ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟ ಶಿಕ್ಷಣಕ್ಕೆ ವಿಶೇಷ ಯೋಜನೆ ರೂಪಿಸಿ

ಸೊರಬ: ಶೈಕ್ಷಣಿಕ ಕಾರ್ಯಾಗಾರದಲ್ಲಿ ಶಾಸಕ ಮಧು ಬಂಗಾರಪ್ಪ
Last Updated 4 ಫೆಬ್ರುವರಿ 2017, 7:47 IST
ಅಕ್ಷರ ಗಾತ್ರ
ಸೊರಬ: ‘ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸರ್ಕಾರ ದೃಢ ನಿಲುವು ತೆಗೆದುಕೊಳ್ಳಬೇಕು. ಗುಣಮಟ್ಟದ ಶಿಕ್ಷಣಕ್ಕಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕು’ ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು. 
 
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕವು ಪಟ್ಟಣದ ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
‘ದೇಶದ ಭವಿಷ್ಯವನ್ನು ರೂಪಿಸುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕ ಸವಲತ್ತುಗಳನ್ನು ನೀಡುವ ಜೊತೆಗೆ ಜನಪರವಾಗಿ ದೃಢ ನಿರ್ಧಾರವನ್ನು ತೆಗೆದುಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಅವರು ಪ್ರತಿಪಾದಿಸಿದರು.
 
ಕನ್ನಡ ಸಹಾಯಕ ಪ್ರಾಧ್ಯಾಪಕ ಶ್ರೀಪತಿ ಹಳಗುಂದ, ‘10ನೇ ಶತಮಾನದ ಕನ್ನಡ ಭಾಷೆ ಜಾಗೃತವಾಗಿದ್ದರೂ, ಇಂದು ಇಂಗ್ಲಿಷ್‌ ಮಾಧ್ಯಮ ನಮ್ಮನ್ನು ಆಳುತ್ತಿರುವುದು ವಿಪರ್ಯಾಸವಾಗಿದೆ. ಕನ್ನಡ ಮಾಧ್ಯದಲ್ಲಿ ಶಿಕ್ಷಣ ಕಲಿತ ಮಕ್ಕಳಿಗೆ ಸರ್ಕಾರ ಉದ್ಯೋಗದಲ್ಲಿ ಅವಕಾಶ ಕಲ್ಪಿಸಿದರೆ ಇಂಗ್ಲಿಷ್‌ ವ್ಯಾಮೋಹದಿಂದ ದೂರು ಉಳಿಯಲಿದ್ದಾರೆ. ಇದು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಅನುಕೂಲವಾಗಲಿದೆ’ ಎಂದು ಅವರು ಹೇಳಿದರು. 
 
‘ಪಠ್ಯಕ್ರಮ ರಚನೆಯಲ್ಲಿ ರಾಜಕೀಯ ಬೆರೆಸುತ್ತಿರುವುದರಿಂದ ಪಠ್ಯಗಳು ಗುಣಾತ್ಮಕತೆಯನ್ನು ಕಳೆದುಕೊಳ್ಳುತ್ತಿವೆ’ ಎಂದು ವಿಷಾದಿಸಿದ ಅವರು, ‘ರಾಷ್ಟ್ರಪ್ರೇಮ ಅರಳಿಸುವ ಸರಳ ಪಠ್ಯಕ್ರಮ ರಚನೆಯಾಗಬೇಕೆ ಹೊರತು, ರಾಷ್ಟ್ರಪ್ರೇಮ ಕೆರಳಿಸುವ ಪಠ್ಯಕ್ರಮ ಅಳವಡಿಸುವ ನೀತಿ ತೊಲಗಬೇಕು’ ಎಂದು ಅವರು ತಿಳಿಸಿದರು. 
 
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸತೀಶ್ ಎಂ.ಅರ್ಜುನಪ್ಪ, ತಾರಾ ಶಿವಾನಂದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ, ದೈಹಿಕ ಶಿಕ್ಷಣ ಪರಿವೀಕ್ಷಕ ಮಹೇಶ್ವರಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಗಣಪತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಭಾರತಿ, ಪ್ರಕಾಶ್ ಮಡ್ಳೂರು, ಜಿಲ್ಲಾ ಘಟಕದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ನೌಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್ ಷಡಕ್ಷರಿ, ತಾಲ್ಲೂಕು ಅಧ್ಯಕ್ಷ ಹೊಳೆಲಿಂಗಪ್ಪ, ಗಣಪತಿ, ಬಸವರಾಜ್ ಜಡ್ಡಳ್ಳಿ, ಸಂಪತ್ ಕುಮಾರ್, ರುದ್ರಪ್ಪ,ಹಾಲೇಶ್ ನವುಲೆ, ಅನ್ವರ್ ಭಾಷಾ ಮುಲ್ಲಾ ಹಾಜರಿದ್ದರು.  
 
**
ಕಾರ್ಯಾಗಾರದ ಹೆಸರಲ್ಲಿ ಅನ್ಯಾಯ: ಆರೋಪ 
 ತಾಲ್ಲೂಕು ಶೈಕ್ಷಣಿಕವಾಗಿ ಹಿಂದುಳಿದ್ದಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರು ಸಾಮೂಹಿಕವಾಗಿ ಶಾಲೆಗೆ ಬೀಗ ಹಾಕಿ ಶೈಕ್ಷಣಿಕ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವುದು ಖಂಡನೀಯ ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಚಿದಾನಂದಗೌಡ  ತಿಳಿಸಿದ್ದಾರೆ. 
 
 ಪಟ್ಟಣ ರಂಗ ಮಂದಿರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾರ್ಯಾಗಾರದ ಹೆಸರಿನಲ್ಲಿ ಶಾಲಾ ಅವಧಿಯನ್ನು ದುರಪಯೋಗ ಪಡಿಸಿಕೊಂಡಿದೆ.   ಸಂಘದ ಹೆಸರಿನ ಕಾರ್ಯಕ್ರಮಗಳನ್ನು   ರಜಾ ದಿನಗಳಲ್ಲಿ ನಡೆಸಬೇಕೆಂಬ ನಿಯಮವಿದ್ದರೂ ಸಂಘದ ಪದಾಧಿ ಕಾರಿಗಳು ಇಲಾಖೆಯ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಲು ಮುಂದಾಗಿರವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
 
 ತಾಲ್ಲೂಕಿನ  ಶಿಕ್ಷಕರು ಶಾಲೆಗೆ ಬೀಗ ಹಾಕಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.ಕಾರ್ಯಾಗಾರದಲ್ಲಿ ಕೇವಲ ಒಂದು ಗಂಟೆ ಉಪನ್ಯಾಸ ನೀಡಿ, ಉಳಿದ ಸಮಯವನ್ನು ಸಂಘದ ಕ್ಯಾಲೆಂಡರ್ ಬಿಡುಗಡೆ, ಸನ್ಮಾನ, ಗುರುತಿನ ಚೀಟಿ  ವಿತರಣೆಯಿಂದ ಸಮಯ ವ್ಯರ್ಥ ಮಾಡಲಾಗಿದೆ. ಈ ಬಗ್ಗೆ ಉಪ ನಿರ್ದೇಶಕರನ್ನು ಪ್ರಶ್ನಿಸಿದಾಗ ಕಾರ್ಯಕ್ರಮ ನಡೆಸುವ ಬಗ್ಗೆ ಶಿಕ್ಷಕರ ಸಂಘ ತಮ್ಮ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ. 
 
ಇನ್ನು ಮುಂದೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಶಾಲಾ ಅವಧಿಯಲ್ಲಿ ಸಂಘ ಯಾವುದೇ ಚಟುವಟಿಕೆಯನ್ನು ನಡೆಸದಂತೆ ಎಚ್ಚರ ವಹಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT