ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಕೃಷ್ಣ– ಬಲರಾಮರ ರಥಯಾತ್ರೆ

ರಥ ಎಳೆದ ನೂರಾರು ಭಕ್ತರು
Last Updated 4 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಸ್ಕಾನ್‌ ವತಿಯಿಂದ ನಗರದಲ್ಲಿ 15ನೇ ವಾರ್ಷಿಕ ಶ್ರೀ ಕೃಷ್ಣ ಬಲರಾಮರ ರಥಯಾತ್ರೆಯನ್ನು ಶನಿವಾರ ಆಯೋಜಿಸಲಾಗಿತ್ತು. ‘ಹರೇ ಕೃಷ್ಣ ಹರೇ ಕೃಷ್ಣ’ ಮಂತ್ರ ಜಪದೊಂದಿಗೆ ನೂರಾರು ಭಕ್ತರು ರಥ ಎಳೆದರು.

ವಿವಿಧ ಹೂವು, ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಶ್ರೀಕೃಷ್ಣ ಬಲರಾಮರ ಮೂರ್ತಿಇರಿಸಲಾಗಿತ್ತು.

ದುರ್ಗದಬೈಲ್‌ನಲ್ಲಿ ಆರಂಭಗೊಂಡ ರಥಯಾತ್ರೆಗೆ ಭಕ್ತಾದಿಗಳು ಅಲ್ಲಿ ಪೂಜೆ ನೆರವೇರಿಸಿದರು. ರಥಯಾತ್ರೆ ಗೊಂಬೆಕುಣಿತದ ಮೆರವಣಿಗೆಯಲ್ಲಿ ಸಾಗಿತು. ಕೀಲು ಕುದುರೆ, ಬೆದರು ಬೊಂಬೆ ಗಮನಸೆಳೆದವು. ಒಂದು ಕಡೆ ಮಹಿಳೆಯರು, ಇನ್ನೊಂದು ಕಡೆ ಪುರುಷರು ಹಗ್ಗ ಜಗ್ಗಿ ರಥ ಎಳೆದರು.

ಬ್ರಾಡ್‌ ವೇ, ಮರಾಠಾ ಗಲ್ಲಿ, ಸ್ಟೇಷನ್‌ ರಸ್ತೆ, ಲ್ಯಾಮಿಂಗ್ಟನ್‌ ರಸ್ತೆ, ಕೊಪ್ಪಿಕರ ರಸ್ತೆ, ವಿಕ್ಟೋರಿಯಾ ರಸ್ತೆ, ಪದ್ಮಾ ಚಿತ್ರಮಂದಿರ, ದಾಜಿಬಾನ್‌ ಪೇಟೆ, ಚನ್ನಮ್ಮ ವೃತ್ತ, ಹಳೆ ಬಸ್‌ ನಿಲ್ದಾಣ ಮೂಲಕ ಕ್ರಮಿಸಿದ ರಥಯಾತ್ರೆ  ಇಂದಿರಾಗಾಂಧಿ ಗಾಜಿನ ಮನೆ ಬಳಿ ಮುಕ್ತಾಯವಾಯಿತು.

ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಇಸ್ಕಾನ್‌ ಬೆಂಗಳೂರಿನ ಮುಖ್ಯಸ್ಥ ಮಧುಪಂಡಿತ ದಾಸ, ‘ಇಸ್ಕಾನ್‌ನಲ್ಲಿ ನಾವು ಯಾರನ್ನೂ ಪರಿವರ್ತನೆ ಮಾಡುವುದಿಲ್ಲ. ಆಧ್ಯಾತ್ಮಿಕ ಶಿಕ್ಷಣ ನೀಡಿ ಜನರ ಸಮಸ್ಯೆಗೆ  ಶಾಶ್ವತ ಪರಿಹಾರ ನೀಡುತ್ತೇವೆ’ ಎಂದರು.

‘ಜನರಲ್ಲಿ ಜಾಗೃತಿ ಮೂಡಿಸಿ, ಪ್ರತಿಯೊಬ್ಬರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದೇವೆ. ಅವರಿಗಿರುವ ಸಮಸ್ಯೆಗಳಿಗೆ ಪರಿಹಾರವನ್ನು ಅವರೇ ಕಂಡುಕೊಳ್ಳುವಂತೆ ಮಾಡುತ್ತೇವೆ. ಶ್ರೀಕೃಷ್ಣನನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುವ ಮಾರ್ಗವನ್ನು ಪಸರಿಸುತ್ತೇವೆ’ ಎಂದರು.

‘ಇಸ್ಕಾನ್‌ನ ಶ್ರೀಲ ಪ್ರಭುಪಾದರು ಆರಂಭಿಸಿದ ರಥಯಾತ್ರೆಯು ಈಗ ವಿಶ್ವದ 300 ನಗರಗಳಲ್ಲಿ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ಇಸ್ಕಾನ್‌ ದೇವಸ್ಥಾನ ಇನ್ನೆರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ.  ಬೆಂಗಳೂರಿನ ಇಸ್ಕಾನ್‌ಗೆ ಪ್ರತಿನಿತ್ಯ 10 ಸಾವಿರ ಜನರು ಬರುತ್ತಾರೆ. ಹುಬ್ಬಳ್ಳಿಯಲ್ಲೂ ಸಾವಿರಾರು ಭಕ್ತರು ಬರಲಿದ್ದಾರೆ’ ಎಂದರು.

ಇಸ್ಕಾನ್‌ ಹುಬ್ಬಳ್ಳಿ ಘಟಕದ ಅಧ್ಯಕ್ಷ ರಾಜೀವ ಲೋಚನ ದಾಸ, ಅಭಿನವ ಸ್ವಾಮೀಜಿ ಪಂಡಿತ ರವಿ ಆಚಾರ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT