ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ, ಸಾಂಸ್ಕೃತಿಕ ಪರಿಚಾರಕ ಗೋಪಾಲಕೃಷ್ಣ ನಾಯಕ

Last Updated 6 ಫೆಬ್ರುವರಿ 2017, 6:42 IST
ಅಕ್ಷರ ಗಾತ್ರ

ಅಂಕೋಲಾ: ನೆರೆಯ ಕುಮಟಾ ತಾಲ್ಲೂಕಿನ ತೊರ್ಕೆ ಮೂಲದ ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಸಾಹಿತಿ ಶಿಕ್ಷಣ ತಜ್ಞ, ನೃತ್ಯ ಕಲಾವಿದ ಹಾಗೂ ಸಾಂಸ್ಕೃತಿಕ ಪರಿಚಾರಕರೆಂದು ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿದ್ದ ಗೋಪಾಲಕೃಷ್ಣ ಪಿ. ನಾಯಕ ಇನ್ನಿಲ್ಲ.

ಜಿ.ಪಿ.ನಾಯಕರು ಕುಮಟಾದ ಬಾಳಿಗ ಕಾಲೇಜಿನಿಂದ ವಿಜ್ಞಾನ ಪದವೀಧರರಾಗಿ ಅಂಕೋಲಾ ಪಟ್ಟಣದ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಗೋಕರ್ಣ ಸಮೀಪದ ಸಾಣಿಕಟ್ಟಾದ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿದರು.

ಚಿಂತಕ ಗೌರೀಶ ಕಾಯ್ಕಿಣಿ, ಕವಿ ಸು.ರಂ. ಯಕ್ಕುಂಡಿ, ಸಾಹಿತಿಗಳಾದ ವಿ.ಜೆ. ನಾಯಕ, ಶ್ಯಾಮ ಹುದ್ದಾರ ಮುಂತಾದವರ ಒಡನಾಟದಿಂದಾಗಿ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದರು. ದಿನಕರ ದೇಸಾಯಿ ಅವರ ಚೌಪದಿ ಸಾಹಿತ್ಯಕ್ಕೆ ಕೊಡುಗೆ ಸಲ್ಲಿಸಿದರು. ‘ಪದಪಲ್ಲವಿ’ ಚೌಪದಿಗಳ ಸಂಗ್ರಹ ಸುಪ್ರಸಿದ್ಧವಾಗಿದೆ.

ಭರತ ನಾಟ್ಯದಲ್ಲಿ ಆಸಕ್ತಿಹೊಂದಿದ ನಾಯಕರು ಹಲವಾರು ಪ್ರದರ್ಶನಗಳನ್ನು ನೀಡಿದ್ದರು. ಸೈರಂದ್ರಿ, ರಕ್ತಾಕ್ಷಿ, ಶೂದ್ರ ತಪಸ್ವಿ ಮುಂತಾದ ನಾಟಕಗಳನ್ನು ನಿರ್ದೇಶಿಸಿ ಹವ್ಯಾಸಿ ರಂಗ ಭೂಮಿಯನ್ನು ಶ್ರೀಮಂತಗೊಳಿಸಿದ್ದರು. ಲಲಿತಾ ಕಲಾ ಮಂಡಳಿ ಎಂಬ ಸಂಸ್ಥೆ ಸ್ಥಾಪಿಸಿದರು.

ಯಕ್ಷ ರಂಗದಲ್ಲಿಯೂ ಗುರುತಿಸಿಕೊಂಡಿದ್ದ ಜಿ.ಪಿ. ನಾಯಕರು ಖ್ಯಾತ ಯಕ್ಷಗಾನ ಕಲಾವಿದ ಕೆರೆಮನೆ ಶಂಭು ಹೆಗಡೆ ಅವರ ನಿಕಟವರ್ತಿಗಳಾಗಿದ್ದರು.
ದೊರೆಯದ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ: ಸಾಕಷ್ಟು ಅರ್ಹತೆಗಳಿದ್ದರು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಬೇಕೆಂಬ ಅವರ ಕನಸು ಸಾಹಿತ್ಯ ಲೋಕದಲ್ಲಿನ ರಾಜಕಾರಣದಿಂದ ನನಸಾಗಲಿಲ್ಲ. ಕುಮಟಾದಲ್ಲಿ ಜರುಗಿದ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ನಡೆಯದ ಸನ್ಮಾನ: ಜಿ.ಪಿ. ನಾಯಕ ಅವರನ್ನು ಸನ್ಮಾನಿಸುವುದಕ್ಕಾಗಿ ಎಲ್.ಎಸ್. ಶಾಸ್ತ್ರಿ ನೇತೃತ್ವದಲ್ಲಿ ಸಮಾರಂಭವನ್ನು ಫೆ.11ರಂದು ಸಂಘಟಿಸಲಾಗಿತ್ತು. ಆಮಂತ್ರಣ ಪತ್ರಿಕೆ ಅಂಕೋಲಾ ತಲುಪಿದ ದಿನವೇ ಇಹಲೋಕ ತ್ಯಜಿಸಿದ್ದಾರೆ. ‘ನನಗೇಕೆ ಸತ್ಕಾರ, ಹಲವಾರು ಹಾರ? ಜನಕಂಡ ಮೆಚ್ಚಲು ಅದುವೆ ಪುರಸ್ಕಾರ’ ಎಂಬ ಅವರ ಚುಟುಕಿನ ನುಡಿಯನ್ನು ರುಜುವಾತು ಪಡಿಸಿದ್ದಾರೆ.

ಗೋಪಾಲಕೃಷ್ಣ ನಾಯಕ
ಹುಬ್ಬಳ್ಳಿ:
ಕನ್ನಡದ ಖ್ಯಾತ ಸಾಹಿತಿ, ಕಲಾವಿದ, ಶಿಕ್ಷಕ ಗೋಪಾಲಕೃಷ್ಣ ನಾಯಕ(89) ಅವರು ಅನಾರೋಗ್ಯದಿಂದ ಭಾನುವಾರ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ತೊರ್ಕೆ ಗ್ರಾಮದವರಾಗಿದ್ದು, ಕೆಲ ಕಾಲ ಗೋಕರ್ಣದಲ್ಲಿ ನೆಲೆಸಿದ್ದರು. ಸುಮಾರು 15 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT