ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿ ಸಂಕೀರ್ಣಕ್ಕೆ ₹ 10 ಕೋಟಿ

ಅನುದಾನ ಮಂಜೂರಾಗಾಗಿ ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ
Last Updated 6 ಫೆಬ್ರುವರಿ 2017, 6:55 IST
ಅಕ್ಷರ ಗಾತ್ರ

ಶಿರಸಿ: ಜೀರ್ಣಾವಸ್ಥೆಯಲ್ಲಿರುವ ನಗರದ ಹಳೆ ತಹಶೀಲ್ದಾರ್ ಕಚೇರಿ ಸಮುಚ್ಚಯವನ್ನು ಹೊಸ ಸಂಕೀರ್ಣ ನಿರ್ಮಿಸಲು ಲೋಕೋಪಯೋಗಿ ಇಲಾಖೆ ₹ 10 ಕೋಟಿ ವೆಚ್ಚದ ಯೋಜನೆ ರೂಪಿಸಿದೆ.

ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳು ಒಂದೇ ಸಂಕೀರ್ಣದಲ್ಲಿದ್ದರೆ ಸರ್ಕಾರಿ ಕೆಲಸಗಳಿಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ಕುರಿತು ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ತಿಂಗಳ ಹಿಂದೆ ನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರನ್ವಯ ಕಂದಾಯ ಇಲಾಖೆಯ ಸಲಹೆ ಪಡೆದು ಲೋಕೋಪಯೋಗಿ ಇಲಾಖೆ ಯೋಜನೆ ಸಿದ್ಧಪಡಿಸಿದೆ.

ತಹಶೀಲ್ದಾರ್ ಕಚೇರಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡ ನಂತರ ಹಳೆಯ ಕಟ್ಟಡದಲ್ಲಿ ಬಾಡಿಗೆ ಯಲ್ಲಿ ಇದ್ದ ಸಮಾಜ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ , ಅಳತೆ ಮತ್ತು ತೂಕ ಇನ್ನಿತರ ಇಲಾಖೆಗಳಿಗೆ ಈ ಸಮುಚ್ಚಯದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಇನ್ನೊಂದು ಕಡೆ ಉಪಬಂದೀಖಾನೆ ಕಾರ್ಯ ನಿರ್ವಹಿಸುತ್ತಿದೆ. ತೀರಾ ಹಳೆಯದಾಗಿರುವ ಈ ಸಮುಚ್ಚಯ ಸಂಪೂರ್ಣ ಜೀರ್ಣವಾಗಿದೆ. ಇದನ್ನು ತೆರವುಗೊಳಿಸಿ ಯೋಜಿತ ಕಚೇರಿ ಸಂಕೀರ್ಣವನ್ನು ಇದೇ ನಿವೇಶನದಲ್ಲಿ ನಿರ್ಮಿಸಲಾಗುತ್ತದೆ.

‘ಒಟ್ಟು 18 ಸರ್ಕಾರಿ ಕಚೇರಿಗಳಿಗೆ ಅವಕಾಶವಾಗುವಂತೆ ಕಚೇರಿ ಸಂಕೀರ್ಣದ ಯೋಜನೆ ಸಿದ್ಧಪಡಿಸಲಾಗಿದೆ. ವ್ಯವಸ್ಥಿತ ವಾಹನ ನಿಲುಗಡೆ ಪ್ರದೇಶ, ವಿವಿಧ ಕಚೇರಿಗಳಿಗೆ ಪ್ರತ್ಯೇಕ ಕೊಠಡಿ, ಸುಸಜ್ಜಿತ ಸರ್ಕಾರಿ ಸಭಾಭವನ ಒಳಗೊಂಡ ಮೂರು ಅಂತಸ್ತಿನ ಕಟ್ಟಡದ ನೀಲನಕ್ಷೆ ತಯಾರಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ವಿ.ವಿ. ಜನ್ನು ಹೇಳಿದರು.

ಹೊಸ ಸಂಕೀರ್ಣ ನಿರ್ಮಾಣವಾದಲ್ಲಿ ಸ್ವಂತ ಕಟ್ಟಡ ಇಲ್ಲದಿರುವ ಸಣ್ಣ ನೀರಾವರಿ ಇಲಾಖೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಣ ಕಲ್ಯಾಣ, ಸಾಮಾಜಿಕ ಅರಣ್ಯ, ವಾಣಿಜ್ಯ ತೆರಿಗೆ, ಸಹಕಾರಿ ನಿಬಂಧಕರ ಕಚೇರಿ ಇತರ ಇಲಾಖೆಗಳು ಒಂದೆಡೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

ಈಗಾಗಲೇ ಮಿನಿ ವಿಧಾನ ಸೌಧದಲ್ಲಿ ಕೆಲವು ಇಲಾಖೆಯ ಕಚೇರಿಗಳಿವೆ. ಇವುಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಇಲಾಖೆಗಳಿಗೆ ಯೋಜನೆಯಲ್ಲಿ ಜಾಗ ಕಲ್ಪಿಸಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರದ ಮಂಜೂರು ದೊರೆತ ನಂತರ ಇದೇ ಸಮುಚ್ಚಯದಲ್ಲಿರುವ ಉಪ ಬಂದೀಖಾನೆಯನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಿದ ಮೇಲೆ ಹಳೆಯ ಕಟ್ಟಡ ಕೆಡವಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದರು.

*
ಸರ್ಕಾರಿ ಕಚೇರಿಗಳಿಗೆ ಒಂದೇ ಕಡೆ ಕೆಲಸ ನಿರ್ವಹಿಸಲು ಅನುಕೂಲವಾಗಲು ಜಾಗ ಕಲ್ಪಿಸುವ ಯೋಜಿತ ಸಂಕೀರ್ಣದ ಪ್ರಸ್ತಾವವನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ.
-ವಿ.ವಿ. ಜನ್ನು,
ಕಾರ್ಯನಿರ್ವಾಹಕ ಎಂಜಿನಿಯರ್ , ಪಿಡಬ್ಲ್ಯುಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT