ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರ, ನಿಲುಗಡೆ ತಾಣಗಳಾಗಿ ‘ಕನ್ಸರ್‌ವೆನ್ಸಿಗಳು’

ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಿ, ಸಸ್ಯಾಹಾರಿ ತಿನಿಸು ಅಂಗಳ ಹಾಗೂ ಮಾಂಸಾಹಾರಿ ತಿನಿಸು ಅಂಗಳ ನಿರ್ಮಾಣ
Last Updated 6 ಫೆಬ್ರುವರಿ 2017, 5:01 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಹಲವು ಬಡಾವಣೆಗಳ ವ್ಯಾಪ್ತಿಯಲ್ಲಿ ಇರುವ ಕನ್ಸರ್‌ವೆನ್ಸಿಗಳ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದ್ದು, ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಕಸ, ಕಡ್ಡಿ, ಗಲೀಜು, ತ್ಯಾಜ್ಯ, ಮನೆಯ ಹಿಂಬದಿ ಕೊಳಚೆ ನೀರಿನಿಂದ ಸದಾ ತುಂಬಿ ತುಳುಕುತ್ತಿದ್ದ ನಗರದ ಕನ್ಸರ್‌ವೆನ್ಸಿಗಳನ್ನು ಕಾಂಕ್ರೀಟ್ ಬೆಡ್, ಟೈಲ್ಸ್‌ ಬಳಸಿ ಅಭಿವೃದ್ಧಿಗೊಳಿ ಸಲಾಗುತ್ತಿದೆ. ಅಲ್ಲಿ ವಾಹನ ನಿಲುಗಡೆ, ತಿಂಡಿ ತಿನಿಸು ವ್ಯಾಪಾರ, ಸಣ್ಣ  ಅಂಗಡಿ, ಮುಂಗಟ್ಟುಗಳನ್ನು ಹಾಕಲು ಅವಕಾಶ ಕಲ್ಪಿಸಲಾಗುತ್ತಿದೆ.

ಈ ಹಿಂದೆ ಗೋಪಿ ವೃತ್ತದಲ್ಲಿದ್ದ ಎರಡು ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಗೊಳಿಸಿ, ಸಸ್ಯಾಹಾರಿ ತಿನಿಸು ಅಂಗಳ ಹಾಗೂ ಮಾಂಸಾಹಾರಿ ತಿನಿಸು ಅಂಗಳ ನಿರ್ಮಿಸಲಾಗಿತ್ತು. ಇದರಿಂದ ನಗರದ ಫುಟ್‌ಪಾತ್‌ಗಳಲ್ಲಿ ತಳ್ಳುಗಾಡಿ ನಿಲ್ಲಿಸಿಕೊಂಡು ಸಂಜೆಯ ವೇಳೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸಲಾಗಿತ್ತು. ಇಂದಿಗೂ ಈ ಎರಡು ಫುಡ್‌ಕೋರ್ಟ್‌ಗಳು ತಿಂಡಿ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿವೆ.

ಇದೇ ರೀತಿ ಉಳಿದ ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಿ ನಗರದ ವಿವಿಧೆಡೆ ಇರುವ ಫುಟ್‌ಪಾತ್‌ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸುವುದು, ನಗರವನ್ನು ಫುಟ್‌ಪಾತ್‌ ವ್ಯಾಪಾರಮುಕ್ತ ಮಾಡಿ ಪಾದಚಾರಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಪಾಲಿಕೆಯ ಯೋಜನೆಗಳಲ್ಲಿ ಒಂದಾಗಿದೆ.

ಅಲ್ಲದೇ, ನಗರದಲ್ಲಿ ಹೆಚ್ಚುತ್ತಿರುವ ವಾಹನಗಳಿಗೆ ಸೂಕ್ತ ನಿಲುಗಡೆ ಕಲ್ಪಿಸಲೂ ಈ ಕನ್ಸರ್‌ವೆನ್ಸಿಗಳನ್ನು ಉಪಯೋಗಿ ಸಲಾಗುತ್ತಿದೆ. ನಗರದ ಪ್ರಮುಖ ಭಾಗದಲ್ಲಿರುವ ಕನ್ಸರ್‌ವೆನ್ಸಿ ಮೇಲ್ದರ್ಜೆ ಗೇರಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.

ನಗರದ ಪಾರ್ಕ್ ಬಡಾವಣೆ, ದುರ್ಗಿಗುಡಿ, ರವೀಂದ್ರ ನಗರ, ಗಾಂಧಿನಗರ, ಜಯನಗರ ಸೇರಿದಂತೆ ಇತರೆ ಬಡಾವಣೆಗಳ ಕನ್ಸರ್‌ವೆನ್ಸಿಗಳ ಸ್ವಚ್ಛತಾ ಕಾರ್ಯ ಸಾಗುತ್ತಿದೆ. ಪಾಲಿಕೆ ಎಂಜಿನಿಯರ್‌ಗಳು ವಾರ್ಡ್‌ಗಳಲ್ಲಿರುವ ಗಬ್ಬು ನಾತ ಬೀರುವ ಕನ್ಸರ್‌ವೆನ್ಸಿ ಗುರುತಿಸಿ, ಸುಂದರಗೊಳಿಸುವ ನಿರ್ವಹಣೆ ಮಾಡುತ್ತಿದ್ದಾರೆ.

ವಾರ್ಡ್ ಸಂಖ್ಯೆ 20ರಲ್ಲಿ ಒಟ್ಟು 24 ಕನ್ಸರ್‌ವೆನ್ಸಿಗಳಿವೆ. ಈಗಾಗಲೇ 14 ಕನ್ಸರ್‌ವೆನ್ಸಿಗಳನ್ನು ಆಧುನೀಕರಣ ಗೊಳಿಸಲಾಗಿದೆ. 9 ಕನ್ಸರ್‌ವೆನ್ಸಿಗಳಿಗೆ ₹ 2 ಕೋಟಿ ಅನುದಾನ ದೊರೆತಿದೆ. ವಾತ್ಸಲ್ಯ ಆಸ್ಪತ್ರೆಯ ಪಕ್ಕದಲ್ಲಿರುವ ಒಂದು ಕನ್ಸರ್‌ವೆನ್ಸಿಗೆ ವಿಶೇಷವಾಗಿ ₹ 40 ಲಕ್ಷ ದೊರೆತಿದೆ. ಕನ್ಸರ್‌ವೆನ್ಸಿ ಇರುವ ಸ್ಥಳದಲ್ಲಿ ಮುಖ್ಯವಾಗಿ ವಾಹನ ನಿಲುಗಡೆಗೆ  ಆದ್ಯತೆ ನೀಡಲಾಗಿದೆ. 

‘ಕನ್ಸರ್‌ವೆನ್ಸಿಗಳಲ್ಲೇ ದಿನಕ್ಕೆ 20 ಟನ್ ತ್ಯಾಜ್ಯ ದೊರೆಯುತ್ತಿತ್ತು. ಆದರೆ, ಸ್ವಚ್ಛತಾ ಕಾರ್ಯ ನಡೆಯುತ್ತಿರುವ ಕಾರಣ ವಾರ್ಡ್‌ ವ್ಯಾಪ್ತಿಯ ಏರಿಯಾಗಳಲ್ಲಿ ಹಂದಿಗಳ ಹಾವಳಿ ಕಡಿಮೆಯಾಗಿದೆ. ಕಸದ ಪ್ರಮಾಣವೂ ನಿಯಂತ್ರಣದಲ್ಲಿದೆ. ಚರಂಡಿ ಹಾಗೂ ಒಳಚರಂಡಿಗಳಲ್ಲಿನ ತ್ಯಾಜ್ಯ ಹೊರತೆಗೆಯಲು ಅಲ್ಲಲ್ಲಿ ಸ್ಲ್ಯಾಬ್‌ ಅಳವಡಿಸಲಾಗಿದೆ’ ಎನ್ನುತ್ತಾರೆ ಮಹಾ ನಗರ ಪಾಲಿಕೆ ಸದಸ್ಯ ಜಿ.ಗೋಪಾಲಕೃಷ್ಣ.

‘ಕನ್ಸರ್‌ವೆನ್ಸಿಗಳಿಂದ ಸಾಕಷ್ಟು ಕಸ ತುಂಬಿಕೊಳ್ಳುತ್ತಿತ್ತು. ನಿವಾಸಿಗಳಿಗೆ ಸೊಳ್ಳೆ, ನಾಯಿ, ಹಂದಿಗಳ ಕಾಟವೂ ಹೆಚ್ಚಾಗಿತ್ತು. ಆದರೆ, ಕನ್ಸರ್‌ವೆನ್ಸಿಗಳ ವ್ಯವಸ್ಥಿತ ನಿರ್ವಹಣೆ ಮಾಡುತ್ತಿ ರುವುದರಿಂದ ಸಮಸ್ಯೆ ಇಲ್ಲವಾಗಿದೆ. ಇದೊಂದು ಉತ್ತಮ ಚಿಂತನೆ. ಹಲವು ಜನರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಅಭಿವೃದ್ಧಿಯ ನಂತರ ಕನ್ಸರ್‌ವೆನ್ಸಿ ಇದ್ದ ಸ್ಥಳ ಸುಂದರವಾಗಿ ಕಾಣುತ್ತದೆ. ಸ್ಥಳೀಯರು ತ್ಯಾಜ್ಯ ಸುರಿಯಲು ಹಿಂಜರಿಯುತ್ತಿದ್ದಾರೆ’ ಎನ್ನುತ್ತಾರೆ ಸ್ಥಳೀಯ ನಾಗರಿಕ ಶೇಷಪ್ಪ ಗೌಡ.

‘ವಾರ್ಡ್ ಸಂಖ್ಯೆ 21ರಲ್ಲಿ 6 ಕನ್ಸರ್‌ವೆನ್ಸಿಗಳಿವೆ. ಎಲ್ಲವೂ ಸುಂದರವಾಗಿವೆ. ರಸ್ತೆಗಳಂತೆ ಅಭಿವೃದ್ಧಿಪಡಿಸಲಾಗಿದೆ. ಸಂಪೂರ್ಣ ಸಿಮೆಂಟ್ ಹೊದಿಕೆ ಹಾಕಲಾಗಿದೆ. ನಗರದ ಸ್ವಚ್ಛತೆಗೆ ಸಹಕಾರಿಯಾಗಿದೆ’ ಎಂದು ಪಾಲಿಕೆ ಸದಸ್ಯೆ ರೇಖಾ ಚಂದ್ರಶೇಖರ್ ಮಾಹಿತಿ ನೀಡಿದರು.

‘ವಾರ್ಡ್ ಸಂಖ್ಯೆ 27ರಲ್ಲಿ 6 ಕನ್ಸರ್‌ವೆನ್ಸಿಗಳಿವೆ. ಈಗಾಗಲೇ ಒಂದು ಕನ್ಸರ್‌ವೆನ್ಸಿಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಉಳಿದ  5 ಕನ್ಸರ್‌ವೆನ್ಸಿಗಳ ಸ್ವಚ್ಛತೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು ಪಾಲಿಕೆ ಸದಸ್ಯ ಬಾಬು (ಏಳುಮಲೈ).

‘ಕನ್ಸರ್‌ವೆನ್ಸಿಗಳ ನಿರ್ವಹಣೆಯಿಂದ ಬಡಾವಣೆ ಹಾಗೂ ನಗರ ಸ್ವಚ್ಛವಾಗಿ ಕಾಣುತ್ತದೆ. ಯಾವುದೇ ರೋಗ ರುಜಿನಗಳಿಗೆ ಆಸ್ಪದವಿರುವುದಿಲ್ಲ. ಈ ವ್ಯವಸ್ಥಿತ ನಿರ್ವಹಣೆ ನಗರದ ಎಲ್ಲಾ ಬಡಾವಣೆಗಳಲ್ಲೂ  ನಡೆಯಬೇಕು. ಜನರು ಹೆಚ್ಚಾಗಿ ಕನ್ಸರ್‌ವೆನ್ಸಿಗಳಲ್ಲಿ ಕಸ ಹಾಗೂ ತ್ಯಾಜ್ಯ ಹಾಕುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಸಲಹೆ ನೀಡುತ್ತಾರೆ ನಾಗರಿಕ ಸುರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT