ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತರ್ಜಾತಿ ವಿವಾಹವೇ ದೊಡ್ಡ ಕ್ರಾಂತಿ’

ಪತ್ರಕರ್ತ ಉಜ್ಜಿನಿ ರುದ್ರಪ್ಪ ಅವರ ‘ವಾಸ್ತವ’ ಕೃತಿ ಬಿಡುಗಡೆ
Last Updated 6 ಫೆಬ್ರುವರಿ 2017, 4:49 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜಾತಿ, ಧರ್ಮದ ಹೆಸರಿನಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿರುವ ಕಾಲಘಟ್ಟದಲ್ಲೂ ಅದನ್ನು ಮೆಟ್ಟಿ ನಿಂತ ಕೆಲವು ಮನಸ್ಸುಗಳು ಅಂತರ್ಜಾತಿ, ಅಂತಧರ್ಮೀಯ ವಿವಾಹವಾಗಿ ಜಾತಿ ನಿರ್ಮೂಲನೆಗೆ ಗಟ್ಟಿತನ ಪ್ರದರ್ಶಿಸುತ್ತಿರುವುದೇ ಬಹುದೊಡ್ಡ ಕ್ರಾಂತಿ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಪ್ರೊ.ಎಸ್. ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಶರಣ ಸಂಗಮ ಸಮಾರಂಭದಲ್ಲಿ ಪತ್ರಕರ್ತ ಉಜ್ಜಿನಿ ರುದ್ರಪ್ಪ ಅವರ ‘ವಾಸ್ತವ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಹರಳಯ್ಯ – ಮಧುವರಸರ ಮಗ–ಮಗಳು ಅಂತರ್ಜಾತಿ ವಿವಾಹವಾದಾಗ, ಕಲ್ಯಾಣದಲ್ಲಿ ಕ್ರಾಂತಿಯಾಯಿತು. ಅಂದು ನಡೆದಿದ್ದು ರಾಜಧರ್ಮ ನಡೆಸಿದ ಮರ್ಯಾದೆಗೇಡು ಹತ್ಯೆ. ರಾಜಧರ್ಮದ ಹೆಸರಿನೊಳಗೆ, ಪುರೋಹಿತ ಬುದ್ಧಿ ನಡೆಸಿದಂತಹ ಮರ್ಯಾದೆಗೇಡು ಹತ್ಯೆ. ಇವತ್ತು ಇಂಥ ಪುರೋಹಿತ ಬುದ್ಧಿಗಳಿಂದಾಗಿ ಪ್ರತಿ ಕುಟುಂಬದಲ್ಲೂ ಮರ್ಯಾದೆಗೇಡು ಹತ್ಯೆ ನಡೆಯುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತ ದೇಶದಲ್ಲಿ ಧರ್ಮಾಂಧತೆ ಬೆಳೆಯುತ್ತಿದೆ. ಜಾತಿಗಳ ಒಳಗೆ ಸಂಲಗ್ನಗಳನ್ನು ತಡೆಯುವ ರಾಜಕೀಯ ಹಾಗೂ ಮತೀಯ ಶಕ್ತಿಗಳು ಹುಟ್ಟಿಕೊಳ್ಳುತ್ತಿವೆ. ಅವೆಲ್ಲವನ್ನೂ ಮೆಟ್ಟಿನಿಂತ ಕೆಲವರು ಅಂತರ್ಜಾತಿ, ಅಂತರಧರ್ಮೀಯ ವಿವಾಹಕ್ಕೆ ಮುಂದಾಗಿದ್ದಾರೆ. ಇಂಥ ಹೆಜ್ಜೆಗಳನ್ನು ಕಂಡಾಗಲೇ ಅಂತರ್ಜಾತಿ, ಅಂತರ್ಧರ್ಮೀಯ ವಿವಾಹಗಳಿಂದ ಜಾತಿ ನಿರ್ಮೂಲನೆ ಸಾಧ್ಯ ಎಂಬ ವಿಶ್ವಾಸ ಮೂಡುತ್ತಿದೆ.

ಇಂಥ ಪ್ರಯತ್ನ ಸಾಧ್ಯ ಎನ್ನುವುದಕ್ಕೆ ರುದ್ರಪ್ಪ ಅವರ ಕೃತಿಯ ಒಳಗೆ ಸಾಕಷ್ಟು ಪುರಾವೆಗಳಿವೆ. ಸಾಕಷ್ಟು ವಾಸ್ತವಗಳಿವೆ. ಅವನ್ನು ತೆರೆದ ಕಣ್ಣಿನಿಂದ ನೋಡಿದಾಗ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ ಎನ್ನಿಸುತ್ತದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃತಿಯ ಲೇಖಕ ಉಜ್ಜಿನಿ ರುದ್ರಣ್ಣ, ‘ವಾಸ್ತವ ಕೃತಿಯಲ್ಲಿ ಪ್ರೀತಿಸಿ ಮದುವೆಯಾದ, ಅಂತರ್ಜಾತಿ, ಅಂತರ
ಧರ್ಮೀಯ ವಿವಾಹವಾದ ಐದಾರು ಜಿಲ್ಲೆಗಳ 30 ಜೋಡಿಗಳ ಕಥೆಗಳಿವೆ. ಪ್ರತಿಯೊಂದು ಕಥೆಯಲ್ಲೂ ವಾಸ್ತವದ ಘಟನೆಗಳನ್ನು ಕಟ್ಟಿಕೊಟ್ಟಿದ್ದೇನೆ. ಈ ಜೋಡಿಗಳಲ್ಲಿ ಅಂಧ, ಕಿವುಡ, ಮೂಕ ಜೋಡಿಗಳು ತಮ್ಮ ಪ್ರೀತಿಯ ಪಯಣ ಹಂಚಿಕೊಂಡಿದ್ದಾರೆ.

ನೈಜ ನೆಲೆಗಟ್ಟಿನ ಕಥೆಗಳನ್ನು ಒಳಗೊಂಡಿರುವುದಕ್ಕಾಗಿ ಈ ಕೃತಿಗೆ ವಾಸ್ತವ ಎಂದು ಶೀರ್ಷಿಕೆ ನೀಡಿದ್ದೇನೆ’ ಎಂದರು. ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿದರು. ಸಾಹಿತಿ ಕುಂ.ವೀರಭದ್ರಪ್ಪ ಕೃತಿಯ ಕುರಿತು ಮಾತನಾಡಿದರು. ಗೋವಿಂದಪ್ಪ, ಪುಸ್ತಕದ ಪ್ರಕಾಶಕಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT