ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಜಿ ಕಾಲದ ಕೊನೆಯ ಕೊಂಡಿ

Last Updated 4 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ದೇವರಿಲ್ಲ; ದೆವ್ವಗಳಿವೆ. ನಾನು ಕಚೇರಿಯೊಂದರಲ್ಲಿ ಅಕ್ಷರಗಳನ್ನು ಕೀಲಿಸುತ್ತಿದ್ದೆ. ಜೀವಗಳನ್ನು ತೆಗೆಯುವ ಷರಾಗಳನ್ನು ಬರೆಯುತ್ತಿರುವೆ ಎಂದು ಎಂದಿಗೂ ಅನಿಸಿರಲಿಲ್ಲ. ಗೋಬೆಲ್ಸ್‌ ಜಗತ್ತಿಗೆ ಹಾಗೂ ಅವನ ಮಕ್ಕಳಿಗೆ ಮಾಡಿದ ಅನ್ಯಾಯವನ್ನು ನಾನು ಕ್ಷಮಿಸಲಾರೆ’– ಹೀಗೆ ತೊದಲುವ ಕಂಠದಲ್ಲಿ 103 ವರ್ಷ ವಯಸ್ಸಿನ ಬ್ರೂನ್‌ಹಿಲ್ಡ್‌ ಪಾಮ್ಸೆಲ್ ಹೇಳಿದ್ದನ್ನು ದಾಖಲಿಸುವಾಗ, ಚಿತ್ರ ನಿರ್ದೇಶಕ ರೋಲ್ಯಾಂಡ್ ಶ್ರೊಥೋಫರ್ ಮನಸ್ಸಿನಲ್ಲೂ ಅಲೆಗಳು ಎದ್ದಿದ್ದವು.

ಬ್ರೂನ್‌ಹಿಲ್ಡ್ ಪಾಮ್ಸೆಲ್, ನಾಜಿ ಪ್ರಚಾರಕ ಜೋಸೆಫ್ ಗೋಬೆಲ್ಸ್‌ನ ಕಾರ್ಯದರ್ಶಿ ಆಗಿದ್ದವರು. ನಾಜಿ ಕಾಲವನ್ನು ಕಂಡ ಕೊನೆಯ ಕೊಂಡಿ ಎನಿಸಿದ್ದ ಅವರು ಮೊನ್ನೆ ಮೊನ್ನೆ ಕೊನೆಯುಸಿರೆಳೆದರು. 106 ವರ್ಷಗಳ ತುಂಬು ಬದುಕು ಅವರದ್ದು; ಅದನ್ನು ಏಕಾಂಗಿಯಾಗಿಯೇ ಕಳೆದರೆನ್ನುವುದು ಉಲ್ಲೇಖಾರ್ಹ.

ಜರ್ಮನಿಯ ಬರ್ಲಿನ್‌ನಲ್ಲಿ 1911ರ ಜನವರಿ 11ರಂದು ಹುಟ್ಟಿದ ಪಾಮ್ಸೆಲ್ ಚಿಕ್ಕಂದಿನಿಂದ ವಿಧೇಯ ಸ್ವಭಾವದವರು. ತಪ್ಪು ಮಾಡಿದಾಗ ಅಪ್ಪ ಕೊಟ್ಟಿದ್ದ ಛಡಿ ಏಟನ್ನು ಅವರು ಬದುಕಿನುದ್ದಕ್ಕೂ ನೆನಪಿಟ್ಟುಕೊಂಡಿದ್ದರು. ‘ಮೊದಲ ವಿಶ್ವಯುದ್ಧದ ದಿನಗಳನ್ನು ಕಂಡಿದ್ದ ಅಪ್ಪ ಹೊಡೆಯದೇ ಹೋಗಿದ್ದರೆ ನನ್ನೊಳಗಿನ ಅಂತಃಸತ್ವ ಜಾಗೃತವಾಗುತ್ತಿರಲೇ ಇಲ್ಲ’ ಎಂದು ಅವರು ಹೇಳಿದ್ದರು.

ಚಿಕ್ಕಂದಿನಲ್ಲಿ ಪಾಮ್ಸೆಲ್ ಉದಾಸೀನ ಸ್ವಭಾವದ ಹುಡುಗಿ. ರಾಷ್ಟ್ರದ ವಿದ್ಯಮಾನಗಳ ಅರಿವಿರದಿದ್ದ ಮುಗ್ಧೆ. ಯಹೂದಿ ವಕೀಲರೊಬ್ಬರ ಜವಳಿ ಅಂಗಡಿಯಲ್ಲಿ ಮೊದಲು ಕೆಲಸಕ್ಕೆ ಸೇರಿಕೊಂಡಿದ್ದರು. ಆ ವಕೀಲರನ್ನು ಮೆಚ್ಚಿಕೊಂಡಿದ್ದರೂ ಅವರನ್ನು ಹೆಚ್ಚು ಕಾಡತೊಡಗಿದ್ದು ನಾಜಿ ಪಕ್ಷದ ಹೋರಾಟಗಾರನ ಚಿಂತನೆಗಳು. ಮೊದಲ ವಿಶ್ವ ಯುದ್ಧದ ರಕ್ತದ ಹನಿಗಳ ನಂತರದ ಕಾವಿನಲ್ಲಿ ಚಳವಳಿಯ ಚುಂಗು ಹಿಡಿದವರ ಗುಂಪಿನಲ್ಲಿ ಈ ಹುಡುಗಿಯೂ ಇದ್ದಳು.

ಯಹೂದಿ ವಿರೋಧಿ ಬಿರುಟೀಕೆಗಳ ಮೂಲಕ ಅಡಾಲ್ಫ್ ಹಿಟ್ಲರ್ ಪ್ರವರ್ಧಮಾನಕ್ಕೆ ಬಂದು, ಜರ್ಮನಿಯ ಚಾನ್ಸಲರ್ ಆದಾಗ ‘ಉಘೇ’ ಎನ್ನಲು ಬರ್ಲಿನ್‌ನ ಬ್ರಾಂಡನ್‌ಬರ್ಗ್‌ನಲ್ಲಿ ಜಮಾಯಿಸಿದ್ದ ಜನಸಂದಣಿಯಲ್ಲಿ ಪಾಮ್ಸೆಲ್ ಕೂಡ ಒಬ್ಬರಾಗಿದ್ದರು. ಆದರೆ, ತಮ್ಮ ಜವಳಿ ಅಂಗಡಿಯ ಮಾಲೀಕನಿಗೆ ಅಲ್ಲಿಗೆ ಹೋಗುವುದಾಗಿ ಹೇಳುವ ಧೈರ್ಯ ಆಗ ಅವರಿಗಿರಲಿಲ್ಲ.

ತಮಗೆ ಕೆಲಸ ನೀಡಿದ್ದ ನಾಜಿಯ ಮಧ್ಯಸ್ಥಿಕೆಯಿಂದ 1933ರಲ್ಲಿ ಪಾಮ್ಸೆಲ್ ಅವರಿಗೆ ಜರ್ಮನ್ ಸರ್ಕಾರದ ಪ್ರಸಾರ ನಿಗಮದ ಸುದ್ದಿ ವಿಭಾಗದಲ್ಲಿ ಕಾರ್ಯದರ್ಶಿ ಕೆಲಸ ಸಿಕ್ಕಿತು. ಬಹುತೇಕ ಜರ್ಮನ್ನರು ಸಂಕಷ್ಟದಲ್ಲಿದ್ದ ಆ ಸಂದರ್ಭದಲ್ಲಿ ಹೊಟ್ಟೆಕಿಚ್ಚು ಪಡುವಷ್ಟು ಸಂಬಳದ ಕೆಲಸ ಹುಡುಕಿಕೊಂಡು ಬಂದಿತ್ತು. ಅವರು ಅನಿವಾರ್ಯವಾಗಿ ನಾಜಿ ಪಕ್ಷಕ್ಕೆ ಸೇರಲೇಬೇಕಾಯಿತು.

ನಾಜಿ ಸರ್ಕಾರವು ಯಹೂದಿಗಳಿಗೆ ಚಿತ್ರಹಿಂಸೆ ನೀಡಿ, ಅವರನ್ನು ಗಡಿಪಾರು ಮಾಡತೊಡಗಿದಾಗಲೂ ಇವಾ ಲೊವೆಂಥಲ್ ಎಂಬ ಯಹೂದಿ ಸ್ನೇಹಿತೆಯ ಜತೆ ದೀರ್ಘಾವಧಿಯಿಂದ ಇದ್ದ ಸಂಬಂಧವನ್ನು ಪಾಮ್ಸೆಲ್ ಕಡಿದುಕೊಳ್ಳಲಿಲ್ಲ. ಗಡಿಪಾರಾದ ಯಹೂದಿಗಳಿಗೆ ಜೆಕೊಸ್ಲೊವೇಕಿಯಾದ ಸುಡೆಟೆನ್‌ಲ್ಯಾಂಡ್‌ನಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಮತ್ತೆ ಬದುಕು ಕಟ್ಟಿಕೊಳ್ಳುವ ಅವಕಾಶ ಸಿಗುತ್ತದೆ ಎಂದೇ 1938ರಲ್ಲಿ ಅವರು ನಂಬಿದ್ದರು.

ಗೋಬೆಲ್ಸ್‌ಗೆ ಸಹಾಯಕಿಯಾಗುವ ಅವಕಾಶ ಪಾಮ್ಸೆಲ್ ಅವರಿಗೆ ಒದಗಿಬಂದದ್ದು 1942ರಲ್ಲಿ. ಸುದ್ದಿಪತ್ರಿಕೆಗಳು, ನಿಯತಕಾಲಿಕಗಳು, ರೇಡಿಯೊ, ಪುಸ್ತಕಗಳು, ಮನರಂಜನೆಯ ಎಲ್ಲಾ ಮಾಧ್ಯಮಗಳು ಹಾಗೂ ಪ್ರಚಾರ ಸಭೆಗಳನ್ನು ನಾಜಿ ತತ್ವ ಹರಡಲು ಬಳಸಿಕೊಳ್ಳುವ ದಾರಿಗಳನ್ನು ಗೋಬೆಲ್ಸ್‌ ಹುಡುಕುತ್ತಿದ್ದ ಸಂದರ್ಭ ಅದು. ಹೆಚ್ಚು ಶಿಕ್ಷಿತರಾಗಿದ್ದ ಗೋಬೆಲ್ಸ್‌ ಯಃಕಶ್ಚಿತ್ ಭಾವನೆಗಳಿಗೆ ಕರಗುವವರ ಪೈಕಿ ಆಗಿರಲಿಲ್ಲ.

ಬರ್ಲಿನ್‌ನಲ್ಲಿ ಇದ್ದ ಅವರ ಕಚೇರಿಯಲ್ಲಿ ಪಾಮ್ಸೆಲ್ ಕೆಲಸ ಮಾಡುತ್ತಿದ್ದರು. ಬರುತ್ತಿದ್ದ ದೂರವಾಣಿ ಕರೆಗಳಿಗೆ ಉತ್ತರಿಸುವುದು, ಸಭೆಗಳಲ್ಲಿ ಗೋಬೆಲ್ಸ್‌ ಭಾಷಣದ ಸಾರಾಂಶ ಬರೆದುಕೊಳ್ಳುವುದು, ಅವರ ಪ್ರವಾಸದ ಆಯೋಜನೆ, ಆಗೀಗ ಹಿಟ್ಲರ್‌ ಜತೆಗೆ ಭೇಟಿ ನಿಗದಿಪಡಿಸುವುದು ಇವೆಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು.

‘ತನ್ನ ಕೈಗಳು ತುಸುವೂ ಮಾಸದಂತೆ ಎಚ್ಚರ ವಹಿಸುತ್ತಿದ್ದ, ಸದಾ ಠಾಕುಠೀಕು ಕೋಟುಧಾರಿಯಾಗಿದ್ದ ಗೋಬೆಲ್ಸ್‌ ಎಷ್ಟೇ ನಾಜೂಕಾಗಿದ್ದರೂ ಕುಂಟುವುದು ಮಾತ್ರ ತಪ್ಪುತ್ತಿರಲಿಲ್ಲ’ ಎಂದು ಪಾಮ್ಸೆಲ್ ತಮ್ಮನ್ನು ಕುರಿತು ತಯಾರಾದ ಕಿರುಚಿತ್ರದಲ್ಲಿ ನೆನಪಿಸಿಕೊಂಡಿದ್ದರು.

ಸ್ಟಾಲಿಂಗ್ರ್ಯಾಡ್ ಯುದ್ಧದಲ್ಲಿ ಜರ್ಮನಿ ಸೋತಾಗ 1943ರ ಫೆಬ್ರುವರಿಯಲ್ಲಿ ಗೋಬೆಲ್ಸ್‌ ಮಾಡಿದ ಭಾಷಣವೊಂದರ ಪ್ರತಿ ಸಾಲನ್ನೂ ಪಾಮ್ಸೆಲ್ ನೆನಪಿನಲ್ಲಿಟ್ಟುಕೊಂಡಿದ್ದರು. ಜರ್ಮನಿಯ ನೈತಿಕ ಬಲವರ್ಧನೆಗೆ ಸಂಕಲ್ಪ ಮಾಡುವಂತೆ ಪ್ರೇರಣೆ ನೀಡಿದಂತಿದ್ದ ಮಾತುಗಳು, ಅದುವರೆಗೆ ನಾಜೂಕು ಮನುಷ್ಯನಂತೆ ಕಂಡಿದ್ದ ಗೋಬೆಲ್ಸ್ ಒಳಗಿನ ಕ್ರೌರ್ಯ ಎಚ್ಚೆತ್ತುಕೊಳ್ಳುತ್ತಿರುವ ಸೂಚನೆಯನ್ನೂ ನೀಡಿದ್ದವು.

ಕಚೇರಿಯಲ್ಲಿ ಖುಷಿಯಿಂದ ಹಾಗೂ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ ಪಾಮ್ಸೆಲ್, ಯುದ್ಧದ ಕೊನೆಯ ಕರಾಳ ದಿನಗಳನ್ನೂ ಕಂಡುಂಡರು. ಲಕ್ಷಾಂತರ ಜನರ ಹತ್ಯಾಕಾಂಡವನ್ನು ಅವರಿಗೆ ಜೀರ್ಣಿಸಿಕೊಳ್ಳಲು ಆಗಲಿಲ್ಲ.

ಗೋಬೆಲ್ಸ್‌ನ ಪತ್ನಿ ಮಾಗ್ಡಾ ಹಾಗೂ ಅವರ ಆರು ಮಕ್ಕಳು ಆಗಾಗ ಕಚೇರಿಗೆ ಬರುತ್ತಿದ್ದರಿಂದ ಅವರ ಪರಿಚಯವಿತ್ತು. ನಾಜಿಗಳಿಗೆ ಯುದ್ಧದಲ್ಲಿ ಸೋಲು ಖಾತರಿಯಾಗುತ್ತಿದ್ದಂತೆ ಗೋಬೆಲ್ಸ್‌ ಹಾಗೂ ಅವರ ಕುಟುಂಬ ತಲೆಮರೆಸಿಕೊಂಡಿತು. 1945ರ ಏಪ್ರಿಲ್ 30ರಂದು ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ. ಅದರ ಮರುದಿನ ಗೋಬೆಲ್ಸ್‌ ಹಾಗೂ ಅವರ ಪತ್ನಿ ಕೂಡ ಆತ್ಮಹತ್ಯೆಯ ದಾರಿಹಿಡಿದರು. ತಮ್ಮೆಲ್ಲ ಮಕ್ಕಳಿಗೂ ಅವರು ವಿಷ ಉಣಿಸಿದ್ದರು.

ಆ ಸಂಕಷ್ಟದ ದಿನಗಳಲ್ಲಿ ಕಚೇರಿಯ ನೆಲಮಾಳಿಗೆಯಲ್ಲಿ ಭಯಭೀತರಾಗಿ ಇದ್ದ ಸಿಬ್ಬಂದಿಯಲ್ಲಿ ಪಾಮ್ಸೆಲ್ ಕೂಡ ಒಬ್ಬರು. ಎಲ್ಲರೂ ಕಂಠಮಟ್ಟ ಮದ್ಯಪಾನ ಮಾಡಿ, ಅಮಲಿನಲ್ಲಿಯೇ ನೋವನ್ನು ಮರೆಯಲು ಯತ್ನಿಸಿದ್ದ ಆ ಸಂದರ್ಭವನ್ನು ಕಣ್ಣಿಗೆ ಕಟ್ಟುವಂತೆ ಅವರು ಕಿರುಚಿತ್ರದಲ್ಲಿ ಬಣ್ಣಿಸಿದ್ದರು.

ಪಾಮ್ಸೆಲ್ ಹಾಗೂ ಅವರ ಸಹೋದ್ಯೋಗಿಗಳು ರಷ್ಯನ್ನರಿಗೆ ಶರಣಾದರು. ನಂತರದ ಐದು ವರ್ಷ ಜೈಲುವಾಸ. ರಷ್ಯನ್ ಕ್ಯಾಂಪ್‌ನಿಂದ ಹೊರಬಂದ ಮೇಲೆ ಪಶ್ಚಿಮ ಜರ್ಮನಿಯ ರೇಡಿಯೊ ಹಾಗೂ ಟಿ.ವಿ. ಸಂಸ್ಥೆಯಲ್ಲಿ ಅವರು ಕೆಲಸ ಮಾಡಿ, ನಿವೃತ್ತರಾದರು. ಮ್ಯೂನಿಚ್‌ನಿಂದ ಹೊರಗೇ ಜೀವನ ಸವೆಸಿದ ಅವರು ಮದುವೆ ಮಾಡಿಕೊಳ್ಳಲೇ ಇಲ್ಲ. ಮಕ್ಕಳಿಗೆ ತಾಯಿಯೂ ಆಗಲಿಲ್ಲ.

‘ಎ ಜರ್ಮನ್ ಲೈಫ್’ ಎಂಬ ಕಿರುಚಿತ್ರವನ್ನು ನಿರ್ದೇಶಕ ರೋಲ್ಯಾಂಡ್ ಶ್ರೊಥೋಫರ್ ಮೂರು ವರ್ಷದ ಹಿಂದೆ ತಯಾರಿಸಿದರು. ಅದರಲ್ಲಿ ಪಾಮ್ಸೆಲ್ ಮುಗ್ಧ ಮಾತುಗಳು ಹಾಗೂ ನಾಜಿ ಆಡಳಿತದ ಕೊನೆಯ ದಿನಗಳ ಕುರಿತ ವಿವರಗಳಿವೆ. 2016ರಲ್ಲಿ ಸ್ವಿಟ್ಜರ್ಲೆಂಡ್‌ನ ನಿಯಾನ್‌ನಲ್ಲಿ ಮೊದಲ ಬಾರಿಗೆ ಆ ಕಿರುಚಿತ್ರ ಪ್ರಸಾರವಾಯಿತು. ಆಗ ಅನೇಕ ಮಾಧ್ಯಮಗಳು ಪಾಮ್ಸೆಲ್ ಅವರನ್ನು ಭೇಟಿ ಮಾಡುವ ಉತ್ಸಾಹ ತೋರಿದವು.

2011ರಲ್ಲಿ ಜರ್ಮನ್ ಪತ್ರಿಕೆಯೊಂದು ಅವರ ಸಂದರ್ಶನ ಪ್ರಕಟಿಸುವವರೆಗೆ ನಾಜಿ ಮಂತ್ರಿಗೆ ಕಾರ್ಯದರ್ಶಿ ಆಗಿದ್ದ ಒಬ್ಬ ಮಹಿಳೆ ಇದ್ದಾರೆನ್ನುವುದೇ ಗೊತ್ತಿರಲಿಲ್ಲ.

‘ಸುಂದರ ಎನಿಸುವ ಎಲ್ಲಕ್ಕೂ ಒಂದು ಕಳಂಕ ಇದ್ದೇ ಇರುತ್ತದೆ’ ಎಂಬ ವಾಕ್ಯವನ್ನು  ಪಾಮ್ಸೆಲ್ ಪದೇ ಪದೇ ಹೇಳುತ್ತಿದ್ದರು. ಅದು ಅವರನ್ನು ಬಹುಕಾಲ ಕಾಡಿರಲಿಕ್ಕೂ ಸಾಕು. ಈಗ ಅವರು ಕಳೆದುಹೋದ ಕಥೆಗಳಂತೆ; ನೆನಪಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT