ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಉಳಿಸಲು ಆರ್ಥಿಕ ತಜ್ಞರ ಮನಸ್ಸು ಬದಲಿಸಿ

Last Updated 4 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಅಂತರ ರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ವಿಜ್ಞಾನಿ, ಪರಿಸರ ತಜ್ಞ, ಅಮೆರಿಕದ ನ್ಯೂಯಾರ್ಕ್‌ನ ವನ್ಯಜೀವಿ ಸಂರಕ್ಷಣಾ ಸಂಸ್ಥೆ ‘ಪ್ಯಾಂಥೆರಾ’ದ ಉಪಾಧ್ಯಕ್ಷ ಜಾರ್ಜ್‌ ಶಾಲರ್ ಈ ವಾರ ಭಾರತದ ಪ್ರವಾಸದಲ್ಲಿದ್ದಾಗ ಚಿಕ್ಕಮಗಳೂರು ನಗರಕ್ಕೆ (ಫೆ. 2) ಭೇಟಿ ನೀಡಿದ್ದರು.

ಕಳೆದ 6 ದಶಕಗಳಿಂದ ಭಾರತವೂ ಸೇರಿದಂತೆ ಹಲವು ದೇಶಗಳ ಸರ್ಕಾರಗಳಿಗೆ ವನ್ಯಜೀವಿ ಸಂರಕ್ಷಣೆ ಬಗ್ಗೆ ಅವರು ಅಮೂಲ್ಯ ಸಲಹೆ ನೀಡುತ್ತಿದ್ದಾರೆ. ತಮ್ಮನ್ನು ಸಂದರ್ಶಿಸಿದ ‘ಪ್ರಜಾವಾಣಿ’ ಜೊತೆ ಶಾಲರ್‌ ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು  ಹಂಚಿಕೊಂಡಿದ್ದಾರೆ.

* ನೀವು ವಿಶ್ವದ ಹಲವು ಅಭಯಾರಣ್ಯಗಳ ಒಳಹೊಕ್ಕು ನೋಡಿದ್ದೀರಿ, ಅವುಗಳ ಪರಿಸ್ಥಿತಿ ಅರ್ಥೈಸಿಕೊಂಡಿದ್ದೀರಿ. ಈಗಿನ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ನಿಮಗೆ ಭರವಸೆಯ ಬೆಳಕು ಕಾಣಿಸುತ್ತಿದೆಯೇ?
ಭರವಸೆಯೂ ಕಾಣಿಸುತ್ತಿದೆ, ಹಾಗೆಯೇ ಸಮಸ್ಯೆಗಳೂ ಕಣ್ಮುಂದೆಯೇ ಕಾಣುತ್ತಿವೆ. ಮಹಾತ್ಮ ಗಾಂಧಿ ನುಡಿದಂತೆ ‘ನಮ್ಮಲ್ಲಿ ಮೊದಲು ಪರಿವರ್ತನೆಯಾಗಬೇಕು. ಆನಂತರ ಎಲ್ಲರಲ್ಲೂ ಪರಿವರ್ತನೆ ತರಬಹುದು’. ಮುಖ್ಯವಾಗಿ ಜನರ ಮನಪರಿವರ್ತನೆಯಾಗಬೇಕು. ಇದರಲ್ಲಿ ನಿಮ್ಮ (ಮಾಧ್ಯಮಗಳ) ಪಾತ್ರ ಬಹುಮುಖ್ಯ.

ಸ್ವಯಂ ಸೇವಾ ಸಂಸ್ಥೆಗಳೂ ಈ ಕೆಲಸ ಮಾಡಬೇಕು. ಯುವಜನರಲ್ಲಿ ನಿಸರ್ಗದ ಬಗ್ಗೆ ಅರಿವು ಮೂಡಿಸುವ, ಅವರಿಗೆ ತರಬೇತಿ ನೀಡುವ, ಕಾಡು, ವನ್ಯಜೀವಿ ಮಹತ್ವ ಮತ್ತು ಅದರ ಅನಿವಾರ್ಯದ ಬಗ್ಗೆ ತಿಳಿಹೇಳಬೇಕಾಗಿದೆ. ಇದು ತ್ವರಿತಗತಿಯಲ್ಲಿ ಆಗದಿದ್ದರೆ ನಮಗೂ, ಮುಂದಿನ ಪೀಳಿಗೆಗೂ ಭವಿಷ್ಯವೇ ಇಲ್ಲ. ಮೊದಲು ಆರ್ಥಿಕ ತಜ್ಞರ ಮನಸ್ಸು ಬದಲಿಸಬೇಕಾದ ಅನಿವಾರ್ಯ ಇದೆ.

ಭಾರತದಂತಹ ದೇಶದಲ್ಲೂ ಜಿಡಿಪಿ ಬಗ್ಗೆಯೇ ಹೆಚ್ಚು ಚಿಂತನೆ ನಡೆದಿದೆ. ಜಿಡಿಪಿ ಅಂದರೆ ಅಭಿವೃದ್ಧಿ ಎಂದೇ ಅರ್ಥೈಸುತ್ತಿದ್ದಾರೆ. ನಿಸರ್ಗ ನಾಶ ಮಾಡಿಯಾದರೂ ಅಭಿವೃದ್ಧಿ ಮಾಡಬೇಕೆಂಬ ಧೋರಣೆ ಹೆಚ್ಚುತ್ತಿದೆ. ಒಮ್ಮೆ ನಿಸರ್ಗ ನಾಶವಾದರೆ ಮತ್ತೆ ಅದನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

* ನಿಮ್ಮ ದೃಷ್ಟಿಯಲ್ಲಿ ವಿಶ್ವದ ಯಾವ ಅರಣ್ಯ ಅತ್ಯಂತ ಉತ್ತಮ ಸಂರಕ್ಷಿತ ತಾಣವೆನಿಸಿದೆ?
ವನ್ಯಜೀವಿಗಳನ್ನು ಆಧರಿಸಿ ಹೇಳುವುದಾದರೆ, ಭಾರತದ ಅಭಯಾರಣ್ಯಗಳು ವನ್ಯಜೀವಿಗಳ ಸಮೃದ್ಧತೆ ಹೊಂದಿವೆ. ಅದಕ್ಕಾಗಿಯೇ ಖ್ಯಾತಿ ಗಳಿಸಿವೆ. ವೈವಿಧ್ಯಮಯ ಪ್ರಾಣಿ ಸಂಕುಲ ಈ ದೇಶದಲ್ಲಿದೆ. ಆದರೂ ಇಲ್ಲೂ ಕೆಲವು ಸಮಸ್ಯೆಗಳಿವೆ. ಮಧ್ಯಪ್ರದೇಶದ ಪನ್ನಾದಲ್ಲಿ ಸುಮಾರು 200 ಚದರ ಕಿಲೊ ಮೀಟರ್‌ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವ ಪ್ರಯತ್ನ ನಡೆದಿದೆ. ಜನ ಈ ಪ್ರದೇಶವನ್ನು ಉಳಿಸಿಕೊಳ್ಳಬೇಕಿದೆ. 1962ರಲ್ಲಿ ನಾನು ಪಲಮಾವ್‌ ಮತ್ತು ಹಜಾರಿಬಾಗ್ ಅರಣ್ಯಗಳಲ್ಲಿ ಸುತ್ತಾಡಿದ್ದೆ. ಆಗ ಅವು ಅತ್ಯುತ್ತಮ ಅರಣ್ಯಗಳಾಗಿದ್ದವು. ಆದರೆ ಇಂದು ತೆಳುವಾಗಿವೆ.

* 1962ರಿಂದ ಈವರೆಗೂ ಭಾರತವನ್ನು ಹತ್ತಿರದಿಂದ ನೋಡುತ್ತಿದ್ದೀರಿ. ಈಗ ನಿಮಗೆ ಏನನ್ನಿಸುತ್ತಿದೆ?
ಆಗ ದೇಶದ ಜನಸಂಖ್ಯೆ ಕಡಿಮೆ ಇತ್ತು. ಈಗ ದ್ವಿಗುಣಗೊಂಡಿದೆ. ಹಿಂದೆ ಪರಿಸರದ ಬಗ್ಗೆ ಯೋಚಿಸುವವರ ಸಂಖ್ಯೆ ಕಡಿಮೆ ಇತ್ತು. ಸಲೀಂ ಅಲಿ ಅವರಂತಹ ಕೆಲವೇ ಜನರು ಪರಿಸರದ ಬಗ್ಗೆ ಚಿಂತಿಸುತ್ತಿದ್ದರು. ವನ್ಯಜೀವಿಗಳ ಬಗ್ಗೆ ಅಷ್ಟೊಂದು ಕಾಳಜಿ ಕಾಣಿಸುತ್ತಿರಲಿಲ್ಲ. ನೂರಾರು ಸಂಖ್ಯೆಯಲ್ಲಿ ವನ್ಯಜೀವಿಗಳನ್ನು ಬೇಟೆಯಾಡುವುದು ಬೇಟೆಗಾರರಿಗೆ ಹೆಗ್ಗಳಿಕೆಯ ಮಾತಾಗಿತ್ತು. ನೂರಾರು ಹುಲಿಗಳನ್ನು ಕೊಂದು, ಕೊರಳಿಗೆ ಹಾರ ಹಾಕಿಸಿಕೊಂಡು ಸನ್ಮಾನ ಮಾಡಿಸಿಕೊಳ್ಳುತ್ತಿದ್ದರು. ಅದನ್ನೊಂದು ಕ್ರೀಡೆ ಹಾಗೂ ಸ್ಪರ್ಧೆ ಎಂದೇ ಭಾವಿಸಿದ್ದರು.

ನಂತರದ ದಿನಗಳಲ್ಲಿ ವನ್ಯಜೀವಿ ಮತ್ತು ಅರಣ್ಯಗಳ ಬಗ್ಗೆ ಯೋಚಿಸುವವರು ಹೆಚ್ಚಾದರು. ಡಾ. ಉಲ್ಲಾಸ ಕಾರಂತ ಭಾರತಕ್ಕೆ ಸೀಮಿತರಾಗದೆ, ವಿಶ್ವ ಮಾನ್ಯತೆ ಪಡೆದರು. ಹುಲಿ ಅಧ್ಯಯನ, ಹುಲಿ ಸಂರಕ್ಷಣೆ ಬಗ್ಗೆ ಅವರು ಕಂಡುಕೊಂಡ ತಂತ್ರಜ್ಞಾನ, ಕೊಡುವ ತರಬೇತಿ  ಹೆಚ್ಚು ಯುವಜನರು ಪರಿಸರ ಸಂರಕ್ಷಣೆಯತ್ತ ಮುಖಮಾಡುವಂತೆ, ವನ್ಯಜೀವಿಗಳ ಬಗ್ಗೆಯೂ ಯೋಚಿಸುವಂತೆ ಮಾಡಿವೆ.

* ರಾಜಕಾರಣಿಗಳಿಗೆ ವನ್ಯಜೀವಿ ಮತ್ತು ಪರಿಸರದ ಅರಿವಿನ ಕೊರತೆ ಇದೆ ಅನ್ನಿಸುತ್ತಿದೆಯೇ?
ರಾಜಕಾರಣಿಗಳೆಂದರೆ ಯಾರು? ಒಂದೋ ಅವರು ವ್ಯಾಪಾರೋದ್ಯಮಿಗಳಾಗಿರುತ್ತಾರೆ, ಇಲ್ಲವೇ ವ್ಯಾಪಾರಿ ಬುದ್ಧಿಯುಳ್ಳವರೇ ಆಗಿರುತ್ತಾರೆ. ನಮ್ಮ ಜನ ಪ್ರಜಾಪ್ರಭುತ್ವದಲ್ಲಿ ಅಂತಹವರನ್ನೇ ಅಲ್ಲವೇ ಹೆಚ್ಚಾಗಿ ಆಯ್ಕೆ ಮಾಡುತ್ತಿರುವುದು. ರಾಜಕಾರಣಿಗಳಿಗೆ ಪರಿಸರ, ವನ್ಯಜೀವಿ ಸಂರಕ್ಷಣೆ ಕಾಳಜಿ ಅರ್ಥವಾಗುವುದಿಲ್ಲವೆಂದು ಹೇಳುತ್ತಿಲ್ಲ. ಆದರೆ, ಅವರು ಅರ್ಥ ಮಾಡಿಕೊಳ್ಳಲು ಮುಂದಾಗುತ್ತಿಲ್ಲ. ಅವರಿಗೆ ಗೊತ್ತಿರುವುದು ಅಭಿವೃದ್ಧಿ... ಅಭಿವೃದ್ಧಿ ಮಂತ್ರ ಅಷ್ಟೆ. ಅವರಿಂದಾಗಿ, ದಟ್ಟ ಕಾಡಿನಲ್ಲಿ ಪರಿಸರ ವಿನಾಶಗೊಳಿಸುವಂತಹ ದೊಡ್ಡ ಅಣೆಕಟ್ಟೆ ನಿರ್ಮಾಣ, ರಸ್ತೆಗಳ ನಿರ್ಮಾಣ ಮಾಡುವ ಒತ್ತಾಯ ಹಾಗೂ ಒತ್ತಡ ಹೆಚ್ಚುತ್ತಿದೆ.

* ಪರಿಸರ ಪ್ರವಾಸೋದ್ಯಮದ ಬಗ್ಗೆ ನಿಮ್ಮ ನಿಲುವು ಏನು?
ಪರಿಸರ ಪ್ರವಾಸೋದ್ಯಮವನ್ನು ಬೇಡವೆನ್ನಲಾಗದು. ಅದಕ್ಕೆ ಸ್ವಲ್ಪ ನಿಯಂತ್ರಣವೂ ಬೇಕು. ಒಂದು ಕಾಡಿನ ಎಲ್ಲಾ ಸ್ಥಳಗಳನ್ನು ವೀಕ್ಷಣೆಗೆ ತೆರೆದಿಡಲೇಬಾರದು. ಮುಖ್ಯವಾಗಿ ಪ್ರವಾಸೋದ್ಯಮದಿಂದ ಬರುವ ಆದಾಯದ ಹೆಚ್ಚಿನ ಭಾಗವನ್ನು ಅರಣ್ಯದ ಸುತ್ತಲಿರುವ ಸಮುದಾಯದ ಕಲ್ಯಾಣ ಕಾರ್ಯಕ್ರಮಗಳಿಗೆ ಉಪಯೋಗಿಸಬೇಕು. ಹೀಗಾದಾಗ ಆ ಸಮುದಾಯ ಕಾಡು ಹಾಗೂ ಕಾಡು ಪ್ರಾಣಿಗಳ ರಕ್ಷಣೆಗೆ ಮುಂದಾಗುತ್ತದೆ.
ಆಫ್ರಿಕಾದಲ್ಲಿ ಇಂತಹ ಪದ್ಧತಿ ಜಾರಿಯಲ್ಲಿದೆ.

ಹಿಂದೆ ಅಲ್ಲಿ ಜನ ಕಾಡಿಗೆ ಹೋಗಿ ಮರ ಕಡಿಯುವುದು, ಬೇಟೆಯಾಡುವುದು ಮತ್ತು ಪ್ರಾಣಿಗಳಿಗೆ ಉರುಳು ಹಾಕಿ ಬೇಟೆಯಾಡುವುದು ಹೆಚ್ಚಾಗಿತ್ತು. ಆಗ ಪ್ರವಾಸೋದ್ಯಮದಿಂದ ಬಂದ ಹಣವನ್ನು ಜನರ ಕಲ್ಯಾಣಕ್ಕೆ ವಿನಿಯೋಗಿಸಲು ಸರ್ಕಾರ ನಿರ್ಧರಿಸಿತು. ಅದರ ಪರಿಣಾಮ ಜನರೇ ಅರಣ್ಯ ಸಂರಕ್ಷಣೆಗೆ ಮುಂದಾದರು. ಈ ರೀತಿಯ ಪ್ರಯೋಗಗಳು ಫಲ ನೀಡುತ್ತವೆ. ಭಾರತದ ರಣತಂಬೂರ್‌ನಲ್ಲಿ ಇಂತಹುದೇ ಪ್ರಯೋಗ ಕೈಗೊಂಡರೂ ಅಲ್ಲಿ ಸೌಲಭ್ಯ ಪಡೆದು ಜನ ಕಾಡು ರಕ್ಷಿಸಲು ಮುಂದಾಗದೆ ಇರುವ ವಿಷಾದದ ನಿದರ್ಶನವೂ ಇದೆ.

* ಭಾರತದ ಅರಣ್ಯ ಹಕ್ಕು ಕಾಯ್ದೆ ಅರಣ್ಯ ರಕ್ಷಣೆಗೆ ಪೂರಕವೇ ಅಥವಾ ಮಾರಕವೇ?
ಅರಣ್ಯದೊಳಗೆ ಕೃಷಿ, ತೋಟಗಾರಿಕೆ ಮಾಡಲು ಒಮ್ಮೆ ಅವಕಾಶ ನೀಡಿದರೆ ಸಣ್ಣಪುಟ್ಟ ಅರಣ್ಯಗಳು ಛಿದ್ರಗೊಳ್ಳುವುದು ಖಚಿತ. ಅದರ ಬದಲು ಅರಣ್ಯವಾಸಿಗಳಿಗೆ ಬೇರೆ ರೀತಿಯಲ್ಲಿ ಆದಾಯ ಸಂಪಾದನೆಗೆ ಮಾರ್ಗ ಹುಡುಕಿಕೊಡಬೇಕು. ಅರಣ್ಯವನ್ನು ಪೂರ್ಣವಾಗಿ ತೆರೆದಿಟ್ಟರೆ ಕಾಡು ಮತ್ತು ವನ್ಯಜೀವಿಗಳೆರಡೂ ನಾಶವಾಗುತ್ತವೆ. ದಟ್ಟಾರಣ್ಯಗಳು ವನ್ಯಜೀವಿಗಳ ಬದುಕಿಗೆ ಮೀಸಲಿರಬೇಕು.

* ಮಾನವ ಮತ್ತು ವನ್ಯಜೀವಿ ಸಂಘರ್ಷದ ಬಗ್ಗೆ ಏನು ಹೇಳುತ್ತೀರಿ? ವನ್ಯಜೀವಿ ಸ್ಥಳಾಂತರ ಕ್ರಮ ಸರಿಯೇ?
ಇದನ್ನು ಸಾರ್ವಜನಿಕರು ಒಟ್ಟಾಗಿ ಕುಳಿತು ಯೋಚಿಸಬೇಕು. ಒಂದು ಹುಲಿ ನರಭಕ್ಷಕವಾದರೆ ಅದನ್ನು ಕೊಲ್ಲುವುದು ಅನಿವಾರ್ಯ. ಈ ಸಂಘರ್ಷ ತಡೆಯಲು ಮುಂದಾಲೋಚನೆ ಬೇಕು. ವನ್ಯಪ್ರಾಣಿಯಿಂದ ಜೀವ ಹಾನಿ, ಬೆಳೆ ಹಾನಿ ಆದಾಗ ನಗದು ಪರಿಹಾರ ನೀಡುವುದು ಒಂದು ಒಳ್ಳೆಯ ಪರಿಹಾರ ಮಾರ್ಗ. ಇನ್ನು ವನ್ಯಜೀವಿಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವುದು ಅಷ್ಟೇನೂ ಪ್ರಯೋಜನಕಾರಿಯಲ್ಲ.

* ಶಾಲಾ ಶಿಕ್ಷಣದಲ್ಲಿ ಪರಿಸರವನ್ನು ಪಠ್ಯ ವಿಷಯವಾಗಿಸುವ ಅನಿವಾರ್ಯ ಇದೆಯೇ?
ನನಗೆ ಭಾರತದ ಶಿಕ್ಷಣ ಪದ್ಧತಿ ಮತ್ತು ಶಿಕ್ಷಣ ನೀತಿಯ ಬಗ್ಗೆ ಅಷ್ಟಾಗಿ ಅರಿವಿಲ್ಲ. ಆದರೆ 6, 7, 8ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಪರಿಣಾಮಕಾರಿ ಶಿಕ್ಷಣ ನೀಡಬೇಕು. ಗಾಂಧೀಜಿಯವರು ಹೇಳಿದಂತೆ ‘ಪರಿಸರ ನಮ್ಮ ಅಗತ್ಯಕ್ಕಿದೆಯೇ ಹೊರತು, ನಮ್ಮ ಅತಿಯಾಸೆ ಪೂರೈಸಲು ಅಲ್ಲ’ ಎಂಬುದನ್ನು ಬಾಲ್ಯಾವಸ್ಥೆಯಲ್ಲೇ ಅರ್ಥ ಮಾಡಿಸಬೇಕು.

* ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆ ನಿಟ್ಟಿನಲ್ಲಿ ಭಾರತ ಸರ್ಕಾರಕ್ಕೆ ನಿಮ್ಮ ಸಲಹೆ?
ಒಂದು ದೇಶದ ಆರೋಗ್ಯಕರ ಭವಿಷ್ಯಕ್ಕೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಅತ್ಯಗತ್ಯ. ದೇಶದ ಸಮೃದ್ಧಿ ನಿಸರ್ಗದ ಸಂರಕ್ಷಣೆಯನ್ನು ಅವಲಂಬಿಸಿದೆ. ಜನಜೀವನ ಉಳಿಯಬೇಕಾದರೆ ಕಾಡು ಮತ್ತು ನದಿ ಎರಡೂ ಜೀವಂತವಾಗಿರಬೇಕು. ಮೊದಲು ದೇಶದ ನದಿಗಳನ್ನು ಶುದ್ಧವಾಗಿಡಬೇಕು. ಅರಣ್ಯವನ್ನು ಜೀವಂತವಾಗಿಡಬೇಕು. ಇದನ್ನು ದೇಶದ ಚುಕ್ಕಾಣಿ ಹಿಡಿದಿರುವವರು ಅರ್ಥ ಮಾಡಿಕೊಳ್ಳಬೇಕು.

* ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಜಾಗತಿಕ ಧೋರಣೆ ಯಾವ ರೀತಿ ಇದೆ? ಅಮೆರಿಕದ ನೀತಿಗಳು ಯಾವ ರೀತಿ ಪ್ರಭಾವ ಬೀರುತ್ತಿವೆ?
ವಿಶ್ವದಾದ್ಯಂತ ಹಲವು ದೇಶಗಳು ಅಭಿವೃದ್ಧಿ ಮಂತ್ರ ಜಪಿಸುತ್ತಾ ಅರಣ್ಯವನ್ನು ತೆಳುವಾಗಿಸುವ ಹಾಗೂ ಕೆಲವೆಡೆ ನಾಶ ಮಾಡುವ ಕೆಲಸವನ್ನು ಅನಿಯಂತ್ರಿತವಾಗಿ ನಡೆಸುತ್ತಿವೆ. ಏರುತ್ತಿರುವ ಜನಸಂಖ್ಯೆಗೆ ಆಹಾರ ಹಾಗೂ ವಸತಿ ಸೌಲಭ್ಯ ನೀಡಲು ಪರಿಸರವನ್ನು ಬಲಿಕೊಡಲಾಗುತ್ತಿದೆ. ಆದರೆ ಈ ನಿಸರ್ಗದ ಮೇಲೆ ನಮ್ಮ ಭವಿಷ್ಯ ನಿಂತಿದೆ. ಆರೋಗ್ಯಪೂರ್ಣ ಪರಿಸರವಿಲ್ಲದೆ ಆಹಾರ ಸೇರಿದಂತೆ ಜನಸಂಖ್ಯೆಗೆ ಏನನ್ನೂ ಒದಗಿಸಲು ಸಾಧ್ಯವಿಲ್ಲ.

ಕೆಲವು ದೇಶಗಳು ತಮ್ಮ ಪ್ರಭಾವವನ್ನು ತಾವು ಅನುಸರಿಸುವ, ಹೇರುವ ನೀತಿಗಳಿಂದಾಗಿ ಕಳೆದುಕೊಳ್ಳುತ್ತಿವೆ. ಇಂದು ಚೀನಾ ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಹಾಗೆಯೇ ಭಾರತ ಕೂಡ ಪ್ರಭಾವಶಾಲಿಯಾಗುತ್ತಿದೆ. ಹುಲಿ ಸಂರಕ್ಷಣೆಗೆ ಚೀನಾ ಹೆಚ್ಚು ಹಣ ಮೀಸಲಿಡುತ್ತಿದೆ. 1980ರಲ್ಲಿ ಚೀನಾಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಕೇವಲ 13 ಸಂರಕ್ಷಿತ ಅರಣ್ಯ ಪ್ರದೇಶಗಳು ಇದ್ದವು. ಇಂದು ಅವುಗಳ ಸಂಖ್ಯೆ 3 ಸಾವಿರಕ್ಕೇರಿದೆ.

ರಕ್ಷಿತಾರಣ್ಯದ ಪ್ರದೇಶ ಅಲ್ಲಿ ಶೇ 15ರಷ್ಟಿದ್ದರೆ, ಭಾರತದಲ್ಲಿ ಶೇ 5ರಷ್ಟಿದೆ. ಅಮೆರಿಕದಲ್ಲೂ ವಿಶಾಲವಾದ ಸಂರಕ್ಷಿತ ಅರಣ್ಯಗಳಿವೆ. ಆದರೆ ನಮ್ಮಲ್ಲಿನ ರಾಜಕಾರಣಿಗಳು ಅವುಗಳನ್ನು ಹಾಗೆಯೇ ಇರಲು ಬಿಡುತ್ತಾರೆಯೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.                                                    

ವನ್ಯಜೀವಿ ಸಂರಕ್ಷಕರ ದಿಗ್ದರ್ಶಕ!
ವಿಶ್ವದ ಹಲವು ರಾಷ್ಟ್ರಗಳ ಪ್ರಮುಖ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳಲ್ಲಿ ವನ್ಯಜೀವಿಗಳ ಬಗ್ಗೆ ಜಾರ್ಜ್‌ ಶಾಲರ್‌ ಅಧ್ಯಯನ ನಡೆಸಿದ್ದಾರೆ. ಪರಿಸರ, ವನ್ಯಜೀವಿಗಳ ಕುರಿತು ಅವರು 16ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಹಲವು ರಾಷ್ಟ್ರಗಳಲ್ಲಿ ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನಗಳ ಉಳಿವಿಗೂ ಪ್ರೇರಕಶಕ್ತಿಯಾಗಿದ್ದಾರೆ. ಅವರ ಸಂಶೋಧನಾ ಪ್ರಬಂಧಗಳು ಪ್ರಖ್ಯಾತ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗಿ ವಿಶ್ವದ ಜನರ ಗಮನ ಸೆಳೆದಿವೆ.

ವಿವಿಧ ರಾಷ್ಟ್ರಗಳನ್ನು ಸುತ್ತಿ, 72ಕ್ಕೂ ಹೆಚ್ಚು ವನ್ಯಜೀವಿ ಪ್ರಭೇದಗಳ ಮೇಲೆ ದೀರ್ಘಾವಧಿ ಸಂಶೋಧನೆ ನಡೆಸಿದ ಮೊತ್ತಮೊದಲ ವನ್ಯಜೀವಿ ವಿಜ್ಞಾನಿ ಎನ್ನುವ ಶ್ರೇಯ ಅವರದು. ಶಾಲರ್‌ ಅವರಿಗೆ ಜೀವಮಾನ ಸಾಧನೆಗಾಗಿ 2007ರಲ್ಲಿ ‘ನ್ಯಾಷನಲ್‌ ಜಿಯಾಗ್ರಫಿಕ್‌ ಅವಾರ್ಡ್‌’ ಸಿಕ್ಕಿದೆ. 1973ರಲ್ಲಿ ಅವರು ರಚಿಸಿದ ‘ಸೆರಿಂಗಿಟಿ ಲಯನ್’ ಮತ್ತು 1978ರಲ್ಲಿ ಬರೆದ ‘ಸ್ನೋ ಲೆಪರ್ಡ್‌’ ಪುಸ್ತಕಗಳು ‘ನ್ಯಾಷನಲ್‌ ಬುಕ್‌ ಅವಾರ್ಡ್‌’ಗೂ ಪಾತ್ರವಾಗಿವೆ.

ವನ್ಯಜೀವಿ ಸಂರಕ್ಷಣೆಯ ಮಹತ್ವ, ಪರಿಸರದ ಉಳಿವಿನ ಬಗ್ಗೆ ಜನಸಾಮಾನ್ಯರಿಗೂ ಅರ್ಥವಾಗುವಂತೆ, ಹೃದಯತಟ್ಟುವಂತಹ ಬರಹಗಳ ಮೂಲಕ ಅವರು ಚಿರಪರಿಚಿತರು. ಪ್ರಪಂಚದಾದ್ಯಂತ ಇರುವ ವನ್ಯಜೀವಿ ಸಂರಕ್ಷಕರಿಗೆ ಶಾಲರ್‌ ಒಂದರ್ಥದಲ್ಲಿ ದಿಗ್ದರ್ಶಕ!

1933ರಲ್ಲಿ ಜರ್ಮನಿಯಲ್ಲಿ ಹುಟ್ಟಿದ ಶಾಲರ್‌, ಕುಟುಂಬದ ಜತೆಗೆ ಅಮೆರಿಕಕ್ಕೆ ವಲಸೆ ಹೋದವರು. 20ರ ಹರೆಯದಲ್ಲಿರುವಾಗಲೇ ಅಮೆರಿಕದ 5 ಲಕ್ಷ ಚದರ ಕಿ.ಮೀ. ವ್ಯಾಪ್ತಿಯ ಅಲಾಸ್ಕ ಉದ್ಯಾನದಲ್ಲಿ ಮೊದಲು ವನ್ಯಜೀವಿಗಳ ಬಗ್ಗೆ ಅಧ್ಯಯನ ಆರಂಭಿಸಿದರು.

ಬ್ರೆಜಿಲ್‌ ಚಿರತೆ ಪ್ರಭೇದದ ಜಾಗ್ವಾರ್, ಆಫ್ರಿಕಾದಲ್ಲಿನ ಸಿಂಹ ಮತ್ತು ಕಾಂಗೊದಲ್ಲಿ ಮೌಂಟನ್‌ ಗೊರಿಲ್ಲಾ, ಭಾರತದಲ್ಲಿ ಹುಲಿ, ಹಿಮಾಲಯದಲ್ಲಿನ ಬೆಟ್ಟದ ಆಡು, ಚೀನಾದಲ್ಲಿ ಪಾಂಡ, ಟಿಬೆಟ್ ಪ್ರಾಂತ್ಯದಲ್ಲಿ ಚಿರು ಮುಂತಾದ ಪ್ರಾಣಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. 83ರ ಹರೆಯದಲ್ಲೂ ಸಂಶೋಧನೆ ಮುಂದುವರಿಸಿದ್ದು, ಸದ್ಯ ಇರಾನ್‌ನಲ್ಲಿ ಅಳಿವಿನಂಚಿನಲ್ಲಿರುವ ಏಷ್ಯಾಟಿಕ್‌ ಚೀತಾ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT