ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಣದ ‘ವಿಹಾರ ತಾಣ’

ನಗರದಲ್ಲಿ ವಾರಂತ್ಯ ಕಳೆಯಲು ಸೃಜನಶೀಲತೆಯ ಸ್ಥಳವೇ ಇಲ್ಲ– ಹಾವೇರಿ ನಾಗರಿಕರ ಆರೋಪ
Last Updated 6 ಫೆಬ್ರುವರಿ 2017, 6:57 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲಿ ಪ್ರವಾಸೋದ್ಯಮ ಹಾಗೂ ನಾಗರಿಕರ ಅನುಕೂಲಕ್ಕಾಗಿ ಸಮರ್ಪಕ ವಿಹಾರ ತಾಣಗಳೇ ಇಲ್ಲದಾಗಿದೆ. ನಗರದ ವಿವಿಧೆಡೆ ಇರುವ ಕೆಲವು ತಾಣಗಳು ಅನಾದರಕ್ಕೆ ಒಳಗಾಗಿವೆ. 

ರಾಜ್ಯದ ಕೇಂದ್ರ ಬಿಂದುವಿನಂತಿರುವ ಹಾವೇರಿ ನಗರವು ಜಿಲ್ಲಾ ಕೇಂದ್ರವಾಗಿ 20 ವರ್ಷ ಸಮೀಪಿ ಸುತ್ತಿದೆ.  ಸುಮಾರು 74 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, ಈಗ ‘ನಗರ’ ದರ್ಜೆಗೂ ಏರಿದೆ. ಆದರೆ, ಇಲ್ಲಿನ ಹಿರಿಯರು, ಮಕ್ಕಳು ಸೇರಿದಂತೆ ನಾಗರಿಕರಿಗಾಗಿ ‘ವಿಹಾರ ತಾಣಗಳ’ ಅಭಿವೃದ್ಧಿ ಮಾತ್ರ ನಗಣ್ಯ.

ನಗರದ ಹುಕ್ಕೇರಿಮಠದ ಮುಂಭಾಗದ 12ನೇ ಶತಮಾನದ ಚಾಲುಕ್ಯರ ಶಿಲ್ಪಕಲೆಯ ಪುರಸಿದ್ಧೇಶ್ವರ ಗುಡಿ ಆವರಣವನ್ನು  ಪುರಾತತ್ವ ಇಲಾಖೆ ನಿರ್ವಹಿಸುತ್ತಿದೆ. ಇದು ನಗರಕ್ಕೆ ಭೇಟಿ ನೀಡುವ, ಸಭೆ, ಜಾಥಾ, ಚರ್ಚೆಗಳ ತಾಣವೂ ಆಗಿದೆ. ಪ್ರವಾ ಸೋದ್ಯಮ ತಾಣವಾಗಿಯೂ ಗಮನ ಸೆಳೆದಿದೆ.

ಇದನ್ನು ಹೊರತುಪಡಿಸಿದರೆ ನಗರ ದಲ್ಲಿ ಪ್ರಮುಖ ‘ನಾಗರಿಕರ ವಿಹಾರ ತಾಣ’ಗಳು ಇಲ್ಲ. ಅಕ್ಕನ ಹೊಂಡದ ಉದ್ಯಾನವನ್ನು ಎರಡೆರಡು ಬಾರಿ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ, ನಿರ್ವಹಣೆ ಇಲ್ಲದೇ  ಅನುದಾನವೆಲ್ಲ ವ್ಯರ್ಥವಾಗಿದೆ.

ಜೆ.ಎಚ್.ಪಟೇಲ್ ವೃತ್ತದ ಬಳಿ ‘ಮಕ್ಕಳ ಉದ್ಯಾನ’ ಇದೆ. ಇಲ್ಲಿ ಪುಟಾಣಿ ರೈಲು ಇದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆಯ ತಾಣದಂತಿದೆ. ನಗರದ ಜನಸಂಖ್ಯೆ ಪೈಕಿ ಶೇ 11.74 (2011 ಜನಗಣತಿ)ಆರು ವರ್ಷದೊಳಗಿನ ಮಕ್ಕಳು ಇದ್ದಾರೆ. ಇನ್ನು 16 ವರ್ಷದೊಳಗಿನ ಮಕ್ಕಳ ಸಂಖ್ಯೆ ಇಮ್ಮಡಿ ಇದೆ. ಆದರೆ, ಅವರ ಬೆಳವಣಿಗೆಗೆ ಸೂಕ್ತ ತಾಣವೇ ಇಲ್ಲ. ವಾರಂತ್ಯ ಕಳೆಯಲು ಸೃಜನಶೀಲತೆಯ ಸ್ಥಳವೇ ಇಲ್ಲದಾಗಿದೆ.

ನಗರದ ಬಹುತೇಕ ಉದ್ಯಾನಗಳು ಅಸ್ತಿತ್ವದಲ್ಲೇ ಇಲ್ಲ. ಹಲವು ಒತ್ತುವರಿಗೊಂಡಿದ್ದರೆ, ಕೆಲವು ಇತರ ಕಾರ್ಯಕ್ಕೆ ಬಳಕೆಯಾಗುತ್ತಿದೆ. ಅಳಿದುಳಿದ ಉದ್ಯಾನಗಳಲ್ಲಿ ಗುಡಿ, ನೀರಿನ ಟ್ಯಾಂಕ್‌, ಶುದ್ಧ ಕುಡಿಯುವ ನೀರಿನ ಘಟಕಗಳು ತಲೆ ಎತ್ತಿವೆ. ಇನ್ನೂ ಖಾಲಿ ಇರುವ ಉದ್ಯಾನಗಳಲ್ಲಿ ಕೊಳಚೆ ತುಂಬಿದ್ದು, ಕುರುಚಲು ಗಿಡಗಂಟಿ,  ಬೆಳೆದು ವಿಷಜಂತುಗಳ ತಾಣವಾಗಿವೆ.

ಅಶ್ವಿನಿ ನಗರ, ಬಸವೇಶ್ವರ ನಗರ ಮತ್ತಿತರ ಕೆಲವೆಡೆ ಮಾತ್ರ ಸ್ಥಳೀಯರ ಆಸಕ್ತಿಯಿಂದಾಗಿ ಕೆಲವು ಉದ್ಯಾನಗಳು ಅಸ್ತಿತ್ವ ಉಳಿಸಿಕೊಂಡಿವೆ. ಉಳಿದಂತೆ ಬಡಾವಣೆಗಳ ಮಕ್ಕಳು ಹಾಗೂ ವೃದ್ಧರಿಗೆ ‘ಮುಸ್ಸಂಜೆ’ ಕಳೆಯುವುದೂ ಕಷ್ಟಕರವಾಗಿದೆ.

ನಗರದಲ್ಲಿ ಆರು ಕೆರೆಗಳಿದ್ದರೂ ಅಭಿವೃದ್ಧಿ ಕಂಡಿಲ್ಲ. ಕೆರೆಯ ಕಟ್ಟೆ, ಸಮೀಪದ ಪ್ರದೇಶಗಳು ‘ಬಯಲು ಶೌಚಾಲಯ’, ಎಮ್ಮೆ, ಹಂದಿ, ನಾಯಿಗಳ ತಾಣವಾಗಿವೆ. ಈ ಕೆರೆಗಳಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಗಳೂ ನಡೆದಿವೆ.

ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಠಗಳು, ಐತಿಹಾಸಿಕ ಸ್ಥಳಗಳಿವೆ. ಆದರೆ, ಇಲ್ಲಿಗೆ ಬರುವ ಭಕ್ತಾದಿಗಳು, ಪ್ರವಾಸಿಗಳಿಗೆ ಪೂರಕವಾಗಿ ಯಾವುದೇ ತಾಣಗಳನ್ನು ಅಭಿವೃದ್ಧಿ ಪಡಿಸಿಲ್ಲ. ಒಟ್ಟಾರೆಯಾಗಿ ಸತತ ನಿರ್ಲಕ್ಷ್ಯಕ್ಕೆ ಒಳ ಗಾದ ಹಾವೇರಿಯಲ್ಲಿ ‘ವಿಹರಿಸುವುದೂ ಕಷ್ಟ’ ಎನ್ನುತ್ತಾರೆ ನಾಗರಿಕರು.

‘ಹಲವು ಯೋಜನೆ ಬರಲಿವೆ’
‘ಮುಖ್ಯಮಂತ್ರಿ ವಿಶೇಷ ಅನುದಾನದ ₹50 ಕೋಟಿಯಲ್ಲಿ ಹಗ್ಗೇರಿ ಕೆರೆ ಬಳಿ ಅಭಿವೃದ್ಧಿ, ಗ್ಲಾಸ್ ಹೌಸ್ ಮತ್ತಿತರ ಯೋಜನೆಗಳು ಬರುತ್ತಿವೆ. ಜಿಲ್ಲಾಡಳಿತ ಭವನ ಮುಂಭಾಗ ದಲ್ಲಿ ವಿಜ್ಞಾನ ಪಾರ್ಕ್, ಸ್ವಾತಂತ್ರ್ಯ ಯೋಧರ ನೆನಪಿನ ವಸ್ತುಸಂಗ್ರ ಹಾಲಯ, ರೈಲು ನಿಲ್ದಾಣ ಬಳಿ ಗಾಂಧಿ ಭವನ, ರಂಗಮಂದಿರ, ಹೊರವಲಯದ ಕರ್ಜಗಿ ರಸ್ತೆಯಲ್ಲಿ ‘ನಗರ ವನ’, ಮುನ್ಸಿ ಪಲ್ ಮೈದಾನ ಅಭಿವೃದ್ಧಿ ಮತ್ತಿತರ ಯೋಜನೆಗಳನ್ನು ಸರ್ಕಾರ ಮಂಜೂರು ಮಾಡಿದೆ’ ಎನ್ನುತ್ತಾರೆ ಹಾವೇರಿ ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ.

*
ನಗರದಲ್ಲಿ ವಿಹಾರ ತಾಣಗಳ ಕೊರತೆ ಇರುವುದು ನಿಜ. ಆದರೆ, ನಾಗರಿಕರ ಸೌಲಭ್ಯಕ್ಕಾಗಿ ಹಲವಾರು ತಾಣಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಗಳು ಜಾರಿಯಲ್ಲಿವೆ.
-ಸಂಜೀವಕುಮಾರ್ ನೀರಲಗಿ,
ಅಧ್ಯಕ್ಷ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT