ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್–1ಬಿ ವೀಸಾ ಸುಧಾರಣೆ: ಭಾರತಕ್ಕೆ ವರ!

Last Updated 4 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಈಚೆಗೆ ಮಂಡಿಸಿರುವ ಎಚ್‌–1ಬಿ ವೀಸಾ ಸುಧಾರಣೆ ಮಸೂದೆಯು ಮಾಹಿತಿ ತಂತ್ರಜ್ಞಾನ ಉದ್ದಿಮೆಗಳು ಮತ್ತು ಅಮೆರಿಕದಲ್ಲಿನ ಭಾರತೀಯ ಸಮುದಾಯದವರಲ್ಲಿ ಆತಂಕ ಮೂಡಿಸಿದೆ.

ಈ ಬೆಳವಣಿಗೆಯನ್ನು ಪತ್ರಿಕಾ ವರದಿಗಳ ಶೀರ್ಷಿಕೆಯಲ್ಲಿ ‘ಅಮೆರಿಕ ಕನಸು ಚೂರು’ ಎಂಬರ್ಥದಲ್ಲಿ ಬಣ್ಣಿಸಲಾಗಿದೆ. ಹಾಗಾದರೆ ನಮ್ಮ ಮಕ್ಕಳು ಅಲ್ಲಿಂದ ಮರಳಬೇಕಾಗುತ್ತದೆಯೇ? ಮತ್ತೊಂದು ಆರ್ಥಿಕ ಹಿಂಜರಿತ, ಉದ್ಯೋಗ ಕೊರತೆ ಎದುರಾಗಲಿದೆಯೇ? ಉತ್ತಮ ಕೆಲಸ ಅರಸಿ ಅಮೆರಿಕಕ್ಕೆ ಹೋದವರ ತಂದೆ–ತಾಯಂದಿರಲ್ಲಿ ಈ ಪ್ರಶ್ನೆಗಳು ಮೂಡುತ್ತಿವೆ.

ಎಚ್‌–1ಬಿ ವೀಸಾ ಬೇಡಿಕೆ ಹಲವು ಪಟ್ಟು ಹೆಚ್ಚಾಗಿದೆ, ಹೊರಗುತ್ತಿಗೆ ನೀಡುವ ಕಂಪೆನಿಗಳು ಈ ವೀಸಾ ಬಳಸಿಕೊಂಡು ವಿದೇಶಗಳಿಂದ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿವೆ ಎಂಬ ಭಾವನೆ ಬೆಳೆದಿದೆ. ಈ ನಡುವೆ ಅಮೆರಿಕದ ಕ್ಯಾಲಿಫೋರ್ನಿಯಾ ಸಂಸದೆ, ಡೆಮಾಕ್ರಟಿಕ್ ಪಕ್ಷದ ಜೋ ಲಾಫ್‌ಗ್ರೆನ್‌ ಅವರು ವೀಸಾ ಸುಧಾರಣೆಗೆ ಸಂಬಂಧಿಸಿದ ಮಸೂದೆಯನ್ನು ಜನಪ್ರತಿನಿಧಿಗಳ ಸಭೆಯಲ್ಲಿ ಮಂಡಿಸಿದ್ದಾರೆ.

ಎಚ್‌–1ಬಿ ವೀಸಾ ಹೊಂದಿರುವ ಉದ್ಯೋಗಿಗಳ ವೇತನವನ್ನು ಎರಡು ಪಟ್ಟು ಹೆಚ್ಚಿಸಬೇಕು ಎಂದು ಈ ಮಸೂದೆ ಹೇಳುತ್ತದೆ. ಇದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಬೆಂಬಲ ಇದೆ. ಈ ಮಸೂದೆಗೆ ಅಮೆರಿಕದ ಎರಡು ಸದನಗಳ ಅನುಮೋದನೆ ದೊರೆತು, ಅಧ್ಯಕ್ಷರ ಸಹಿ ಆಗಬೇಕು. ಹಾಗಾಗಿ, ಮಸೂದೆ ಬಗ್ಗೆ ಈಗಲೇ ಯಾವ ತೀರ್ಮಾನಕ್ಕೂ ಬರಲಾಗದು. ಮಸೂದೆಯಲ್ಲಿ ಬದಲಾವಣೆಗಳು ಬರುವ ಸಾಧ್ಯತೆಯೂ ಇದೆ.

ಎಚ್‌–1ಬಿ ವೀಸಾ ಎಂಬುದು ಅಮೆರಿಕದಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿ, ಕೆಲಸ ಮಾಡಲು ಇರುವ ಅನುಮತಿ ಪತ್ರ. ‘ಕಂಪೆನಿಗಳಿಗೆ ಅಮೆರಿಕ ಮೂಲದ ಸೂಕ್ತ ಉದ್ಯೋಗಿಯನ್ನು ಹುಡುಕಿಕೊಳ್ಳಲು ಸಾಧ್ಯವಾಗದಿದ್ದರೆ, ಈಗಾಗಲೇ ಇರುವವರಿಗೆ ದುಪ್ಪಟ್ಟು ವೇತನ ಕೊಡಬೇಕು ಎಂಬ ನಿಯಮ ಅನ್ವಯವಾಗದು’ ಎಂದು ಮಸೂದೆ ಹೇಳುತ್ತದೆ.

ಒಂದು ದೇಶದಿಂದ ಇಂತಿಷ್ಟೇ ಜನರಿಗೆ ಎಚ್–1ಬಿ ವೀಸಾ ನೀಡಬೇಕು ಎಂಬ ನಿಯಮ ಇಲ್ಲದಿರುವುದು ಭಾರತಕ್ಕೆ ಅನುಕೂಲ. ವೀಸಾ ಕೋರಿ ಸಲ್ಲಿಸಿದ ಅರ್ಜಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿತ್ತು.

ಒಂದು ದೇಶಕ್ಕೆ ಇಂತಿಷ್ಟೇ ಪ್ರಮಾಣದ ಎಚ್–1ಬಿ ವೀಸಾ ಎಂಬ ನಿರ್ಬಂಧ ಈಗ ಇದೆ. ಈ ನಿರ್ಬಂಧ ತೆರವಾದರೆ ಭಾರತ ಅಷ್ಟೂ ಎಚ್‌–1ಬಿ ವೀಸಾಗಳನ್ನು (ಅಂದರೆ 65 ಸಾವಿರ) ತನ್ನದಾಗಿಸಿಕೊಳ್ಳಬಹುದು. ಈ ವೀಸಾ ಕೋರಿ ಅತಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗುವುದು ಭಾರತ ಮತ್ತು ಚೀನಾದಿಂದ. ಹಾಗಾಗಿ, ಈ ಎರಡು ದೇಶಗಳಿಗೆ ಹೊಸ ಮಸೂದೆಯಿಂದ ಹೆಚ್ಚಿನ ಲಾಭ ಇದೆ.

ಈ ಮಸೂದೆಯು, ವಿದ್ಯಾರ್ಥಿ ವೀಸಾದಿಂದ ‘ಗ್ರೀನ್‌ ಕಾರ್ಡ್‌’ಗೆ ಪರಿವರ್ತಿಸಿಕೊಳ್ಳುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ‘ಗ್ರೀನ್‌ ಕಾರ್ಡ್‌’ ಪಡೆಯಲು ದೀರ್ಘ ಕಾಲ ಕಾಯಬೇಕಿದೆ. ಆದರೆ ಹೊಸ ಮಸೂದೆಯಿಂದ ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ. ಈಗಿರುವ ನಿಯಮಗಳ ಪ್ರಕಾರ, ಉದ್ಯೋಗಿಯೊಬ್ಬ ಗ್ರೀನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ನಂತರ, ಮುಂದಿನ ಪ್ರಕ್ರಿಯೆಗಳನ್ನು ಕಂಪೆನಿ/ ಮಾಲೀಕ ಕೈಗೆತ್ತಿಕೊಳ್ಳಬೇಕು.

ಇದು ತೀರಾ ಸಂಕೀರ್ಣ, ದುಬಾರಿ ಮತ್ತು ವರ್ಷಗಳ ಕಾಲ ನಡೆಯುವ ಪ್ರಕ್ರಿಯೆ. ಈ ನಡುವೆ ಉದ್ಯೋಗಿ ಬೇರೆ ಕಂಪೆನಿ ಸೇರಿದರೆ, ಹೊಸ ಕಂಪೆನಿಯು ಈ ಎಲ್ಲ ಪ್ರಕ್ರಿಯೆಗಳನ್ನು ಹೊಸದಾಗಿ ಆರಂಭಿಸಬೇಕಾಗುತ್ತದೆ. ಇವೆಲ್ಲ ರಗಳೆಗಳು ಬೇಡವೆಂದು  ಉದ್ಯೋಗಿಗಳು ಒಂದೇ ಕಂಪೆನಿಗೆ ಅಂಟಿಕೊಳ್ಳುತ್ತಾರೆ. ಇದು ಉದ್ಯೋಗಿಯು ಕಂಪೆನಿಯ ಕೃಪೆಯಡಿ ಬದುಕಬೇಕಾದ ಪರಿಸ್ಥಿತಿ ಸೃಷ್ಟಿಸುತ್ತದೆ.

ಈ ಮಸೂದೆಯಿಂದ ಕೆಲವರಿಗೆ ತೊಂದರೆ ಆಗುವುದು ನಿಜ. ಎಚ್–1ಬಿ ವೀಸಾ ಬಳಸಿಕೊಂಡು ಅಮೆರಿಕದ ಕಂಪೆನಿಗಳಿಗೆ ಕಡಿಮೆ ಖರ್ಚಿನಲ್ಲಿ ಮಾನವ ಸಂಪನ್ಮೂಲ ಒದಗಿಸುತ್ತಿದ್ದ, ಅಂದರೆ ಕೌಶಲ ಇದ್ದ ನೌಕರರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ದೊಡ್ಡ ಸಾಫ್ಟ್‌ವೇರ್‌ ಸೇವಾ ಕಂಪೆನಿಗಳು ಇದರಿಂದ ತೊಂದರೆಗೆ ಒಳಗಾಗುತ್ತವೆ.

ಈ ವೀಸಾ ಪಡೆದು ಅಮೆರಿಕಕ್ಕೆ ಹೋಗುವವರು ಚೆನ್ನಾಗಿ ಸಂಪಾದಿಸುತ್ತಾರೆ. ಆದರೆ ಅವರು ಉನ್ನತ ಶ್ರೇಣಿಯ ಕೆಲಸ ಮಾಡುವುದಿಲ್ಲ. ಅವರನ್ನು ಕೆಳ ದರ್ಜೆಯ, ಗುತ್ತಿಗೆ ಕೆಲಸಗಳಿಗೆ ನಿಯೋಜಿಸಲಾಗುತ್ತದೆ. ಅವರ ಕೌಶಲ ಹೆಚ್ಚಿಸಿಕೊಳ್ಳುವ ಅವಕಾಶ ಅಲ್ಲಿ ಸಿಗುವುದಿಲ್ಲ. ಹೀಗೆ ಮಾಡಿದ್ದಕ್ಕೆ ದೇಶ ಬೆಲೆ ತೆರಬೇಕಾಗುತ್ತದೆ.

ಎಚ್–1ಬಿ ವೀಸಾ ಪಡೆದು ಬರುವ ವಿದೇಶಿಯರ ಸಂಖ್ಯೆ ಹೆಚ್ಚಾಗಿದ್ದು ಕಡಿಮೆ ವೇತನಕ್ಕೆ ದುಡಿಯುವ ಉದ್ಯೋಗಿಗಳ ಜೊತೆ ಸ್ಪರ್ಧಿಸಲು ಆಗದ ಅಮೆರಿಕನ್ನರ ಅಸಮಾಧಾನಕ್ಕೆ ಕಾರಣವಾಯಿತು. ಅಮೆರಿಕದ ಎರಡೂ ರಾಜಕೀಯ ಪಕ್ಷಗಳಲ್ಲಿ ಹಲವು ವರ್ಷಗಳಿಂದ ಈ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಅದು ಈ ಮಸೂದೆಯ ಮಂಡನೆಗೆ ಕಾರಣವಾಯಿತು. ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಬೇಕು ಎಂಬುದು ಅವರ ಬಯಕೆ.

ಈ ಮಸೂದೆ ಕಾನೂನು ರೂಪದಲ್ಲಿ ಜಾರಿಗೆ ಬಂದರೆ ಭಾರತ ತಲೆಕೆಡಿಸಿಕೊಳ್ಳಬೇಕೇ? ಅಥವಾ, ಇದನ್ನು ಒಂದು ವರ ಎಂದು ಪರಿಗಣಿಸಬೇಕೇ?
ಇದೊಂದು ಸುವರ್ಣಾವಕಾಶ, ಯಾವ ಕಾರಣಕ್ಕೂ ಇದನ್ನು ಕೈಬಿಡಬಾರದು. ಯಾರಿಗೂ ಸಾಟಿಯಲ್ಲದ ತಾಂತ್ರಿಕ ಪರಿಣತಿ ಭಾರತೀಯರಲ್ಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

ಉತ್ತಮ ಸ್ಥಾನಗಳಲ್ಲಿ ಇರುವವರ, ಬಹಳ ಪ್ರತಿಭಾವಂತರ ಉದ್ಯೋಗ ಮಾಹಿತಿಯನ್ನು ನಾನು ಖುದ್ದಾಗಿ ಪರಿಶೀಲಿಸಿದ್ದೇನೆ. ಅವರಲ್ಲಿ ಹಲವರಿಗೆ ಭಾರತಕ್ಕೆ ಮರಳಬೇಕು ಎಂಬ ಆಸೆ, ಇನ್ನಷ್ಟು ಜನರಿಗೆ ಭಾರತದಿಂದ ಹೊರಗೆ ಹೋಗುವ ಬಯಕೆ ಇಲ್ಲ. ಪ್ರತಿಭಾವಂತರು ಮತ್ತೆ ದೇಶಕ್ಕೆ ಮರಳಲು, ದೇಶಕ್ಕೆ ಕೊಡುಗೆ ನೀಡಲು ಈ ಹಂತದಲ್ಲಿ ಅವಕಾಶ ಇದೆ.

ಭಾರತ ಕಳೆದುಕೊಳ್ಳಬಾರದ ಅವಕಾಶ ಈಗ ಎದುರಾಗಿದೆ. ಇದನ್ನು ಬಳಸಿಕೊಂಡು ನಾವು, ಗುಣಮಟ್ಟ ಹೆಚ್ಚಿಸುವಂತೆ ಇಲ್ಲಿನ ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳ ಮೇಲೆ ಒತ್ತಡ ತರಬೇಕು. ವಿಶ್ವದ ಮುಂಚೂಣಿ ವಿಶ್ವವಿದ್ಯಾಲಯಗಳ ಜೊತೆ ಸಂಯೋಜನೆ ಸಾಧಿಸಬೇಕು. ಆಗ, ಪ್ರತಿಭಾವಂತ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ದೇಶದಲ್ಲೇ ಉಳಿದುಕೊಳ್ಳುತ್ತಾರೆ. ಇದರಿಂದ ದೇಶಕ್ಕೇ ಲಾಭ.

ಚೀನಾದ ಸಿಂಗ್‌ಹುವಾ ವಿಶ್ವವಿದ್ಯಾಲಯದಲ್ಲೂ ಹೀಗೇ ಆಗಿದೆ. ಆ ವಿಶ್ವವಿದ್ಯಾಲಯ ಈಗ ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲೊಂದು. ತಮ್ಮ ದೇಶದಲ್ಲೇ ಇರಲು ಬಯಸಿದ ಚೀನಾ ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ.

ಭಾರತದಲ್ಲಿನ ತಂತ್ರಜ್ಞಾನ ನವೋದ್ಯಮಗಳು ಉತ್ತೇಜನ ಪಡೆದುಕೊಳ್ಳುತ್ತಿವೆ. ಅವು ತಕ್ಕಮಟ್ಟಿಗೆ ಯಶಸ್ಸನ್ನೂ ಕಂಡಿವೆ. ಇಂಥ ನವೋದ್ಯಮಗಳು ತಮ್ಮನ್ನು ಸಿಸ್ಕೊ, ಇಂಟೆಲ್‌ ಅಥವಾ ಇನ್ಯಾವುದೋ ದೈತ್ಯ ಕಂಪೆನಿಗಳು ಖರೀದಿಸಲಿ ಎಂದು ಇದುವರೆಗೆ ಬಯಸುತ್ತಿದ್ದವು. ನವೋದ್ಯಮಗಳು ಭಾರತದಲ್ಲಿ ಇದ್ದುಕೊಂಡು, ಜಾಗತಿಕ ಮಟ್ಟದ ಕಂಪೆನಿಗಳ ಸಮಸ್ಯೆ ಪರಿಹರಿಸಿಕೊಡುತ್ತಿದ್ದವು.

ಈಗ ಭಾರತದ ಸಮಸ್ಯೆಗಳನ್ನು ಗುರುತಿಸಿ, ಭಾರತಕ್ಕೆ ಅಗತ್ಯವಾದ ಉತ್ಪನ್ನಗಳನ್ನು ಸಿದ್ಧಪಡಿಸುವ ಅವಕಾಶ, ಸಂದರ್ಭ ತಂತ್ರಜ್ಞಾನ ನವೋದ್ಯಮಗಳಿಗೆ ದೊರೆತಿದೆ. ಇದು ದೇಶವನ್ನು ಬದಲಿಸಬಲ್ಲದು. ಮಾರುತಿ ಸುಜುಕಿ ಎಂಬ ಕಂಪೆನಿಯು ದೇಶದ ಆಟೊಮೊಬೈಲ್‌ ರಂಗದ ಚಿತ್ರಣವನ್ನೇ ಬದಲಾಯಿಸಿತು ಎಂಬುದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಭಾರತದ ಮೇಲೆ ಕಡಿಮೆ ಪ್ರಮಾಣದಲ್ಲಿ ಆಯಿತು. ಆದರೆ ಅಭಿವೃದ್ಧಿ ಹೊಂದಿದ ದೇಶಗಳು ದೊಡ್ಡ ಮಟ್ಟದ ಸಮಸ್ಯೆ ಎದುರಿಸಿದವು. ಭಾರತವು ಸೇವಾ ವಲಯವನ್ನು ಹೆಚ್ಚಾಗಿ ನಂಬಿರುವ ಮಾರುಕಟ್ಟೆ ಆಗಿರುವ ಕಾರಣ ಹಾಗೂ ನಮ್ಮ ಜಿಡಿಪಿ ದೇಶದೊಳಗಿನ ಗ್ರಾಹಕರನ್ನು ನೆಚ್ಚಿಕೊಂಡಿರುವ ಕಾರಣ, ಹಿಂಜರಿತದ ಹೊಡೆತವನ್ನು ನಾವು ತಾಳಿಕೊಂಡೆವು.

1998ರಲ್ಲಿ ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆಯ ನಂತರ ನಮ್ಮ ದೇಶದ ಮೇಲೆ ದಿಗ್ಬಂಧನ ವಿಧಿಸಲಾಯಿತು. ಆಗ ನಾವು ತೋರಿದ ದೃಢತೆಯು, ಈ ದೇಶವನ್ನು ಬಗ್ಗಿಸಲು ಹೊರಗಿನವರಿಂದ ಸಾಧ್ಯವಿಲ್ಲ ಎಂಬುದನ್ನು ಸಾಬೀತುಮಾಡಿತು. ಆ ಸಂದರ್ಭದಲ್ಲಿ ರಕ್ಷಣಾ ಕ್ಷೇತ್ರದ ಪ್ರಮುಖ ಯೋಜನೆಗಳು, ಕೆಲವು ಸಂಶೋಧನಾ ಯೋಜನೆಗಳು ವಿಳಂಬ ಆದವು ಎಂಬುದು ನಿಜ. ಆದರೆ, ಆಗ ನಾವು ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸುವತ್ತ ಮುಂದಡಿ ಇಟ್ಟೆವು.

ರಷ್ಯಾದಿಂದ ಕ್ರಯೋಜೆನಿಕ್ ತಂತ್ರಜ್ಞಾನ ಪಡೆಯಬೇಕಿದ್ದ ಇಸ್ರೊ, ದಿಗ್ಬಂಧನದ ನಂತರ ತನ್ನದೇ ಆದ ಕ್ರಯೋಜೆನಿಕ್ ತಂತ್ರಜ್ಞಾನ ಹೊಂದಿರುವ ಉಡಾವಣಾ ವಾಹನ ಅಭಿವೃದ್ಧಿಪಡಿಸಿತು. ಇದು ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು.

ಸ್ವದೇಶಿ ಕ್ರಯೋಜೆನಿಕ್ ತಂತ್ರಜ್ಞಾನ ಬಳಸಿದ ಜಿಎಸ್‌ಎಲ್‌ವಿ ಉಡಾವಣಾ ವಾಹನವನ್ನು 2014ರಲ್ಲಿ ನಭಕ್ಕೆ ಯಶಸ್ವಿಯಾಗಿ ಹಾರಿಬಿಡಲಾಯಿತು.
ಲಘು ಯುದ್ಧ ವಿಮಾನ ‘ತೇಜಸ್‌’ ಅಭಿವೃದ್ಧಿಗೂ ದಿಗ್ಬಂಧನಗಳು ಅಡ್ಡಿಯಾದವು. ಆದರೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತನ್ನದೇ ತಂತ್ರಜ್ಞಾನ ಅಭಿವೃದ್ಧಿಪಡಿಸಿತು. ಈಗ ತೇಜಸ್ ಯುದ್ಧ ವಿಮಾನ ಸ್ವದೇಶಿ ತಂತ್ರಜ್ಞಾನದಿಂದಾಗಿ ಹೆಮ್ಮೆಯಿಂದ ಹಾರಾಟ ನಡೆಸುತ್ತಿದೆ. ಪರಮಾಣು ತಂತ್ರಜ್ಞಾನದಲ್ಲೂ ನಾವು ಸಂಶೋಧನೆ ಕೈಗೊಂಡು, ದಿಗ್ಬಂಧನದ ಅಡಚಣೆಗಳಿಂದ ಹೊರಬಂದೆವು.

ಡಾಲರ್‌ ಮೇಲಿನ ಮೋಹ ಮಾತ್ರವಲ್ಲದೆ, ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಮಾತ್ರ ಮನ್ನಣೆ ನೀಡುವ ಅಮೆರಿಕದ ಉದ್ಯೋಗ ಸಂಸ್ಕೃತಿ ಕೂಡ ಭಾರತೀಯರನ್ನು ಆ ದೇಶದತ್ತ ಸೆಳೆಯುತ್ತದೆ. ದೇಶವನ್ನು ನಿತ್ರಾಣಗೊಳಿಸುತ್ತಿರುವ, ಸೂಪರ್ ಪವರ್ ಆಗದಂತೆ ತಡೆಯುತ್ತಿರುವ ಕೆಲವು ಸಂಗತಿಗಳ ಕಡೆ ಗಮನ ನೀಡಲು ಭಾರತಕ್ಕೆ ಇದು ಸಕಾಲ. ಪ್ರತಿಭೆಗೆ ಮಾತ್ರ ಮನ್ನಣೆ ನೀಡಲು ಇದು ಸುಸಂದರ್ಭ.

ರಾಜಕೀಯ ಇಚ್ಛಾಶಕ್ತಿ ಮತ್ತು ಮೂಲಸೌಕರ್ಯಗಳ ಕೊರತೆ ಕೆಲವು ವಿಶ್ವಮಟ್ಟದ ಕೈಗಾರಿಕೆಗಳು ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸದಂತೆ ಮಾಡಿವೆ. ಹೈದರಾಬಾದ್‌ನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಫ್ಯಾಬ್‌ ಸಿಟಿ ಯೋಜನೆಯನ್ನು ಮೂಲಸೌಕರ್ಯದ ಕೊರತೆಯ ಕಾರಣ 2006ರಲ್ಲಿ ಕೈಬಿಡಬೇಕಾಯಿತು. ಈ ಯೋಜನೆ ಸಾಕಾರಗೊಂಡಿದ್ದರೆ, ಎಲೆಕ್ಟ್ರಾನಿಕ್‌ ಚಿಪ್‌ ತಯಾರಿಕಾ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕ ಆಗುತ್ತಿತ್ತು.

ತೈವಾನ್‌, ಕೊರಿಯಾದಂತಹ ಸಣ್ಣ ರಾಷ್ಟ್ರಗಳೂ ಈ ಕ್ಷೇತ್ರದಲ್ಲಿ ನಮಗಿಂತ ಮುಂದಿವೆ. ಅಮೆರಿಕ ಮೂಲದ ಕಂಪೆನಿಯೊಂದು ಚೆನ್ನೈನಲ್ಲಿ ‘ಕ್ಲೀನ್‌ ರೂಂ’ (ವೈಮಾನಿಕ ಅರೆವಾಹಕಗಳು ಹಾಗೂ ಔಷಧೀಯ ಉತ್ಪನ್ನಗಳನ್ನು ತಯಾರಿಸಲು ಇರುವ ವ್ಯವಸ್ಥೆ) ಸ್ಥಾಪಿಸಿತ್ತು. ಆದರೆ ಕಂಪೆನಿ ಕೊನೆಗೆ ಅದನ್ನು ಸ್ಥಗಿತಗೊಳಿಸಿ, ಗುಜರಿಗೆ ಮಾರಾಟ ಮಾಡಬೇಕಾಯಿತು.

ಸಾಕಷ್ಟು ಸಂಪನ್ಮೂಲ ಇರುವ ಭಾರತದ ಐ.ಟಿ. ಕಂಪೆನಿಗಳು ಈಗ ತುಸು ಕಾಸು ಖರ್ಚು ಮಾಡಬೇಕು. ಅವು ವಿಶ್ವವಿದ್ಯಾಲಯಗಳಲ್ಲಿನ ಶೈಕ್ಷಣಿಕ ವಾತಾವರಣ ಉತ್ತಮಪಡಿಸಲು ನೆರವು ನೀಡಬೇಕು. ಮೂಲಸೌಕರ್ಯ ಅಭಿವೃದ್ಧಿಗೆ ಕಂಪೆನಿಗಳು ಕೈಜೋಡಿಸಬೇಕು.

ಭಾರತವು ತನ್ನಲ್ಲಿನ ಉದ್ಯೋಗ ಸಂಸ್ಕೃತಿ ಸುಧಾರಿಸಿದರೆ, ಶೈಕ್ಷಣಿಕ ಸಂಸ್ಥೆಗಳಲ್ಲಿನ ವಾತಾವರಣ ಉತ್ತಮಪಡಿಸಿದರೆ ಪ್ರತಿಭೆಯನ್ನು ಹಿಡಿದಿಟ್ಟುಕೊಳ್ಳುವುದು ದೊಡ್ಡ ಸಮಸ್ಯೆ ಅಲ್ಲ. ಆಗ, ಜಾಗತಿಕ ಉದ್ದಿಮೆಗಳು ನಮ್ಮ ದೇಶದ ಬಾಗಿಲು ಬಡಿಯುತ್ತವೆ– ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಕಾರ್ಮಿಕರಿಗಾಗಿ ಅಲ್ಲ, ತಂತ್ರಜ್ಞಾನ ಕ್ಷೇತ್ರದ ನಾಯಕರನ್ನು ಬಯಸಿ! ಈಗ ಎದುರಾಗಿರುವ ಅವಕಾಶವನ್ನು ಭಾರತ ಬಳಸಿಕೊಳ್ಳಬೇಕು. ಬದಲಾವಣೆಯ ಬೀಜವನ್ನು ಈಗಲೇ ಬಿತ್ತಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT