ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಶಾಲೆಗಳಿಂದ ಕನ್ನಡದ ಉಳಿವು

Last Updated 6 ಫೆಬ್ರುವರಿ 2017, 9:04 IST
ಅಕ್ಷರ ಗಾತ್ರ

ಚನ್ನಪಟ್ಟಣ: ಗ್ರಾಮೀಣ ಭಾಗದ ಶಾಲೆಗಳು ಉಳಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ.ರಾಜೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮತ್ತೀಕೆರೆ - ಶೆಟ್ಟಿಹಳ್ಳಿಯ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಮತ್ತು ಗುರುವಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಂಗ್ಲಭಾಷಾ ಮಾಧ್ಯಮದ ಕಡೆಗೆ ಪೋಷಕರು ಗಮನ ನೀಡುತ್ತಿರುವುದರಿಂದ ಭಾಷೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದರು. ಈ ಭಾಗದ ಗ್ರಾಮೀಣ ಜನತೆ ವಿದ್ಯಾವಂತರಾಗಲು ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ಶ್ರಮ ಹೆಚ್ಚಾಗಿದೆ.

ಈ ಭಾಗದ ಜನತೆ ವಿದ್ಯೆಯಿಂದ ವಂಚಿತರಾಗಿದ್ದ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಜೆ.ಲಿಂಗೇಗೌಡ, ಟಿ.ವಿ.ವೆಂಕಟಪ್ಪ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಿ.ಆರ್.ಲಿಂಗಯ್ಯ ಅವರ ಪರಿಶ್ರಮ ಹಾಗೂ ದೂರದೃಷ್ಟಿಯಿಂದ ಸ್ಥಾಪನೆಯಾದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಬಿ.ಟಿ.ನೇತ್ರಾವತಿಗೌಡ ಮಾತನಾಡಿ, ಪೋಷಕರು ತಮ್ಮ ಮಕ್ಕಳು ದಿಢೀರ್ ವಿದ್ಯಾವಂತರಾಗಿ ಉನ್ನತ ಹುದ್ದೆಗೇರಲು ಬಯಸುತ್ತಾ ಕೇವಲ ಪುಸ್ತಕದ ಹುಳುಗಳನ್ನಾಗಿ ಮಾಡುತ್ತಿದ್ದಾರೆ ಎಂದರು.

ಮೈಸೂರು ಮಹಾರಾಜ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಟಿ.ಕೆ.ಕೆಂಪೇಗೌಡ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಸುಪ್ತವಾಗಿ ಅಡಗಿರುತ್ತದೆ. ಅಂಥವರನ್ನು ಗುರ್ತಿಸಿ ಪ್ರತಿಭೆಯನ್ನು ಹೊರ ತೆಗೆಯುವ ಕೆಲಸದಲ್ಲಿ ಶಿಕ್ಷಕರು ಹಾಗೂ ಪೋಷಕರ ಸಮನಾದ ಪಾತ್ರವಿದೆ ಎಂದರು.

ಮುಖ್ಯ ಅತಿಥಿಗಳಾಗಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಎಲ್.ಪ್ರಸನ್ನಕುಮಾರ್, ವೈದ್ಯ ಡಾ.ಸಿದ್ದೇಗೌಡ, ಕೇಂದ್ರ ಕಾರಾಗೃಹ ನಿವೃತ್ತ ಅಧೀಕ್ಷಕ ಎಸ್.ಟಿ.ಶ್ರೀನಿವಾಸ್, ಸಂಸ್ಥೆಯ ಉಪಾಧ್ಯಕ್ಷ ನಿಂಗೇಗೌಡ, ಖಜಾಂಚಿ ರಂಗಸ್ವಾಮಿ, ಸಹ ಕಾರ್ಯದರ್ಶಿಗಳಾದ ಅನಂತಮೂರ್ತಿ, ರಾಜಣ್ಣ, ಕೆಂಚೇಗೌಡ, ನಿರ್ದೇಶಕರಾದ ಎಂ.ಕೆ.ನಿಂಗಪ್ಪ, ಎಂ.ಸಿ.ಎಚ್.ಮೆಹರೀಶ್  ಭಾಗವಹಿಸಿದ್ದರು.

ನಿವೃತ್ತ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಗೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು. ಶಾರದಾ ನಾಗೇಶ್ ಪ್ರಾರ್ಥಿಸಿದರು. ತಿಥಿ ಖ್ಯಾತಿಯ ಗಡ್ಡಪ್ಪ, ಎಚ್.ಎಸ್.ಅಭಿಷೇಕ್ ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT