ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪುದಾರಿಗೆ ಎಳೆಯುವ ಪೂರ್ವಗ್ರಹ ಪೀಡಿತರು

ಹರಿಹರ: ಸತ್ಸಂಗದಲ್ಲಿ ನಿರ್ಭಯಾನಂದ ಸ್ವಾಮೀಜಿ
Last Updated 6 ಫೆಬ್ರುವರಿ 2017, 5:03 IST
ಅಕ್ಷರ ಗಾತ್ರ

ಹರಿಹರ: ‘ಇತಿಹಾಸ ಮರೆತವರಿಂದ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ’ ಎಂದು  ವಿಜಯಪುರದ ರಾಮಕೃಷ್ಣ ವಿವೇಕಾನಂದಾಶ್ರಮದ ನಿರ್ಭಯಾ ನಂದ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.

ನಗರದ ಗಿರಿಯಮ್ಮ ಕಾಲೇಜಿನ ಆವರಣದಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಸಮಿತಿಯಿಂದ ಭಾನುವಾರ ನಡೆದ ಸತ್ಸಂಗದಲ್ಲಿ ಅವರು ಆಶೀರ್ವಚನ ನೀಡಿದರು.
‘ಪೂರ್ವಗ್ರಹ ಪೀಡಿತ ಇತಿಹಾಸ ತಜ್ಞರಿಂದ ಸೃಷ್ಟಿಯಾದ ಇತಿಹಾಸದ ಅಭ್ಯಾಸದಿಂದ ಭಾರತೀಯರಲ್ಲಿ ದೇಶಭಕ್ತಿ ಹಾಗೂ ದೇಶಪ್ರೇಮ ಕೊರತೆ ಕಾಡುತ್ತಿದೆ.

ರತ್ನಾಕರನನ್ನು ವಾಲ್ಮೀಕಿಯನ್ನಾಗಿಸಿದ ಹಾಗೂ ಕುರಿ ಕಾಯುವ ಸಾಮಾನ್ಯ ವ್ಯಕ್ತಿಯನ್ನು ಮಹಾಕವಿ ಕಾಳಿದಾಸನನ್ನಾಗಿ ಪರಿವರ್ತಿಸಿರುವುದು ದೇಶದ ಸಂಸ್ಕೃತಿಯ ಶಕ್ತಿಗೆ ಸಾಕ್ಷಿಯಾಗಿದೆ. ಇತಿಹಾಸವನ್ನು ತಪ್ಪಾಗಿ ಬಿಂಬಿಸದೇ ಸತ್ಯಾಂಶ ಹಾಗೂ ಸಕಾರಾತ್ಮಕ ಅಂಶಗಳನ್ನು ಪ್ರಕಟಿಸುವ ಮೂಲಕ ದೇಶಪ್ರೇಮದ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ಪ್ರಪಂಚದ ವಿಜ್ಞಾನ ಹಾಗೂ ತಂತ್ರಜ್ಞಾನದ ತಂತ್ರಾಶಗಳ ಮೂಲಾಧಾರ ಭಾರತೀಯ ಸಂಸ್ಕೃತಿ ಹಾಗೂ ವೇದಗಳು. ಶ್ರೇಷ್ಠ ವಿಜ್ಞಾನಿಗಳು ಹಾಗೂ ಸಂಶೋಧಕರು ನಮ್ಮ ದೇಶದ ಕೊಡುಗೆಗಳನ್ನು ಸ್ಮರಿಸುತ್ತಾರೆ. ಆದರೆ, ನಮ್ಮವರಿಗೆ ಈ ಜ್ಞಾನದ ಅರಿವು ನೀಡುವ ಇತಿಹಾಸ ಸೃಷ್ಟಿಯಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ‘ಪ್ರಸ್ತುತ ಶಿಕ್ಷಣ ಅಂಕಗಳಿಗೆ ಸೀಮಿತವಾಗಿದೆ. ವ್ಯಕ್ತಿತ್ವ ನಿರ್ಮಾಣದಲ್ಲಿ ವಿಫಲವಾಗಿದೆ. ಬ್ರಿಟಿಷರು ಭಾರತವನ್ನು ವಶದಲ್ಲಿಟ್ಟುಕೊಳ್ಳಲು ದೇಶದ ಸಂಸ್ಕೃತಿ ಹಾಗೂ ಇತಿಹಾಸವನ್ನು ತಿರುಚಿ, ದೇಶದ ಶಿಕ್ಷಣ ಪದ್ಧತಿಯನ್ನು ನಾಶ ಮಾಡಿದ್ದಾರೆ. ಗುಲಾಮರನ್ನು ತಯಾರು ಮಾಡುವ ಶಿಕ್ಷಣ ಪದ್ಧತಿ ರೂಪಿಸಿ ದೇಶದ ಸಂಸ್ಕೃತಿಯನ್ನು ಹಾಳುಗೆಡವಿದ್ದಾರೆ’ ಎಂದರು.

‘ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡುವ ಹಾಗೂ ದೇಶದ ಸಂಪನ್ಮೂಲಗಳನ್ನು ಅನಗತ್ಯವಾಗಿ ವ್ಯರ್ಥಗೊಳಿಸದೇ ದೇಶ ಕಟ್ಟುವ ಪ್ರತಿಜ್ಞೆ ಮಾಡಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT