ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಅಂಚೆಯ ಮೊಹರು

Last Updated 4 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಇಟಲಿಯ ವೆನಿಸ್‌, ಜರ್ಮನಿಯ ಬರ್ಲಿನ್‌, ಫ್ರಾನ್ಸ್ ನ ಕಾನ್‌ಗಳಲ್ಲಿ ನಡೆಯುವ ಚಲನಚಿತ್ರೋತ್ಸವಗಳು ಇಂದು ಜಗತ್ತಿನ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಿತ್ರೋತ್ಸವಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಅಂದಾಜು 8–9 ದಶಕಗಳ ಚರಿತ್ರೆಯುಳ್ಳ ಈ ಚಿತ್ರೋತ್ಸವಗಳ ಸಾಲಿಗೆ ಈಗ ಸೇರಿಸುವ ಚಿತ್ರೋತ್ಸವಗಳ ಸಂಖ್ಯೆ 250 ಅನ್ನು ದಾಟಿದೆ. ಇದರಲ್ಲಿ 200 ಚಿತ್ರೋತ್ಸವಗಳು ಅಮೇರಿಕವೊಂದರಲ್ಲೇ ಏರ್ಪಡುತ್ತವೆ!

ಇಂತಹ ಚಿತ್ರೋತ್ಸವಗಳ ನೆನಪಿಗಾಗಿ ವಿಶೇಷ ಅಂಚೆಚೀಟಿಗಳನ್ನು ಪ್ರಕಟಿಸುವ ಪರಿಪಾಠಕ್ಕೂ ಏಳು ದಶಕಗಳ ಇತಿಹಾಸವಿದೆ. ಕಳೆದ ವರ್ಷ (2016) ಕಾನ್ಸ್‌ ಚಿತ್ರೋತ್ಸವ ಸಂದರ್ಭಕ್ಕೆ ನಾಲ್ಕು ಶ್ರೇಷ್ಠ ಚಿತ್ರಗಳಿಗೆ ಸಂಬಂಧಿಸಿದಂತೆ ನಾಲ್ಕು ವಿನೂತನ ಅಂಚೆಚೀಟಿಗಳು ಹೊರಬಿದ್ದವು. ಡಿವೇಜನಸ್‌ ಆಫ್‌ ಫಿಮರ್‌ (1953) ದಿ ಲೆಫರ್ಡ್‌ (1963) ಟ್ಯಾಕ್ಸಿ ಡ್ರೈವರ್‌ (1976) ಹಾಗೂ ಪುಲ್ಪ್‌ ಫಿಕ್ಷನ್‌ (1994) ಇವೇ ಆ ಚಿತ್ರಗಳು.

ಆಧುನಿಕ ಸಮಾಜದ ಅವಿಭಾಜ್ಯ ಅಂಗವೆನ್ನಿಸಿರುವ ಸಿನಿಮಾದಂತೆ ಅಂಚೆ ವ್ಯವಸ್ಥೆ ನಮ್ಮ ಬದುಕಿನ ಹಾಸು ಹೊಕ್ಕಾಗಿ ಒಂದೂವರೆ ಶತಮಾನವೇ ಆಗಿ ಹೋಗಿದೆ. ಕಾಗದ–ಪತ್ರಗಳ ಸಾಗಣೆಗೆ ಹಣ ಪಾವತಿಸಲು ಬಳಕೆಗೆ ಬಂದ ಅಂಚೆಚೀಟಿಗಳು ಸಂಗ್ರಹ ಜಗತ್ತಿಗೆ ಕಾಲಿಟ್ಟ ಮೇಲೆ ಅವುಗಳ ಜನಪ್ರಿಯತೆ ಹಾಗೂ ಬೇಡಿಕೆ ಚಲನಚಿತ್ರಗಳಂತೆ ಸಾಗುತ್ತಿರುವ ಹೊಸ ವಿಷಯವಲ್ಲ. ವಿದ್ಯುನ್ಮಾನ ಯುಗದಲ್ಲಿ ಅಂಚೆ ವ್ಯವಸ್ಥೆ ಕೊಂಚ ಕಳೆಗುಂದಿದೆಯಾದರೂ ಅಂಚೆ ಚೀಟಿಗಳ ಸಂಗ್ರಹಣೆ– ಮಾರಾಟದ ಭರಾಟೆ ಜೋರಾಗಿಯೇ ಇದೆ.

ಜಗತ್ತಿನಾದ್ಯಂತ ಚಿತ್ರೋತ್ಸವಗಳಲ್ಲಿನ ಉತ್ತಮ ಚಿತ್ರಗಳನ್ನು ವೀಕ್ಷಿಸಲು ಆಸಕ್ತರು ಹಾತೊರೆಯುವಂತೆ ಚಿತ್ರೋತ್ಸವ ಕಾಲಕ್ಕೆ ಪ್ರಕಟಿಸುವ ವಿಶೇಷ ಅಂಚೆಚೀಟಿಗಳ ಖರೀದಿ ಹಾಗೂ ಸಂಗ್ರಹಕ್ಕೂ ದೊಡ್ಡ ಗುಂಪೇ ಸೃಷ್ಟಿಯಾಗಿದೆ.

ಇದಕ್ಕೆ ಸಣ್ಣ ನಿದರ್ಶನವೊಂದು ಇಲ್ಲಿದೆ. ‘ಲೋಕಾರ್ನೊ’ ಜಗತ್ತಿನ ಪ್ರಸಿದ್ಧ ಚಿತ್ರೋತ್ಸವಗಳಲ್ಲೊಂದು. ಕನ್ನಡದ ‘ಸಂಸ್ಕಾರ’ ಹಾಗೂ ‘ತಿಥಿ’ ಚಿತ್ರಗಳು ಪ್ರಶಸ್ತಿ ಪಡೆದ ಚಿತ್ರೋತ್ಸವ ಇದು. 70 ವರ್ಷ ತುಂಬಲಿರುವ ಲೋಕಾರ್ನೊ ಚಿತ್ರೋತ್ಸವ ಸ್ಮರಣಾರ್ಥ ಇದೇ ಮೇ ಮಾಹೆಯಲ್ಲಿ ವಿಶೇಷ ಅಂಚೆಚೀಟಿಗೆ ಈಗಾಗಲೇ ಮುಂಗಡ ಬುಕ್ಕಿಂಗ್‌ ಇದೆ. ಈಗಿರುವ ಮಾಹಿತಿ ಪ್ರಕಾರ 2 ಲಕ್ಷ ಅಂಚೆಚೀಟಿಗಳಿಗೆ ಬೇಡಿಕೆ ಬಂದಿದೆ.

ಅಂಚೆಚೀಟಿ, ವಿಶೇಷ ಲಕೋಟೆಗಳನ್ನು ಬಿಡುಗಡೆ ಮಾಡಲು ಚಿತ್ರೋತ್ಸವ ವ್ಯವಸ್ಥೆ ಮಾಡುವ ಬಹಳಷ್ಟು ದೇಶಗಳು ಕಾಯಂ ಏರ್ಪಾಡುಗಳನ್ನು ಹೊಂದಿವೆ. ಚೀನಾ ದೇಶವಂತೂ ಈವರಗೆ 361 ಇಂತಹ ಅಂಚೆಗಳನ್ನು ಪ್ರಕಟಿಸಿದೆ. ಚೀನಾ ದೇಶದ ಮೊದಲ ಬಣ್ಣದ ಚಲನಚಿತ್ರ 1996ರಲ್ಲಿ ಏಷ್ಯನ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರವೆಂಬ ಗೌರವ ಪಡೆದಾಗ ಆ ಚಿತ್ರದ ನಾಲ್ಕು ದೃಶ್ಯಗಳನ್ನೇ ಅಂಚೆಚೀಟಿಗಳಲ್ಲಿ ಮುದ್ರಿಸಿ ಹೊರತಂದಿತು.
ಕಾನ್‌ನ 35ನೇ ಚಿತ್ರೋತ್ಸವ (1982) ಜರುಗಿದಾಗ ಆ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕೆಲವು ಚಿತ್ರಗಳ ಪೋಸ್ಟರ್‌ಗಳನ್ನೇ ಅಂಚೆಚೀಟಿಗಳನ್ನಾಗಿ ಸಿದ್ಧ ಮಾಡಿ ಬಿಡುಗಡೆಗೊಳಿಸಲಾಗಿತ್ತು.

ಪ್ರಪಂಚದ ಅಂಚೆಚೀಟಿ ಪದ್ಧತಿಗೆ ನಾಂದಿ ಹಾಡಿದ ಇಂಗ್ಲೆಂಡ್‌ನ ‘ರಾಯಲ್‌ ಮೈಲ್‌’ ತನ್ನ ಲಂಡನ್‌ ಕೇಂದ್ರ ಕಚೇರಿಯಲ್ಲಿ ಚಲನಚಿತ್ರಗಳ ಘಟಕವನ್ನು ಹೊಂದಿದ್ದು ಆಗ್ಗಿಂದ್ದಾಗ್ಗೆ ಸಿನಿಮಾ ಇತಿಹಾಸ, ವಿಶೇಷತೆಗಳ ಬಗೆಗೆ ಅಂಚೆಚೀಟಿ, ವಿಶೇಷ ಲಕೋಟೆಗಳನ್ನು ಹೊರತರುತ್ತಲೇ ಇರುತ್ತದೆ.

ಮರ್ಲಿನ್‌ ಮೆನ್ರೋ ಜಗತ್ತಿನ ಶ್ರೇಷ್ಠ ಅಭಿನೇತ್ರಿಗಳಲ್ಲೊಬ್ಬರು. ಇವರ ಚಲನಚಿತ್ರಗಳ ‘ಹಿನ್ನೋಟ’ 1962 ಜರುಗಿದಾಗ ರಾಯಲ್‌ ಮೈಲ್‌ ಹೊರತಂದ ನಾಲ್ಕು ವಿಶೇಷ ಅಭಿನಯದ ಮೆನ್ರೋ ಚಲನಚಿತ್ರಗಳ ಅಂಚೆಚೀಟಿಗಳು ಇಂದೂ ಬೇಡಿಕೆಯಲ್ಲಿರುವಂತಹವು. ಆಗ ರಾಯಲ್‌ ವೈಲ್‌ ಮುದ್ರಿಸಿದ್ದು 1 ಲಕ್ಷ ಸ್ಟ್ಯಾಂಪುಗಳು ಮಾತ್ರ. ಅಪರೂಪಕ್ಕೆ ನೋಡಲು ಸಿಕ್ಕುವ ಈ ನಾಲ್ಕು ಚೀಟಿಗಳನ್ನು ಈಗಲೂ ಖರೀದಿಸಲು ಗ್ರಾಹಕರಿದ್ದರೂ ಮಾರಾಟಕ್ಕೆ ಬರುತ್ತಿಲ್ಲ.

ಸೋವಿಯತ್‌ ರಷ್ಯಾ ಅನೇಕ ಚೊತ್ರೋತ್ಸವಗಳನ್ನು ಸಂಘಟಿಸುತ್ತಿತ್ತು. ಅನೇಕ ಸಂದರ್ಭಗಳಲ್ಲಿ ನೆನಪಿನ ಅಂಚೆಚೀಟಿಗಳನ್ನು ಬಿಡುಗಡೆಗೊಳಿಸುತ್ತಿತ್ತು. 1981 ರಲ್ಲಿ ಮಾಸ್ಕೊ ಚಲನಚಿತ್ರೋತ್ಸವ ಸಮಯದಲ್ಲಿ ಯು.ಎಸ್‌.ಎಸ್‌.ಆರ್‌. ಹಳೆಯ ಅಂಚೆಚೀಟಿಗಳ ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಿ ಹಣ ಸಂಗ್ರಹಿಸಿದ್ದೂ ಉಂಟು.

ಚಲನಚಿತ್ರೋತ್ಸವ ಅಂಚೆಚೀಟಿಗಳ ವಿಷಯವನ್ನಾಗಿಸಿಕೊಂಡು ವಿಶ್ವದಾದ್ಯಂತ ಹಲವು ಅಂಚೆಚೀಟಿ ಪ್ರದರ್ಶನಗಳನ್ನು ಆಗಾಗ ಏರ್ಪಡಿಸುವುದು ಸಾಮಾನ್ಯ. ಚಿತ್ರೋತ್ಸವಗಳ ಅಂಗವಾಗಿ ಇಂತಹ ಪ್ರದರ್ಶನಗಳು ಈಚೆಗೆ ಹೆಚ್ಚುತ್ತಿದ್ದು ಇದೇ ಕಾಲಕ್ಕೆ ವಿಶೇಷ ಚೀಟಿ, ವಿಶೇಷ ಮೊಹರುಗಳನ್ನು ಬಿಡುಗಡೆ ಮಾಡುವುದೂ ಇದೆ.

ಅನೇಕ ದಾಖಲೆಗಳನ್ನು ಅಂಚೆಚೀಟಿ ಪ್ರಕಟಣೆಗಳಲ್ಲಿ ಮಾಡಿರುವ ‘ಎಮರೇಟ್ಸ್ ಪೋಸ್ಟ್’ ದುಬಾಯ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ದಶಮಾನೋತ್ಸವ (2013) ಸಂದರ್ಭಕ್ಕೆ ಜಾಗತಿಕ ಸಿನಿಮಾ ಬೆಳವಣಿಗೆ ಕುರಿತು ವಿಶೇಷವಾಗಿ ವಿನ್ಯಾಸ ಮಾಡಿದ ನಾಲ್ಕು ವಿಶಿಷ್ಟ ಅಂಚೆಚೀಟಿಗಳನ್ನು ಹೊರ ತರುವುದರ ಮೂಲಕ ಅಂಚೆಚೀಟಿ ಸಂಗ್ರಾಹಕರ ಗಮನ ಸೆಳೆಯಿತು.

ರಾಬಿನ್‌ ಹುಡ್‌ ಪಾತ್ರಧಾರಿಯಾಗಿ ಜಗತ್ತಿನ ಗಮನ ಸೆಳೆದ ನಟ ರುಸ್ಸೆಲ್‌ ಕ್ರೌಮೀ, ನ್ಯೂಜಿಲೆಂಡ್‌ನಲ್ಲಿ ಹುಟ್ಟಿ ಆಸ್ಟ್ರೇಲಿಯಾದ ಪೌರತ್ವ ಪಡೆದಿರುವ ರುಸ್ಸೆಲ್‌ ಗೌರವ ಸೂಚಕವಾಗಿ ಅನಿಮೇಟೆಡ್‌ ಅಂಚೆಚೀಟಿಯನ್ನು ಕಾನ್‌ ಚಿತ್ರೋತ್ಸವದಲ್ಲಿ ಬಿಡುಗಡೆಗೊಳಿಸಿದಾಗ ಅದನ್ನು ಕೊಳ್ಳಲು ಆಸ್ಟ್ರೇಲಿಯನ್ನರು ಮಾತ್ರವಲ್ಲ, ಇತರ ದೇಶಗಳ ಅಂಚೆಚೀಟಿ ಆಸಕ್ತರೂ ಮುಗಿಬಿದ್ದಿದ್ದರು.

ಜಗತ್ತಿನ ಅತಿ ಹೆಚ್ಚು ಚಲನಚಿತ್ರಗಳನ್ನು ತಯಾರಿಸುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತವೂ ಚಲನಚಿತ್ರ ಕುರಿತ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವಲ್ಲಿ ಹಿಂದೆಬಿದ್ದಿಲ್ಲ. ಭಾರತೀಯ ಸಿನಿಮಾ ಶತಮಾನೋತ್ಸವ ಸಂದರ್ಭಕ್ಕೆ ಒಮ್ಮೆಗೆ 50 ಅಂಚೆಚೀಟಿಗಳನ್ನು ಬಿಡುಗಡೆ ಮಾಡಿ ದಾಖಲೆ ಮಾಡಿತ್ತು ಭಾರತ ಅಂಚೆ ಇಲಾಖೆ.

1952 ರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ಸಂಘಟಿಸುತ್ತಿರುವ ಭಾರತ ಈವರೆಗೆ ಚಿತ್ರೋತ್ಸವ ಸಮಯದಲ್ಲಿ ಬಿಡುಗಡೆಗೊಳಿಸಿರುವುದು ಕೇವಲ ಒಂದೇ ಒಂದು ಅಂಚೆಚೀಟಿ. ಅದು 1977ರ ಚಿತ್ರೋತ್ಸವದಲ್ಲಿ!

ಇನ್ನೊಂದು ಸೋಜಿಗದ ವಿಷಯವಿದೆ. ಬ್ರೆಜಿಲ್‌ ದೇಶದಲ್ಲಿ ಭಾರತೀಯ ಚಲನಚಿತ್ರೋತ್ಸವ ಜರುಗಿದಾಗ (2014) ಬ್ರೆಜಿಲ್‌ ಸರ್ಕಾರ ‘ಇಂಡಿಯನ್‌ ಸಿನಿಮಾ ಫೆಸ್ಟಿವಲ್‌’ ಸ್ಮರಣಾರ್ಥ ಅಂಚೆಚೀಟಿ ಪ್ರಕಟಿಸಿದೆ.

ನಾರ್ವೆ ದೇಶದಲ್ಲಿ 2016 ರಲ್ಲಿ ಬಾಲಿವುಡ್‌ ಚಲನಚಿತ್ರೋತ್ಸವ ನಡೆದಾಗ ಜೀವಿತಾವಧಿ ಸಾಧನೆಯ ಗೌರವಕ್ಕೆ ಪಾತ್ರರಾದ ಭಾರತೀಯ ನಟಿ ಜೀನತ್‌ ಅಮಾನ್‌ ಅವರ ವಿಶೇಷ ಅಂಚೆಚೀಟಿಯನ್ನು ‘ನಾರ್ವೆ ಪೋಸ್ಟ್’ ಹೊರತಂದಿದೆ.

ಚಲನಚಿತ್ರೋತ್ಸವಗಳು ಏರ್ಪಟ್ಟಾಗ ಬಿಡುಗಡೆಯಾದ ನೆನಪಿನ ಅಂಚೆಚೀಟಿಗಳನ್ನು ಕುರಿತಂತೆ ರಾಯಲ್‌ ಮೈಲ್‌ ಸಮೂಹ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಿದ್ದು ಹಲವು ಚಿತ್ರೋತ್ಸವಗಳಲ್ಲಿ ಅದನ್ನು ಪ್ರದರ್ಶಿಸಿದೆ.

ವಿಷಯ ವಿಶೇಷಗಳನ್ನು. ವೈವಿಧ್ಯಮಯ ವಿಚಾರಗಳನ್ನು ಗಣ್ಯರನ್ನು ಒಳಗೊಳ್ಳುವ ಮೂಲಕ ಇತಿಹಾಸ ದಾಖಲಿಸುತ್ತಿರುವ ಅಂಚೆಚೀಟಿಗಳು ಚಲನಚಿತ್ರ ಚರಿತ್ರೆಯನ್ನು ಅಂಚೆಚೀಟಿಗಳಲ್ಲಿ ಪಡಿಮೂಡಿಸುವುದು ನಿರಂತರವಾಗಿ ಸಾಗುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT