ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್ ಸಿಟಿ ಕೆಲಸಗಳಿಗೆ ಶೀಘ್ರ ಚಾಲನೆ’

ಶಿವಾಲಯ ವಾರ್ಷಿಕೋತ್ಸವದಲ್ಲಿ ಸಂಸದ ಸುರೇಶ ಅಂಗಡಿ ಹೇಳಿಕೆ
Last Updated 6 ಫೆಬ್ರುವರಿ 2017, 6:46 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸರ್ಕಾರದಿಂದ ಅಗತ್ಯ ಅನುದಾನ ದೊರೆತಿದ್ದು, ಅಭಿವೃದ್ಧಿ ಕಾಮಗಾರಿಗಳು ಶೀಘ್ರವೇ ಚಾಲನೆ ಪಡೆಯಲಿವೆ ಎಂದು ಸಂಸದ ಸುರೇಶ ಅಂಗಡಿ ಇಲ್ಲಿ ತಿಳಿಸಿದರು. ರಾಮತೀರ್ಥನಗರದ ಶಿವಾಲಯ ದಲ್ಲಿ ಶನಿವಾರ ನಡೆದ 11ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಗರದ ಸ್ಮಾರ್ಟ್‌ ಸಿಟಿ ಕಾರ್ಯಯೋಜನೆ ಸಿದ್ಧವಾಗಿದ್ದು ರಾಮತೀರ್ಥ ನಗರದಿಂದಲೇ ಕಾರ್ಯಾ ರಂಭಗೊಳ್ಳಲಿವೆ. ಗುಡಿಯಲ್ಲಿ ಸ್ಮಾರ್ಟ್‌ ಆಗಿ ನಿಂತ ಶಿವನಂತೆ ಈ ನಗರ ಅದರಲ್ಲೂ ರಾಮತೀರ್ಥನಗರ ಅತ್ಯಂತ ಸುಂದರ ನಗರವಾಗಲಿದೆ. ಎಲ್ಲರೂ ರಾಮತೀರ್ಥನಗರದತ್ತ ಮುಖ ಮಾಡುವಂತಾಗಲಿದೆ. ಶಾಶ್ವತ ಕುಡಿವ ನೀರಿನ ಯೋಜನೆ ಸದ್ಯದಲ್ಲಿಯೇ ಚಾಲನೆ ಪಡೆಯಲಿದೆ’ ಎಂದು ಹೇಳಿದರು.

‘ಜಗತ್ತಿನ ಶೇ 65ರಷ್ಟು ಯುವಶಕ್ತಿ ನಮ್ಮ ದೇಶದಲ್ಲಿದೆ. ಹೀಗಾಗಿ, ಎಲ್ಲ ಕ್ಷೇತ್ರಗಳಲ್ಲಿಯೂ ಭಾರತ ಮುಂಚೂಣಿ ಯಲ್ಲಿದೆ. ಮುಂಬರುವ ಕೆಲವೇ ವರ್ಷಗಳಲ್ಲಿ ವಿಶ್ವದ ಭೂಪಟದಲ್ಲಿ ದೊಡ್ಡ ಹೆಸರು ಮಾಡಲಿದೆ’ ಎಂದರು.

‘ವಿಶ್ವದಲ್ಲೇ ನಮ್ಮದು ಸರ್ವ ಶಕ್ತ ರಾಷ್ಟ್ರ. ಧರ್ಮದ ನೆಲೆವೀಡು. ವಿಶ್ವಕ್ಕೇ ಆಧ್ಯಾತ್ಮಿಕತೆ ಕೊಟ್ಟದ್ದೇ ಈ ನೆಲ’ ಎಂದು ನಿಲಜಿಯ ಅಲೌಕಿಕ ಧ್ಯಾನಮಂದಿರದ ಶಿವಾನಂದ ಸ್ವಾಮೀಜಿ ಹೇಳಿದರು.

‘ನಮ್ಮ ಮಣ್ಣಿನಲ್ಲಿ ಹುದುಗಿರುವ ಅಗಾಧ ಶಕ್ತಿಯಿಂದ ಅನುಭಾವಿಗಳು, ತತ್ವಜ್ಞಾನಿಗಳು, ಸಂಶೋಧಕರು, ವಿಜ್ಞಾನಿಗಳು, ದಾರ್ಶನಿಕರು, ಜನ್ಮ ತಳೆದಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ, ಧೀರತ್ವ ನಮಗೆ ದಾರಿದೀಪವಾಗಿವೆ’ ಎಂದರು, ‘ಮಕ್ಕಳಿಗೆ ಟಿ.ವಿ ಸಂಸ್ಕೃತಿ ಬೇಡ. ಮನೆಯಲ್ಲಿ ಗುರು ಹಿರಿಯರ ಮಾರ್ಗದರ್ಶನ ಅವರಿಗೆ ದೊರೆಯ ಬೇಕು’ ಎಂದು ಸಲಹೆ ನೀಡಿದರು.

ಶಿವಾಲಯ ಟ್ರಸ್ಟ್‌ ಸಮಿತಿ, ರಹವಾಸಿಗಳ ಸಂಘದ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ, ‘ರಾಮತೀರ್ಥನಗರದ ಅಭಿವೃದ್ಧಿಗೆ ಕಾಲ ಕೂಡಿ ಬಂದಿದೆ. ಸಂಸದರು, ಮುಖಂಡರ ಬೆಂಬಲದಿಂದ ನಮ್ಮ ಹೋರಾಟಕ್ಕೆ ಬೆಲೆ ದೊರೆಯಲಿದೆ ಎನ್ನುವ ವಿಶ್ವಾಸವಿದೆ’ ಎಂದರು.

ರಾಮತೀರ್ಥನಗರದ ರಹವಾಸಿಗಳ ಸಂಘದ ಮತ್ತು ಯುವಕ ಸಂಘದ ಸದಸ್ಯರು, ಪದಾಧಿಕಾರಿಗಳು, ಮಹಿಳೆಯರು, ಭಾಗವಹಿಸಿದ್ದರು. ಗಂಗಾಂಬಿಕಾ ಮಹಿಳಾ ಸ್ವಸಹಾಯ ಸಂಘದವರು ಪ್ರಾರ್ಥಿಸಿದರು. ಕಾರ್ಯದರ್ಶಿ ಸಿ.ಬಿ. ಚವಡಪ್ಪನವರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT