ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳು, 3 ಅಪಘಾತ, ಮೂವರ ಸಾವು

13 ವರ್ಷಗಳಾದರೂ ಬಗೆಹರಿಯದ ‘ಅಪಘಾತ’ ಸಮಸ್ಯೆ: ಮೇಲ್ಸೇತುವೆ, ಅಂಡರ್‌ಪಾಸ್ ನಿರ್ಮಾಣಕ್ಕೆ ಒತ್ತಾಯ
Last Updated 6 ಫೆಬ್ರುವರಿ 2017, 4:53 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣವಾದಾಗಿನಿಂದ ಹೌಸಿಂಗ್‌ಬೋರ್ಡ್‌ ಕಾಲೊನಿ ಮತ್ತು ಕೆಳಗೋಟೆ ನಡುವಿನ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಏರುತ್ತಲೇ ಇದೆ. ಆದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯಾವ ಪ್ರಯತ್ನಗಳೂ ಆಗಿಲ್ಲ.

ಅಪಘಾತ ಸಂಭವಿಸಿದಾಗ ಜನರು ಪ್ರತಿಭಟನೆ ನಡೆಸಿ, ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ ನಿರ್ಮಿಸಲು ಒತ್ತಾಯಿಸುತ್ತಾರೆ. ಪ್ರತಿಭಟನೆಯಲ್ಲಿ ಕೆಲವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡುತ್ತಾರೆ. ಮುಂದಿನ ಅಪಘಾತ ಸಂಭವಿಸುವವರೆಗೂ ವಿಷಯ ತಣ್ಣಗಾಗುತ್ತದೆ.

ಕಳೆದ ಮೂರು ತಿಂಗಳಲ್ಲಿ ಮೂವರು ಇದೇ ಜಾಗದಲ್ಲಿ ಇಂಥದ್ದೇ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಶುಕ್ರವಾರ ರಾತ್ರಿ ನರ್ಸ್ ದುರ್ಗಮ್ಮ (45) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ‘ಸಂಪ್ರದಾಯ’ವೆಂಬಂತೆ ಶನಿವಾರ ನಾಗರಿಕರು ಪ್ರತಿಭಟನೆ ಮಾಡಿದರು. ಪೊಲೀಸರು ಒಂದಷ್ಟು ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಿದರು.

ಕೆಳಗೋಟೆ ಮತ್ತು ಹೌಸಿಂಗ್‌ ಬೋರ್ಡ್‌ ಕಾಲೊನಿಗಳು ಅವಳಿ ಬಡಾವಣೆಗಳಿದ್ದಂತೆ. ಎರಡೂ ಕಡೆಯಿಂದ ಜನ ದಿನವಿಡೀ ಓಡಾಡುತ್ತಿ
ರುತ್ತಾರೆ. ಅದರಲ್ಲೂ ಆಸ್ಪತ್ರೆ, ಶಾಲೆ, ಕಾಲೇಜು ಹಾಸ್ಟೆಲ್‌ಗಳಿರುವುದರಿಂದ ಸಂಚಾರ ದಟ್ಟಣೆ ಇರುತ್ತದೆ.

ಹೌಸಿಂಗ್‌ ಬೋರ್ಡ್‌ ಕಾಲೊನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ನೀರಿಗೆಂದು ಹೆದ್ದಾರಿ ದಾಟಿ ಕೆಳಗೋಟೆಗೆ ಬರುತ್ತಾರೆ. ಹೆದ್ದಾರಿ ನಡುವೆ ಅಂಡರ್‌ಪಾಸ್‌ ತುಸು ದೂರದಲ್ಲಿದೆ. ಬೈಕ್ ಇದ್ದವರಷ್ಟೇ ಅದನ್ನು ಬಳಸುತ್ತಾರೆ. ವೃದ್ಧರು, ಆಸ್ಪತ್ರೆ ಸಿಬ್ಬಂದಿ ಹೆದ್ದಾರಿ ದಾಟಿ, ವಿಭಜಕದ ಸಂದು
ಗಳಲ್ಲಿ ತೂರಿಕೊಂಡೇ ಸಂಚರಿಸುತ್ತಾರೆ. ಇಂಥ ವೇಳೆಯಲ್ಲೇ ಅಪಘಾತಕ್ಕೀಡಾಗುತ್ತಾರೆ ಎಂಬುದು ನಾಗರಿಕರ ವಿಶ್ಲೇಷಣೆ.

ಆರಂಭದಿಂದಲೂ ಬೇಡಿಕೆ: ಚತುಷ್ಪಥ ಹೆದ್ದಾರಿ ನಿರ್ಮಾಣವಾದಾಗಿನಿಂದ ಈ ಜಾಗದಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ಜನ ಪದೇ ಪದೇ ಬೇಡಿಕೆ ಇಟ್ಟಿದ್ದಾರೆ.

‘ಇಷ್ಟಾದರೂ ಕೆಳಸೇತುವೆ ನಿರ್ಮಾಣಕ್ಕೆ ಸರ್ಕಾರಗಳು ಮುಂದಾಗಲಿಲ್ಲ. ಅಪಘಾತ, ಸಾವಿನ ಸಂಖ್ಯೆ ತಗ್ಗಿಲ್ಲ’ ಎಂದು ಹೌಸಿಂಗ್ ಬೋರ್ಡ್  ಬಡಾವಣೆಯ ಪ್ರಕಾಶ್, ಬಸವರಾಜು, ಆಟೊ ಡ್ರೈವರ್‌ಗಳು, ಹೋಟೆಲ್‌ನವರು ಬೇಸರ ವ್ಯಕ್ತಪಡಿಸುತ್ತಾರೆ.

ಮೂರು ವರ್ಷಗಳ ಹಿಂದೆ ಹೀಗೆ ಅಪಘಾತ ಸಂಭವಿಸಿದಾಗ, ನಾಗರಿಕರು ಪ್ರತಿಭಟನೆ ನಡೆಸಿದರು. ಜನರ ಒತ್ತಡಕ್ಕೆ ಮಣಿದು ಕಬ್ಬಿಣದ ಸ್ಕೈವಾಕ್‌ ನಿರ್ಮಾಣಕ್ಕೆ ತಳಹದಿ ಹಾಕಿ, ಕಬ್ಬಿಣದ ಸರಳುಗಳನ್ನು ಹಾಗೆ ಉಳಿಸಿದ್ದಾಯಿತು. ಆದರೆ, ಕಾಮಗಾರಿ ನನೆಗುದಿಗೆ ಬಿತ್ತು. ‘ಈಗ ಬಾಯ್ದೆರೆದು ಕೊಂಡಿರುವ ಕಬ್ಬಿಣದ ಸರಳುಗಳು ಸರ್ವೀಸ್ ರಸ್ತೆ ಸವಾರರನ್ನು ಅಪಾಯಕ್ಕಾಗಿ ಆಹ್ವಾನಿಸುತ್ತಿವೆ.

ಚಳ್ಳಕೆರೆ, ಶಾಲೆ, ಆಸ್ಪತ್ರೆ ಕಡೆಗೆ ಸಾಗುವ ಖಾಸಗಿ ಬಸ್‌ಗಳು, ಲಾರಿಗಳು, ಆಂಬುಲೆನ್ಸ್­ಗಳು ಇದರ ಪಕ್ಕದಲ್ಲೇ ಸಾಗಬೇಕು. ತುಸು ಅಲುಗಿದರೂ ಸರಳುಗಳ ಮೇಲೆ ಉರುಳಿ ದೊಡ್ಡ ದುರಂತ ಸಂಭವಿಸು­ತ್ತದೆ’ ಎಂದು ಘಟನೆಗಳನ್ನು ನಿತ್ಯ ನೋಡುವವರು  ‘ಪ್ರಜಾವಾಣಿ’ ಜತೆ  ಹಂಚಿಕೊಂಡರು.

‘ಡಿವೈಡರ್‌ ಮುಚ್ಚಿದ್ದರಿಂದ ಅಪಾಯ’
ಮೊನ್ನೆ ಅಪಘಾತ ನಡೆಯುವುದಕ್ಕೆ ಮುನ್ನ ಹೆದ್ದಾರಿ ನಡುವಿದ್ದ ಡಿವೈಡರ್‌ ಕಂಬಿಗಳನ್ನು ಕತ್ತರಿಸಿ, ನಾಗರಿಕರು ಓಡಾಡುತ್ತಿದ್ದರು. ‘ಇದೇ ಅಪಘಾತಕ್ಕೆ ಕಾರಣ’ ಎಂಬ ಬೆರಳಿಕೆ ಜನರ ಸಲಹೆ ಮೇರೆಗೆ ಪೊಲೀಸ್‌ನವರು ಹೆದ್ದಾರಿ ಪ್ರಾಧಿಕಾರದ ನೆರವಿನೊಂದಿಗೆ ಶನಿವಾರ ತೆರವಾಗಿದ್ದ ಡಿವೈಡರ್ ಮುಚ್ಚಿಸಿದರು.

‘ಯಾರೋ ಒಬ್ಬರಿಗೆ ತೊಂದರೆ ಎಂದು ಮುಚ್ಚಿದ್ದಾರೆ. ಈಗ ನೋಡಿ, ಇನ್ನೂ ಅಪಘಾತಗಳು ಹೆಚ್ಚಾಗುತ್ತವೆ. ಡಿವೈಡರ್ ತೆರವಾಗಿದ್ದಾಗ, ಎಚ್ಚರದಿಂದ ಜನ ಓಡಾಡುತ್ತಿದ್ದರು. ಈಗ ಕಂಬಿಯ ಸಂದುಗಳಲ್ಲಿ ನುಸುಳುತ್ತಾ, ಅರಿವಿಲ್ಲದೆ ಅಪಘಾತಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತದೆ. ಇದು ಖಂಡಿತ ಪರಿಹಾರವಲ್ಲ’ ಎಂಬುದು ಸುತ್ತಲಿನ ಹೋಟೆಲ್, ಅಂಗಡಿ ಮಾಲೀಕರ ಅಭಿಪ್ರಾಯವಾಗಿದೆ.

ಹೌಸಿಂಗ್ ಬೋರ್ಡ್‌ ಕಾಲೊನಿ ಕಡೆ ಆಸ್ಪತ್ರೆ, 4,000 ನಿವೇಶನಗಳ ಬಡಾವಣೆಗಳಿವೆ. ಆಸ್ಪತ್ರೆಗೆ ಊಟ ತೆಗೆದುಕೊಂಡು ಹೋಗುವವರಿಗೆ ಸುತ್ತಿ ಬಳಸಿ ಓಡಾಡುವುದು ಕಷ್ಟವಾಗುತ್ತದೆ. ಹಾಗಾಗಿ ಪರ್ಯಾಯ ಮಾರ್ಗ ನಿರ್ಮಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

*
ನಮ್ಮ ಆಸ್ಪತ್ರೆಯ ಸಿಬ್ಬಂದಿ,  ವಿದ್ಯಾರ್ಥಿ, ರೋಗಿಯ ಸಂಬಂಧಿಕರು ಅಪಘಾತಕ್ಕೆ ಸಿಲುಕಿದ್ದಾರೆ. ಇಲ್ಲಿ ಸೇತುವೆ ನಿರ್ಮಾಣ ಸೂಕ್ತ.
-ಎಸ್.ಸತ್ಯನಾರಾಯಣ,
ವ್ಯವಸ್ಥಾಪಕ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ

*
ಸಮಸ್ಯೆ ಅರ್ಥವಾಗಿದೆ. ಅಧಿವೇಶನ ಮುಗಿದ ನಂತರ ಅಧಿಕಾರಿಗಳು ಹಾಗೂ ಬಡಾವಣೆಯ ನಾಗರಿಕರ ಜತೆ ಸಭೆ ನಡೆಸಿ, ತಕ್ಷಣ ಸ್ಕೈವಾಕ್ ನಿರ್ಮಾಣದ ಬಗ್ಗೆ ಚರ್ಚಿಸುತ್ತೇನೆ.
-ಬಿ.ಎನ್.ಚಂದ್ರಪ್ಪ,
ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT