ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯರ ಬೆಳವಣಿಗೆ ಗೌರವಿಸಿದರೆ ಉತ್ತಮ ಬದುಕು

ಮುರುಘಾಮಠದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರು
Last Updated 6 ಫೆಬ್ರುವರಿ 2017, 4:58 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮತ್ತೊಬ್ಬರ ಏಳಿಗೆಯನ್ನು ಗೌರವಿಸಿ. ಬೇರೆಯವರ ಸಂಪತ್ತಿಗೆ ಆಸೆ ಪಡೆಬೇಡಿ. ಅಸಹನೆಯ ವರ್ತನೆಯನ್ನು ಕೈಬಿಟ್ಟರೆ ಜೀವನವಿಡೀ ಉತ್ತಮವಾಗಿ ಬದುಕಬಹುದು’ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಬಸವಕೇಂದ್ರ ಮುರುಘಾಮಠ ಮತ್ತು ಎಸ್.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ಭಾನುವಾರ ಮುರುಘಾಮಠದ ಅನುಭವ ಮಂಟಪದಲ್ಲಿ ನಡೆದ 27 ವರ್ಷದ ಎರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮನೆಯ ಸುಟ್ಟಲ್ಲದೇ ನೆರೆಮನೆಯ ಸುಡದು.. ಎಂದಿದ್ದಾರೆ ಬಸವಣ್ಣನವರು. ಹಾಗೆಯೇ ಒಂದು ಸಂಸಾರ ಚೆನ್ನಾಗಿದ್ದರೆ ಅಂಥ ಮನೆಗಳಿಗೆ ಬೆಂಕಿ ಹಚ್ಚುವವರೇ ಹೆಚ್ಚು. ಕಾಡ್ಗಿಚ್ಚನ್ನು ನಿಲ್ಲಿಸಬಹುದು ಆದರೆ ಮಾನವನ ಆಂತರ್ಯದಲ್ಲಿರುವ ಹೊಟ್ಟೆಕಿಚ್ಚನ್ನು ನಂದಿಸಲು ಸಾಧ್ಯವಿಲ್ಲ. ಒಬ್ಬರು ಚೆನ್ನಾಗಿದ್ದಾರೆಂದು ಇನ್ನೊಬ್ಬರು ಹೊಟ್ಟೆ ಉರಿ ಪಟ್ಟುಕೊಳ್ಳುವ ಸ್ಥಿತಿ ಇದೆ. ಇಂಥ ಬೌದ್ಧಿಕ ಮನೋಭಾವದಿಂದ ದೂರವಿರಿ’ ಎಂದು ನವ ವಧುವರರಿಗೆ ಕಿವಿಮಾತು ಹೇಳಿದರು.

‘ಕುಟುಂಬ ಎಂದರೆ ಒಬ್ಬರನ್ನು ಒಬ್ಬರು ಗೌರವಿಸಿ ಬಾಳುವ ವ್ಯವಸ್ಥೆ. ಹಾಗೆಯೇ, ಅತ್ತೆ ಸೊಸೆಯನ್ನು ತಮ್ಮ ಮಗಳಂತೆ, ಸೊಸೆ ಅತ್ತೆಯನ್ನು ತಾಯಿ
ಯಂತೆ ಕಾಣಬೇಕು. ಯಾರೂ ವರದಕ್ಷಿಣೆಗಾಗಿ ಕಿರುಕುಳ ಕೊಡಬಾರದು. ಪರಸ್ಪರ ಅನ್ಯೋನ್ಯವಾಗಿ ಬದುಕು ಸಾಗಿಸಬೇಕು.  ‘ನಮ್ಮೊಳಗೆ ಕ್ರೌರ್ಯ ಇರಬಾರದು. ಬದಲಿಗೆ ಪ್ರೀತಿ, ವಿಶ್ವಾಸದ ಬದುಕು ನಮ್ಮದಾಗಬೇಕು. ಹಿಂಸಾತ್ಮಕ ಪ್ರವೃತ್ತಿ ನಮ್ಮದಾಗಬಾರದು. ಅತ್ಯಂತ ಶಾಂತಿ
ಯುತ ಜೀವನ ಸಾಗಿಸಬೇಕು’ ಎಂದರು.

‘ವಚನ ಸಂವಿಧಾನ ಮತ್ತು ಭಾರತೀಯ ಸಂವಿಧಾನದ ಅನುಗುಣವಾಗಿ ತಳಸಮುದಾಯದವರಿಗೆ ಅನ್ನ, ನೀರು, ಸೂರು ಸಿಗಬೇಕು ಎಂಬ ಆಶಯ
ದೊಂದಿಗೆ ಶ್ರೀಮಠ ಕೆಲಸ ಮಾಡುತ್ತಿದೆ’ ಎಂದು ಶರಣರು ಅಭಿಪ್ರಾಯಪಟ್ಟರು. 

ಹಿರಿಯೂರಿನ ಆದಿಜಾಂಬವ ಮಠದ ಪೀಠಾಧ್ಯಕ್ಷ ಷಡಕ್ಷರಿಮುನಿ ಸ್ವಾಮೀಜಿ ಮಾತನಾಡಿ, ‘ಮುರುಘಾ ಶರಣರ ಸಾಮಾಜಿಕ ಕಳಕಳಿಯ ಕಾರ್ಯ
ಕ್ರಮಗಳು ಚಿಂತನೆಗೆ ಒಳಪಡಿಸುತ್ತವೆ. ಇಂಥ ಕಲ್ಯಾಣ ಮಹೋತ್ಸವಗಳನ್ನು ಎಲ್ಲರೂ ಬೆಂಬಲಿಸಬೇಕು’ ಎಂದರು.

‘ಬುದ್ಧ, ಬಸವಣ್ಣ, ಅಂಬೇಡ್ಕರ್ ಮೊದಲಾದವರಿಗಿದ್ದ ಸಮಾಜದ ಕಾಳಜಿ ಶರಣರಿಗಿದೆ. ದೊಡ್ಡ ಪ್ರಶಸ್ತಿಗಳು ಅವರನ್ನು ಅರಸಿ ಬರಬೇಕಿತ್ತು. ಆದರೆ ಭಕ್ತರೇ ಅವರಿಗೆ ಪ್ರಶಸ್ತಿಗಳು. ನಾವು ಸಮಾಜಕ್ಕೆ ದುಡಿಯುವ ವ್ಯಕ್ತಿಗಳಾಗಬೇಕು’ ಎಂದರು.

‘ಶ್ರೀಗಳಿಗೆ ಜಾತಿಯ ಸೋಂಕಿಲ್ಲ. ಸಮಾಜ ಉನ್ನತೀಕರಿಸುವ ಕೆಲಸ ಯಾರು ಮಾಡುತ್ತಾರೋ ಅವರು ಕಣ್ಮುಂದೆ ಇರುತ್ತಾರೆ. ಶ್ರೀಗಳು ಜನರ ಮಧ್ಯೆ ಸುತ್ತುತ್ತಾರೆ’ ಎಂದರು.

ದಾವಣಗೆರೆ ಅಪೂರ್ವ ಗ್ರೂಪ್ ಆಫ್ ಹೋಟೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಣಬೇರು ರಾಜೇಂದ್ರ ಮಾತನಾಡಿ, ‘ಮದುವೆಗಾಗಿ ಸಾಲ ಮಾಡಿ, ಅದನ್ನು ತೀರಿಸಲಾಗದೇ ಪರದಾಡುವ ಬದಲು ಇಂತಹ ಸರಳ ಸಾಮೂಹಿಕ ವಿವಾಹದಲ್ಲಿ ಮದುವೆಯಾದರೆ ಉತ್ತಮ ಸಂಸ್ಕಾರವೂ ಸಿಕ್ಕಂತಾಗುತ್ತದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಮಾತನಾಡಿದರು. ಕಾರ್ಯಕ್ರಮ ದಾಸೋಹಿಗಳಾದ ಸತೀಶ್, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಹೊಳಲ್ಕೆರೆ ಒಂಟಿಕಂಬ ಮುರುಘಾಮಠದ ಪ್ರಜ್ಞಾನಂದ ಸ್ವಾಮೀಜಿ, ಪ್ರೊ.ಸಿ.ಎಂ. ಚಂದ್ರಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಎನ್.ತಿಪ್ಪಣ್ಣ, ಪರಮಶಿವಯ್ಯ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಡಪದ ಲಿಂಗಾಯತ- ಕ್ಷೌರಿಕ, ಲಿಂಗಾಯತ ನೇಕಾರ- ಜಂಗಮ ಸೇರಿದಂತೆ ನಾಲ್ಕು ಜೋಡಿಗಳ ಅಂತರ್ಜಾತಿ ವಿವಾಹ ಸೇರಿ
ದಂತೆ ಒಟ್ಟು 33 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಜಿ.ಸಿ.ಮಲ್ಲಿಕಾರ್ಜುಯ್ಯ ಸ್ವಾಗತಿಸಿದರು. ಪ್ರೊ.ಸಿ.ವಿ.ಸಾಲಿಮಠ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT