ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆಗಾರ ಮನೆಯೊಳಗೆ... ಓಡಿದವ ಜೈಲೊಳಗೆ...!

Last Updated 4 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಉದ್ದಿಮೆಗಳಲ್ಲಿ, ಸಾರಿಗೆ ಇಲಾಖೆಯಲ್ಲಿ ಕಾರ್ಮಿಕ ಸಂಘ ಕಟ್ಟಿಕೊಂಡು ಇಡೀ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿದ್ದ ಕೆಲ ವರ್ಷಗಳ ಹಿಂದಿನ ಘಟನೆಯಿದು. ಇಂಥ ಕಾರ್ಮಿಕ ಸಂಘಟನೆಯ ಚುಕ್ಕಾಣಿ ಹಿಡಿದಿದ್ದವ ಸ್ವಾಮಿನಾಥ. ಸಾರಿಗೆ ಸಂಸ್ಥೆಯ ಚಾಲಕನಾಗಿದ್ದ ಈತ ಸಂಘಟನೆ ಕಟ್ಟಿಕೊಂಡು ಅತ್ಯಂತ ಪ್ರಬಲನಾಗಿ, ಪ್ರಭಾವಶಾಲಿಯಾಗಿ ಹೊಮ್ಮಿದ್ದ.

ಹಲವು ವರ್ಷ ಒಂದೇ ಮಾರ್ಗದಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಸ್ವಾಮಿನಾಥನ ಪ್ರಭಾವ ಎಷ್ಟಿತ್ತು ಎಂದರೆ, ಆ ಮಾರ್ಗದಲ್ಲಿ ಆತ ಮನಸ್ಸು ಬಂದಾಗ ಮಾತ್ರ ಹೋಗುತ್ತಿದ್ದ. ಅಂದರೆ, ಉಳಿದ ದಿನಗಳಲ್ಲಿ ತನ್ನ ಪ್ರಭಾವ ಬಳಸಿ ಬೇರೆ ಚಾಲಕರ ಮೇಲೆ ಒತ್ತಡ ಹೇರಿ, ಅವರನ್ನು ಹೆದರಿಸಿ–ಬೆದರಿಸಿ ಆ ಬಸ್ಸಿನ ಚಾಲಕರನ್ನಾಗಿ ಕಳುಹಿಸುತ್ತಿದ್ದ. ಆ ಸಮಯದಲ್ಲಿ ತಾನು ಇಲ್ಲಸಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದ. ಆದರೆ, ಪ್ರತಿದಿನವೂ ತಾನೇ ಚಾಲಕನಾಗಿ ಕರ್ತವ್ಯ ನಿರ್ವಹಿಸಿದಂತೆ ಹಾಜರಾತಿ ಪುಸ್ತಕದಲ್ಲಿ ರುಜು ಮಾಡುತ್ತಿದ್ದ!

ಸ್ವಾಮಿನಾಥ ಮದುವೆ ಆಗಿ ಇಬ್ಬರು ಮಕ್ಕಳ ತಂದೆಯಾಗಿದ್ದರೂ ಶಾಂತಿ ಎಂಬಾಕೆಯ ಸಹವಾಸ ಮಾಡಿದ್ದ. ತನ್ನನ್ನಲ್ಲದೆ ಬೇರೆ ಯಾರನ್ನೂ ಹತ್ತಿರ ಸೇರಿಸಿಕೊಳ್ಳಬಾರದು ಎಂದು ಶಾಂತಿಯ ಜೊತೆ ಒಪ್ಪಂದ ಕೂಡ ಮಾಡಿಕೊಂಡಿದ್ದ. ಅವಳೂ ಇದಕ್ಕೆ ಒಪ್ಪಿದ್ದಳು. ಆದ್ದರಿಂದ ಇಬ್ಬರ ಸಂಬಂಧ ಗುಟ್ಟಾಗಿ ಕೆಲ ವರ್ಷ ನಡೆಯಿತು.

ಶಾಂತಿಯ ಮನೆಗೆ ಯುವಕನೊಬ್ಬ  ಆಗೀಗ ಬರುತ್ತಿರುತ್ತಾನೆ ಎಂಬ ವಿಷಯವನ್ನು ಯಾರೋ ಸ್ವಾಮಿನಾಥನ ಕಿವಿಗೆ ಹಾಕಿದರು. ತನ್ನನ್ನು ಬಿಟ್ಟು ಬೇರೆ ಯಾರೋ  ಶಾಂತಿಯ ಬಳಿ ಬರುವ ವಿಷಯ ಕೇಳಿ ಕೆಂಡಾಮಂಡಲನಾದ ಸ್ವಾಮಿನಾಥ. ನೇರವಾಗಿ ವಿಷಯ ಕೇಳಿದರೆ ಆಕೆ ಬಾಯಿ ಬಿಡಲಿಕ್ಕಿಲ್ಲ ಎಂದುಕೊಂಡು ಆ ಯುವಕನನ್ನು ‘ರೆಡ್‌ಹ್ಯಾಂಡ್‌’ ಆಗಿ ಹಿಡಿಯಬೇಕೆಂದು ಯೋಚನೆ ಮಾಡಿದ. ಈ ವಿಷಯ ತನಗೆ ತಿಳಿದೇ ಇಲ್ಲ ಎಂಬಂತೆ ಶಾಂತಿಯ ಬಳಿ ನಟಿಸುತ್ತಾ ಬಂದ.

ಅದೊಂದು ದಿನ ತಾನು ಕರ್ತವ್ಯ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ ಎಂದು ಶಾಂತಿಗೆ ಹೇಳಿದ ಸ್ವಾಮಿನಾಥ, ಯುವಕನ ‘ಬೇಟೆ’ಗಾಗಿ ಕಾದು ಕುಳಿತ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಆ ದಿನ ತಾನು ಹೋಗಬೇಕಿದ್ದ ಬಸ್ಸಿಗೆ ಇನ್ನೊಬ್ಬ ಚಾಲಕನನ್ನು ಬೆದರಿಸಿ ಕಳುಹಿಸಿದ್ದ. ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಆ ಯುವಕ ಶಾಂತಿಯ ಮನೆಗೆ ಬಂದೇ ಬಿಟ್ಟ. ಶಾಂತಿ, ಯುವಕನನ್ನು ಬರಮಾಡಿಕೊಂಡು ಒಳಗಿನಿಂದ ಬೀಗ ಹಾಕಿಕೊಂಡಳು.

ಇದನ್ನು ಗಮನಿಸಿದ ಸ್ವಾಮಿನಾಥ ತಕ್ಷಣ ಜಾಗೃತನಾದ. ಅಕ್ಕಪಕ್ಕ ಯಾರೂ ಇಲ್ಲದ್ದನ್ನು ಗಮನಿಸಿದ. ಅವನ ಬಳಿ ಇನ್ನೊಂದು ಕೀಲಿ ಇತ್ತು. ಆ ಕೀಲಿಯ ಸಹಾಯದಿಂದ ಬಾಗಿಲು ತೆರೆದ. ಒಳಗಡೆ ಕೋಣೆಯಲ್ಲಿ ಶಾಂತಿ ಮತ್ತು ಆ ಯುವಕ ಅಪ್ಪಿಕೊಂಡು ಮಲಗಿದ್ದನ್ನು ಕಂಡ. ಇನ್ನು ಕೇಳಬೇಕೆ? ರೋಷಾವೇಶ ಉಕ್ಕಿ ಹರಿಯಿತು. ಒಪ್ಪಂದವನ್ನು ಮುರಿದು ಬೇರೊಬ್ಬನ ತೆಕ್ಕೆಯಲ್ಲಿ ಇದ್ದ ಶಾಂತಿಯನ್ನು ಮುಗಿಸಿಬಿಡುವಷ್ಟು ಕೋಪ ಉಕ್ಕಿತು. ಯುವಕನ ಜೊತೆ ಸರಸದಲ್ಲಿ ಮುಳುಗಿಹೋಗಿದ್ದ ಶಾಂತಿಗೆ ಸ್ವಾಮಿನಾಥ ಮನೆಯ ಕೀಲಿ ತೆಗೆದು ಒಳಗೆ ಬಂದ ವಿಷಯ ತಿಳಿಯಲೇ ಇಲ್ಲ.

ಸ್ಥಿಮಿತ ಕಳೆದುಕೊಂಡಿದ್ದ ಸ್ವಾಮಿನಾಥ, ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದ. ಕೊಲೆ ಮಾಡಿದ ಮೇಲೆ ಬೆರಳಿನ ಗುರುತು ಸಿಗಬಾರದು ಎಂಬ ಕಾರಣದಿಂದ ಚಾಕುವಿನ ಹಿಡಿಗೆ ತನ್ನ ಕೈವಸ್ತ್ರವನ್ನು ಕಟ್ಟಿದ. ಶಾಂತಿ ಮತ್ತು ಯುವಕ ಇದ್ದ ಕೋಣೆಗೆ ಗೂಳಿಯಂತೆ ನುಗ್ಗಿದ. ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವೇ ಇಲ್ಲದಂತೆ ಶಾಂತಿಯ ದೇಹದ ಮೇಲೆ ಸಿಕ್ಕಸಿಕ್ಕಲ್ಲೆಲ್ಲಾ ಚಾಕುವಿನಿಂದ ತಿವಿದ.

ಒಂದೇ ಕ್ಷಣ... ಶಾಂತಿ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿ ಸತ್ತಳು. ಹಾಸಿಗೆಯೆಲ್ಲಾ ರಕ್ತಸಿಕ್ತವಾಯಿತು. ಇದನ್ನು ನೋಡಿ ಗಾಬರಿಗೊಂಡ ಯುವಕ ಎದ್ದೆನೋ ಬಿದ್ದೆನೋ ಎಂದುಕೊಂಡು ಅಲ್ಲಿಂದ ಕಾಲ್ಕಿತ್ತ. ಯಾರೂ ತನ್ನನ್ನು ಗಮನಿಸಿಲ್ಲವೆಂಬುದನ್ನು ಖಾತರಿ ಮಾಡಿಕೊಂಡ ಸ್ವಾಮಿನಾಥ, ತನ್ನ ಬಳಿ ಇದ್ದ ಕೀಲಿ ಬಳಸಿ ಹೊರಗಡೆಯಿಂದ ಬಾಗಿಲ ಬೀಗ ಹಾಕಿ ಓಡಿಹೋದ.

ಅಂದು, ನ್ಯಾಯಾಲಯದ ಕೆಲಸ ಮುಗಿಸಿ ನಾನು ಕಚೇರಿಗೆ ಬೇಗನೇ ಬಂದಿದ್ದೆ. ಅದೇ ವೇಳೆ ಏದುಸಿರು ಬಿಡುತ್ತಾ ಬಂದ ಸ್ವಾಮಿನಾಥ, ‘ದಯವಿಟ್ಟು ನನಗೆ ಸಹಾಯ ಮಾಡಿ. ದೊಡ್ಡ ಗೊಂದಲದಲ್ಲಿ ಸಿಲುಕಿಬಿಟ್ಟಿದ್ದೇನೆ. ನಿಮ್ಮ ಹೆಸರನ್ನು ಬಹಳ ಕೇಳಿದ್ದೇನೆ ಸಾರ್‌... ನೀವೇ ದಾರಿ ತೋರಿ’ ಎಂದು ಕೋರಿದ.
ಅವನು ಮೈಮೇಲೆ ಶಾಲು ಹೊದ್ದುಕೊಂಡಿದ್ದ. ಆದರೆ ಆ ಶಾಲಿನ ಒಳಗಿದ್ದ ಬಟ್ಟೆಯ ಮೇಲೆ ರಕ್ತದ ಕಲೆಗಳು ಇಣುಕುತ್ತಿದ್ದವು.

ಅದನ್ನು ಗಮನಿಸಿದ ನಾನು ಏನಾಗಿರಬಹುದು ಎಂದು ಊಹಿಸಿಕೊಂಡೆ. ಅವನು ನಡೆದ ಎಲ್ಲಾ ವಿಷಯ ತಿಳಿಸಿದ.  ವಿಷಯದ ನಡುನಡುವೆಯೇ ತಾನು ಮಾಡಿದ್ದು ಸರಿ ಎಂದು ಸಮರ್ಥಿಸಿಕೊಳ್ಳುತ್ತಿದ್ದ! ಅನೇಕ  ಅಪರಾಧ ಪ್ರಕರಣಗಳನ್ನು ನಾನು ನಡೆಸಿದ್ದರಿಂದ ಮಾರ್ಗದರ್ಶನ ಮಾಡುವಂತೆ ಕೋರಿದ.

‘ನಾನು ಪೊಲೀಸರಿಗೆ ಶರಣಾಗಲೇ ಅಥವಾ ತಪ್ಪಿಸಿಕೊಳ್ಳಲೇ...?’ ಎಂದು ಪ್ರಶ್ನಿಸಿದ. ಈ ಪ್ರಶ್ನೆಗೆ ನಾನು ಅರೆಕ್ಷಣ ಗಲಿಬಿಲಿಗೊಂಡೆ. ಆದರೆ ವೃತ್ತಿಧರ್ಮ ಮೆರೆಯಲೇಬೇಕಿತ್ತು. ಆದ್ದರಿಂದ ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬಹುದು ಎಂದು ಆತನಿಗೆ ತಿಳಿ ಹೇಳಿದೆ.  ‘ನಿನಗಿರುವುದು ಎರಡೇ ಮಾರ್ಗ. ಒಂದನೆಯದ್ದು, ತಕ್ಷಣ ತಪ್ಪನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗುವುದು.

ಹೀಗೆ ಮಾಡಿದರೆ ವಿಚಾರಣೆಯ ವೇಳೆ ಪೊಲೀಸರಿಂದ ಸಿಗಬಹುದಾದ ಹೊಡೆತಗಳು ಕಮ್ಮಿಯಾಗಬಹುದು... ಎರಡನೆಯದ್ದು, ಸುಮ್ಮನೇ ಇದ್ದುಬಿಡುವುದು. ತನಿಖೆ ವೇಳೆ ಪೊಲೀಸರಿಗೆ ಏನಾದರೂ ಸಂದೇಹ ಬಂದು ಬಂಧಿಸುವ ಪ್ರಮೇಯ ಇದ್ದರೆ, ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನು ಹಾಕಬಹುದು’ ಎಂದು ಸಲಹೆ ಇತ್ತೆ. ‘ಈ ಎರಡು ಮಾರ್ಗಗಳಲ್ಲಿ ಯಾವುದನ್ನು ಅನುಸರಿಸುತ್ತೀ’ ಎಂದು ಯೋಚಿಸು’ ಎಂದೆ.

ಎರಡನೆಯ ‘ಉಪಾಯ’ವೇ ಲೇಸು ಎಂದ ಸ್ವಾಮಿನಾಥ. ಒಂದು ವೇಳೆ ಏನಾದರೂ ಅವಶ್ಯಕತೆ ಎದುರಾದರೆ ತನ್ನ ಪರವಾಗಿ ಕೋರ್ಟ್‌ನಲ್ಲಿ ವಕಾಲತ್ತು ವಹಿಸುವಂತೆ ಕೋರಿಕೊಂಡ. ನಾನು ಒಪ್ಪಿಕೊಂಡೆ. ವಕಾಲತ್ತಿನ ಅರ್ಜಿಗೆ ಸಹಿ ಹಾಕಿ ಹೋದ.

***
ಶಾಂತಿಯ ಕೊಲೆ ಪ್ರಕರಣ ಆ ಪ್ರದೇಶದಲ್ಲಿ ತೀವ್ರ ಚರ್ಚೆಗೆ ಒಳಗಾಯಿತು. ಇದು ಪೂರ್ವನಿಯೋಜಿತ ಕೊಲೆಯಾಗಿದ್ದರಿಂದ ಸ್ವಾಮಿನಾಥನೇ ಈ ಕೊಲೆ ಮಾಡಿದ್ದಾನೆ ಎನ್ನುವುದಕ್ಕೆ ಪೊಲೀಸರಿಗೆ ಸ್ಪಷ್ಟ ಕುರುಹುಗಳು ಸಿಗಲಿಲ್ಲ. ನೆರೆಹೊರೆಯವರ ಮನೆಗಳು ದೂರವಿದ್ದದ್ದರಿಂದ ಯಾರಿಗೂ ಕೊಲೆಯ ಮಾಹಿತಿ ಇದ್ದಿರಲಿಲ್ಲ.

ಕಕ್ಷಿದಾರರು ತಮ್ಮ ಪರವಾಗಿ ವಕಾಲತ್ತು ವಹಿಸಿದ ವಕೀಲರಿಗೆ ಕೊಡುವ ಮಾಹಿತಿಗಳನ್ನು ಬಹಿರಂಗ ಪಡಿಸುವಂತೆ ಯಾರೇ ಆಗಲಿ ಆ ವಕೀಲರನ್ನು ಒತ್ತಾಯಿಸುವಂತಿಲ್ಲ. ಇದು ಕಾನೂನು ವಕೀಲರಿಗೆ ನೀಡಿರುವ ಹಕ್ಕು. ಇದಕ್ಕೆ ಕಾನೂನಿನ ಪರಿಭಾಷೆಯಲ್ಲಿ  ‘ಸಂವಹನದ ಹಕ್ಕು’ (Privilege Communication) ಎನ್ನುತ್ತಾರೆ. ಆದ್ದರಿಂದ ಈ ಕೇಸಿನ ಬಗ್ಗೆ ನಾನೂ ಯಾವುದೇ ಮಾಹಿತಿ ನೀಡಲಿಲ್ಲ. 

***
ಆರು ತಿಂಗಳು ಕಳೆಯಿತು. ಅದೊಂದು ದಿನ ದಿನಪತ್ರಿಕೆಯಲ್ಲಿ ಬಂದ ಸುದ್ದಿಯೊಂದನ್ನು ನೋಡಿ  ಸ್ತಬ್ಧನಾದೆ. ‘ಶಾಂತಿ ಕೊಲೆ: ಶ್ರೀಧರನ ಬಂಧನ’ ಎಂಬ ಶೀರ್ಷಿಕೆ ಅಲ್ಲಿತ್ತು. ಲಗುಬಗೆಯಿಂದ ಸುದ್ದಿ ಓದಿದೆ.

ಹೌದು, ಅದೇ ಶಾಂತಿ ಕೊಲೆ. ಶ್ರೀಧರ ಎಂಬಾತನ ಬಂಧನವಾಗಿತ್ತು. ಸಾಲದು ಎಂಬುದಕ್ಕೆ ಈ ಕೊಲೆ ಪ್ರಕರಣವನ್ನು ಆರು ತಿಂಗಳಿನಲ್ಲಿ ‘ಭೇದಿಸಿದ’ ಇನ್‌ಸ್ಪೆಕ್ಟರ್‌ ಅವರಿಗೆ 10 ಸಾವಿರ ರೂಪಾಯಿ ಬಹುಮಾನವೂ ಘೋಷಣೆಯಾಗಿತ್ತು (ಕೊನೆಗೆ ಅವರಿಗೆ ಪದಕವೂ ಲಭಿಸಿತು!) ಅರೆರೇ... ಇದೇನಿದು? ಯಾರು ಈ ಶ್ರೀಧರ ಎಂದು ಯೋಚಿಸಿದೆ.

ಇದರ ಬಗ್ಗೆ ವಿಚಾರಿಸಿದಾಗ, ಅಂದು ಶಾಂತಿಯ ಮನೆಯೊಳಕ್ಕೆ ಹೋಗಿದ್ದ ಯುವಕನೇ ಈ ಶ್ರೀಧರ ಎಂದು ತಿಳಿಯಿತು. ಯಾರ ಕಣ್ಣಿಗೂ ಕಾಣದಂತೆ ಶ್ರೀಧರ ಶಾಂತಿಯ ಮನೆಯೊಳಕ್ಕೆ ಹೋಗಿದ್ದರೂ ಅಲ್ಲಿ ಸಾಕಷ್ಟು ಕಡೆ ತನ್ನ ಬೆರಳಿನ ಗುರುತು ಬಿಟ್ಟು ಬಂದಿದ್ದನಲ್ಲ! ಅದರ ಜಾಡು ಹಿಡಿದು ಹೊರಟ ಪೊಲೀಸರ ಕೈಗೆ ಆತ ಸಿಕ್ಕಿಬಿದ್ದಿದ್ದ.  ಆಗಾಗ್ಗೆ ಈತ ಶಾಂತಿಯ ಮನೆಗೆ ಹೋಗುವುದನ್ನು ಕಂಡಿದ್ದ ಅಕ್ಕಪಕ್ಕದ ಮನೆಯವರು ಅವರಿಬ್ಬರೂ ಗಂಡ–ಹೆಂಡತಿ ಅಂದುಕೊಂಡಿದ್ದರು.

ಎಲ್ಲಾ ಸಾಕ್ಷ್ಯಾಧಾರಗಳನ್ನು ಕ್ರೋಡೀಕರಿಸಿದಾಗ ಶ್ರೀಧರನೇ ಕೊಲೆ ಮಾಡಿದ್ದು ಎಂದು ಪೊಲೀಸರು ಅಂದುಕೊಳ್ಳಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಬೇರೊಬ್ಬನ ಜೊತೆ ಶಾಂತಿಗೆ ಅಕ್ರಮ ಸಂಬಂಧ ಇದ್ದುದೇ ಈ ಕೊಲೆಗೆ ಕಾರಣ ಎಂದೂ ನಮೂದಿಸಿಬಿಟ್ಟರು. ಸುಳ್ಳನ್ನೇ ಸತ್ಯದ ತಲೆಯ ಮೇಲೆ ಹೊಡೆದಂತೆ ಶ್ರೀಧರನ ವಿರುದ್ಧ ದೋಷಾರೋಪ ಪಟ್ಟಿ ತಯಾರಿಸಿ ಕೋರ್ಟ್‌ಗೆ ಸಲ್ಲಿಸಿದ್ದರು.

ಈ ಸುದ್ದಿ ಕೇಳಿದ ನನಗೆ, ಸದ್ಯ... ನನ್ನ ಕಕ್ಷಿದಾರ  ಸ್ವಾಮಿನಾಥ ಸಿಕ್ಕಿಬೀಳಲಿಲ್ಲ  ಎನ್ನಿಸಿತು. ಆದರೆ ಅಮಾಯಕ ಶ್ರೀಧರ ಬಲಿಪಶು ಆದನಲ್ಲ ಎಂದು ಬೇಸರವೂ ಆಯಿತು. ಆದರೆ ಸತ್ಯ ಹೇಳುವಂತೆ ಇರಲಿಲ್ಲವಾದ ಕಾರಣ, ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕಾಯಿತು. 

***
ಇತ್ತ, ಕೋಪದ ಬಾಯಿಗೆ ಬುದ್ಧಿಕೊಟ್ಟು ಕೊಲೆ ಮಾಡಿದ ಸ್ವಾಮಿನಾಥ ಪಾಪಪ್ರಜ್ಞೆಯಿಂದ ಬಳಲಿದ.  ದಿನಕಳೆದಂತೆ ಅವನಿಗೆ ಅದೇನೋ ಅವ್ಯಕ್ತ ಭಯ ಕಾಡಲು ಶುರುವಾಯಿತು. ಪೊಲೀಸರು ತನ್ನನ್ನು ಬಂಧಿಸಿಬಿಟ್ಟರೆ, ತನಗೆ ಶಿಕ್ಷೆಯಾದರೆ... ಹೀಗೆ ಭಯಪಟ್ಟುಕೊಂಡೇ ಕುಗ್ಗಿಹೋದ. ರಾಜಾರೋಷವಾಗಿ ಎಲ್ಲರನ್ನೂ ಹೆದರಿಸಿಕೊಂಡು ಇದ್ದ ಆತನಿಗೆ ಭವಿಷ್ಯವೆಲ್ಲಾ ಕತ್ತಲು ಎನಿಸತೊಡಗಿತು. ಇದೇ ಚಿಂತೆಯಲ್ಲಿ ದೇಹಸ್ಥಿತಿಯೂ ಕ್ಷೀಣಿಸತೊಡಗಿತು. ಕೆಲಸಕ್ಕೂ ಹೋಗಲು ಆಗಲಿಲ್ಲ.

***
ಈ ಕಡೆ, ಆರೋಪಿಯಾದ ಶ್ರೀಧರ ಜೈಲುಪಾಲಾದ. ಮಾಡದ ತಪ್ಪಿಗೆ ಜೈಲಿನಲ್ಲಿ ಕೊಳೆಯತೊಡಗಿದ. ಆತನ  ಉತ್ತಮ ನಡತೆ ಕಂಡು, ಜೈಲಿನಲ್ಲಿ ಮುಖ್ಯಸ್ಥರಾಗಿದ್ದ ಅಬ್ಬಾಯ ರಾಜು ಅವರಿಗೆ ಶ್ರೀಧರನ ಮೇಲೆ ಅನುಕಂಪ ಉಂಟಾಯಿತು. ಆತನ ಸ್ವಭಾವವನ್ನು ಪ್ರತಿದಿನ ಗಮನಿಸಿದ ಅವರಿಗೆ ಆತ ಕೊಲೆ ಮಾಡುವಷ್ಟು ಕಟುಕನಲ್ಲ ಎಂದು ಅನ್ನಿಸತೊಡಗಿತು. ಹೇಗಾದರೂ ಮಾಡಿ ಅವನನ್ನು ಬಿಡುಗಡೆ ಮಾಡಬೇಕು ಎಂದು ಯೋಚಿಸಿ ನೇರವಾಗಿ ನನ್ನ  ಬಳಿಗೇ ಬಂದರು. ಶ್ರೀಧರನ ಪರವಾಗಿ ವಕಾಲತ್ತು  ವಹಿಸುವಂತೆ ಕೋರಿದರು!

ಅಬ್ಬಾಯ ರಾಜು ಅವರ ಮಾತು ಕೇಳಿ ನನಗೆ ದಿಕ್ಕೇತೋಚದಾಯಿತು. ಒಂದೇ ಪ್ರಕರಣದಲ್ಲಿ ಇಬ್ಬರ ಪರವಾಗಿ ವಕಾಲತ್ತು ಹಾಕುವಂತಿರಲಿಲ್ಲ. ಆದರೆ ಇದನ್ನು ನಾನು ಅಬ್ಬಾಯ ರಾಜು ಅವರಿಗೆ ಹೇಳುವಂತೆಯೂ ಇರಲಿಲ್ಲ! ಆದರೆ ಶ್ರೀಧರನಿಗೆ ನ್ಯಾಯ ಒದಗಿಸಬೇಕು ಎಂದೆನಿಸಿ ನನ್ನ ಸ್ನೇಹಿತ ವಕೀಲರೊಬ್ಬರನ್ನು ನೇಮಿಸಿ ಅವರಿಗೆ  ಕಾನೂನಿನ ಸಲಹೆ ನೀಡಿದೆ.

***
ತನ್ನ ಪ್ರೇಯಸಿಯ ಜೊತೆ  ಶ್ರೀಧರ ಸಂಬಂಧ ಇಟ್ಟುಕೊಂಡಿದ್ದ ಕಾರಣಕ್ಕಾಗಿ ಅವನ ವಿರುದ್ಧ ಸ್ವಾಮಿನಾಥ ಹಲ್ಲುಮಸೆಯುತ್ತಿದ್ದರೂ, ತನ್ನಿಂದಾಗಿ ಆತ ಜೈಲಿಗೆ ಹೋದ ವಿಷಯ ತಿಳಿದು ಮತ್ತಷ್ಟು ಕುಗ್ಗಿಹೋದ! ಮೊದಲೇ ಪಶ್ಚಾತ್ತಾಪದಲ್ಲಿ ಬೆಂದುಹೋಗಿದ್ದ ಆತನಿಗೆ ಇನ್ನೊಂದು ಪಾಪದ ಕೂಪಕ್ಕೆ ಹೋಗಲು ಇಷ್ಟವಾಗಲಿಲ್ಲ. ನೇರವಾಗಿ ನನ್ನ ಬಳಿ ಬಂದು ಶ್ರೀಧರನ ಬಿಡುಗಡೆಗೆ ಏನಾದರೂ ಸಹಾಯ ಮಾಡಿ ಎಂದು ಗೋಗರೆಯತೊಡಗಿದ.

ಶ್ರೀಧರನ ಕೊಲೆ ಕೇಸಿನ ವಿಚಾರಣೆ ನಡೆಯಿತು. ಆತನ ವಿರುದ್ಧ ಪೊಲೀಸರು ಸಂಗ್ರಹಿಸಿರುವ ಸಾಕ್ಷ್ಯಾಧಾರಗಳು ಆತನೇ ಕೊಲೆ ಮಾಡಿದ್ದಾನೆ ಎಂಬುದನ್ನು ಸಾಬೀತು ಪಡಿಸುವುದಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್‌ ಶ್ರೀಧರನನ್ನು ಬಿಡುಗಡೆ ಮಾಡಿತು. ಅಂತೂ ಅವನಿಗೆ ನ್ಯಾಯ ಸಿಕ್ಕಿತು.

***
ಅಷ್ಟಕ್ಕೂ ಸ್ವಾಮಿನಾಥನೇ ಶಾಂತಿಯ ಕೊಲೆ ಮಾಡಿದ್ದು ಎಂಬುದು ಶ್ರೀಧರನಿಗೆ ಚೆನ್ನಾಗಿ ಗೊತ್ತಿತ್ತು! ಆದರೆ ಆತ ಬಾಯಿ ಬಿಡದಂತೆ ‘ಕಾಣದ ಕೈ’ಯೊಂದು ಅಲ್ಲಿ ಕೆಲಸ ಮಾಡಿತ್ತೋ ಏನೋ...  ಒಟ್ಟಿನಲ್ಲಿ, ಪೊಲೀಸರ ಎದುರು ತಾನೇ ಕೊಲೆ ಮಾಡಿದ್ದು ಎಂದುಬಿಟ್ಟ. ಕೊನೆಗೆ ತನ್ನ ಬಿಡುಗಡೆಯಲ್ಲಿ ಸ್ವಾಮಿನಾಥನದ್ದೂ ಸಹಾಯವಿದೆ ಎಂದು ಗೊತ್ತಾದ ಮೇಲೆ ಈ ಗುಟ್ಟನ್ನು ಯಾರ ಎದುರೂ ಬಾಯಿ ಬಿಡಲಿಲ್ಲ. ಕೊನೆಗೂ ಶಾಂತಿಯ ಕೊಲೆ ಮಾಡಿದ್ದು ಯಾರು ಎಂಬುದು ಮಾತ್ರ ‘ರಹಸ್ಯ’ವಾಗಿಯೇ ಉಳಿದಿದೆ...!
(ಎಲ್ಲರ ಹೆಸರು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT