ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಡಿಆರ್‌ಎಸ್‌ ಏಕೆ ಬೇಕು ಗೊತ್ತಾ?

Last Updated 5 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಯುಡಿಆರ್‌ಎಸ್‌ ಜಾರಿಗೆ ಬಂದರೆ ಅದು ಅಂಪೈರ್‌ಗಳಿಗೆ ಮಾಡಿದ ಅವಮಾನ ಎಂದು ಟೀಕಿಸುತ್ತಿದ್ದವರು ಈಗ ಸುಮ್ಮನಾಗಿದ್ದಾರೆ. ಇದರ ಅಗತ್ಯತೆ ಎಷ್ಟೆಂಬುದು ಮನವರಿಕೆಯಾಗಿದೆ. ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ಗೆ ಸೀಮಿತವಾಗಿರುವ ಹೊಸ ಪದ್ಧತಿ ಟ್ವೆಂಟಿ–20 ಪಂದ್ಯಗಳಿಗೂ ಅಳವಡಿಸಲಿ ಎನ್ನುವ ಕೂಗು ಬಲ ಪಡೆದುಕೊಳ್ಳುತ್ತಿದೆ. ಇದರ ಬಗ್ಗೆ   ಪ್ರಮೋದ ಜಿ.ಕೆ. ವಿಶ್ಲೇಷಿಸಿದ್ದಾರೆ.

ಆರೇಳು ವರ್ಷಗಳ ಹಿಂದೆ ಟೆಸ್ಟ್‌ ಮತ್ತು ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿ (ಯುಡಿಆರ್‌ಎಸ್‌) ಜಾರಿಗೆ ತರಬೇಕು ಎನ್ನುವುದರ ಬಗ್ಗೆ ಯೋಜನೆ ರೂಪಿಸುತ್ತಿದ್ದ ದಿನಗಳವು. ಆದರೆ ಜಾರಿಗೆ ಬರುವ ಮುನ್ನವೇ ಹೊಸ ನಿಯಮಗಳು ಸಾಕಷ್ಟು ವಿರೋಧಗಳನ್ನು ಎದುರಿಸಿದವು. ಮನುಷ್ಯನ ನಿರ್ಧಾರವನ್ನು ತಂತ್ರಜ್ಞಾನದ ಕೈಯಲ್ಲಿ ಒಪ್ಪಿಸುವುದು ಅಂಪೈರ್‌ಗಳಿಗೆ ಮಾಡಿದ ಅವಮಾನ ಎಂದು ಅನೇಕ ಹಿರಿಯ ಕ್ರಿಕೆಟಿಗರು ಟೀಕಿಸಿದ್ದರು. ವೆಸ್ಟ್‌ ಇಂಡೀಸ್ ತಂಡದ ಮಾಜಿ ಆಟಗಾರ ಜೋಯ್‌ ಗಾರ್ನರ್‌ ಯುಡಿಆರ್‌ಎಸ್ ಎನ್ನುವುದೇ ‘ದೊಡ್ಡ ತಮಾಷೆ. ಇದೊಂದು ಗಿಮಿಕ್‌’ ಎಂದು ಜರೆದಿದ್ದರು.

ಹೀಗೆ ಹಲವು ವಿವಾದಗಳನ್ನು ಬೆನ್ನಿಗೆ ಕಟ್ಟಿಕೊಂಡೇ ಬಂದ ಕ್ರಿಕೆಟ್‌ನ ಹೊಸ ಪದ್ಧತಿ ಈಗ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಟೆಸ್ಟ್‌ ಆಡುವ ಬಹುತೇಕ ತಂಡಗಳ ನಾಯಕರುಗಳು ಮತ್ತು ಪ್ರಮುಖ ಆಟಗಾರರು ಯುಡಿಆರ್‌ಎಸ್ ಎಲ್ಲಾ ಮಾದರಿಗಳ ಲ್ಲಿಯೂ ಇದ್ದರೆ ಸ್ಪರ್ಧಾತ್ಮಕತೆ ಹೆಚ್ಚಾಗುತ್ತದೆ ಎಂದಿದ್ದಾರೆ.
ಅದರಲ್ಲಿಯೂ ಹೋದ ವಾರ ಮುಗಿದ ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯ ವೇಳೆ ನಡೆದ ಹಲವು ಘಟನೆಗಳು ಯುಡಿಆರ್‌ಎಸ್ ಮಹತ್ವ ಏನೆಂಬುದನ್ನು  ಸಾರಿ ಹೇಳಿವೆ.

ಮೂರು ತಿಂಗಳು ಭಾರತದ ಪ್ರವಾಸದಲ್ಲಿದ್ದ ಆಂಗ್ಲರ ತಂಡ ಐದು ಟೆಸ್ಟ್‌ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಗಳನ್ನು ಆಡಿತು. ಈ ಎರಡೂ ಸರಣಿಗಳಲ್ಲಿ ಯುಡಿಆರ್‌ಎಸ್ ಇತ್ತು. ಆದ್ದರಿಂದ ಸಂಶಯಾಸ್ಪದ ಎನಿಸುವ ಅಂಪೈರ್‌ಗಳ ತೀರ್ಪುಗಳನ್ನು ಪ್ರಶ್ನಿಸಲು ಅವಕಾಶವಿತ್ತು. ಆದ್ದರಿಂದ ಉಭಯ ತಂಡಗಳಿಗೂ ಅಂಪೈರ್‌ ತೀರ್ಪುಗಳ ವಿಷಯದಲ್ಲಿ ಅನ್ಯಾಯವಾಗುವ ಪ್ರಶ್ನೆಯೇ ಬರಲಿಲ್ಲ.

ಆದರೆ ಇಂಗ್ಲೆಂಡ್‌ ಆಡಿದ ಮೂರು ಪಂದ್ಯಗಳ ಟ್ವೆಂಟಿ–20 ಸರಣಿ ಅನೇಕ ಗೊಂದಲಗಳಿಗೆ ಕಾರಣವಾಯಿತು. ಅಂಪೈರ್‌ಗಳ ಕೆಲ ತಪ್ಪು ತೀರ್ಪುಗಳು ಪಂದ್ಯದ ಫಲಿತಾಂಶವನ್ನೇ ಉಲ್ಪಾ ಮಾಡಿ ಬಿಟ್ಟವು. ಇಲ್ಲವಾದರೆ ಎರಡನೇ ಪಂದ್ಯದಲ್ಲಿ ಗೆಲುವು ಪಡೆದು ಆಂಗ್ಲರ ತಂಡ ಸರಣಿಯನ್ನು ತನ್ನದಾಗಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಇದ್ದವು.

ನಾಗಪುರದಲ್ಲಿ ನಡೆದ ಆ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡಕ್ಕೆ ಇನ್ನೇನು ಗೆಲುವು ಖಚಿತವೆಂದೇ ಭಾವಿಸಲಾಗಿತ್ತು. ಆದರೆ ಕೊನೆಯ ಓವರ್‌ನಲ್ಲಿ ಅಂಪೈರ್‌ ಪಿ. ಷಂಶುದ್ದೀನ್‌ ನೀಡಿದ   ತಪ್ಪು ನಿರ್ಣಯ ಪ್ರವಾಸಿ ತಂಡಕ್ಕೆ ಮುಳುವಾಯಿತು. ವೇಗಿ ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ನಲ್ಲಿ ಜೋ ರೂಟ್ ಚೆಂಡನ್ನು ಸ್ವೀಪ್‌ ಮಾಡಲು ಮುಂದಾದಾಗ ಬ್ಯಾಟಿನ ಅಂಚಿಗೆ ಚೆಂಡು ತಗುಲಿ ನಂತರ ಪ್ಯಾಡಿಗೆ ಬಡಿದಿತ್ತು. ಅಂದಿನ ಪಂದ್ಯ ವೀಕ್ಷಿಸಿದ್ದವರಿ ಗೆಲ್ಲರಿಗೂ ಅದು ನಾಟೌಟ್‌ ಎನ್ನುವುದು ಸ್ಪಷ್ಟವಾಗಿ ಗೊತ್ತಿತ್ತು. ಅಷ್ಟೇ ಏಕೆ, ಭಾರತದ ಆಟಗಾರರಿಗೂ ಈ ವಿಷಯ ತಿಳಿದಿತ್ತು. ಪಂದ್ಯದ ನಂತರ ಬೂಮ್ರಾ ಕೂಡ ‘ಅಂಪೈರ್‌ಗೆ ಮನವಿ ಸಲ್ಲಿಸು ವುದು ನಮ್ಮ ಕೆಲಸ.  ಅದೃಷ್ಟ ಕೆಲ ಸಲ ಯಾವ ರೀತಿಯಾದರೂ ಒಲಿಯಬಹುದಲ್ಲವೇ’ ಎಂದು ಕಣ್ಣು ಮಿಟುಕಿಸಿದ್ದರು.

ಆ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡಕ್ಕೆ ಅನ್ಯಾಯವಾಯಿತು. ಆತಿಥೇಯರಿಗೆ ಅದೃಷ್ಟದ ಗೆಲುವು ಒಲಿಯಿತು. ಯಾವಾಗಲಾದ ರೊಮ್ಮೆ ಹೀಗೆ ಲಭಿಸುವ ಗೆಲುವು ಕೆಲ ಬಾರಿ ದುರದೃಷ್ಟ ದಂತೆಯೂ ಕಾಡಬಹುದು ಎನ್ನುವುದು ಮನವರಿಕೆಯಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಬೆಂಗಳೂರಿನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟ್ವೆಂಟಿ–20 ಪಂದ್ಯದಲ್ಲಿ ಕರ್ನಾಟಕದ        ಕೆ.ಎಲ್‌. ರಾಹುಲ್‌ ಅವರು ಬೆನ್‌ ಸ್ಟೋಕ್ಸ್ ಬೌಲಿಂಗ್‌ನಲ್ಲಿ ನೋಬಾಲ್‌ಗೆ ವಿಕೆಟ್‌ ಒಪ್ಪಿಸಿದರು. ಇದನ್ನು ಗಮನಿಸದ ಅಂಪೈರ್‌ ಅನಿಲ್‌ ಚೌಧರಿ ಕೈ ಮೇಲಕ್ಕೆತ್ತಿದರು. ಇದರಿಂದ ಎದುರಾಳಿ ತಂಡಕ್ಕೆ ಅನುಕೂಲವಾಯಿತು.
ಹೀಗೆ ಅಂಪೈರ್‌ಗಳ ತಪ್ಪು ತೀರ್ಪುಗಳಿಂದ ಕೆಲ ಬಾರಿ ಕೆಲ ತಂಡಗಳಿಗೆ ಅನುಕೂಲವಾಗುತ್ತದೆ ನಿಜ. ಆದರೆ ಇದು ಎಲ್ಲಾ ಸಂದರ್ಭದಲ್ಲಿ ಆಗುವುದಿಲ್ಲವಲ್ಲ. ಅಂಪೈರ್‌ ಕೂಡ ಯಂತ್ರವೇನಲ್ಲ. ಎಷ್ಟೇ ಅನುಭವವಿದ್ದರೂ ಮನುಷ್ಯ ನಿಂದ ತಪ್ಪುಗಳಾಗುವುದು ಸಹಜ. ಆದ್ದರಿಂದ ಟ್ವೆಂಟಿ–20 ಮಾದರಿಯಲ್ಲಿಯೂ ಯುಡಿಆರ್‌ಎಸ್‌ ಜಾರಿಗೆ ಬರಲಿ ಎನ್ನುವ ಕೂಗು ಗಟ್ಟಿಯಾಗಿ ಕೇಳಿ ಬರುತ್ತಿದೆ.
‘ಅಂಪೈರ್‌ಗಳ ತಪ್ಪು ತೀರ್ಪಿನಿಂದ ನಮಗೆ ಮಹತ್ವದ ಪಂದ್ಯದಲ್ಲಿ ಸೋಲುಂಟಾಯಿತು. ಏಕದಿನ ಮತ್ತು ಟೆಸ್ಟ್‌ ಮಾದರಿಯಲ್ಲಿ ಇರುವ ಯುಡಿಆರ್‌ಎಸ್‌ ಟ್ವೆಂಟಿ–20ಯಲ್ಲಿ ಏಕಿಲ್ಲ. ಇದರಲ್ಲಿಯೂ ಜಾರಿಗೆ ಬಂದರೆ ಆಟಗಾರರಿಗೆ ಅನುಕೂಲ ವಲ್ಲವೇ’ ಎಂದು ಜೋ ರೂಟ್‌ ಪ್ರಶ್ನಿಸಿದ್ದರು.

ಕ್ರೀಡಾ ಸ್ಫೂರ್ತಿ ಕುಂದಿದ ಕಾಲ
ಹಲವು ವರ್ಷಗಳ ಹಿಂದಿನ ಮಾತು. ಬ್ಯಾಟ್ಸ್‌ಮನ್‌ ತಾನು ಔಟಾಗಿದ್ದು  ಖಚಿತವಾಗಿದ್ದರೆ ಅಂಪೈರ್‌ ತೀರ್ಪು ನೀಡುವ ಮುನ್ನವೇ ಕ್ರೀಸ್‌ನಿಂದ ಹೊರ ನಡೆದುಬಿಡುತ್ತಿದ್ದ. ಹಲವು ಬಾರಿ ತಪ್ಪು ನಿರ್ಧಾರವಾಗಿ ಅಂಪೈರ್‌ ಔಟ್‌ ಕೊಟ್ಟರೂ ಮಹೇಂದ್ರ ಸಿಂಗ್‌ ದೋನಿ ಬ್ಯಾಟ್ಸ್‌ಮನ್‌ನನ್ನು ಕರೆದು ಮತ್ತೆ ಬ್ಯಾಟ್‌ ಮಾಡಲು ಅವಕಾಶ ಕೊಟ್ಟು ಕ್ರೀಡಾ ಸ್ಫೂರ್ತಿ ಮೆರೆದ  ಉದಾಹರಣೆಗಳು ನಮ್ಮಲ್ಲಿವೆ.  ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಕ್ರಿಕೆಟಿಗರಲ್ಲಿ ಕ್ರೀಡಾ ಸ್ಫೂರ್ತಿ ಕಡಿಮೆಯಾಗಿದೆ. ಅಷ್ಟೇ ಏಕೆ ಯುಡಿಆರ್‌ಎಸ್‌ ಬಂದ ಮೇಲೂ ಅಂಪೈರ್‌ ತೀರ್ಪು ಬರುವ ತನಕವೂ ಬ್ಯಾಟ್ ಬಿಡದ ನಿದರ್ಶನಗಳಿವೆ.

ಅದು 2011ರ ಐಸಿಸಿ ಏಕದಿನ ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯ. ಆ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ರಾಗಿದ್ದ ರಿಕಿ ಪಾಂಟಿಂಗ್‌ ಔಟಾಗಿದ್ದರು. ಅವರ ಬ್ಯಾಟಿನ ಅಂಚಿಗೆ ಸವರಿದ್ದ ಚೆಂಡು ನಂತರ ಫೀಲ್ಡರ್‌ ಕೈ ಸೇರಿತ್ತು. ಪಾಂಟಿಂಗ್ ಔಟಾಗಿದ್ದು ಸ್ವತಃ ಅವರಿಗೇ ಗೊತ್ತಿತ್ತು. ಆದರೆ ಅಂಪೈರ್‌ ನಾಟ್ ಔಟ್‌ ಎಂದು ತೀರ್ಪುಕೊಟ್ಟು ಅಚ್ಚರಿ ಮೂಡಿಸಿದ್ದರು. ಬೌಲಿಂಗ್‌ ಮಾಡಿದ್ದ ಪಾಕ್‌ ತಂಡದ ಮಹಮ್ಮದ್‌ ಹಫೀಜ್ ಕಕ್ಕಾಬಿಕ್ಕಿ ಯಾಗಿದ್ದರು. ಆಗ ಯುಡಿಆರ್ಎಸ್‌ ಪ್ರಾಯೋಗಿಕವಾಗಿ ಜಾರಿಗೆ ಬಂದಿತ್ತು. ಈ ಅವಕಾಶ ಬಳಸಿಕೊಂಡ ಪಾಕಿಸ್ತಾನ ತಂಡದವರು ಅಂಪೈರ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಆಗ ನಿರೀಕ್ಷೆಯಂತೆಯೇ ಔಟ್‌ ಎನ್ನುವ ತೀರ್ಪು ಬಂದಿತು.

ನೀವು ಔಟಾಗಿದ್ದು ಖಚಿತವಾಗಿದ್ದರೂ ಅಂಪೈರ್‌ ತೀರ್ಪಿಗೆ ಕಾದದ್ದು ಏಕೆ ಎಂದು ಪಾಂಟಿಂಗ್‌ ಅವರನ್ನು ಪ್ರಶ್ನಿಸಿದ್ದಾಗ ‘ಹೌದು. ಚೆಂಡು ಬ್ಯಾಟಿಗೆ ತಗುಲಿದ್ದು  ಸ್ಪಷ್ಟವಾಗಿ ಗೊತ್ತಿತ್ತು. ಅದನ್ನು ಅಂಪೈರ್‌ ನಿರ್ಧರಿಸುವ ತನಕ ಯಾವಾಗಲೂ ಕ್ರೀಸ್‌ನಿಂದ ಹೊರ ಹೋಗುವುದಿಲ್ಲ’ ಎಂದು ಉತ್ತರಿಸಿದ್ದರು. ಪಾಂಟಿಂಗ್‌ ನೀಡಿದ್ದ ಪ್ರತಿಕ್ರಿಯೆ ನಂತರ ಅನೇಕ ವಿವಾದಗಳಿಗೂ ಕಾರಣವಾಯಿತು.
2010ರಲ್ಲಿ  ಭಾರತ ಮತ್ತು ಶ್ರೀಲಂಕಾ ನಡುವಣ ಏಕದಿನ ಸರಣಿಯ ಮೂರನೇ ಪಂದ್ಯ ದಂಬುಲ್ಲಾದಲ್ಲಿ ನಡೆದಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಲಂಕಾ ತಂಡ ಭಾರತ ತಂಡದ ಗೆಲುವಿಗೆ 171 ರನ್‌ಗಳ ಸುಲಭ ಗುರಿ ನೀಡಿತ್ತು.

ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್ ಶತಕ ಗಳಿಸಲು ಒಂದು ರನ್‌ ಮಾತ್ರ ಬೇಕಿತ್ತು. ಭಾರತ ತಂಡದ ಜಯಕ್ಕೆ ಐದು ರನ್‌ ಅಗತ್ಯವಿತ್ತು. ಆಗ ಲಂಕಾದ ಆಫ್‌ ಸ್ಪಿನ್ನರ್‌ ಸೂರಜ್‌ ರಾಂಧಿವ್‌ ಉದ್ದೇಶಪೂರ್ವಕವಾಗಿಯೇ ನೋಬಾಲ್‌ ಮಾಡಿದ್ದರು. ಅದು ಬೈ ಆಗಿ ಚೆಂಡು ಬೌಂಡರಿ ಗೆರೆ ತಲುಪಿತು. ಬೌಂಡರಿ ಮತ್ತು ನೋ ಬಾಲ್‌ನ ಒಂದು ರನ್‌ನಿಂದ ಭಾರತದ ಖಾತೆಗೆ ಒಟ್ಟು ಐದು ರನ್‌ ಸೇರಿದ್ದರಿಂದ ಗೆಲುವು ಲಭಿಸಿತು. ಆದರೆ ಸೆಹ್ವಾಗ್‌ ಶತಕದ ಆಸೆ ಈಡೇರದ ಕಾರಣ ಅವರು 99 ರನ್‌ಗಳಿಗೆ ಸಮಧಾನ ಪಟ್ಟುಕೊಳ್ಳಬೇಕಾಯಿತು. ಆದರೆ ಸೆಹ್ವಾಗ್ ಶತಕ ಗಳಿಸಲು ಅವಕಾಶ ಕೊಡ ಬಾರದು ಎನ್ನುವ ದುರುದ್ದೇಶದಿಂದಲೇ ಸೂರಜ್ ನೋ ಬಾಲ್ ಮಾಡಿದ್ದರು. ಅವರು ಎರಡೂ ಕಾಲನ್ನು ಕ್ರೀಸ್‌ನಿಂದ ಆಚೆ ಇಟ್ಟು ಬೌಲ್‌ ಮಾಡಿದ್ದು ಟಿವಿ ರಿಪ್ಲೇಯಲ್ಲಿ ಸ್ಪಷ್ಟವಾಗಿತ್ತು. ಸೋಲು ಖಚಿತವಾಗಿದ್ದ ಕಾರಣ ಕನಿಷ್ಠ ಸೆಹ್ವಾಗ್ ಶತಕ ತಪ್ಪಿಸಿಯಾದರೂ ಸಮಾಧಾನ ಮಾಡಿಕೊಳ್ಳೋಣ ಎನ್ನುವ ಲಂಕಾ ತಂಡದ ಕೆಟ್ಟ ಬುದ್ದಿ  ಬಯ ಲಾಗಿತ್ತು.  ಬಳಿಕ ಲಂಕಾ ತಂಡದವರು  ಕ್ಷಮೆ ಕೋರಿದ್ದರು.

ಈ ರೀತಿಯ ಘಟನೆಗಳು ಅನೇಕ ಸಲ ನಡೆದಿವೆ. ಆದ್ದರಿಂದ ಎಲ್ಲರಿಂದಲೂ ಕ್ರೀಡಾಸ್ಫೂರ್ತಿ ನಿರೀಕ್ಷೆ ಮಾಡುವುದು ಕಷ್ಟ. ಈ ಕಾರಣದಿಂದ ಟ್ವೆಂಟಿ–20ಯಲ್ಲಿಯೂ ಯುಡಿಆರ್‌ಎಸ್‌ ಜಾರಿಗೆ ತರುವ ಅಗತ್ಯವಿದೆ. ಇದರಿಂದ ಎರಡೂ ತಂಡಗಳ ಆಟಗಾರರಿಗೆ ಅನುಕೂಲವಾಗುತ್ತದೆ.  

****

ಅಭಿಪ್ರಾಯ ಬದಲಿಸಿಕೊಳ್ಳುವ ಕಾಲ
ಯುಡಿಆರ್‌ಎಸ್‌ ಜಾರಿಗೆ ಬಂದ ಆರಂಭದಲ್ಲಿ ಅಂಪೈರ್‌ ಘನತೆಗೆ ಕುಂದು ಉಂಟಾಗುತ್ತದೆ ಎಂದು ಟೀಕಿಸಿದವರೇ ಹೆಚ್ಚು. ಟೆಸ್ಟ್‌ ಆಡುವ ರಾಷ್ಟ್ರಗಳು ಈ ನಿಯಮದ ಬಗ್ಗೆ ಒಲವು ತೋರಿದರೂ ಜಗತ್ತಿನ ಶ್ರೀಮಂತ ಕ್ರಿಕೆಟ್‌ ಮಂಡಳಿ ಬಿಸಿಸಿಐ ವಿರೋಧಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮಹೇಂದ್ರ ಸಿಂಗ್ ದೋನಿ ಮತ್ತು ಸಚಿನ್ ತೆಂಡೂಲ್ಕರ್‌ ಇದರ ವಿರುದ್ಧ ಮಾತನಾಡಿದ್ದರು. ‘ಹೊಸ ನಿಯಮದಿಂದ ಅಂಪೈರ್‌ಗಳಿಗೆ ಅವಮಾನವಾಗುತ್ತಿದೆ’ ಎಂದು ಮಾಜಿ ನಾಯಕ ಕಪಿಲ್‌ ದೇವ್‌ ಹೇಳಿದ್ದರು. ಆದರೆ  ವಿರಾಟ್‌ ಕೊಹ್ಲಿ ನಿಯಮದ ಪರ ಇದ್ದಾರೆ.  ಈಗ ಕ್ರಿಕೆಟ್‌ ಸಾಕಷ್ಟು ಬದಲಾಗಿದೆ. ಟೆಸ್ಟ್‌ ಮತ್ತು ಏಕದಿನ ಮಾದರಿಯಲ್ಲಿ ಆಟಗಾರರ ಅನುಕೂಲಕ್ಕೋಸ್ಕರವೇ ಯುಡಿಆರ್‌ಎಸ್‌ ಜಾರಿಗೆ ಬಂದಿದೆ. ಇದರಿಂದ ಆಟಗಾರರು ಖುಷಿಯಾಗಿದ್ದಾರೆ. ಆಟಗಾರರಿಗೆ ಅನುಕೂಲವಾಗುವುದಾದರೆ ಟ್ವೆಂಟಿ–20ಯಲ್ಲಿಯೂ ಯುಡಿಆರ್‌ಎಸ್‌ ಜಾರಿಗೆ ತರಲು ಹಿಂದೇಟು ಏಕೆ?
****

‘ಮಾರ್ಪಾಡುಗೊಂಡು ಜಾರಿಗೆ ಬರಲಿ’

ಆರಂಭದಲ್ಲಿ ಎಲ್ಲರೂ ಯುಡಿಆರ್‌ಎಸ್‌ ಪದ್ಧತಿಯನ್ನು ವಿರೋಧಿಸುತ್ತಿದ್ದರು. ಆದರೆ ಈಗ ಆಟಗಾರರೇ ಇದನ್ನು ಒಪ್ಪಿಕೊಂಡಿದ್ದಾರೆ. ಅಗತ್ಯ ಮಾರ್ಪಾಡುಗಳೊಂದಿಗೆ ಟ್ವೆಂಟಿ–20ಯಲ್ಲಿಯೂ ಈ ನಿಯಮ ಜಾರಿಗೆ ಬರಲಿ.
ಏಕದಿನ ಮತ್ತು ಟೆಸ್ಟ್‌ನಲ್ಲಿ ಒಂದು ತಂಡಕ್ಕೆ ಎರಡು ಬಾರಿ ಅಂಪೈರ್‌ ತೀರ್ಪು ಪ್ರಶ್ನಿಸಲು ಅವಕಾಶವಿರುತ್ತದೆ. ಒಂದು ವೇಳೆ ಪ್ರಶ್ನಿಸಿದ ತಂಡಕ್ಕೆ ಗೆಲುವು ಲಭಿಸಿದರೆ ಮುಂದೆಯೂ ಪ್ರಶ್ನಿಸಲು ಮತ್ತೊಂದು ಅವಕಾಶ ಲಭಿಸುತ್ತದೆ. ಫೀಲ್ಡ್‌ ಅಂಪೈರ್ ನೀಡಿದ ತೀರ್ಪು ಸರಿಯಾಗಿದ್ದರೆ ಪ್ರಶ್ನಿಸಿದ ತಂಡ ಒಂದು ಅವಕಾಶ ಕಳೆದುಕೊಳ್ಳುತ್ತದೆ.
ಟೆಸ್ಟ್ ಹಾಗೂ ಏಕದಿನ ಪಂದ್ಯದ ವೇಳೆ ಸಾಕಷ್ಟು ಸಮಯವಿರುತ್ತದೆ. ಆದರೆ ಟ್ವೆಂಟಿ–20ಯಲ್ಲಿ ಸಮಯದ ಅಭಾವ ಇರುವ ಕಾರಣ ನಿಯಮ ಗಳಲ್ಲಿ ಮಾರ್ಪಾಡು ಮಾಡಲಿ. ಚುಟುಕು ಮಾದರಿಯಲ್ಲಿ ಉಭಯ ತಂಡಗಳಿಗೂ ತಲಾ ಒಂದು ಸಲ ಯುಡಿಆರ್‌ಎಸ್‌ಗೆ ಅವಕಾಶ ಕೊಡಲಿ. ಒಂದು ತಂಡ ಪ್ರಶ್ನಿಸಿದ ಅಂಪೈರ್‌ ತೀರ್ಪು ಸರಿಯಾಗಿದ್ದರೆ ಮತ್ತೊಂದು ಅವಕಾಶ ಲಭಿಸಲಿ. ಇದರಿಂದ ಆಟಗಾರರಿಗೆ ಅನುಕೂಲವಾಗುತ್ತದೆ. ತಪ್ಪು ತೀರ್ಪು ನೀಡಿದ ಅಂಪೈರ್‌ನಿಂದ ಅನ್ಯಾಯವಾಯಿತು ಎನ್ನುವ ಟೀಕೆಯೂ ನಿಲ್ಲುತ್ತದೆ. ಆಟಗಾರರೇ ಒಪ್ಪಿರುವಾಗ ಟ್ವೆಂಟಿ–20ಯಲ್ಲಿಯೂ ಅಂಪೈರ್‌ ತೀರ್ಪು ಪ್ರಶ್ನಿಸುವ ಅವಕಾಶ ಕೊಟ್ಟರೆ ತಪ್ಪೇನು ಇಲ್ಲ.
– ವಿನಾಯಕ ಕುಲಕರ್ಣಿ, ಕರ್ನಾಟಕ ರಾಜ್ಯ ಅಂಪೈರ್‌ಗಳ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT