚ್ಚದ ಪಟ್ಟಿ ಸಿದ್ದಪಡಿಸುವರು. ಪ್ರತಿ ಸದಸ್ಯರಿಂದ ಇಂತಿಷ್ಟು ಹಣ ಸಂಗ್ರಹಿಸಿ ಹಾಗೂ ದಾನಿಗಳಿಂದ ನೆರವು ಪಡೆದು ಕಾರ್ಯಕ್ರಮ ಆಯೋಜಿಸುವರು. ಹೆಗ್ಗೋಡಿನ ನೀನಾಸಂ ತಿರುಗಾಟದ ನಾಟಕಗಳು ತಾಲ್ಲೂಕಿನಲ್ಲಿ ಪ್ರದರ್ಶನಗೊಳ್ಳಲು ಮಿತ್ರ ಮಂಡಳಿ ಕಾರಣವಾಗಿದೆ. ಸಹಕಾರ ತತ್ವದಡಿ ಆರಂಭಿಸಿರುವ ಸ್ನೇಹ ಮಿತ್ರ ಮಂಡಳಿ ಸೌಹಾರ್ದ ಸಹಕಾರ ಸಂಘ ನೂರಾರು ಯುವಕರಿಗೆ ಸಾಲ ಸೌಲಭ್ಯ ನೀಡಿ ಆರ್ಥಿಕ ಸ್ವಾವಲಂಬಿಗಳನ್ನಾಗಿಸುವ ಕೆಲಸ ಮಾಡುತ್ತಿದೆ.
 
ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದ ಹವ್ಯಾಸಿ ರಂಗ ಕಲಾವಿದರ ಕಾರ್ಯಕ್ರಮ, ಸಂಸ್ಕೃತಿ ಶಿಬಿರ,  ಪರಿಸರ ಸಂರಕ್ಷಣ, ಪುರಸಭೆ ಅನುಮತಿ ಪಡೆದು ಸುಸಜ್ಜಿತ ಉದ್ಯಾನ ನಿರ್ಮಾಣ ಹಾಗೂ ನಿರ್ವಹಣೆಗೆ ಮತ್ತಿತರ ಯೋಜನೆಗಳನ್ನು ಸ್ನೇಹ ಮಿತ್ರ ಮಂಡಳಿ ಸದಸ್ಯರು ರೂಪಿಸಿಕೊಂಡಿದ್ದಾರೆ.
 
**
ನೃತ್ಯ ವೈಭವ
ಶನಿವಾರ (ಫೆ.4) ಸಂಜೆ 5.30ಕ್ಕೆ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ಸ್ನೇಹ ಮಿತ್ರ ಮಂಡಳಿ ಸಂಘಟಿಸಿರುವ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ನೃತ್ಯ ವೈಭವ’ ನಡೆಯಲಿದೆ. ಒಂದೇ ವೇದಿಕೆಯಲ್ಲಿ ಆಳ್ವಾಸ್ ವಿದ್ಯಾ ಸಂಸ್ಥೆಯ 350 ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಮತ್ತು ವಿದೇಶಗಳ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT