ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಮಯ ವ್ಯಕ್ತಿತ್ವದ ದೇಜಗೌ: ಜೋಗನ್

ಹಾ.ಮಾ.ನಾಯಕ ಪ್ರಶಸ್ತಿ ಪ್ರದಾನ ಸಮಾರಂಭ
Last Updated 6 ಫೆಬ್ರುವರಿ 2017, 4:43 IST
ಅಕ್ಷರ ಗಾತ್ರ

ಶಿವಮೊಗ್ಗ: ‘ದೇಜಗೌ ಅವರು ಬಾಲ್ಯದ ದಿನಗಳಲ್ಲಿ ಕಷ್ಟದ ಜೀವನ ನಡೆಸಿ, ಪ್ರಾಧ್ಯಾಪಕರಾಗಿ ಹಾಗೂ ಸಾಹಿತಿಯಾಗಿ ನೂರಾರು ಕೃತಿಗಳನ್ನು ರಚಿಸಿದ್ದಾರೆ’ ಎಂದು ಕುವೆಂಪು ವಿವಿ ಕುಲಪತಿ ಡಾ. ಜೋಗನ್ ಶಂಕರ್ ಅಭಿಪ್ರಾಯಪಟ್ಟರು.

ನಗರದ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ಭಾನುವಾರ ಮಂಡ್ಯದ ಎಂ.ಎಲ್. ಶ್ರೀಕಂಠ ಕೂಡಿಗೆ ಸಂಶೋಧನಾ ಕೇಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಶಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಹಾ.ಮಾ. ನಾಯಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ದೇ. ಜವರೇಗೌಡ ಚಿಕ್ಕಂದಿನಲ್ಲೇ ಕಡುಕಷ್ಟದ ದಿನಗಳನ್ನು ಸವೆಸಿದರು. ದಲಿತರೂ  ಅನುಭವಿಸಲಾಗದಂತಹ ನೋವುಗಳನ್ನು ಅವರು ಅನುಭವಿ ಸಿದ್ದರು. ವಿಸ್ಮಯ ವ್ಯಕ್ತಿತ್ವದವರಾಗಿದ್ದ ದೇಜಗೌ ಅಂಬೇಡ್ಕರ್ ಕುರಿತ ಪುಸ್ತಕವನ್ನು ಬಹು ಪರಿಣಾಮಕಾ ರಿಯಾಗಿ ಬರೆದಿದ್ದಾರೆ’ ಎಂದರು.

‘ವಾಚನಾಲಯದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದ ದೇಜಗೌ ಅವರು ಜ್ಞಾನೋದಯ ಸಂಘ ಸ್ಥಾಪಿಸಿದ್ದರು. 1946ರಲ್ಲಿ ಮೈಸೂರು ವಿವಿಯಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ವಿವಿಯ ಪ್ರಸಾರಾಂಗ ವಿಭಾಗಕ್ಕೆ ವಿಶೇಷ ಚೇತನ ನೀಡಿದ್ದರು’ ಎಂದರು.

‘ಹಾ.ಮಾ. ನಾಯಕ ಅವರು ಗುಲ್ಮರ್ಗ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಉತ್ತಮ ವ್ಯಕ್ತಿತ್ವದವರಾಗಿದ್ದ ಹಾ.ಮಾ. ನಾಯಕ ಸಮಾಜಕ್ಕೆ ನೀತಿ ಬೋಧಕರಾಗಿದ್ದರು. ಹಂಪನಾ ಅವರು ಸಹ ಸಾಹಿತಿಯಾಗಿ, ಭಾಷಾ ವಿಜ್ಞಾನಿಯಾಗಿ ವಿಶಿಷ್ಟ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.

2016ನೇ ಸಾಲಿಗೆ ಮರಣೋತ್ತರವಾಗಿ (ಕಟ್ಟಡ ಕಟ್ಟುವಿ ಕೆಗಾಗಿ)   ದೇಜಗೌ ಮತ್ತು ಈ ಬಾರಿ  ಹಂಪನಾ (ಹಂ.ಪ. ನಾಗರಾಜಯ್ಯ) (2017ನೇ ಸಾಲಿಗೆ, ಭಾಷಾ ವಿಜ್ಞಾನಕ್ಕಾಗಿ) ಅವರಿಗೆ ಪ್ರಶಸ್ತಿ ನೀಡಲಾಯಿತು. ದೇಜಗೌ ಅವರ ಪರವಾಗಿ ಪುತ್ರ ಪ್ರೊ. ಶಶಿಧರ ಪ್ರಸಾದ್ ಅವರು ಪ್ರಶಸ್ತಿ ಸ್ವೀಕರಿಸಿದರು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಮಲಾ ಹಂಪನಾ, ಡಿ.ಎಸ್. ಜೀವರಾಜ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕಡಿದಾಳು ಗೋಪಾಲ್, ಕುಪ್ಪಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಡಾ. ಹಾಮಾನಾ ಅವರ ಪುತ್ರ ಎಚ್.ಎಂ. ರವೀಂದ್ರ ಇದ್ದರು.

ಪ್ರಶಸ್ತಿಯು ₹ 50 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಕಂಚಿನ ಸರಸ್ವತಿ ವಿಗ್ರಹ ಒಳಗೊಂಡಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಸ್ವಾಗತಿಸಿದರು. ಡಾ. ಹಾ.ಮಾ.ನಾ ವಿಚಾರವಾಗಿ ನಡೆದ ಸಂವಾದದಲ್ಲಿ ಡಾ.ಹಂಪನಾ, ಉಪನ್ಯಾಸಕ ಪ್ರೊ.ಎಚ್.ಟಿ. ಕೃಷ್ಣ ಮೂರ್ತಿ ಮತ್ತು ಡಾ. ಮೇಟಿ ಮಲ್ಲಿಕಾರ್ಜುನ್, ಡಾ. ಪದ್ಮಾಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT