ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಪ್ರವಾಸಗಳು ಅರಿವಿನ ಯಾತ್ರೆಗಳು

Last Updated 5 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹತ್ತಿಪ್ಪತ್ತು ವರ್ಷಗಳ ಹಿಂದೆ ಚಳಿಗಾಲದಲ್ಲಿ ಪ್ರತಿ ಹಳ್ಳಿ-ಪಟ್ಟಣಗಳಿಂದ ಶಾಲಾ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಶಿಕ್ಷಕರು ಕರೆದುಕೊಂಡು ಹೋಗುತ್ತಿದ್ದರು. ಪೋಷಕರು ಚಕ್ಕುಲಿ, ರವೆ ಉಂಡಿ, ಚೂಡಾ ಅವಲಕ್ಕಿ ಮಾಡಿ, ಮಕ್ಕಳ ಕೈಯಲ್ಲಿ ಒಂದಿಷ್ಟು ದುಡ್ಡು ಕೊಟ್ಟು ಸಂಭ್ರಮದಿಂದ ದೇಶವನ್ನು ನೋಡಲು ಕಳುಹಿಸುತ್ತಿದ್ದರು. ಶಿಕ್ಷಕರು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪಾಲಕರ ಹಾಗೆ ತುಂಬ ಜವಾಬ್ದಾರಿಯಿಂದ ಕರೆದುಕೊಂಡು ಹೋಗುತ್ತಿದ್ದರು. ಪ್ರವಾಸಕ್ಕೆ ಹೊರಡುವ ಮುನ್ನವೇ ಪಠ್ಯದಲ್ಲಿ ಇರುವ ವಿಷಯಕ್ಕೆ ಪೂರಕವಾದ ಐತಿಹಾಸಿಕ, ಭೌಗೋಳಿಕ, ಪೌರಾಣಿಕ ಸ್ಥಳಗಳನ್ನು ಹಾಗೂ ಕವಿಮನೆಗಳು, ನದಿಗಳು, ಪ್ರಯೋಗಾಲಯಗಳು, ತಾರಾಲಯಗಳು ಮುಂತಾದವುಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದರು. ಪ್ರವಾಸದಲ್ಲಿ ಪಠ್ಯದಲ್ಲಿರುವ ಆ ಸ್ಥಳಗಳ ಕುರಿತ ಮಾಹಿತಿಯನ್ನು ಶಿಕ್ಷಕರು ಗೈಡ್‌ಡಗಳ ಹಾಗೆ ಸಾಕ್ಷಾತ್‌ ಆ ಸ್ಥಳಗಳಲ್ಲಿಯೇ ನಿಂತು ಕಣ್ಣಿಗೆ ಕಟ್ಟುವಂತೆ ವರ್ಣಿಸಿ ಮಕ್ಕಳ ಬುದ್ಧಿವಿಕಾಸವನ್ನು, ನಾಡಪ್ರೇಮವನ್ನು, ಅಭಿಮಾನವನ್ನು ಬೆಳೆಸುತ್ತಿದ್ದರು.

ಪ್ರವಾಸದಿಂದ ಮರಳಿ ಊರಿಗೆ ಬಂದಮೇಲೆ ‘ನನ್ನ ಪ್ರವಾಸದ ಅನುಭವ’ ಎಂಬ ಪ್ರಬಂಧಸ್ಪರ್ಧೆಯನ್ನು ಏರ್ಪಡಿಸುತ್ತಿದ್ದರು. ಅಂದರೆ ಮಕ್ಕಳು ಕೊಠಡಿಯಲ್ಲಿ ಕಲಿತ ಪಾಠ ಮತ್ತು ಪ್ರವಾಸದಲ್ಲಿ ಅರಿತ ವಿಷಯಗಳು ಹೇಗೆ ಅವರ ಮನಸ್ಸಿನಲ್ಲಿ ಉಳಿದಿವೆ, ಅವರು ಅದರಿಂದ ಏನನ್ನು ಕಲಿತರು, ಅವರ ವ್ಯಕ್ತಿತ್ವದ ಮೇಲೆ ಈ ಶೈಕ್ಷಣಿಕ ಪ್ರವಾಸ ಯಾವರೀತಿ ಪ್ರಭಾವ ಬೀರಿತು – ಎಂಬುದನ್ನು ಗಮನಿಸುತ್ತಿದ್ದರು. ಅಷ್ಟೇ ಅಲ್ಲ, ಮಕ್ಕಳು ತಮ್ಮ ಪ್ರವಾಸದಲ್ಲಿ ಕಂಡ ನಾಡಿನ ಐತಿಹಾಸಿ, ಭೌಗೋಳಿಕ ಮತ್ತು ಸಾಂಸ್ಕೃತಿಕ ಗರಿಮೆಯನ್ನು ಮನೆಯಲ್ಲಿ, ಓಣಿಯಲ್ಲಿ ಎಲ್ಲರಿಗೂ ಹೇಳಿ ಅಭಿಮಾನ ಉಕ್ಕಿಸುತ್ತಿದ್ದರು.

ನಾಡಿನ ಮಣ್ಣಿನ ಗುಣ ವಿಶೇಷತೆ, ಹವಾಗುಣ, ಬೆಳೆಗಳ ವೈವಿಧ್ಯತೆಯ ಬಗ್ಗೆ ಶೈಕ್ಷಣಿಕ ಪ್ರವಾಸದಲ್ಲಿ ಶಿಕ್ಷಕರು ಪ್ರಾತ್ಯಕ್ಷಿಕೆ ಮಾಡುತ್ತಿದ್ದರು: ಹಂಪೆ, ಬಾದಾಮಿ, ಐಹೊಳೆ, ಪಟ್ಟದ ಕಲ್ಲು, ವಿಜಯಪುರದ ಗೋಲಗುಂಬಜ, ಬೇಲೂರು, ಹಳೆಬೀಡು, ಮೈಸೂರು, ಚಾಮುಂಡಿ ಬೆಟ್ಟ, ಶ್ರೀರಂಗಪಟ್ಟಣ, ಕೃಷ್ಣೆ, ಕಾವೇರಿ, ಅರಮನೆಗಳು, ಗುರುಮನೆಗಳು, ಕೋಟೆ ಕೊತ್ತಲುಗಳು, ತೋಟ, ಹೊಲಗದ್ದೆಗಳು, ಬೆಟ್ಟಗುಡ್ಡಗಳು, ಪ್ರಾಣಿ-ಪಕ್ಷಿ-ಸಸ್ಯ ಸಂಕುಲ,  ಪ್ರಾಣಿಸಂಗ್ರಹಾಲಯಗಳನ್ನು ತೋರಿಸುತ್ತ ಅವುಗಳ ಚಾರಿತ್ರಿಕ ಹಿನ್ನೆಲೆ ಮತ್ತು ಮಹತ್ವವನ್ನು ಮಕ್ಕಳಿಗೆ ತಿಳಿಸಲಾಗುತ್ತಿತ್ತು.

ಶಾಲಾ ಬ್ಯಾನರುಗಳನ್ನು ಹೊತ್ತ, ಒಪ್ಪಂದದ ಮೇರೆಗೆ ಶೈಕ್ಷಣಿಕ ಪ್ರವಾಸ ಎಂಬ ಬೋರ್ಡ್ ಹಾಕಿಕೊಂಡ ಕೆಂಪು ಬಸ್ಸುಗಳು ಪ್ರವಾಸಕ್ಕೆ ಹೊರಡುತ್ತಿದ್ದವು. ಒಳಗೆ ಕುಳಿತ ಮಕ್ಕಳಲ್ಲಿ ಉತ್ಸಾಹ. ಕಿಟಕಿಯಲ್ಲಿ ಕೈ ಹಾಕಿ ತಮ್ಮ ಶಾಲೆಯ ಹೆಸರು ಹೇಳಿ ಜೈಕಾರ ಕೂಗುತ್ತಿದ್ದರು. ಬಸ್ ಪ್ರಯಾಣ ಬೇಸರವಾಗಬಾರದೆಂದು ಹಾಡು, ಮಿಮಿಕ್ರಿ, ಏಕಪಾತ್ರಾಭಿನಯ, ರಸಪ್ರಶ್ನಾ ಸ್ಪರ್ಧೆ, ಅಂತ್ಯಾಕ್ಷರಿ – ಹೀಗೆ ಹಲವಾರು ಮನೋರಂಜನ ಕಾರ್ಯಕ್ರಮಗಳನ್ನು ಶಿಕ್ಷಕರು ಏರ್ಪಡಿಸುತ್ತಿದ್ದರು. ಅದೊಂದು ಸಂಭ್ರಮದ ಸಡಗರವಾಗಿರುತ್ತಿತ್ತು. ಆದರೆ ಅಂತಹ ಸಡಗರದ ದಿನಗಳು ಕಳೆದು ಹೋಗಿ ಬಹಳ ದಿನಗಳೆ ಆಗಿವೆ ಎಂದು ಅನ್ನಿಸುತ್ತಿದೆ. ಈಗ ಪ್ರವಾಸಗಳೆಂದರೆ ಮೊಬೈಲ್ ಟಾಕ್, ಮೆಸೆಜ್, ಚಾಟಿಂಗ್, ಗೇಮಿಂಗ್ ಮಾಡಿಕೊಂಡು ಗೂಗಿಗಳ ಹಾಗೆ ತಿರುಗಾಡಿ ಬರುವುದೇ ಪ್ರವಾಸ ಎಂಬ ವಾತಾವರಣ ನಿರ್ಮಾಣವಾಗಿದೆ.

ಪಠ್ಯಕ್ಕೆ ಪೂರಕವಾದ ಶೈಕ್ಷಣಿಕ ಪ್ರವಾಸದ ಜೊತೆಗೆ ಮಕ್ಕಳಿಗೆ ಇಂದಿನ ನಾಗರಿಕ ವ್ಯವಸ್ಥೆ ಮತ್ತು ಸೇವೆಗಳ ಬಗ್ಗೆ ಸೂಕ್ತಜ್ಞಾನವನ್ನು ನೀಡಬೇಕಾಗಿದೆ. ಪಂಚಾಯತ್‌ಗಳು, ಪಾಲಿಕೆಗಳು, ಕಂದಾಯ ಕಚೇರಿಗಳು, ಆಸ್ಪತ್ರೆಗಳು, ಪೊಲೀಸ್ ಠಾಣೆ, ನ್ಯಾಯಾಲಯಗಳು, ಶಾಸನಸಭೆಗಳು, ಬ್ಯಾಂಕುಗಳು ಮುಂತಾದವುಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅಲ್ಲಿಯ ಕಾರ್ಯ ವಿಧಾನಗಳು ಮತ್ತು ಜನರಿಗೆ ಅವುಗಳಿಂದ ಯಾವೆಲ್ಲ ಸೇವೆಗಳು ಸಲ್ಲತಕ್ಕದ್ದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುವುದನ್ನು ಸಹ ಪ್ರವಾಸದ ಒಂದು ಭಾಗವನ್ನಾಗಿ ಮಾಡಬೇಕಾದ ಅಗತ್ಯವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT