ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯವನ್ನು ಏಳು ಭಾಗಗಳಲ್ಲಿ ವಿಂಗಡಿಸಿ’

Last Updated 6 ಫೆಬ್ರುವರಿ 2017, 6:24 IST
ಅಕ್ಷರ ಗಾತ್ರ

ಧಾರವಾಡ: ‘ರಾಜ್ಯವನ್ನು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಎಂದು ಹೆಸರಿಸಬೇಕು ಎಂದು ಹಿರಿಯ ಸಂಶೋಧಕ ಚಿದಾನಂದಮೂರ್ತಿ ಸಲಹೆ ಮಾಡಿದ್ದಾರೆ. ಆದರೆ ಆ ವಿಂಗಡಣೆ ಸಮರ್ಪಕವಲ್ಲ. ಕರ್ನಾಟಕ ಪ್ರದೇಶವನ್ನು ಏಳು ಭಾಗಗಳಲ್ಲಿ ವಿಂಗಡಿಸಬೇಕು’ ಎಂದು  ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಸಲಹೆ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಕರ್ನಾಟಕ ರಾಜ್ಯವನ್ನು ಪ್ರದೇಶವಾರು ಹೆಸರಿಸುವುದು ಅಗತ್ಯವಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದ ಧಾರವಾಡ ಜಿಲ್ಲೆ ಪ್ರದೇಶವನ್ನು ‘ಧಾರವಾಡ ಕರ್ನಾಟಕ’ ಎಂದು  ಹೆಸರಿಸಬೇಕು. ಅದರ ವ್ಯಾಪ್ತಿಯಲ್ಲಿ  ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟ ಮತ್ತು ಗದಗ ಜಿಲ್ಲೆಗಳು ಬರಬೇಕು.

‘ಕಲಬುರಗಿ ಕರ್ನಾಟಕ’ ಪ್ರದೇಶದಲ್ಲಿ ಬೀದರ, ಕಲಬುರಗಿ, ರಾಯಚೂರ, ಮತ್ತು ಯಾದಗಿರಿ ಜಿಲ್ಲೆಗಳು ಇರಬೇಕು. ‘ವಿಜಯ ಕರ್ನಾಟಕ’ ಪ್ರದೇಶದಲ್ಲಿ ಕೊಪ್ಪಳ, ಹೊಸಪೇಟೆ, ಬಳ್ಳಾರಿ ಹಾಗೂ ಹಂಪಿ (ವಿಜಯನಗರ) ಪ್ರದೇಶಗಳು ಬರಬೇಕು.

‘ಕೆಳದಿ ಕರ್ನಾಟಕ’ದಲ್ಲಿ ಹಾವೇರಿ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರ ಜಿಲ್ಲೆಗಳು ಬರಬೇಕು. ‘ಮಧ್ಯ ಕರ್ನಾಟಕ’ ಪ್ರದೇಶದಲ್ಲಿ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಹಾಗ ಕೋಲಾರ ಜಿಲ್ಲೆಗಳು ಬರಬೇಕು. ‘ಕರಾವಳಿ ಕರ್ನಾಟಕ’ ಪ್ರದೇಶದಲ್ಲಿ ಕಾರವಾರ, ಉಡುಪಿ, ಮಂಗಳೂರ, ಕೊಡಗು ಪ್ರದೇಶಗಳು ಬರಬೇಕು ಹಾಗೂ ‘ಮೈಸೂರ ಕರ್ನಾಟಕ’ ಪ್ರದೇಶದಲ್ಲಿ ಹಾಸನ, ಮೈಸೂರ, ಚಾಮರಾಜನಗರ, ಮಂಡ್ಯ, ರಾಮನಗರ ಹಾಗೂ ಬೆಂಗಳೂರು-–1 ಮತ್ತು ಬೆಂಗಳೂರು–2 ಬರಬೇಕು’ ಎಂದು ಸೂಚಿಸಿದ್ದಾರೆ.

‘ಬೆಂಗಳೂರಿನ ಕೆಲವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ, ಮುಂಬಯಿ ಕರ್ನಾಟಕ ಪ್ರದೇಶಕ್ಕೆ ಕಿತ್ತೂರ ಕರ್ನಾಟಕ ಎಂದು ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ, ವ್ಯಾಪ್ತಿಯ ದೃಷ್ಟಿಯಿಂದ ಆ ಹೆಸರುಗಳು ಸಮರ್ಪಕವಾಗಿಲ್ಲ. ರಾಜ್ಯವನ್ನು ಈ ಮೇಲಿನಂತೆ ವಿಂಗಡಿಸಿದರೆ, ಸಮರ್ಪಕವೆನಿಸುತ್ತವೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT