ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆರವಣಿಗೆಗೆ ತಡೆ: ಪೊಲೀಸರೊಂದಿಗೆ ವಾಗ್ವಾದ

ಉಪ ಚುನಾವಣೆ ಹಿನ್ನೆಲೆ ನಿಷೇಧಾಜ್ಞೆ ಜಾರಿ: ನಗರ ಠಾಣೆ ಪೊಲೀಸರಿಂದ ವಾಹನಗಳ ಜಪ್ತಿ, ಬಿಡುಗಡೆ
Last Updated 4 ಫೆಬ್ರುವರಿ 2017, 7:38 IST
ಅಕ್ಷರ ಗಾತ್ರ
ಚಿತ್ರದುರ್ಗ: ರಾಜ್ಯ ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರ ಉಪ ಚುನಾವಣೆ ಹಿನ್ನೆಲೆಯಲ್ಲಿ ಸಂತೆ, ಜಾತ್ರೆ, ಮೆರವಣಿಗೆ, ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಮೀರಿ ಚುನಾವಣೆ ನಡೆಯುವ ಸ್ಥಳದ ಮಾರ್ಗವಾಗಿ ನಗರದೊಳಗೆ ಪ್ರವೇಶಿಸಿದ ಮಡಿವಾಳ ಸಮುದಾಯದ ಮೆರವಣಿಗೆಯನ್ನು ಶುಕ್ರವಾರ ಪೊಲೀಸರು ತಡೆದರು.
 
17 ರಾಜ್ಯಗಳಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಇನ್ನೂ 14 ರಾಜ್ಯಗಳಲ್ಲಿ ಕೂಡ ಇದೇ ಕ್ರಮ ಅನುಸರಿಸಬೇಕು ಎಂದು  ಒತ್ತಾಯಿಸಿ ಆಯೋಜಿಸಲಾಗಿರುವ ‘ಕನ್ಯಾಕುಮಾರಿಯಿಂದ ದೆಹಲಿವರೆಗೆ: ನಮ್ಮ ನಡೆ ದೆಹಲಿ ಕಡೆಗೆ’ ಮೆರವಣಿಗೆಯು ಶುಕ್ರವಾರ ಚಿತ್ರದುರ್ಗ ತಲುಪಿದಾಗ ಈ ಘಟನೆ ನಡೆಯಿತು.
 
ನಗರ ಪೊಲೀಸ್ ಠಾಣೆ ಮುಂಭಾಗ ಮಡಿವಾಳ ಸಮುದಾಯದ ಮೆರವಣಿಗೆ ಬಂದ ಸಂದರ್ಭದಲ್ಲಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೆರವಣಿಗೆಗೆ ಬಳಸಿದ ಬೆಳ್ಳಿ ವರ್ಣದ ಸಾರೋಟು ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರು.
 
ಈ ಮುಂಚೆ ನಗರದ ಗಾಂಧಿ ವೃತ್ತದಲ್ಲಿ ಮೆರವಣಿಗೆಗೆ ತಡೆಯೊಡ್ಡಿದ ಪೊಲೀಸರು ಮೈಕ್, ಬ್ಯಾಂಡ್ ಸೆಟ್ ಬಳಸುವಂತಿಲ್ಲ. ಗುಂಪು ಗುಂಪಾಗಿ ಹೋಗುವಂತಿಲ್ಲ, ಚುನಾವಣೆ ಸ್ಥಳದ ಮಾರ್ಗವಾಗಿ ಹೋಗಬಾರದು. ಮುಖ್ಯ ರಸ್ತೆ ಹೊರತುಪಡಿಸಿ ಬೇರೆ ಮಾರ್ಗದಲ್ಲಿ ತೆರಳುವಂತೆ ಸಂಘಟಕರಿಗೆ ಸೂಚನೆ ಕೂಡ ನೀಡಿದ್ದರು ಎನ್ನಲಾಗಿದೆ.
 
ಅದಕ್ಕೆ ಒಪ್ಪಿದ ಸಂಘಟಕರು ಮೈಕ್, ಬ್ಯಾಂಡ್ ಸೆಟ್‌ಗಳನ್ನು ವಾಪಸ್ ಕಳುಹಿಸಿದ್ದಾರೆ. ಶಾಂತಿಯುತವಾಗಿ ಸಂಚರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಮೆರವಣಿಗೆಯಲ್ಲಿ ಹತ್ತಿಪ್ಪತ್ತು ಬೈಕ್‌ಗಳ ಮೂಲಕ ಸಂಚರಿಸಿದ ಯುವಕರು ಘೋಷಣೆ ಕೂಗಿದ ಕಾರಣ ಪೊಲೀಸರು ಅನಿವಾರ್ಯವಾಗಿ ವಾಹನಗಳನ್ನು ಮತ್ತು ಕೆಲವು ಚಾಲಕರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ನಗರಠಾಣೆ ಮುಂಭಾಗದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
 
ಇದನ್ನು ಖಂಡಿಸಿ ಆಯೋಜಕರು ಠಾಣೆಯಲ್ಲಿ ಘೋಷಣೆ ಕೂಗಲು ಆರಂಭಿಸಿದ ಕಾರಣ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್, ಹೆಚ್ಚುವರಿ ಎಸ್ಪಿ ಪರಶುರಾಮ್, ಎಎಸ್‌ಪಿ ಲಕ್ಷ್ಮಣ್ ನಿಂಬರಗಿ ಬಂದರು.
 
‘ಶಾಂತ ರೀತಿಯಿಂದ ವರ್ತಿಸಬೇಕು. ಇಲ್ಲದಿದ್ದರೆ, ಕಾನೂನು ಸುವ್ಯವಸ್ಥೆ ಕಾಪಾಡಲು ಲಾಠಿ ಚಾರ್ಜ್ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
 
ಠಾಣೆ ಎದುರು ಪೊಲೀಸರ ವಿರುದ್ಧ ಕೂಗಾಡಿದ ವ್ಯಕ್ತಿಯನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪೊಲೀಸರಿಗೆ ಸೂಚನೆ ನೀಡಿದರು. ವಿಷಯ ತಿಳಿಯುತ್ತಿದ್ದಂತೆ ಕ್ಷಣಾರ್ಧದಲ್ಲಿ ನಗರ ಠಾಣೆ ಆವರಣದಲ್ಲಿ ಸಮುದಾಯದ ನೂರಾರು ಮಂದಿ ಸೇರಿದರು. 
 
ಮೆರವಣಿಗೆಯ ನೇತೃತ್ವ ವಹಿಸಿದ್ದ ಮಡಿವಾಳ ಸಂಸ್ಥಾನದ ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಮುಖಂಡರು, ಪೊಲೀಸ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. 
 
‘ನಮಗೆ ಮಾಹಿತಿ ಇಲ್ಲದ ಕಾರಣ ಈ ಮಾರ್ಗವಾಗಿ ಬಂದಿದ್ದೇವೆ. ಶಾಂತಿ ಕಾಪಾಡುವಲ್ಲಿ ಪೊಲೀಸ್ ಅಧಿಕಾರಿಗಳ ಜತೆ ನಾವು ಜೋಡಿಸುತ್ತೇವೆ. ದಯವಿಟ್ಟು ವಾಹನಗಳನ್ನು ಬಿಡಬೇಕು’ ಎಂದು ಅವರು ಮನವಿ ಮಾಡಿಕೊಂಡರು.
 
ಮೆರವಣಿಗೆ ನಡೆಸುವಂತಿಲ್ಲ, ಯಾರೂ ಘೋಷಣೆ ಕೂಗಿಕೊಂಡು ಸಂಚರಿಸುವಂತಿಲ್ಲ. ಇದಕ್ಕೆ ಒಪ್ಪಿದರೆ ಮಾತ್ರ ವಾಹನ ಬಿಡುವುದಾಗಿ ಅಧಿಕಾರಿಗಳು ತಿಳಿಸಿದ ಕಾರಣ ಸ್ವಾಮೀಜಿ ಅವರು ಒಪ್ಪಿಗೆ ಸೂಚಿಸಿದರು. ನಂತರ ವಾಹನಗಳನ್ನು, ವ್ಯಕ್ತಿಯನ್ನು ಬಿಡುಗಡೆ ಮಾಡಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT