ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಿ ಬಾನಿನಲ್ಲಿ ಬಣ್ಣದ ಚಿತ್ತಾರ

ಕುಂದಾಪುರ: ಕೋಡಿ ಕಿನಾರೆಯಲ್ಲಿ ಗಾಳಿಪಟ ಉತ್ಸವ
Last Updated 6 ಫೆಬ್ರುವರಿ 2017, 5:27 IST
ಅಕ್ಷರ ಗಾತ್ರ

ಕುಂದಾಪುರ: ಅಲ್ಲಿ ವಯಸ್ಸಿನ ಭೇದ ಇರಲಿಲ್ಲ. ನೆತ್ತಿಯ ಮೇಲೆ ಬೀಳುತ್ತಿದ್ದ ಸೂರ್ಯನ ತಾಪದ ಬಗ್ಗೆ ಕಾಳಜಿ ಕಾಣಿಸುತ್ತಿರಲಿಲ್ಲ. ಹೆಚ್ಚಿನವರ ಕೈಯಲ್ಲಿ ಉದ್ದನೆಯ ನೂಲಿನ ಪಿಂಡಿ ಇತ್ತು. ಇನ್ನೊಂದಷ್ಟು ಜನ ಅಂಗಡಿಯ ಮುಂದೆ ತಮಗೆ ಬೇಕಾದ ವಸ್ತುವನ್ನು ಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಮತ್ತೆ ಕೆಲವರ ಕಣ್ಣಿನ ದೃಷ್ಟಿ ಬಾನಿನ ಕಡೆಗೆ ನೆಟ್ಟಿತ್ತು.

ಇದಕ್ಕೆಲ್ಲ ಕಾರಣವಾಗಿದ್ದು ಭಾನುವಾರ ಇಲ್ಲಿಗೆ ಸಮೀಪದ ಕೋಡಿಯ ಅರಬ್ಬಿ ಕಡಲ ಕಿನಾರೆಯಲ್ಲಿ ಕೋಟೇಶ್ವರದ ವಕ್ವಾಡಿಯ ಗುರುಕುಲಾ ಪಬ್ಲಿಕ್ ಸ್ಕೂಲ್ ಆಯೋಜಿಸಿದ್ದ ಗಾಳಿಪಟ ಪ್ರದರ್ಶನ ಹಾಗೂ ಸ್ವರ್ಧೆ ಕಾರ್ಯಕ್ರಮ.

ಮಧ್ಯಾಹ್ನ 3 ಗಂಟೆಯ ಉರಿ ಬಿಸಿಲಿನಲ್ಲಿ ಕಾದಿರುವ ವಿಶಾಲವಾದ ಮರಳು ರಾಶಿಯ ಕಡಲ ಕಿನಾರೆಯಲ್ಲಿ ಆರಂಭವಾದ ಗಾಳಿಪಟ ಉತ್ಸವವನ್ನು ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ಬಾಲ್ಯದ ದಿನಗಳಲ್ಲಿ ಗಾಳಿಪಟವನ್ನು ಹಾರಿಸಬೇಕು ಎನ್ನುವ ಬಯಕೆ ಇದ್ದರೂ, ಅದು ನನಸಾಗಿರಲಿಲ್ಲ. ಕೋಡಿ ಕಡಲ ಕಿನಾರೆಯಲ್ಲಿ ಇಂದು ಹಾರಿಸುತ್ತಿರುವ ಗಾಳಿಪಟ ನನ್ನ ಜೀವನದ ಮೊದಲನೆಯ ಗಾಳಿಪಟ ಎಂದು ನೆನಪಿಸಿಕೊಂಡರು. ಬದಲಾವಣೆಯ ಕಾಲಘಟ್ಟದಲ್ಲಿ ಇರುವ ಈ ದಿನಗಳಲ್ಲಿ ನಮ್ಮ ಸಂಸ್ಕೃತಿಯನ್ನು ನೆನಪಿಸುವ ಇಂತಹ ಉತ್ಸವಗಳ ಅಗತ್ಯ ಇದೆ ಎಂದರು.

ಬಾಂಡ್ಯಾ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಅದಾನಿ ಗ್ರೂಪ್‌ನ ಸಹ ಅಧ್ಯಕ್ಷ ಕಿಶೋರ ಆಳ್ವಾ, ಬಾಂಡ್ಯಾ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಆಡಳಿತ ಟ್ರಸ್ಟಿಗಳಾದ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ, ಅನುಪಮಾ ಎಸ್. ಶೆಟ್ಟಿ, ನಟ ಹರೀಶ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆರಾದ ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ ಸುರೇಶ್ ಶೆಟ್ಟಿ, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಬಿಲ್ಲವ, ಗುರುಕುಲಾ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಶಾಜಿ ನಾಯರ್ ಇದ್ದರು. ಗುರುಕುಲಾ ಪಬ್ಲಿಕ್ ಸ್ಕೂಲ್ನ ಶಿಕ್ಷಕ ರಾಮಚಂದ್ರ ಹೆಬ್ಬಾರ್ ನಿರೂಪಿಸಿದರು.

ಗಾಳಿಪಟಕ್ಕೆ  ಭಾರೀ ಬೇಡಿಕೆ
ದೊಡ್ಡವರು ಸಣ್ಣವರು ಎನ್ನದೆ ಗಾಳಿ ಪಟ ಹಾರಿಸಬೇಕು ಎನ್ನುವ ಉತ್ಸಾಹದಿಂದ ಬಂದಿದ್ದ ಸಾವಿರಾರು ಮಂದಿ ಬಣ್ಣ ಬಣ್ಣದ ವಿವಿಧ ಆಕಾರಗಳ ಗಾಳಿಪಟಗಳನ್ನು ಖರೀದಿ ಮಾಡಿ ಅಗಸಕ್ಕೆ ಹಾರಿ ಬಿಡುವ ಮೂಲಕ ಸಂಭ್ರಮಿಸಿದರು.

ಸಣ್ಣ ಗಾತ್ರದಿಂದ ಹಿಡಿದು ರಕ್ಕಸ ಗಾತ್ರದ ವರೆಗಿನ ವಿವಿಧ ಆಕಾರದ ಗಾಳಿಪಟಗಳು ಕೋಡಿ ಕಿನಾರೆಯ ಅಗಸದಲ್ಲಿ ಹಾರಾಟ ಮಾಡುವ ಮೂಲಕ ನೀಲಿ ಬಾನಿನಲ್ಲಿ ಬಣ್ಣದ ಚಿತ್ತಾರ ಮೂಡಿಸಿತು.  ಮಂಗಳೂರಿನ ಟೀಂ 1 ತಂಡದ ಸದಸ್ಯರು ಹಾರಿಸಿದ ಭಾರಿ ಗಾತ್ರದ ಗಾಳಿಪಟಗಳು ನೋಡುಗರ ಮನಸೂರೆಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT