ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಪಡೆಯುವಾಗಲೇ ದಂಡ!

ಬೀರೂರು: ರೈಲ್ವೆ ಇಲಾಖೆಯ ಕಾರ್ಯವೈಖರಿಗೆ ಅಸಮಾಧಾನ
Last Updated 6 ಫೆಬ್ರುವರಿ 2017, 5:35 IST
ಅಕ್ಷರ ಗಾತ್ರ

ಬೀರೂರು: ನೀವು ಬೀರೂರಿನಿಂದ ಜನ ಶತಾಬ್ದಿ ರೈಲಿನಲ್ಲಿ ಪ್ರಯಾಣಿಸುವವರೇ? ಹಾಗಿದ್ದರೆ ಎಚ್ಚರ.... ನೀವು ಮೊದಲೇ ಕಾಯ್ದಿರಿಸಿದ ಟಿಕೆಟ್‌ ಹೊಂದಿಲ್ಲ ಎಂದರೆ ಜನಶತಾಬ್ದಿ ರೈಲಿನಲ್ಲಿ ಪ್ರಯಾಣಿಸಬಯಸುವವರೇ ಆಗಿದ್ದರೆ ದಂಡ ತೆರಲು ಸಿದ್ಧವಾಗಿ ಬನ್ನಿ...

ಬೀರೂರು ರೈಲ್ವೆ ನಿಲ್ದಾಣದಲ್ಲಿ ರಿಸರ್ವೇಷನ್‌ ಕೌಂಟರ್‌ ಇದೆ, ಕಾಯ್ದಿರಿಸಿದ ಟಿಕೆಟ್‌ ಪಡೆಯುವವರಿಗೆ ಸೇವೆಯೂ ಲಭ್ಯವಿದೆ. ರೈಲ್ವೆ ಇಲಾಖೆಯ ಹೊಸ ನೀತಿಯಂತೆ ಹುಬ್ಬಳ್ಳಿ ಕಡೆ ಜನಶತಾಬ್ದಿ ರೈಲಿನಲ್ಲಿ ಸಂಚರಿಸುವವರಿಗೆ ರೈಲು ಬರುವ ಅರ್ಧಗಂಟೆ ಮುಂಚೆ ಟಿಕೆಟ್‌ ನೀಡುವ ಸೌಲಭ್ಯ ಕೂಡಾ ಇದೆ, ಅದಕ್ಕೆ ನೀವು ಅರ್ಜಿ ಭರ್ತಿ ಮಾಡಿ ಕೊಡಬೇಕು. ಅದೆಲ್ಲ ಸಮಸ್ಯೆಯಲ್ಲ....

ನೀವು ತುರ್ತಾಗಿ ಜನಶತಾಬ್ದಿ ರೈಲಿನಲ್ಲಿ ಸಂಚರಿಸಲು ನಿಲ್ದಾಣಕ್ಕೆ ಬಂದು ಅರ್ಜಿ ಭರ್ತಿ ಮಾಡಲು ಹೋದರೆ ಪ್ಲಾಟ್‌ಫಾರಂನಲ್ಲಿ ಟಿಕೆಟ್‌ ಪರೀಕ್ಷಕರ ಬಳಿ ಹೋಗುವಂತೆ ಹೇಳಲಾಗುತ್ತದೆ. ಟಿಕೆಟ್‌ ಪರೀಕ್ಷಕರು 5 ಜನ ಪ್ರಯಾಣಿಕರಿಗೆ ಸೇರಿ ಒಂದು ಟಿಕೆಟ್‌ ಬರೆದು ಕೊಡುತ್ತಾರೆ, ಅದರಲ್ಲಿ ನಮೂದಾಗುವುದು ದಂಡ ಸಹಿತ ಪ್ರಯಾಣ ಎಂದು...!

ಬೀರೂರಿನಿಂದ ದಾವಣಗೆರೆಗೆ ನೀವು ಶತಾಬ್ದಿ ರೈಲು ಬರುವ ಮುನ್ನ ಅರ್ಜಿ ಬರೆದು ಟಿಕೆಟ್‌ ಪಡೆದರೆ ₹5 ರಿಯಾಯಿತಿ ಇದೆ, ಅದೇ ಟಿಕೆಟ್‌ ಪರೀಕ್ಷಕರ ಬಳಿ ಪಡೆದರೆ ₹95 ಅಥವಾ ₹100  ನೀಡಬೇಕು. 5ಜನರಿಗೆ ಟಿಕೆಟ್‌ ಒಂದೇ ಬರೆದು ₹500 ಸಂಗ್ರಹಿಸುವ ಜಾಣತನ. ಇನ್ನು ಹಬ್ಬ–ಹರಿದಿನ, ಸಾಲು ರಜಾದಿನಗಳಲ್ಲಿ ನೀವು ಕೆಲಬಾರಿ ಬೆಂಗಳೂರಿಗೆ ಹೋಗಲೇಬೇಕಾದರೆ ಟಿಕೆಟ್‌ ಪರೀಕ್ಷಕರ ಪ್ರಕಾರ ಟಿಕೆಟ್‌ ದರ ₹480, ಅದೂ ದಂಡ ಸಹಿತ, ನೀವು ರೈಲೇ ಹತ್ತಿಲ್ಲ, ಟಿಕೆಟ್‌ ಕೇಳಿದ್ದಕ್ಕೇ ನಿಮಗೆ ದಂಡ. ಹೇಗಿದೆ ಪ್ರಯಾಣಿಕ ಸ್ನೇಹಿ ಇಲಾಖೆಯ ಕಾರ್ಯವೈಖರಿ.....?

ವಾಸ್ತವವಾಗಿ ಟಿಕೆಟ್‌ ಪರೀಕ್ಷಕರು ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಸಂಚರಿಸಿ ಟಿಕೆಟ್‌ ರಹಿತ ಪ್ರಯಾಣಿ ಕರಿಂದ ದಂಡ ಸಂಗ್ರಹಿಸಬೇಕು, ಆದರೆ ಶತಾಬ್ದಿ ರೈಲಿನಲ್ಲಿ ಪ್ರಯಾಣಿಸುವವರಿಗೆ ನೀವು ಟಿಕೆಟ್‌ ನೀಡಿದರೆ ಸಾಕು, ನಿಮ್ಮ ದಂಡ ಸಂಗ್ರಹ ಗುರಿ ತಲುಪಿದಂತೆ, ಇದರಿಂದ ಆಗುವ ನಷ್ಟ ಯಾರಿಗೆ ?

ಇನ್ನು ಶತಾಬ್ದಿ ರೈಲು ಬರುವ ಆಸುಪಾಸಿನಲ್ಲಿಯೇ ಶಿವಮೊಗ್ಗ, ಮೈಸೂರು, ಬೆಂಗಳೂರಿಗೆ ತೆರಳುವ ರೈಲುಗಳೂ ಬರುತ್ತವೆ, ಕೆಲವು ಬಾರಿ ಪ್ರಯಾಣಿಕರು ತಪ್ಪು ರೈಲಿಗೆ ಹತ್ತಿ ಅರ್ಧ ದಾರಿಯಲ್ಲಿ ಹಿಂದಿರುಗಿ ಬರಬೇಕಾದ ಸನ್ನಿವೇಷಗಳೂ ಇವೆ, ಇದಕ್ಕೆ ಕಾರಣ ಯಾವ ರೈಲು ಎಷ್ಟು ಹೊತ್ತಿಗೆ ಯಾವ ಪ್ಲಾಟ್‌ಫಾರಂ ಗೆ ಬರುತ್ತದೆ ಎನ್ನುವ ಮಾಹಿತಿ ಪ್ರಕಟಿಸುವ ವ್ಯವಸ್ಥೆ ಇಲ್ಲದಿರುವುದು.

ಕೆಲವು ಬಾರಿ ಟಿಕೆಟ್‌ ನೀಡುವವರು ರೈಲು ಬರುವುದನ್ನು ಘೋಷಿಸುವ ಹೊತ್ತಿಗೆ ರೈಲು ಪ್ಲಾಟ್‌ಫಾರಂಗೆ ಬಂದು ನಿಂತಿರುತ್ತದೆ. ಪ್ರಯಾಣಿಕರಿಗೆ ಎತ್ತ ಸಾಗಬೇಕು ಎನ್ನುವ ಅಯೋಮಯ ಸ್ಥಿತಿ, ಕಾರಣ. ಹಿಮಾಲಯ ಸದೃಶವಾಗಿ ಕಾಣುವ ಪ್ಲಾಟ್‌ಫಾರಂ ತಲುಪಿಸುವ ರೈಲ್ವೆ ಮೇಲ್ಸೇತುವೆ.

ಕೆಲ ಪ್ರಯಾಣಿಕರು ತುರ್ತಾಗಿ ಹಳಿ ದಾಟಲು ಯತ್ನಿಸಿ ರೈಲಿಗೆ ತಲೆದಂಡ ಅರ್ಪಿಸುವ ಘಟನೆಗಳೂ ಆಗೀಗ ನಡೆಯುತ್ತವೆ. ಜೊತೆಗೆ ಪ್ರಯಾ ಣಿಕರು ಎಷ್ಟೇ ಇದ್ದರೂ ಟಿಕೆಟ್‌ ಕೌಂಟರ್‌ ಮಾತ್ರ ಒಂದೇ.... ಟಿಕೆಟ್‌ ಪಡೆಯುವ ವೇಳೆಗೆ ರೈಲು ನಿಲ್ದಾಣ ದಾಟಿರುತ್ತದೆ.

ನೈಋತ್ಯ ರೈಲ್ವೆಯ ಅಧಿಕಾರಿಗಳು ಈ ಲೋಪಗಳನ್ನು ಸರಿಪಡಿಸಿ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಮತ್ತು ಸುಲಭ ಸೇವೆ( ದಂಡರಹಿತ) ನೀಡಲಿ ಎನ್ನುವುದು ಪ್ರಯಾಣಿಕರ ಆಗ್ರಹ.
–ಎನ್‌.ಸೋಮಶೇಖರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT