ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾದಿಂದ ಅನಕೊಂಡ, ಗುಜರಾತ್‌ನಿಂದ ಸಿಂಹ

ಸದ್ಯದಲ್ಲೇ ಶ್ರೀಲಂಕಾ, ಗುಜರಾತ್, ತಮಿಳುನಾಡಿನಿಂದ ಹೊಸ ಅತಿಥಿಗಳು
Last Updated 6 ಫೆಬ್ರುವರಿ 2017, 5:59 IST
ಅಕ್ಷರ ಗಾತ್ರ

ಮೈಸೂರು: ಹಕ್ಕಿಜ್ವರ ಭೀತಿ ದೂರವಾದ ಬೆನ್ನಲೇ ಹೊಸ ಅತಿಥಿಗಳನ್ನು ಸ್ವಾಗತಿಸಲು ಇಲ್ಲಿನ ಚಾಮರಾಜೇಂದ್ರ ಮೃಗಾಲಯ ಸಜ್ಜಾಗುತ್ತಿದೆ. ಶ್ರೀಲಂಕಾದಿಂದ ಆರು ಹಸಿರು ಅನಕೊಂಡ, ಗುಜರಾತ್‌ನಿಂದ ಒಂದು ಸಿಂಹ ಹಾಗೂ ತಮಿಳುನಾಡಿನಿಂದ ಎರಡು ಸಿಂಗಳೀಕ ಕೆಲವೇ ದಿನಗಳಲ್ಲಿ ಮೃಗಾಲಯ ಸೇರಲಿವೆ. ಈ ಪ್ರಾಣಿಗಳ ವಿನಿಮಯಕ್ಕೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಒಪ್ಪಿಗೆ ದೊರೆತಿದೆ.

‘ಇಷ್ಟರಲ್ಲಾಗಲೇ ಅನಕೊಂಡ ಹಾಗೂ ಶೌರ್ಯ ಎಂಬ ಸಿಂಹ ಮೃಗಾಲ ಯಕ್ಕೆ ಬರಬೇಕಿತ್ತು. ಆದರೆ, ಹಕ್ಕಿಜ್ವರದ ಆತಂಕ ಇದ್ದ ಕಾರಣ ಮುಂದೂಡಲಾ ಯಿತು. ಮಾರ್ಚ್‌ ಮೊದಲ ವಾರದಲ್ಲಿ ಈ ಎಲ್ಲಾ ಪ್ರಾಣಿಗಳನ್ನು ತರಲಾಗುತ್ತಿದೆ’ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಕೆ.ಕಮಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಾಣಿ ವಿನಿಮಯ ಯೋಜನೆಯಡಿ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮೂರು ವರ್ಷ ವಯಸ್ಸಿನ ಈ ಸಿಂಹ ತರಲು ಹಿಮಾಲಯನ್‌ ಕರಡಿ, ತೋಳ, ಕಪ್ಪು ಹಂಸ ಹಾಗೂ ಇತರ ಪಕ್ಷಿಗಳನ್ನು ಗುಜರಾತ್‌ನ ಜುನಾಗಡದ ಸಕ್ಕರಬಾಗ್‌ ಮೃಗಾಲಯಕ್ಕೆ ನೀಡಲಾಗುತ್ತಿದೆ. ಕಳೆದ ವರ್ಷ ‘ರೆನಿತಾ’ ಎಂಬ ಸಿಂಹ ಹೊಸ ಅತಿಥಿಯಾಗಿ ಮೃಗಾಲಯ ಸೇರಿತ್ತು. ಮೃಗಾಲಯದಲ್ಲಿ ಸದ್ಯ ನಾಲ್ಕು ಸಿಂಹಗಳು ಇವೆ. 1984ರಲ್ಲಿ ಇಲ್ಲಿ 22 ಸಿಂಹಗಳಿದ್ದವು.

ತಮಿಳುನಾಡಿನ ರಾಜಧಾನಿ ಚೆನ್ನೈ ಬಳಿಯ ವಂದಲೂರು ಮೃಗಾಲಯ ದಿಂದ ಹೆಣ್ಣು ಹಾಗೂ ಗಂಡು ಸಿಂಗಳೀಕಗಳನ್ನು ಕರೆ ತರಲಾಗುತ್ತಿದೆ. ಲಂಕಾದ ರಾಷ್ಟ್ರೀಯ ಮೃಗಾಲಯದಿಂದ ಅನಕೊಂಡಗಳು ಬರಲಿವೆ. ಅದಕ್ಕೆ ಬದಲಾಗಿ ಕೃಷ್ಣಮೃಗವನ್ನು ನೀಡಲಾಗು ತ್ತಿದೆ. ಅನಕೊಂಡ ಹೆಬ್ಬಾವುಗಳನ್ನು ಪಾಲನೆ ಮಾಡುತ್ತಿರುವ ಮೊಟ್ಟಮೊದಲ ಮೃಗಾಲಯ ಇದಾಗಿದೆ.

ಈ ಮಧ್ಯೆ, ಮೃಗಾಲಯದ ಸುಪರ್ದಿ ನಲ್ಲಿರುವ ಕೂರ್ಗಳ್ಳಿ ಚಾಮುಂಡಿ ಪ್ರಾಣಿಗಳ ಸಂರಕ್ಷಣೆ, ಪುನರ್ವಸತಿ ಕೇಂದ್ರದಲ್ಲಿ ವನ್ಯಜೀವಿ ವೈದ್ಯಕೀಯ ಆಸ್ಪತ್ರೆ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

‘ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮ ಗಾರಿ ನಡೆಯುತ್ತಿದೆ. ಸದ್ಯದಲ್ಲೇ ಕಾಡೆಮ್ಮೆ ತಳಿ ವಂಶಾಭಿವೃದ್ಧಿ ಕೇಂದ್ರವನ್ನು ತೆರೆಯಲಾಗುವುದು. ಅಲ್ಲದೆ, ವಿವಿಧ ಅರಣ್ಯ ಪ್ರದೇಶದಿಂದ ಬರುವ ಪ್ರಾಣಿ ಗಳನ್ನು ರಕ್ಷಿಸಿಡಲು ಎಂಟು ಹೋಲ್ಡಿಂಗ್‌ ಕೊಠಡಿ ನಿರ್ಮಿಸಲಾಗುತ್ತಿದೆ. ಈ ಕೇಂದ್ರದಲ್ಲಿ ಈಗಾಗಲೇ ಎಂಟು ಹೋಲ್ಡಿಂಗ್‌ ಕೊಠಡಿಗಳು ಇವೆ’ ಎಂದು ಅವರು ಮಾಹಿತಿ ನೀಡಿದರು.

ಸುತ್ತೂರು ಮಠದಿಂದ ಕರೆತಂದಿ ರುವ ದ್ರೋಣ ಮತ್ತು ಚಂಪಾ ಎಂಬ ಎರಡು ಸಾಕಾನೆಗಳನ್ನು ಚಾಮುಂಡಿ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ. ಗಾಯಗೊಂಡಿರುವ ಪ್ರಾಣಿಗಳನ್ನೂ ಇಲ್ಲಿ ತಂದಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

*
ಪ್ರಾಣಿಗಳ ಹಸ್ತಾಂತರಕ್ಕೆ ವಿವಿಧ ಮೃಗಾಲಯದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡಿದ್ದು, ನಮ್ಮಿಂದಲೂ ಕೆಲ ಪ್ರಾಣಿ, ಪಕ್ಷಿ ನೀಡಲಾಗುವುದು.
-ಕೆ.ಕಮಲಾ,
ಕಾರ್ಯನಿರ್ವಾಹಕ ನಿರ್ದೇಶಕಿ, ಮೃಗಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT