ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿ ಬೆಳಗಲು ‘ಅಮೆರಿಕದ ದೀಪ’

ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿದ್ಯುತ್‌ ದೀಪಗಳ ಅಳವಡಿಕೆ
Last Updated 6 ಫೆಬ್ರುವರಿ 2017, 5:15 IST
ಅಕ್ಷರ ಗಾತ್ರ

ದಾವಣಗೆರೆ: ‘ಸ್ಮಾರ್ಟ್ ಸಿಟಿ’ ದಾವಣಗೆರೆ ಬೆಳಗಲು ಅಮೆರಿಕದ ವಿದ್ಯುತ್ ದೀಪಗಳು ಬಂದಿವೆ. ವಿಸ್ತರಣೆಗೊಂಡು ಹೊಸ ರೂಪ ಪಡೆದುಕೊಂಡ ದಾವಣಗೆರೆ ನಗರದ ಪಿ.ಬಿ.ರಸ್ತೆಗೆ ಬೆಳಕು ಚೆಲ್ಲಲು ವಿಶೇಷ ವಿನ್ಯಾಸದ ದೀಪಗಳ ಜೋಡಣೆ ಕಾರ್ಯ ಈಗ ಭರದಿಂದ ಸಾಗಿದೆ.

ಪಿ.ಬಿ.ರಸ್ತೆ ವಿಸ್ತರಣೆಯಾಗಿ ಎರಡು ವರ್ಷ ಕಳೆದರೂ ಕಾಮಗಾರಿ ಇದುವರೆಗೂ ಮುಕ್ತಾಯಗೊಂಡಿಲ್ಲ. ಕುಂಟುತ್ತಾ ಸಾಗಿದ ಕಾಮಗಾರಿ ನಡುವೆಯೇ ರಸ್ತೆ ವಿಭಜಕದಲ್ಲಿ ವಿದ್ಯುತ್ ಕಂಬಗಳ ನೆಡಲಾಗುತ್ತಿದೆ.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಒಟ್ಟು 150 ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಪ್ರತಿ ಕಂಬಕ್ಕೆ ₹72,450 ವೆಚ್ಚವಾಗಿದೆ. ಅಳವಡಿಕೆ ಮತ್ತಿತರ ಖರ್ಚೂ ಸೇರಿ ಪ್ರತಿ ಕಂಬಕ್ಕೆ ₹1.80 ಲಕ್ಷ ವೆಚ್ಚವಾಗಿದೆ.

ಒಟ್ಟು ₹2.99 ಕೋಟಿಯನ್ನು ವಿದ್ಯುತ್ ಕಂಬಗಳ ಅಳವಡಿಕೆಗಾಗಿಯೇ ಮೀಸಲಿಡಲಾಗಿದೆ. ಈ ಅನುದಾನವನ್ನು ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ‘ದೂಡಾ‘ ನೀಡಿದೆ ಎನ್ನು ತ್ತಾರೆ ಪಾಲಿಕೆ ಮೇಯರ್ ರೇಖಾ ನಾಗರಾಜ್.

‘ಒಂದು ಕಂಬದಲ್ಲಿ 8 ದೀಪಗಳಿವೆ. 2 ದೊಡ್ಡ ಗಾತ್ರದವು, 1 ಸಣ್ಣ ಗಾತ್ರದ್ದು. 5 ಬಣ್ಣದ ದೀಪಗಳಿವೆ. ಅಷ್ಟೂ ಎಲ್‌ಇಡಿ ದೀಪಗಳು. ಇವುಗಳಿಗೆ ಹೆಚ್ಚಿನ ಮೆಗಾವಾಟ್ ವಿದ್ಯುತ್ ಬೇಕಾಗಿಲ್ಲ’ ಎನ್ನುತ್ತಾರೆ ಮೇಯರ್.

ಅಮೆರಿಕದ ನಂಟು ಹೇಗೆ?: ಒಮ್ಮೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಅಮೆರಿಕಕ್ಕೆ ಹೋಗಿದ್ದರು. ಅಲ್ಲಿ ರಸ್ತೆಗಳ ಮಧ್ಯೆ ಅಳವಡಿಸಿದ್ದ ವಿದ್ಯುತ್ ದೀಪಗಳು ಸಚಿವರ ಗಮನ ಸೆಳೆದವು. ತಕ್ಷಣವೇ ಆ ವಿದ್ಯುತ್ ದೀಪಗಳು ಸಚಿವರ ಮೊಬೈಲ್‌ನಲ್ಲಿ ಸೆರೆಯಾದವು.

ಈ ದೀಪಗಳನ್ನು ತಮ್ಮೂರಿನ ರಸ್ತೆಯಲ್ಲಿ ಬೆಳಗಿಸಲು ಸಾಧ್ಯವೇ ಎಂದು ಅವರು ಯೋಚಿಸಿದರು. ಊರಿಗೆ ಬಂದ ಅವರು ಪಾಲಿಕೆ ಎಂಜಿನಿಯರ್‌ಗಳ ಬಳಿ ಮಾಹಿತಿ ಹಂಚಿಕೊಂಡರು. ಬೀದಿದೀಪ ನಿರ್ಮಿ ಸುವ ಕಂಪೆನಿ ಪ್ರತಿನಿಧಿಗಳನ್ನೂ ಕರೆಸಿ ದರು. ಚರ್ಚೆ ನಡೆದು, ಅಮೆರಿಕದಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳಂತೆ ಇಲ್ಲಿಯೇ ನಿರ್ಮಿಸಿಕೊಡಲು ಕಂಪೆನಿ ಪ್ರತಿನಿಧಿಗಳು ಒಪ್ಪಿಕೊಂಡರು. ಕೊನೆಗೂ ಸಚಿವರ ಕನಸು ಸಾಕಾರಗೊಂಡಿತು.

ಈಗ ಅಳವಡಿಕೆ ಕಾರ್ಯವನ್ನು ಆ ಕಂಪೆನಿಯೇ ಮಾಡುತ್ತಿದ್ದು, ನಿರ್ಮಿತಿ ಕೇಂದ್ರ ನಿರ್ವಹಣೆ ಮಾಡುತ್ತಿದೆ. ಫೆಬ್ರುವರಿ ಅಂತ್ಯದ ಒಳಗೆ ಅಷ್ಟೂ ವಿದ್ಯುತ್ ಕಂಬ ಅಳವಡಿಕೆ ಪೂರ್ಣಗೊಳಿ ಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ಎವಿಕೆ ಕಾಲೇಜು, ಡೆಂಟಲ್‌ ಕಾಲೇಜು ರಸ್ತೆಗಳು ಝಗಮಗಿಸುವಂತೆ ಪಿ.ಬಿ. ರಸ್ತೆಯೂ ಹೊಳೆಯಲಿದೆ. ಮುಂದೆ ಪಿ.ಬಿ.ರಸ್ತೆಯಲ್ಲಿ ರಾತ್ರಿ ಬೆಳಕಿನ ಚಿತ್ತಾ ರವೇ ಕಾಣಲಿದೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಮೇಯರ್.

ಪಿ.ಬಿ.ರಸ್ತೆ ಕಾಮಗಾರಿಯೂ ಶೀಘ್ರದಲ್ಲೇ ಮುಕ್ತಾಯವಾಗಲಿದ್ದು, ಅಲ್ಲಿನ ದೂಳು, ರಸ್ತೆಯಲ್ಲೇ ವಾಹನ ನಿಲುಗಡೆ ಮತ್ತಿತರ ಪ್ರವೃತ್ತಿಗಳಿಗೆ ಕಡಿವಾಣ ಬೀಳಲಿದೆ. ಕಾಮಗಾರಿ ಮುಗಿಯುತ್ತಿದ್ದಂತೆ ಸಂಚಾರ ಸೇವೆಯೂ ಸಹಜ ಸ್ಥಿತಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅವರು.

*
ಪಿ.ಬಿ. ರಸ್ತೆ ವಿಸ್ತರಣೆ ಗಜಪ್ರಸವ ವಾಗಿದೆ. ಬೀದಿದೀಪ ಇಲ್ಲದಿರು ವುದರಿಂದ ರಾತ್ರಿ ಪ್ರಯಾಣ ಇನ್ನೂ ಭಯಂಕರ. ಶೀಘ್ರ ಬೀದಿದೀಪ ಬೆಳಗಲಿ.
–ಸಿ.ಕೆ.ರಾಮಚಂದ್ರ,
ವರ್ತಕರು, ಮಂಡಿಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT