ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂದಿನ ಯುವಕರಿಗೆ ದೇಶಾಭಿಮಾನದ ಕೊರತೆ’

ನೆನಪಿನ ಬುತ್ತಿ ಬಿಚ್ಚಿಟ್ಟ ವಿರೂಪಾಕ್ಷಯ್ಯ ಹಿರೇಮಠ
Last Updated 6 ಫೆಬ್ರುವರಿ 2017, 6:09 IST
ಅಕ್ಷರ ಗಾತ್ರ

ಗಜೇಂದ್ರಗಡ: ಸ್ವಾತಂತ್ರ್ಯದ ಹೆಸರು ತೆಗೆದರೆ ಸಾಕು, ವಿರೂಪಾಕ್ಷಯ್ಯ ಹಿರೇಮಠ ಅವರು ಭಾವುಕರಾಗುತ್ತಾರೆ. ಏಕೆಂದರೆ ಹೈದರಾಬಾದ್‌ ನಿಜಾಮ ರಜಾಕಾರರ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ, ಬದುಕುಳಿದ ಕೊಂಡಿಗಳಲ್ಲಿ ಇವರೂ ಒಬ್ಬರು.

90 ವರ್ಷದ, ಹೊಸಳ್ಳಿ ಗ್ರಾಮದ ವಿರೂ­ಪಾಕ್ಷಯ್ಯ ಹಿರೇಮಠ ಅವರು ಪಟ್ಟಣಕ್ಕೆ ಚಿಕಿತ್ಸೆಗಾಗಿ ಬಂದಿದಿದ್ದಾಗ ‘ಪ್ರಜಾವಾಣಿ’ ಜೊತೆ ಮಾತನಾಡಿ ನೆನಪಿನ ಬುತ್ತಿ ಬಿಚ್ಚಿಟ್ಟರು.

ಮೂಲತಃ ಇವರು ಊರು ಅಂದಿನ ರಾಯಚೂರು ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮಿಟ್ಲಕೊಡದವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಆ ಭಾಗದ ಜನರಿಗೆ ಇನ್ನೂ ಗಗಗನಕುಸುಮವಾಗಿತ್ತು. ಕಾರಣ ಹೈದರಾಬಾದ್‌ ನಿಜಾಮ ಸೈನಿಕರಾದ ರಜಾಕಾರರರಿಂದ ತತ್ತರಿಸಿ ಹೋಗಿದ್ದರು. ಅವರ ಉಪಟಳ ತಾಳದೇ ಇವರ ಕುಟುಂಬ ಸ್ವಾತಂತ್ರ್ಯ ಸಿಕ್ಕ ರೋಣ ತಾಲ್ಲೂಕಿನ ಹೊಸಳ್ಳಿಗೆ ಬರಬೇಕಾಯಿತು ಎಂದು ವಿರೂಪಾಕ್ಷಯ್ಯ ಬದುಕಿನ ಹಿನ್ನೋಟ ಬಿಚ್ಚಿಟ್ಟರು.

ತಂದೆ ಸಂಗಯ್ಯ ತಾಯಿ ಗಂಗವ್ವ, ಒಕ್ಕಲುತನದ ಮನೆತನ, ಹೋರಾಟದಲ್ಲಿ ಬಿದ್ದ ಪರಿಣಾಮ 5ನೇ ವರ್ಗದ ವರೆಗೆ ಶಾಲೆ ಕಟ್ಟಿ ಹತ್ತಿ ಇಳಿದವರು ಅತ್ತ ಮುಖ ಹಾಯಿಸಲಿಲ್ಲ. ತಾರುಣ್ಯದ ಕೆಚ್ಚು, ಮನೆಯಲ್ಲಿ ಏನೇನೋ ಹೇಳಿ ರಜಾಕಾರರ ವಿರುದ್ಧ ಹೋರಾಡಲು ಇಡೀ ರಾತ್ರಿ ಜನರನ್ನು ಸಂಘಟಿಸುವ ಕಾರ್ಯ ಮಾಡಿದರು. ಅವರ ಮೇಲೆ ದಾಳಿ ಮಾಡುವ ತಂತ್ರವನ್ನು ಕರಗತ ಮಾಡಿಕೊಳ್ಳಲು ಊರಿನ ಸಮೀಪದ ಇಟಗಿ ಶಿಬಿರದಲ್ಲಿ ಸೇರಿಕೊಂಡರು.

ಇಟಗಿ ಗಡಿಯನ್ನು ದಾಟಿದರೆ ಸಾಕು ಹೈದರಾಬಾದ್‌ ಪ್ರದೇಶದ ಪ್ರವೇಶ, ಹೀಗಾಗಿ ಅವರು ದಾಳಿಗೆ ಬಾರದ, ಸ್ವಾತಂತ್ರ್ಯ ದೊರೆತ ಈ ಭಾಗದಲ್ಲಿ ಹೋರಾಟ ರೂಪಿಸುವಲ್ಲಿ ಮುಂಚೂಣಿ­ಯ­­ಲ್ಲಿದ್ದರು. ‘ಅಂದು ಸಮೀಪದ ಮಾಲ­ಗಿತ್ತಿ ಗ್ರಾಮದಲ್ಲಿ ಒಮ್ಮೆ ರಜಾಕಾರರ ಕೈಗೆ ಸಿಕ್ಕು ಅವರು ಹೊಡೆದ ಚರಿಯಿಂದ ನಾನು ಬಚಾವಾದೆ. ಅದರಿಂದ ಗುಂಡು ತಾಗಿದ್ದರೆ ನಾನು ಇಂದು ನಿಮ್ಮ ಜೊತೆಗೆ ಇಂದು ಮಾತನಾಡುವಂತಿರಲಿಲ್ಲ.

ಅವತ್ತು ಅಲ್ಲೊಬ್ಬ ಹೆಣ್ಣಮಗಳು ರಜಾ­ಕಾರರಿಗೆ ಗುಪ್ತ ಮಾಹಿತಿ ನೀಡಿದ್ದಳು. ನಮ್ಮಕೂಡ ಇದ್ದ ಸಿದ್ದರಾಮಪ್ಪ  ಹಾರಿಸಿದ ಗುಂಡಿಗೆ ಆಕೆ ಮೂರುನಾಕು ಅಡಿ ಮೇಲೆ ಹಾರಿ ಸತ್ತಳು. ಅದು ಸಣ್ಣ ಕತೆಯಾಗಿರಲಿಲ್ಲ’ ಎಂದರು.

‘ಅಂದು ಹನಮಸಾಗರ, ಮಾಲ­ಗಿತ್ತಿಯಲ್ಲಿ ರಜಾಕಾರರ  ಠಾಣೆಗಳಿದ್ದವು. ಇತ್ತ ಇಟಗಿ ಸೂಡಿ ಶಿಬಿರಗಳಲ್ಲಿ ಪರೇಡ್, ಗುಂಡುಹಾರಿಸುವುದು, ರಜಾಕಾರ­ರಿಂದ ತಪ್ಪಿಸಿಕೊಳ್ಳುವುದು, ಬಾಂಬ್ ತಾಯಾರಿಸುವ ಕಲೆಯನ್ನು ಈ ಶಿಬಿರ­ಗಳಲ್ಲಿ ಕಲಿಸುತ್ತಿದ್ದರು. ಹೈದರಾಬಾದ್‌ ಸರಹದ್ದಿನಿಂದ ಈ ಕಡೆಗಿರುವ ಈ ಶಿಬಿರದವರು ತರಬೇತಿ ಪಡೆದು  ಹೈದ­ರಾಬಾದ್ ಪ್ರದೇಶದಲ್ಲಿ ಹೋಗಿ ಸಾಧ್ಯ­ವಿದ್ದಷ್ಟು ಜನ ರಜಾಕಾರರನ್ನು ಕೊಂದು ಬರು­ತ್ತಿದ್ದರು.

ಒಮ್ಮೆ ಇಟಗಿಯಿಂದ ನಡೆದು ಹೋಗಿ ಮಾಲಗಿತ್ತಿಯಲ್ಲಿ ಮಾಳಗಿ ಮೇಲೆ ಮಲಗಿದ ರಜಾಕಾರರಿಗೆ ಕಾಣದಂತೆ ರಾತ್ರಿ ಹೋಗಿ ಬಾಂಬ್ ಒಗೆದ ಪರಿಣಾಮವಾಗಿ ಅವರಲ್ಲಿ 4 ಜನ ಸ್ಥಳದಲ್ಲೇ ಸತ್ತರು. ರಜಾಕಾರರು ವಿಲೀನ ಆದಾಗ ನಮಗ ಆದ ಸಂತೋಷ ಹೇಳ­ತೀರದು’ಎಂದು ಭಾವುಕರಾದರು.

ಇಂದಿನ ಯುವಕರಿಗೆ ದೇಶಾಭಿಮಾನದ ಕೊರತೆ ಇದೆ. ಯುವಜನರು ದೇಶಕ್ಕಾಗಿ ಹೋರಾಡುವ ಮನೋಭಾವ ಬೆಳೆಸಿ­ಕೊಳ್ಳ­ಬೇಕು’ ಎನ್ನುವ ವಿರೂಪಾಕ್ಷಯ್ಯ ಅವರು ಇಂದಿನವರ ದೇಶಭಕ್ತಿಗೆ ಬೇಸರ ವ್ಯಕ್ತಪಡಿಸುತ್ತಾರೆ.

ರಜಾಕಾರರೊಂದಿಗೆ ಹೋರಾಡಿದ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಕೊಂಡಿಯಾಗಿ ವಿರೂಪಾಕ್ಷಪ್ಪ ನಮ್ಮ ಜೊತೆ ಇದ್ದಾರೆ. ಅವರಿಗೆ ಐವರು ಮಕ್ಕಳಿದ್ದು ಉನ್ನತ ಹುದ್ದೆಯಲ್ಲಿದ್ದಾರೆ.
-ಡಾ.ಮಲ್ಲಿಕಾರ್ಜುನ ಕುಂಬಾರ

*
ಇಟಗಿ ಗ್ರಾಮದಿಂದ ಮುಗಳಿ ಗ್ರಾಮಕ್ಕೆ ಹೋಗುವ ದಾರಿ­ಯಲ್ಲಿ ಹೋರಾಟ ಶಿಬಿರ ಸ್ಥಾಪಿಸಲಾ­ಗಿತ್ತು. ಅಲ್ಲಿ  ಸುಮಾರು 80ಕ್ಕೂ ಹೆಚ್ಚು ಜನ   ತರಬೇತಿ ಪಡೆಯುತ್ತಿದ್ದರು.
-ವಿರೂಪಾಕ್ಷಯ್ಯ ಹಿರೇಮಠ,
ಹೋರಾಟಗಾರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT