ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ತಡೆ: ಕುಂಚದಲ್ಲಿ ಅರಿವು ಚಿತ್ರಿಸಿದ ಚಿಣ್ಣರು

ಬೆಳಗಾವಿಯ ಶರ್ಕತ್ ಉದ್ಯಾನದಲ್ಲಿ ‘ಕಾರ್ಟೂನಿನಲ್ಲಿ ಖಾಕಿ’ ಕಾರ್ಯಕ್ರಮ
Last Updated 6 ಫೆಬ್ರುವರಿ 2017, 7:07 IST
ಅಕ್ಷರ ಗಾತ್ರ

ಬೆಳಗಾವಿ: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಗರ ಪೊಲೀಸ್‌ ಕಮಿಷನರೇಟ್‌ ಹಾಗೂ ರೋಟರಿ ಕ್ಲಬ್‌ ಆಶ್ರಯದಲ್ಲಿ ಭಾನುವಾರ ನಗರದ ಕ್ಯಾಂಪ್‌ನಲ್ಲಿರುವ ಶರ್ಕತ್‌ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ಪೊಲೀಸರ ಕಾರ್ಯವೈಖರಿ ಕುರಿತು ಚಿತ್ರಗಳ ಮೂಲಕ ಜಾಗೃತಿ ಮೂಡಿಸಿದರು.

‘ಕಾರ್ಟೂನಿನಲ್ಲಿ ಖಾಕಿ’ ಎಂಬ ವಿಷಯದಲ್ಲಿ ನಡೆದ ಅಪರಾಧಗಳ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮಗೆ ತೋಚಿದ ರೀತಿಯಲ್ಲಿ ಗೆರೆ ಗೀಚಿ, ಬಣ್ಣ ಬಳಿದು ಅಪರಾಧಗಳು ಹಾಗೂ ಅವುಗಳನ್ನು ತಡೆಯಲು ಪೊಲೀಸರ ಕ್ರಮಗಳನ್ನು ಕಟ್ಟಿಕೊಟ್ಟರು.

ಅಪಘಾತಗಳು, ಮನೆ ಹಾಗೂ ಸರಗಳ್ಳತನ, ಲೈಂಗಿಕ ದೌರ್ಜನ್ಯ, ಹೆಣ್ಣು ಮಕ್ಕಳ ಮಾರಾಟ, ಫೋನ್‌ ಹಾಗೂ ಸೈಬರ್‌ ಮೂಲಕ ನಡೆಯುವ ಅಪರಾಧ ಚಟುವಟಿಕೆಗಳು, ಸಾರಾಯಿ ಕುಡಿತ ಹಾಗೂ ವಾಹನ ಚಾಲನೆ, ಕಾನೂನು ಬಾಹಿರ ಕೃತ್ಯಗಳು ಹೀಗೆ ಎಲ್ಲವೂ ವಿದ್ಯಾರ್ಥಿಗಳ ಮನದಲ್ಲಿ ಅಡಗಿದ್ದ ವಿಷಯಗಳು ಚಿತ್ರಗಳ ಮೂಲಕ ಮೂಡಿಬಂದವು.

ಆಕರ್ಷಕ ಬಣ್ಣಗಳಲ್ಲಿ ವ್ಯಂಗ್ಯಚಿತ್ರ, ರೇಖಾಚಿತ್ರ, ಭಿತ್ತಿ ಚಿತ್ರಗಳು ಅಪರಾಧ ಗಳ ವೈವಿಧ್ಯವನ್ನು ಬಿತ್ತರಿಸಿ, ಇಂದಿನ ಸಮಾಜದಲ್ಲಿ ಕಂಡುಬರುತ್ತಿರುವ ಅಪರಾಧಗಳು ಹಾಗೂ ಅದರ ಪರಿಣಾಮಗಳನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದವು.

ಪ್ರಾಥಮಿಕ ಶಾಲಾ ಮಕ್ಕಳು ಸಂಚಾರಿ ನಿಯಮಗಳು ಹಾಗೂ ಕಾನೂನು ಬಾಹಿರ ಕ್ರಮಗಳು, ಅಪಘಾತ, ಸರಗಳ್ಳತನ ಹಾಗೂ ಇತರ ಅಪರಾಧಗಳ ಕುರಿತು ಚಿತ್ರಿಸಿ ಜಾಗೃತಿ ಮೂಡಿಸಿದರು.

ಪ್ರೌಢಶಾಲಾ ವಿದ್ಯಾರ್ಥಿಗಳು ಮಹಿಳಾ ದೌರ್ಜನ್ಯ, ಅಸಹಾಯಕ ಮಹಿಳೆ ಹಾಗೂ ಯುವತಿಯರ ಮೇಲೆ ಆಗುತ್ತಿರುವ ಅನ್ಯಾಯ, ಅತ್ಯಾಚಾರ, ಹಿಂಸೆಗಳನ್ನು ಚಿತ್ರಗಳಲ್ಲಿ ಬಿಡಿಸಿಟ್ಟು, ಈ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಸಮಾಜದಲ್ಲಿ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿಯ ಅಗತ್ಯತೆಯನ್ನು ಕಾರ್ಟೂನ್‌ ಮೂಲಕ ಪ್ರತಿಪಾದಿಸಿದರು. ದೌರ್ಜನ್ಯ ತಡೆಯುವಲ್ಲಿ ಪೊಲೀಸರು ಹಾಗೂ ಸಮಾಜದ ಪಾತ್ರ ಏನೆನ್ನುವು ದನ್ನು ಚಿತ್ರಗಳ ಮೂಲಕ ತಿಳಿಸಿಕೊಟ್ಟರು.

ಲಲಿತಕಲಾ ವಿದ್ಯಾರ್ಥಿ ಕಿಶೋರ ಗೋರಲ್‌ ಬಿಡಿಸಿದ ಚಿತ್ರ ಗಮನ ಸೆಳೆಯಿತು. ರುಚಿರಾ ಎಂಬ ವಿದ್ಯಾರ್ಥಿನಿಯ ಚಿತ್ರವು ಅಪಹರಣ ಹಾಗೂ ಪೊಲೀಸರ ಪಾತ್ರವನ್ನು ಬಿಂಬಿಸಿತು.

‘ಇಲ್ಲಿ ಮೂಡಿಬಂದ ಚಿತ್ರಗಳು, ಕಾರ್ಟೂನ್‌ಗಳು, ಕ್ಯಾರಿಕೇಚರ್‌ಗಳು ಸಮಾಜದಲ್ಲಿನ ಸನ್ನಿವೇಶಗಳನ್ನು ಬಿಂಬಿಸುತ್ತಿವೆ. ಅಪರಾಧ ತಡೆಯುವಲ್ಲಿ ಸಮಾಜದ ಪಾತ್ರದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಡಿಸಿಪಿ ಜಿ. ರಾಧಿಕಾ ಪ್ರತಿಕ್ರಿಯಿಸಿದರು.

ಚಿತ್ರಕಲಾ ಸ್ಪರ್ಧೆಯ ಉದ್ಘಾಟನೆಯಲ್ಲಿ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಆರ್‌.ಜೆ. ಸತೀಶ ಸಿಂಗ್‌, ಡಿಸಿಪಿ ಅಮರನಾಥ ರೆಡ್ಡಿ, ವ್ಯಂಗ್ಯಚಿತ್ರ ಕಲಾವಿದ ಸತೀಶ ಆಚಾರ್ಯ ಉಪಸ್ಥಿತರಿದ್ದರು.

‘ಗಾಯಾಳುಗಳಿಗೆ ನೆರವಾಗಲು ಹಿಂಜರಿಯಬೇಡಿ
’ಬೆಳಗಾವಿ:
ಅಪಘಾತ ಸಂಭವಿಸಿ ದಾಗ ಸಂಕಷ್ಟದಲ್ಲಿರುವವರನ್ನು ಕಡೆಗಣಿದೆ ಅವರಿಗೆ ನೆರವಾಗಿ, ಅದಕ್ಕೆ ಕಾರಣರಾದವರನ್ನು ಗುರುತಿಸಿ ಪೊಲೀಸರಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಹೇಳಿದರು.

ನಗರ ಪೊಲೀಸ್‌ ಕಮಿಷನರೇಟ್‌ ಹಾಗೂ ರೋಟರಿ ಪರಿವಾರದ ಸಹಯೋಗದಲ್ಲಿ ಭಾನುವಾರ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘ಕಾರ್ಟೂನಿನಲ್ಲಿ ಖಾಕಿ’ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ಅಪರಾಧ ನಡೆದರೂ ನೋಡಿದವರು ನೇರವಾಗಿ ಪೊಲೀಸರಿಗೆ ತಿಳಿಸಿದರೆ ತನಿಖೆ ನೆಪದಲ್ಲಿ ಸಮಯ ಹಾಳು ಮಾಡದೆ ಅಪರಾಧಿಗಳನ್ನು ಹಿಡಿಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಪೊಲೀಸರೊಂದಿಗೆ ಸಹಕರಿಸಬೇಕು’ ಎಂದು ಕೋರಿದರು.

ವ್ಯಂಗ್ಯಚಿತ್ರ ಕಲಾವಿದ ಸತೀಶ ಆಚಾರ್ಯ, ‘ಕಾರ್ಟೂನ್‌ ಪ್ರಬಲವಾದ ಮಾಧ್ಯಮ, ಹೇಳಲಾರದ ವಿಷಯಗಳು ಚಿತ್ರಗಳ ಮೂಲಕ ವ್ಯಕ್ತವಾಗುವುದನ್ನು ತಿಳಿಯಬಹುದು’ ಎಂದರು.

ರೋಟರಿ ಕ್ಲಬ್‌ ಅಧ್ಯಕ್ಷ ಅವಿನಾಶ ಪೋತದಾರ ಮಾತನಾಡಿದರು. ಹಾಸ್ಯ ಕಲಾವಿದ ಶರಣು ಯಮನೂರು ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಬೆಳಗಾವಿ ಜೈನ್‌ ಕಾಲೇಜಿನ ಬಿಬಿಎ, ಬಿಸಿಎ ವಿದ್ಯಾರ್ಥಿಗಳು  ಬೀದಿನಾಟಕ ಪ್ರಸ್ತುತಪಡಿಸಿದರು. ನಗರ ಪೊಲೀಸ್‌ ಕಮಿಷನರ್‌ ಟಿ.ಜಿ. ಕೃಷ್ಣಭಟ್‌, ಡಿಸಿಪಿಗಳಾದ ಜಿ. ರಾಧಿಕಾ, ಅಮರನಾಥ ರೆಡ್ಡಿ ಉಪಸ್ಥಿತರಿದ್ದರು. ಪಿಎಸ್‌ಐ ಕೃಷ್ಣವೇಣಿ ಗುರ್ಲಹೊಸೂರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT