ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಿನಲ್ಲಿ ಬಹಿರ್ದೆಸೆ ಇನ್ನು ದುಬಾರಿ

ಹಳೆ ಬಾಗಲಕೋಟೆ: ನಗರಸಭೆ ಅಧಿಕಾರಿಗಳಿಂದ ₹ 100 ದಂಡ ವಸೂಲಿ
Last Updated 6 ಫೆಬ್ರುವರಿ 2017, 8:42 IST
ಅಕ್ಷರ ಗಾತ್ರ

ಬಾಗಲಕೋಟೆ:  ನೀವು ಚೊಂಬು ಹಿಡಿದು ಬಯಲಿಗೆ ಹೊರಟಿದ್ದೀರಾ.. ಸ್ವಲ್ಪ ತಡೆಯಿರಿ. ಅಲ್ಲಿಯೇ ಆಸುಪಾಸಿನಲ್ಲಿ ನಗರಸಭೆಯ ಆರೋಗ್ಯ ನಿರೀಕ್ಷಕರು ನಿಮ್ಮನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿಯಲು ಹೊಂಚು ಹಾಕುತ್ತಿರಬಹುದು!

ನಗರದ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ನಗರಸಭೆ ಪರಿಸರ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳು, ಹಳೆಯ ಬಾಗಲಕೋಟೆ ವಾರ್ಡ್‌ ನಂ 22ರ ರೈಲು ನಿಲ್ದಾಣದ ಬಳಿ ಬಹಿರ್ದೆಸೆಗೆ ಕುಳಿತಿದ್ದ ವ್ಯಕ್ತಿಯೊಬ್ಬರನ್ನು ಇತ್ತೀಚೆಗೆ ಹಿಡಿದು ₹ 100 ದಂಡ ವಿಧಿಸಿದ್ದಾರೆ.

ಅದೇ ರೀತಿ ವಿದ್ಯಾಗಿರಿಯ 19ನೇ ಕ್ರಾಸ್‌ನಲ್ಲಿ ಗೋಡೆಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಮತ್ತೊಬ್ಬರ ಜೇಬಿಗೆ ದಂಡದ ರೂಪದಲ್ಲಿ ₹ 100 ಕತ್ತರಿಬಿದ್ದಿದೆ.
ಜನವರಿ 1ರಿಂದ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಮಂದಿಯಿಂದ ₹ 16,450 ದಂಡ ವಸೂಲಿ ಮಾಡಲಾಗಿದೆ.

ಬಯಲಿನಲ್ಲಿ ಮಲ–ಮೂತ್ರ ವಿಸರ್ಜನೆ, ಚರಂಡಿ, ಖಾಲಿ ನಿವೇಶನದಲ್ಲಿ ಕಸ ಚೆಲ್ಲುವುದು, ರಸ್ತೆ ಪಕ್ಕ ಕಸ ಹಾಕುವುದು, ಸಾರ್ವಜನಿಕ ಸ್ವತ್ತುಗಳಿಗೆ ಧಕ್ಕೆಯುಂಟುಮಾಡಿದರೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ, ಕಾಂಕ್ರೀಟ್ ತ್ಯಾಜ್ಯ, ಸಗಣಿ, ಇಟ್ಟಿಗೆ ಹೆಂಡೆ ವಾಹನಗಳಲ್ಲಿ ಸಾಗಣೆ ವೇಳೆ ಅದು ಚೆಲ್ಲಿದ್ದಕ್ಕೆ, ಪರವಾನಗಿ ಪಡೆಯದೇ ರಸ್ತೆ ಅಗೆದ ಕಾರಣಕ್ಕೆ,

ವಧಾಲಯದ ಮುಂದೆ ರಕ್ತ, ಎಲುಬು, ಗರಿ, ಚರ್ಮ, ತತ್ತಿಯ ಕವಚ ಮತ್ತು ಇತರೆ ಪ್ರಾಣಿ ತ್ಯಾಜ್ಯಗಳನ್ನು ಎಸೆದ ಕಾರಣಕ್ಕೆ ಹಾಗೂ ಅಂಗಡಿ, ಹೋಟೆಲ್‌ಗಳಲ್ಲಿ ಕಸದ ಬುಟ್ಟಿ ಇಟ್ಟುಕೊಳ್ಳದೇ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ನಗರಸಭೆ ಪರಿಸರ ಎಂಜಿನಿಯರ್ ಹನುಮಂತ ಕಲಾದಗಿ ಹೇಳುತ್ತಾರೆ.

ಕ್ಯಾಮೆರಾದಲ್ಲಿ ಸೆರೆ:  ‘ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರು ಸೇರಿದಂತೆ ಸ್ವಚ್ಛತೆ ಅಭಿಯಾನದ ಹೊಣೆ ಹೊತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ಯಾಮೆರಾ ನೀಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ನಿಯಮಾವಳಿ ಉಲ್ಲಂಘನೆ ಮಾಡಿರುವುದು ಕಂಡುಬಂದರೆ ತಕ್ಷಣ ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತದೆ. ನಂತರ ಅದನ್ನು ಅವರಿಗೆ ತೋರಿಸಿ ದಂಡ ವಸೂಲಿ ಮಾಡಿ ರಸೀದಿ ನೀಡಲಾಗುತ್ತಿದೆ’ ಎಂದು ಕಲಾದಗಿ ತಿಳಿಸಿದರು.
‘ಬಯಲು ಬಹಿರ್ದೆಸೆಗೆ ತೆರಳದಂತೆ ಸಾರ್ವಜನಿಕರ ಮನವೊಲಿಸಲು ಮೊದಲಿಗೆ ಗಾಂಧಿಗಿರಿಯ ಮೊರೆ ಹೋಗಿದ್ದೆವು.

ಹೂವಿನ ಹಾರ (ಮಾಲೆ) ಹಾಕಿ ಅವರಿಗೆ ತಿಳಿವಳಿಕೆ ನೀಡಲಾಗುತ್ತಿತ್ತು. ಈಗ ಅಂತಿಮವಾಗಿ ದಂಡ ವಿಧಿಸುವ ಪ್ರಕ್ರಿಯೆಗೆ ಮುಂದಾಗಿದ್ದೇವೆ’ ಎಂದು ಕಲಾದಗಿ ಹೇಳಿದರು.

ಕಂದಾಯ ಅಧಿಕಾರಿಗೆ ದಂಡ!
ನಗರಸಭೆಯ ಕಂದಾಯ ಅಧಿಕಾರಿ ಮಾವಾ ಜಗಿದು ಕಿಟಕಿ ಮೂಲಕ ಹೊರಗೆ ಉಗುಳಿದ್ದಕ್ಕೆ ಅವರಿಗೆ ₨500 ದಂಡ ವಿಧಿಸಲಾಗಿದೆ. ಮಾವಾ ಉಗುಳಿದ ಪರಿಣಾಮ ನಗರಸಭೆಯ ಆವರಣದಲ್ಲಿಯೇ ಗಲೀಜು ಆಗಿರುವುದನ್ನು ಕಂಡ ಆರೋಗ್ಯ ವಿಭಾಗದ ಅಧಿಕಾರಿಗಳು ರೆಡ್‌ಹ್ಯಾಂಡ್‌ ಆಗಿ ಹಿಡಿದು ದಂಡ ವಿಧಿಸಿದ್ದಾರೆ.

*
ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಪದೇ ಪದೇ ತಪ್ಪು ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ.
–ಎಸ್.ಎನ್.ರುದ್ರೇಶ
ನಗರಸಭೆ ಆಯುಕ್ತ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT