ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಅರಳಿದ ಗೌತಮ್

Last Updated 5 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ನನಗಿದು ಅಚ್ಚರಿಯ ಕರೆ. ಆದರೆ, ತುಂಬಾ ಖುಷಿಯಾಗಿದೆ. ಭಾರತ ತಂಡದ ಆಯ್ಕೆದಾರರ ಗಮನ ಸೆಳೆಯಲು ಇದೊಂದು ಉತ್ತಮ ಅವ ಕಾಶ. ವಿಶ್ವದರ್ಜೆ  ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಜಯಂತ್ ಯಾದವ್ ಅವರನ್ನೂ ಮೀರಿಸುವ ಆಟವನ್ನು ಪ್ರದರ್ಶಿಸುವ ಸವಾಲು ಇದೆ’–
ಕರ್ನಾಟಕ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರ ಮಾತುಗಳಿವು.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುಧಾರಣೆಗೊಂಡಿರುವ ಅವರ ಬೌಲಿಂಗ್‌ನಷ್ಟೇ ಮಾತುಗಳೂ ತೂಕವುಳ್ಳದ್ದಾಗಿದ್ದವು. ತಮಗೆ ಬಂದ ಅವಕಾಶ, ಅದರ ವ್ಯಾಪ್ತಿ ಮತ್ತು ಸವಾಲುಗಳ ಅರಿವು ಅವರಿಗೆ ಇದೆ. ಆದ್ದರಿಂದಲೇ ಭಾರತ ಎ ತಂಡದಲ್ಲಿ ಆಡುವ ಅನಿರೀಕ್ಷಿತ ಅವಕಾಶವನ್ನು ಅವರು ಸಮಚಿತ್ತದಿಂದ ಸ್ವೀಕರಿಸಿದ್ದಾರೆ.

ಬೆಂಗಳೂರಿನ ಆಫ್‌ಸ್ಪಿನ್ನರ್ ಗೌತಮ್ ಅವರಿಗೆ 2016–17ರ ರಣಜಿ ಋತುವಿನಲ್ಲಿ ಆಡಿದ ಅಮೋಘ ಆಟವು ಸುವರ್ಣ ಫಲ ನೀಡಿದೆ.  ಇದೇನೂ ಸಣ್ಣ ಸಾಧನೆಯೇನಲ್ಲ. ಈ ತಿಂಗಳ ಕೊನೆಯಲ್ಲಿ ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಆಡಲು ಬರಲಿದೆ. ಟೆಸ್ಟ್ ಸರಣಿಗೂ ಮುನ್ನ ನಡೆಯುವ ಅಭ್ಯಾಸ ಪಂದ್ಯಗಳಲ್ಲಿ ಆಡುವ ಎ ತಂಡದಲ್ಲಿ ಗೌತಮ್ ಸ್ಥಾನ ಪಡೆದಿದ್ದಾರೆ.

2012ರಲ್ಲಿ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡದ ಪರ ಪದಾರ್ಪಣೆ ಮಾಡಿದ್ದ ಅವರು ನಂತರ ಮೂರು ವರ್ಷಗಳ ಕಾಲ ಆಯ್ಕೆದಾರರ ಕಣ್ಣಿಗೆ ಬಿದ್ದಿರಲಿಲ್ಲ. ಆದರೂ ಆತ್ಮಸ್ಥೈರ್ಯವನ್ನು ಕುಂದಲು ಬಿಡದ 28ರ ಹರೆಯದ ಗೌತಮ್ ಸಹನೆಯಿಂದ ಕಾದರು. ತಮ್ಮ ಲೋಪಗಳನ್ನು ತಿದ್ದಿ ಕೊಂಡು ಪ್ರತಿಭೆಗೆ ಸಾಣೆ ಹಿಡಿಯಲು ಪರಿಶ್ರಮಪಟ್ಟರು. ಸ್ಪಿನ್ ಬೌಲಿಂಗ್ ದಂತಕಥೆ ಇಎಎಸ್ ಪ್ರಸನ್ನ ಅವರಿಂದ ಸಾಕಷ್ಟು ಪಾಠಗಳನ್ನು ಕಲಿತರು.

2016ರಲ್ಲಿ ರಣಜಿ ತಂಡದಲ್ಲಿ ಮತ್ತೆ ಆಡಲು ಸಿಕ್ಕ ಅವಕಾಶವನ್ನು ಸುಮ್ಮನೆ ಬಿಡಲಿಲ್ಲ. ತಮ್ಮ ಯಶಸ್ಸಿಗೆ ಮೆಟ್ಟಿಲುಗಳನ್ನು ನಿರ್ಮಿಸಿಕೊಂಡರು. ಮರಳಿ ಅರಳಿದ ಗೌತಮ್ ಅಸ್ಸಾಂ ಎದುರಿನ ಪಂದ್ಯದಲ್ಲಿ ಕರ್ನಾಟಕ ಗೆಲ್ಲಲು ಅವರ ಬೌಲಿಂಗ್ (108ಕ್ಕೆ7) ಕಾರಣವಾಯಿತು. ಕೇವಲ ಮೂರು ಪಂದ್ಯಗಳಿಂದ ಅವರು 18 ವಿಕೆಟ್ ಉರುಳಿಸಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡರು.

ಹರಭಜನ್ ಛಾಯೆ; ಪ್ರಸನ್ನ ಮಾರ್ಗದರ್ಶನ
ಬೆಂಗಳೂರಿನ ಸ್ವಸ್ತಿಕ್ ಯೂನಿಯನ್ ಕ್ಲಬ್‌ನಲ್ಲಿ ಆಡುವ ಗೌತಮ್ ಭಾರತ ತಂಡದ ಬೌಲರ್ ಹರಭಜನ್ ಸಿಂಗ್ ಅವರಿಂದ ಪ್ರಭಾವಿತರಾಗಿ ಆಫ್‌ಸ್ಪಿನ್ ಬೌಲಿಂಗ್ ರೂಢಿಸಿಕೊಂಡವರು. 2008ರಲ್ಲಿ ಭಾರತಕ್ಕೆ ಬಂದಿದ್ದ ಆಸ್ಟ್ರೇಲಿಯಾ ತಂಡಕ್ಕೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಅವಕಾಶ ಪಡೆದಿದ್ದರು. ಆಗ ಅವರ ಶೈಲಿಯೂ ಹರಭಜನ್ ಮಾದರಿಯಲ್ಲಿತ್ತು. ಆ ಸಂದರ್ಭದಲ್ಲಿ ಲೆಗ್‌ಸ್ಪಿನ್ನರ್ ಅನಿಲ್ ಕುಂಬ್ಳೆ ಮತ್ತು ಹರಭಜನ್ ಅವರ ಪ್ರಭಾವಿ ದಾಳಿಯು ಮನೆಮಾತಾಗಿತ್ತು. ಸ್ಥಳೀಯ ಕ್ರಿಕೆಟ್‌ಗಳಲ್ಲಿ ಉತ್ತಮ ಬೌಲಿಂಗ್ ಮೂಲಕ  ಗಮನ ಸೆಳೆದ ಗೌತಮ್, 2011ರಲ್ಲಿಯೇ ರಾಜ್ಯ ತಂಡಕ್ಕೆ ಆಯ್ಕೆಯಾದವರು. ಆದರೆ, ಅಂತಿಮ ಹನ್ನೊಂದರಲ್ಲಿ ಆಡುವ ಅವಕಾಶ ಸಿಕ್ಕಿದ್ದು ಒಂದು ವರ್ಷದ ನಂತರ. ಆದರೆ, ಸ್ಥಾನ ಗಟ್ಟಿಗೊಳ್ಳಲು ಹರಸಾಹಸ ಪಡಬೇಕಾಯಿತು. ಅದರಲ್ಲೂ 2013–14 ರ ಸಾಲಿನ ರಣಜಿ ಟೂರ್ನಿಯ ಸೌರಾಷ್ಟ್ರ ಎದುರಿನ ಪಂದ್ಯ ಅವರ ಪಾಲಿಗೆ ಕಹಿನೆನಪು. ಆ ಪಂದ್ಯದಲ್ಲಿ ಸಾಕಷ್ಟು ದುಬಾರಿಯಾಗಿದ್ದರು. ಆಗ ಸ್ಥಾನ ಕಳೆದುಕೊಂಡಿದ್ದ ಅವರು ಮತ್ತೆ ರಾಜ್ಯ ತಂಡ ಪ್ರವೇಶಕ್ಕೆ ಮೂರು ವರ್ಷ ಕಾಯಬೇಕಾಯಿತು. ಈ ಅವಧಿಯಲ್ಲಿ ಅವರಿಗೆ ಎರ್ರಪಳ್ಳಿ ಪ್ರಸನ್ನ ಅವರ ಮಾರ್ಗದರ್ಶನ ಲಭಿಸಿತ್ತು.

‘ಶಾಲಾ ದಿನಗಳಲ್ಲಿ  ಮಧ್ಯಮವೇಗಿ ಬೌಲರ್ ಆಗಿದ್ದೆ. ಆದರೆ, ಹರಭಜನ್ ಅವರ ಬೌಲಿಂಗ್‌ ಅಪಾರವಾಗಿ ಆಕರ್ಷಿಸಿತ್ತು. ಒಂದು ಬಾರಿ ಶಾಲಾ ತಂಡದ ಆಯ್ಕೆ ಟೂರ್ನಿಯಲ್ಲಿ ಅವರಂತೆಯೇ ಬೌಲಿಂಗ್ ಮಾಡಿದೆ. 5 ಪಂದ್ಯಗಳಿಂದ 30 ವಿಕೆಟ್‌ಗಳನ್ನು ಕಬಳಿಸಿದೆ. ಅಲ್ಲಿಂದ ಮುಂದೆ ಆಫ್‌ಸ್ಪಿನ್ ಬೌಲಿಂಗ್ ಮಾಡುವುದನ್ನೇ ರೂಢಿಸಿಕೊಂಡೆ’ ಎಂದು ಸ್ಪಿನ್ನರ್ ಆಗಿ ರೂಪುಗೊಂಡ ಬಗೆಯನ್ನು ಗೌತಮ್ ವಿವರಿಸುತ್ತಾರೆ.

2013ರಿಂದ ತಂಡದಿಂದ ಹೊರಗಿದ್ದಾಗ ಫಿಟ್‌ನೆಸ್‌ ಮತ್ತು ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಹೆಚ್ಚು ಸಮಯ ವಿನಿಯೋಗಿಸಿದರು. ಸ್ಪಿನ್ ಅಕಾಡೆಮಿಯಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿದರು. ಅಲ್ಲಿ ಪ್ರಸನ್ನ ಅವರು ಹೇಳಿದ ಒಂದೊಂದು ಮಾತನ್ನೂ ನೋಟ್‌ಬುಕ್‌ನಲ್ಲಿ ದಾಖಲಿಸಿ ಕೊಂಡು ಚಾಚೂ ತಪ್ಪದೇ ಪಾಲಿಸಿದರು. ಆ ಶಿಬಿರದಲ್ಲಿ ರಘುರಾಮ್ ಭಟ್ ಅವರ ಮಾರ್ಗದರ್ಶನವೂ ಲಭಿಸಿತ್ತು. ಇದರಿಂದ ರನ್‌ ಅಪ್‌ನಲ್ಲಿ ಹಲವು ಬದಲಾವಣೆ ಮಾಡಿಕೊಂಡ ಗೌತಮ್ ಯಶಸ್ವಿಯಾದರು.

‘ಶಾಲೆಯಲ್ಲಿದ್ದಾಗ ಸ್ಟ್ಯಾನ್ಲಿ ಫರ್ನಾಂಡಿಸ್, ಅನಂತ್, ಅರುಣ್ ಕುಮಾರ್, ರಣಜಿ ತಂಡದಲ್ಲಿ ಮನ್ಸೂರ್ ಅಲಿ ಖಾನ್ ಅವರ ಮಾರ್ಗ ದರ್ಶನ ಬಹಳ ಉಪಯುಕ್ತವಾಯಿತು. ಜೆ. ಅರುಣ್‌ಕುಮಾರ್ ಅವರು ಮಾನಸಿಕ ದೃಢತೆಯ ಕುರಿತು ನೀಡಿದ ಸಲಹೆಗಳು ಬಹಳ ನೆರವಾದವು. ಪ್ರಸನ್ನ ಸರ್ ಹೇಳಿದ್ದ ಮಾತುಗಳನ್ನು ಡೈರಿಯಲ್ಲಿ ಬರೆದಿಟ್ಟು ಕೊಂಡಿದ್ದೇನೆ. ನೆಟ್ಸ್‌ಗೆ ಹೋಗುವಾ ಗಲೆಲ್ಲ ಮನನ ಮಾಡಿಕೊಳ್ಳುತ್ತೇನೆ. ಅದರಿಂದ ಉತ್ತಮವಾಗಿ ಕೌಶಲ್ಯ ರೂಢಿಸಿಕೊ ಳ್ಳಲು ಸಾಧ್ಯವಾಗುತ್ತಿದೆ’ ಎಂದು ಗೌತಮ್ ಹೇಳುತ್ತಾರೆ.

‘ಭಾರತ ತಂಡದಲ್ಲಿ ಸ್ಥಾನ ಪಡೆಯು ವುದು ಕಷ್ಟಸಾಧ್ಯ. ಅಶ್ವಿನ್ ಮತ್ತು ಜಯಂತ್ ಅವರ ಸರಿಸಮಕ್ಕೆ ಮತ್ತು ಅವರಿಗಿಂತ ಹೆಚ್ಚಿನ ದರ್ಜೆಯ ಆಟ ವಾಡಬೇಕು. ಅದಕ್ಕಾಗಿ ಪ್ರಯತ್ನಿಸು ತ್ತೇನೆ. ಎ ತಂಡದಲ್ಲಿ ಆಡುವುದ ರಿಂದ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ ಲಭಿಸಲಿದೆ. ಹಿರಿಯ ಆಟಗಾರರ ಸಾಂಗತ್ಯ ದಲ್ಲಿ ಸಾಕಷ್ಟು ಕಲಿಯುವ ಅವ ಕಾಶ ಸಿಗಲಿದೆ. ಅಲ್ಲಿಗೆ ಹೋಗುವ ಮುನ್ನ ನನ್ನ ಕ್ಲಬ್‌ ನೆಟ್ಸ್‌ನಲ್ಲಿ ಕೆಂಪು ಚೆಂಡಿನೊಂದಿಗೆ ಸಾಕಷ್ಟು ಅಭ್ಯಾಸ ನಡೆಸಲಿ ದ್ದೇನೆ’ ಎಂದು ತಮ್ಮ ಯೋಜನೆಯನ್ನು ಬಿಚ್ಚಿಟ್ಟರು.

ಚೆನ್ನೈನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಅವರು ದೀರ್ಘ ಮಾದರಿಗೆ ಹೊಂದಿ ಕೊಳ್ಳಲು ಕೆಂಪು ಚೆಂಡಿನ ಅಭ್ಯಾ ಸಕ್ಕೆ ಮೊರೆ ಹೋಗಿದ್ದಾರೆ. ಆಧುನಿಕ ಕ್ರಿಕೆಟ್‌ನ ಎಲ್ಲ ಬದ ಲಾವಣೆಗಳಿಗೆ ಹೊಂದಿಕೊ ಳ್ಳುತ್ತ ಬೆಳೆಯುವ ದೃಢ ವಿಶ್ವಾಸದಲ್ಲಿ ಅವರಿದ್ದಾರೆ. 

ಅಥ್ಲೆಟಿಕ್ಸ್‌ನಿಂದ ಕ್ರಿಕೆಟ್‌ಗೆ

ಗೌತಮ್ ಕುಟುಂಬದಲ್ಲಿ ಕ್ರಿಕೆಟ್‌ ಆಟದ ಹಿನ್ನೆಲೆ ಇಲ್ಲ.  ಅವರ ತಂದೆ ಕೃಷ್ಣಪ್ಪ ಅವರು ರಾಜ್ಯಮಟ್ಟದ ಕಬಡ್ಡಿ ಆಟಗಾರರಾಗಿದ್ದವರು. ಶಾಲೆಯಲ್ಲಿ ಗೌತಮ್ ಕೂಡ ಡಿಸ್ಕಸ್, ಜಾವೆಲಿನ್ ಥ್ರೋ ಪಟುವಾಗಿದ್ದವರು. ಅಂತೆಯೇ ಬೇರೆ ಬೇರೆ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು. ಟೆನಿಸ್‌ ಬಾಲ್ ಕ್ರಿಕೆಟ್ ಆಡುತ್ತಿದ್ದ ಗೌತಮ್ 15ನೇ ವಯಸ್ಸಿನಲ್ಲಿ ಕ್ರಿಕೆಟ್ ತರಬೇತಿಗೆ ಸೇರಿಕೊಂಡರು. ಅವರು ಪರಿಶ್ರಮ, ಛಲ ಮತ್ತು ಆತ್ಮವಿಶ್ವಾಸಕ್ಕೆ ತಕ್ಕಂತೆ ಅವಕಾಶಗಳು ಒಲಿದಿವೆ. ತಾಯಿ ನಳಿನಾ ಮತ್ತು ಅಣ್ಣಂದಿರಾದ ವಿಕ್ರಮ್ ಮತ್ತು ಪ್ರೀತಮ್ ಅವರು ಬೆಂಬಲಕ್ಕೆ ನಿಂತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT