ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡವಿಯ ಮಡಿಲು ಜೊಯಿಡಾ

Last Updated 7 ಫೆಬ್ರುವರಿ 2017, 6:24 IST
ಅಕ್ಷರ ಗಾತ್ರ

ಕಾಳಿ ನದಿಯ ಒಡಲಲ್ಲಿ ಸೂಪಾ ಲೀನವಾದ ಮೇಲೆ ಮರುನಾಮಕರಣಗೊಂಡು ಹಸಿರು ಫ್ರೇಮಿನಲ್ಲಿ ಮೈದಳೆದಿರುವ ತಾಲ್ಲೂಕು ಜೊಯಿಡಾ. ಕೃತಕತೆಯ ಸೋಂಕಿಲ್ಲದ ಅಪ್ಪಟ ಗ್ರಾಮ್ಯ ಬದುಕಿಗೆ ಸಾಕ್ಷಿಯಾಗಿರುವ ಈ ಕಗ್ಗಾಡಿನ ಜತೆ ಮಹಾನಗರಗಳ ನಂಟು ಬೆಸೆದಿದ್ದು ಪ್ರವಾಸೋದ್ಯಮ. ಗಿಡ–ಮರ, ನದಿ –ತೊರೆ, ಪ್ರಾಣಿ–ಪಕ್ಷಿಗಳು ಇಲ್ಲಿನ ಜನರಿಗೆ ತುತ್ತು ಕೊಡುತ್ತಿವೆ. ಮರ ಉರುಳಿಸಿ ಶ್ರೀಮಂತಿಕೆ ಗಳಿಸುವ ಸಂಸ್ಕೃತಿ ನಮ್ಮದಲ್ಲ; ಮರಗಿಡಗಳ ನೆರಳಿನಲ್ಲಿ ಬದುಕು ಕಟ್ಟಿಕೊಳ್ಳುವ ಜಾಯಮಾನ ನಮ್ಮದು ಎಂಬ ಸಾತ್ವಿಕ ಅಹಮ್ಮಿಕೆ ಇಲ್ಲಿನ ಜನರದ್ದು

**
ವಾ ರಾಜ್ಯಕ್ಕೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆ ಗಡಿಯ ತಾಲ್ಲೂಕು ಜೊಯಿಡಾ. ಜಿಲ್ಲೆಯ ಇನ್ನುಳಿದ 10 ತಾಲ್ಲೂಕುಗಳಿಗಿಂತ ಭಿನ್ನವಾಗಿರುವ ಜೊಯಿಡಾದ ವಿಶೇಷತೆ ಹಲವಾರು. ರಾಜ್ಯದ ಅತಿ ದೊಡ್ಡ ತಾಲ್ಲೂಕು ಇದು. ವಿಸ್ತಾರ 1882 ಕಿ.ಮೀ ಇದ್ದರೂ 2011ರ ಜನಗಣತಿ ಪ್ರಕಾರ ಇಲ್ಲಿನ ಜನಸಂಖ್ಯೆ 53 ಸಾವಿರ ಅಷ್ಟೆ. ಜನಸಾಂದ್ರತೆ ಪ್ರತಿ ಚದರ ಕಿಲೋ ಮೀಟರ್‌ಗೆ 26. 
 
ಶಹರಗಳಲ್ಲಿ ಶರವೇಗದಲ್ಲಿ ಓಡುವ ಬುಲೆಟ್‌ ಟ್ರೇನ್‌, ಹೈಪರ್‌ಲೂಪ್ ತಂತ್ರಜ್ಞಾನಗಳ ಮಾತುಕತೆ ನಡೆಯುತ್ತಿದೆ. ಆದರೆ ಜೊಯಿಡಾದ ಒಂದೊಂದು ಹಳ್ಳಿ ತಲುಪಲು ಈಗಲೂ 15–20 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಬೇಕು. ಇಡೀ ತಾಲ್ಲೂಕು ಇನ್ನೂ ಆಟೊರಿಕ್ಷಾದ ಹೊಗೆ ಕಂಡಿಲ್ಲ. ಬಸ್ಸಿನ ಹಾರ್ನ್ ಕೇಳದ, ವಿದ್ಯುತ್‌ ಬೆಳಕು ಕಾಣದ ಅದೆಷ್ಟೋ ಹಳ್ಳಿಗಳು ಇಲ್ಲಿವೆ. ತಾಲ್ಲೂಕು ಕೇಂದ್ರದಲ್ಲಿ ಗ್ರಾಮ ಪಂಚಾಯ್ತಿ ಆಡಳಿತ ಹೊಂದಿರುವ ಏಕೈಕ ತಾಲ್ಲೂಕು ಇದು. 
 
ಪುರಾತನ ನಾಗರಿಕತೆಯ ಜೀವನ ಶೈಲಿ ನೆನಪಿಸುವ ಜೊಯಿಡಾ ಜನರಿಗೆ ಕಗ್ಗಾಡಿನಲ್ಲಿ ಒಂಟಿಯಾಗಿ ಸಂಚರಿಸಲು ಭಯವಿಲ್ಲ. ನಮ್ಮೂರಿಗೆ ಬಸ್‌ ಬರುತ್ತಿಲ್ಲ ನಾವು ಸಾರಿಗೆ ಸಂಸ್ಥೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕೆಂದು ಎಂದಿಗೂ ಇಲ್ಲಿನವರು ಯೋಚಿಸಲಿಲ್ಲ. ಕಾಡ ನಡುವಿನ ಕಾಲುದಾರಿಯಲ್ಲಿ ನಿತ್ಯ ಬೆಳಗಾದರೆ ಮೈಲುಗಟ್ಟಲೆ ನಡೆಯುವುದು ಇವರಿಗೆ ಪ್ರಯಾಸವಾಗಿ ಕಾಡಲಿಲ್ಲ. ಆಧುನಿಕತೆಯ ಸಮೂಹ ಸನ್ನಿಗೆ ಒಳಗಾಗದೇ ಕಾಡುನೆಲದ ಅಸ್ಮಿತೆ ಉಳಿಸಿಕೊಂಡವರು ಇಲ್ಲಿನವರು. 
 
(ಕಾಳಿನದಿಯಲ್ಲಿ ಜಲಕ್ರೀಡೆಯ ಸಂಭ್ರಮ)
 
ಬದುಕೇ ಸಾಹಸ
ಕಣಿವೆಯಲ್ಲಿ ಹರಿಯುವ ಕಾಳಿ ನಾಲ್ಕು ಅಣೆಕಟ್ಟುಗಳ ಭಾರ ಹೊತ್ತು ಬಳಲಿದ್ದಾಳೆ. ಸೂಪಾ, ನಾಗಝರಿ, ಕೊಡಸಳ್ಳಿ, ಕದ್ರಾಗಳಲ್ಲಿ ಈ ನದಿಗೆ ಅಡ್ಡಲಾಗಿ ಬೃಹತ್ ಅಣೆಕಟ್ಟು ನಿರ್ಮಿಸಿ ಸಾವಿರ ಮೆಗಾವ್ಯಾಟ್‌ಗಿಂತ ಅಧಿಕ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ. ಸೂಪಾದ ಸಮೀಪದ ಡಿಗ್ಗಿ ಎಂಬ ಪುಟ್ಟ ಹಳ್ಳಿಯಲ್ಲಿ ಜನ್ಮ ತಳೆದವಳು ಕಾಳಿ. ‘ಊರಿಗೆ ಉಪಕಾರಿ ಮನೆಗೆ ಮಾರಿ’ ಎಂಬಂತಾಗಿದೆ ಈ ಕಾಳಿಯ ಕತೆ. ಹುಟ್ಟಿ ಬೆಳೆದ ಊರಿಗೆ ಬೆಳಕು ಕೊಡಲಾಗದ ನತದೃಷ್ಟೆ ಇವಳು. ಕಾಳಿಯ ತವರಾದ ಇಡೀ ಬಜಾರ್‌ಕುಣಾಂಗ್ ಪಂಚಾಯ್ತಿಗೆ ಇಂದಿಗೂ ವಿದ್ಯುತ್ ಮರೀಚಿಕೆ. 
 
ಜೊಯಿಡಾದ ಒಂದೊಂದು ಹಳ್ಳಿಯೂ ಒಂದೊಂದು ಅಚ್ಚರಿಯನ್ನು ತೆರೆದಿಡಬಲ್ಲದು. ಇಲ್ಲೊಂದು ಪಿಸೋಸಾ ಎನ್ನುವ ಕರಡಿಗಳ ಸಾಮ್ರಾಜ್ಯವಿದೆ. ಈ ಕರಡಿಯ ಕಾರಿಡಾರ್‌ನಲ್ಲಿ ಮನುಷ್ಯರೇ ಅತಿಥಿಗಳು. ನಾಲ್ಕು ಮನೆಗಳಷ್ಟೇ ಇರುವ ಈ ಊರಿನ ಜನರು ಕತ್ತಲೆ ಹರಿಯುವ ಹೊತ್ತಿಗೆ ಸೂರು ಸೇರಿಕೊಳ್ಳುತ್ತಾರೆ.
‘ಸಂಜೆಯಾಗುತ್ತಿದ್ದಂತೆ ಗುಡ್ಡದ ಗುಹೆಯಿಂದ ಇಳಿದುಬರುವ ಕರಡಿಗಳು ಮನೆಯ ಅಂಗಳ, ಹಿತ್ತಲಿನಲ್ಲಿ ವಿಹಾರ ನಡೆಸುತ್ತವೆ. ಏಪ್ರಿಲ್, ಮೇ ತಿಂಗಳಲ್ಲಿ ಇವುಗಳ ಹಾವಳಿ ಅಷ್ಟಿಷ್ಟಲ್ಲ. ಮನೆಯ ಒಳಗೇ ನುಗ್ಗಿ ಕಂಡಿದ್ದೆಲ್ಲವನ್ನು ಎತ್ತಿಕೊಂಡು ಹೋಗುತ್ತವೆ. ನಮ್ಮೂರಿನಲ್ಲಿ ಕರಡಿ ಕಚ್ಚಿಸಿಕೊಳ್ಳದ ಜನರೇ ಇಲ್ಲ’ ಎಂದು ಸಹಜ ಮಾತಿನಲ್ಲಿ ಹೇಳಿದರು ಕುಣಬಿಗ ದೂಳು ಗಾವಡಾ. 
 
ಗೋವಾ ಗಡಿಯಲ್ಲಿರುವ ಇನ್ನೊಂದು ಊರು ಬೊಂಡೇಲಿ. ಇಲ್ಲಿನ ಜನ ಜೊಯಿಡಾಕ್ಕೆ ಬರಲು ಕನಿಷ್ಠ 60 ಕಿಲೊ ಮೀಟರ್ ನಡೆದು ಬರಬೇಕು. ಹೀಗಾಗಿ ಇನ್ನೂ ತಾಲ್ಲೂಕು ಕೇಂದ್ರವನ್ನೇ ನೋಡದವರು ಇಲ್ಲಿ ಹಲವರಿದ್ದಾರೆ. ಗುಡ್ಡದ ತಳದಲ್ಲಿ ಮೈಚಾಚಿರುವ ಹೆದ್ದಾರಿ ಹಿಡಿದು ಗೋವಾ ತಲುಪಿ ಅವರು ತಮ್ಮ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ. 
 
ಪಾಡಶೇತದ ಕತೆ ಮತ್ತೊಂದು ಕೌತುಕ. ಇಲ್ಲಿನ ಜನರ ಬದುಕಿನ ಮುಕ್ಕಾಲು ಭಾಗ ನಡಿಗೆಯಲ್ಲಿಯೇ ಕಳೆದು ಹೋಗುತ್ತದೆ. ನಡೆದು ದಿನವಿಡೀ ದಣಿದರೂ ಇವರಿಗೆ ಒಂದು ದಿನದಲ್ಲಿ ತಾಲ್ಲೂಕು ಕೇಂದ್ರ ತಲುಪುವುದು ಅಸಾಧ್ಯ. 
 
 
‘ನಸುಕಿನಲ್ಲಿ ಹೊರಟು ಮುಸ್ಸಂಜೆಯ ವೇಳೆಗೆ 35 ಕಿ.ಮೀ ದೂರದ ಡೇರಿಯಾ ಸೇರಿಕೊಳ್ಳುತ್ತೇವೆ. ಅಲ್ಲಿ ಪರಿಚಿತರ ಮನೆಯಲ್ಲಿ ರಾತ್ರಿ ಮಲಗಿ ಮತ್ತೆ ಬೆಳಗಿನ ಜಾವ ನಡೆಯಲು ಪ್ರಾರಂಭಿಸಿದರೆ ಮಧ್ಯಾಹ್ನದ ಹೊತ್ತಿಗೆ ಜೊಯಿಡಾ ತಲುಪಬಹುದು. ಕಣ್ಣು ಕಟ್ಟಿಕೊಂಡು ಹೆಜ್ಜೆ ಗುರಿ ತಲುಪುವದು ನಮ್ಮ ಪಾದಗಳಿಗೆ ಗೊತ್ತು. ಕಾಲು ದಾರಿಯ ನಮ್ಮೂರಿಗೆ ಬಾಡಿಗೆ ವಾಹನ ಕೂಡ ಬರುವುದಿಲ್ಲ. ಕಾಡುಪಾಲಾಗಿರುವ ಊರಿಗೆ ಶಿಕ್ಷಣ, ದೂರವಾಣಿ, ಮೊಬೈಲ್‌ ಸೌಲಭ್ಯಗಳೆಲ್ಲ ಕನಸಿನ ಮಾತು’ ಎಂದರು ಅನಂತ ಗಾವಡಾ.
 
ಜೊಯಿಡಾ ತಾಲ್ಲೂಕಿನಲ್ಲಿರುವ 120 ಗ್ರಾಮಗಳಲ್ಲಿ ಸರ್ಕಾರಿ ಬಸ್ ಹೋಗುವ ಹಳ್ಳಿಗಳು ಐದಾರು ಇರಬಹುದಷ್ಟೆ. ತೀರಾ ಇತ್ತೀಚೆಗೆ ಉತ್ಸಾಹಿಗಳು ಜೀಪ್ ಖರೀದಿಸಿ ಬಾಡಿಗೆ ಹೊಡೆಯುತ್ತಿರುವುದರಿಂದ ಕೆಲವು ಹಳ್ಳಿಗಳಿಗೆ ವಾಹನಗಳು ಹೋಗುತ್ತಿವೆ. 20–25 ಕಿ.ಮೀ. ನಡೆದು ಕಚೇರಿ ಕೆಲಸಕ್ಕೆ ಬರುತ್ತಿದ್ದ ಜನರಿಗೆ ಈಗ ಸ್ವರ್ಗವೇ ಹತ್ತಿರ ಬಂದಷ್ಟು ಖುಷಿಯಾಗಿದೆ. ತಾಲ್ಲೂಕು ಕೇಂದ್ರದಿಂದ ನೇರವಾಗಿ ಒಂದೇ ಒಂದು ಬಸ್‌ ಹೊರಡದ ತಾಲ್ಲೂಕು ಇದ್ದರೆ ಅದು ಬಹುಶಃ ಜೊಯಿಡಾವೇ ಇರಬೇಕು. ದಾಂಡೇಲಿಯಿಂದ ಇಲ್ಲಿನ ಹಳ್ಳಿಗಳಿಗೆ ಬರುವ ಬಸ್ ಪುನಃ ಹೋಗಿ ನಿಲ್ಲುವುದು ದಾಂಡೇಲಿ ಬಸ್‌ ಡಿಪೊದಲ್ಲಿಯೇ. 
 
ಡಿಗ್ಗಿ, ಪಿಸೋಸಾ, ಪಾಡಶೇತ, ಗಾಂಗೋಡಾ, ಕರಂಜೆ, ವಿರಲ್, ಬೊಂಡೇಲಿಯಂತಹ ಕುಗ್ರಾಮಗಳೇ ಅಧಿಕವಿರುವ ಇಂತಹ ವಿಶಿಷ್ಟ ಕಾಡಿನ ನಾಡು ಪರಿಸರ ಪ್ರವಾಸೋದ್ಯಮವೆಂಬ ಬಣ್ಣದ ಲೋಕಕ್ಕೆ ತೆರೆದುಕೊಂಡಿದ್ದೇ ಒಂದು ಸೋಜಿಗ. 
 
ನಗರ ಜೀವನ ಬೇಸರವಾದವರು ಹಸಿರು ನೆಮ್ಮದಿ ಕಾಣಲು ಜೊಯಿಡಾದೆಡೆಗೆ ದಾಂಗುಡಿ ಇಡುತ್ತಿದ್ದಾರೆ. ಮೌನ ಕಣಿವೆಯಲ್ಲಿ ಬೆರಗು ಮೂಡಿಸುವ ಗಗನಚುಂಬಿ ಮರಗಳು, ರೆಂಬೆಕೊಂಬೆಗೆ ಜೋತುಬಿದ್ದಿರುವ ಹೆಜ್ಜೇನು ಪಡೆ, ದರಕಿನ ಸರಪರ ಸದ್ದು ಮಾಡುತ್ತ ಸರಿದು ಹೋಗುವ ಕಾಳಿಂಗ ಸರ್ಪ, ಜೀಗುಡುವ ಜೀರುಂಡೆ, ಜಿಂಕೆ, ಕರಡಿ, ಕಾಡುಬೆಕ್ಕುಗಳ ಚೆಲ್ಲಾಟ, ಮರದ ತುದಿಯಲ್ಲಿ ಇಣುಕಿ ಮಾಯವಾಗುವ ಮಲಬಾರ್ ಜೈಂಟ್ ಸ್ಕ್ವಿರಲ್, ಇಂಡಿಯನ್ ಪಿಟ್ಟಾ, ಏಷಿಯನ್ ಬ್ರೌನ್ ಫ್ಲೈಕ್ಯಾಚರ್, ರಿವರ್‌ಟನ್, ರಾಕೆಟ್‌ ಟೇಲ್ಡ್ ಡ್ರಾಂಗೊ, ಮಲಬಾರ್‌ ಟ್ರೋಗನ್, ಜಂಗಲ್ ಮೈನಾ, ಮರಕುಟಕ, ಹಾರ್ನ್‌ಬಿಲ್‌ ಪಕ್ಷಿಗಳ ಮುಕ್ತಛಂದ ಹಸಿರು ಕ್ಯಾನ್ವಾಸ್‌ ಮೇಲೆ ಚಿತ್ರಗಳು ಮೈದಳೆದಂತೆ ದಾರಿಗುಂಟ ಸರಿದು ಹೋಗುತ್ತವೆ. ಆಯಾಸ ಮರೆತು ಹಾಯಾಗಿ ಬಂದವರಿಗೆ ಘಮಘಮಿಸುವ ಕಾಡುಬಳ್ಳಿಯ ಕಷಾಯ, ಬಿಸಿಬಿಸಿ ಕೋಕಂ, ಗರಂ ಗರಂ ಬಾಕ್ರಿ, ಇವೆಲ್ಲಕ್ಕಿಂತ ಮಿಗಿಲಾಗಿ ತಾಯಿ ಮಮತೆಯ ಆತಿಥ್ಯ ನೀಡುವ ಹೋಮ್ ಸ್ಟೇಗಳು ಹಳ್ಳಿಗಾಡಿನೊಂದಿಗೆ ಮಹಾನಗರಗಳ ನೆಂಟಸ್ಥನ ಬೆಳೆಸಿವೆ. 
 
ನೆಲದ ಒಲವು
ವನ್ಯಜೀವಿಗಳ ಮನೆಯಾಗಿರುವ ದಟ್ಟ ಕಾಡಿನ ಕಾಳಿ ಕಣಿವೆ 1956ರಲ್ಲೇ ದಾಂಡೇಲಿ ವನ್ಯಜೀವಿ ಧಾಮವೆಂದು ಘೋಷಣೆಯಾಗಿದೆ. 1987ರಲ್ಲಿ ಈ ಅರಣ್ಯ ಅಣಶಿ ರಾಷ್ಟ್ರೀಯ ಉದ್ಯಾನದ ಮಾನ್ಯತೆ ಪಡೆದಿದೆ. ಇವೆರಡರ ಜತೆ 2007ರಲ್ಲಿ ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ತಾಣದ ಗರಿ ಮುಡಿಗೇರಿಸಿಕೊಂಡಿದೆ. 2015ರಲ್ಲಿ ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶ ಮರುನಾಮಕರಣಗೊಂಡು ಕಾಳಿ ಹುಲಿ ಸಂರಕ್ಷಿತ ಪ್ರದೇಶವೆಂಬ ಹೆಗ್ಗಳಿಕೆ ಗಳಿಸಿದೆ.  
 
ಒಂದು ದಶಕದ ಹಿಂದಿನ ಕತೆ. ಊರ ಮಕ್ಕಳೆಲ್ಲ ನಗರಕ್ಕೆ ಓಡಿ ಹಳ್ಳಿಮನೆಗಳು ಖಾಲಿಯಾಗುತ್ತಿರುವ ಪರ್ವ ಜಿಲ್ಲೆಯಲ್ಲಿ ಶುರುವಾದ ಸಂದರ್ಭ ಅದು. ಡಿಗ್ರಿ ಮುಗಿಸಿದ ಮಲೆನಾಡಿನ ತರುಣರು ಬೆಂಗಳೂರು ಬಸ್ ಹತ್ತಿದರೆ ಕಾಡುನೆಲದ ತಾದಾತ್ಮ್ಯತೆ ಜೊಯಿಡಾದ ಯುವಕರನ್ನು ಊರಿನಲ್ಲೇ ಉಳಿಸಿಕೊಂಡಿತು. ‘ಕಾಯ್ದಿಟ್ಟ ಅರಣ್ಯ’ದಲ್ಲಿ ಬೃಹತ್ ಉದ್ದಿಮೆಗಳು ಕನಸಿನಲ್ಲೂ ಕಾಣಲಾರವು. ಪರಿಸರ ಪ್ರವಾಸೋದ್ಯಮ ಸಾಧ್ಯತೆಯ ಹೊಸ ಹೊಳಹು ಅವರೆದುರು ಮಿಂಚಾಗಿ ಮೂಡಿಬಂತು. ಕಾಡು, ಪ್ರಾಣಿ, ಪಕ್ಷಿಗಳೇ ಈ ಯುವಕರಿಗೆ ಗೈಡ್‌ಗಳಾದವು. ಕಾಡುಬೆಟ್ಟ ಅಲೆದು ಪರಿಸರದ ಪಾಠ ಕಲಿತ ಯುವಕರು ಕೃಷಿ ಕಾಯಕದ ಸಂಗಡ ಹಳ್ಳಿಮನೆ ಸತ್ಕಾರದ ಮಾದರಿಯಲ್ಲಿ ‘ಹೋಮ್ ಸ್ಟೇ’ ನಡೆಸಲು ನಿರ್ಧರಿಸಿದರು.
 
 
ಜಯಾನಂದ ಡೇರೆಕರ ಅವರು ಎಂ.ಕಾಂ ಮುಗಿಸಿ ಸಂಶೋಧನೆಯಲ್ಲಿ ತೊಡಗಿರುವ ಜೊಯಿಡಾದ ಕುಣಬಿ ಸಮುದಾಯದ ಮೊಟ್ಟ ಮೊದಲ ಯುವಕ. ಪೂರ್ವಿಕರ ನೆನಪು ಮೆಲಕು ಹಾಕಿದ ಅವರು ಜೊಯಿಡಾದ ಅಡವಿ ನರ ಮನುಷ್ಯರ ವಾಸಕ್ಕೆ ತೆರೆದುಕೊಂಡು ಬುಡಕಟ್ಟು ಜನಾಂಗದ ಕುಣಬಿಗರು, ಮರಾಠಿಗರಿಗೆ ಬೆಳಕಾದ ಕತೆ ಬಿಚ್ಚಿಟ್ಟರು. 
 
‘ಗೋವಾದಲ್ಲಿ ಪೋರ್ಚುಗೀಸರ ದರ್ಬಾರು ಜೋರಾದ ಕಾಲ, ಮತಾಂತರ, ಅತ್ಯಾಚಾರದಂತಹ ಘಟನೆಗಳಿಂದ ನೊಂದು ಓಡಿಬಂದ ಜನರಿಗೆ ಅರಣ್ಯ ಆಸರೆಯಾಯಿತು. ಹಸಿರು ಚಪ್ಪರದ ಕೆಳಗೆ ಹುಲ್ಲಿನ ಗುಡಿಸಲು ನಿರ್ಮಾಣವಾದವು, ಕಾಡಂಚಿನ ತುಂಡು ಭೂಮಿಯಲ್ಲಿ ನಿತ್ಯದ ಕೂಳಿಗಾಗಿ ನೇಗಿಲ ಉಳುಮೆ ಆರಂಭವಾಯಿತು. ಆದರೆ ಚಿಕ್ಕಮಗಳೂರು, ಕೊಡಗಿನಂತೆ ನೂರಾರು ಎಕರೆಗಳ ಎಸ್ಟೇಟ್ ತಲೆಎತ್ತಲಿಲ್ಲ. ಇಂದಿಗೂ ಜೊಯಿಡಾದ ಶೇ 90ರಷ್ಟು ನಿವಾಸಿಗಳು ಬಡ ಕುಣಬಿಗರು ಮರಾಠಿಗರೇ’ ಎನ್ನುತ್ತ ಗಣಿಗಾರಿಕೆಯೆಡೆಗೆ ಮಾತನ್ನು ಹೊರಳಿಸಿದರು.
 
‘ಭೂಮಿಯನ್ನು ಬಗೆದಾಗ ಮ್ಯಾಂಗನೀಸ್ ಅದಿರಿನ ಗಣಿ ಸಿಕ್ಕಿತು. ಇಷ್ಟು ಸಿಕ್ಕರೆ ಕೇಳಬೇಕಾ, ಅದಿರು ಅಗೆಯುವ ಕಾಯಕ ಎಗ್ಗಿಲ್ಲದೇ ನಡೆಯಿತು. ಅದಿರು ತುಂಬಿದ ಲಾರಿಗಳು ದೂಳು ಹಾರಿಸುತ್ತ ಹೋಗುತ್ತಿದ್ದವು. ನಾಲ್ಕಾರು ಕಂಪೆನಿಗಳು ಬಂದು ಇಲ್ಲಿಯೇ ತಳವೂರಿ ಸ್ಥಳೀಯರಿಗೆ ಉದ್ಯೋಗದಾತರಾಗಿ ಬಡವರ ತುತ್ತಿನ ಚೀಲ ತುಂಬಿಸಿದವು. ಅವ್ಯಾಹತವಾಗಿ ನಡೆಯುತ್ತಿದ್ದ ಗಣಿ ಚಟುವಟಿಕೆಗೆ ಪೂರ್ಣವಿರಾಮ ಹಾಕಿದ್ದು 1986ರ ಅರಣ್ಯ ಸಂರಕ್ಷಣಾ ಕಾಯ್ದೆ. ಗಣಿಗಾರಿಕೆಯೇನೋ ನಿಂತಿತು ಆದರೆ ನಿರುದ್ಯೋಗದ ನಿರ್ವಾತ ಸೃಷ್ಟಿಯಾಗಿ ಪ್ಲೇಗ್‌ ಬಂದು ಜನರು ಊರು ಬಿಡುವಂತೆ ಊರಿಗೆ ಊರೇ ಕಿತ್ತೆದ್ದು ಗೋವಾದ ಕಬ್ಬಿನ ತೋಟ, ಗೇರು ನೆಡುತೋಪಿನ ಕೆಲಸಕ್ಕೆ ವಲಸೆ ಹೋಗಲು ಪ್ರಾರಂಭಿಸಿತು. 1990ರ ದಶಕದಲ್ಲಿ ಶುರುವಾದ ಗೋವಾ ವಲಸೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ’ ಎನ್ನುವಾಗ ಅವರ ಮಾತಿನಲ್ಲಿ ಅಸಹಾಯಕತೆಯ ನೋವಿತ್ತು. 
 
‘ಆಗ ಈಗಿನಂತೆ ಭಾರೀ ಯಂತ್ರಗಳು ಬಂದು ಗುಡುಗಿನಂತೆ ಶಬ್ದ ಮಾಡಿ ನೆಲವನ್ನು ಸೀಳುತ್ತಿರಲಿಲ್ಲ. ಕೆಲಸಗಾರರು ಬೆವರು ಹರಿಸಿ ಗುದ್ದಲಿ, ಪಿಕಾಸಿನಲ್ಲಿ ಬಗೆದು ಅದಿರು ತೆಗೆಯುತ್ತಿದ್ದರು. ಅದಲ್ಲದೇ ಅದಿರು ಸಾಗಾಟಕ್ಕೆ ಬರುವ ವಾಹನಗಳಿಗೆ ಮಳೆಗಾಲದಲ್ಲಿ ಜೊಯಿಡಾದ ರಸ್ತೆಗಳು ಘೇರಾವ್ ಹಾಕಿ ವಾಪಸ್ ಕಳುಹಿಸಿದವು. ಹೀಗಾಗಿ ನಮ್ಮ ಪರಿಸರ ಬಳ್ಳಾರಿಯಂತೆ ಬೆಂಗಾಡಾಗಲಿಲ್ಲ’ ಎನ್ನುತ್ತ ಮುಗುಳ್ನಕ್ಕರು.
 
‘ತಂಗುಮನೆ’ಯ ಕನಸು
‘ಜೊಯಿಡಾದ ಅಸ್ತಿತ್ವ ಕಾಡಿನಲ್ಲಿ ಸಮ್ಮಿಳಿತಗೊಂಡಿದೆ. ಹಲವು ವನ್ಯಜೀವಿಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಹೆಗಲಮೇಲೇರಿಸಿಕೊಂಡಿರುವ ನಾವು ನಿಸರ್ಗದ ಜೊತೆಯಾಗಿ ಉದ್ಯೋಗ ಸೃಷ್ಟಿಸಲು ಯೋಚಿಸಿ ಉತ್ಸಾಹಿಗಳು ಸೇರಿ 2007ರಲ್ಲಿ ಕಾಳಿ ಪರಿಸರ ಪ್ರವಾಸೋದ್ಯಮ ಸಂಸ್ಥೆ ಸ್ಥಾಪಿಸಿದೆವು. ರೆಸಾರ್ಟ್ ರಂಗಿಲ್ಲದ, ಸಾಂಪ್ರದಾಯಿಕ ತಂಗುಮನೆ (ಹೋಮ್ ಸ್ಟೇ)ಯಲ್ಲಿ ಉದ್ಯೋಗಾವಕಾಶ ನೀಡಿ ವಲಸೆ ತಪ್ಪಿಸುವುದು ನಮ್ಮ ಉದ್ದೇಶವಾಗಿತ್ತು. ಒಂಬತ್ತು ವರ್ಷಗಳ ಹಿಂದೆ ಹುಟ್ಟಿರುವ ಸಂಸ್ಥೆ ಇಂದು ನೂರಾರು ಕುಟುಂಬಗಳಿಗೆ ಬದುಕು ಕೊಟ್ಟಿದೆ’ ಎನ್ನುತ್ತ ಅವರು ‘ಕಾಡುಮನೆ’ ಹೋಮ್‌ ಸ್ಟೇ ಮಾಲೀಕ ನರಸಿಂಹ ಛಾಪಖಂಡ ಅವರನ್ನು ಪರಿಚಯಿಸಿದರು. 
 
ವಿಭಿನ್ನ ಪ್ರಯೋಗದೊಂದಿಗೆ ತಂಗುಮನೆ ನಡೆಸುತ್ತಿರುವ ನರಸಿಂಹ ತಮ್ಮ ಜಮೀನಿನಲ್ಲಿ ನಮ್ಮನ್ನು ಓಡಾಡಿಸುತ್ತ ಹೋಮ್ ಸ್ಟೇಗಳ ವಿಶೇಷತೆ ಬಿಡಿಸಿಟ್ಟರು. ‘ನಮ್ಮೂರಿನ ಪರಿಸರದಲ್ಲಿ ತಂಗುಮನೆಯ ಕಲ್ಪನೆಗೆ ಮೂರ್ತರೂಪ ಕೊಟ್ಟು ಹಳ್ಳಿ ಸೊಗಡಿನ ಊಟ, ತಿನಿಸುಗಳನ್ನು ಪರಿಚಯಿಸಿದೆವು. ಹೈಟೆಕ್‌ ನಗರಗಳ ಟೆಕಿಗಳು ಇದನ್ನು ಬಾಯಿ ಚಪ್ಪರಿಸಿ ಆಸ್ವಾದಿಸಿದರು. ಜೊಯಿಡಾದಲ್ಲಿ ಈಗ 30ಕ್ಕೂ ಅಧಿಕ ಹೋಮ್ ಸ್ಟೇಗಳಿವೆ. ಪ್ರತಿಯೊಂದೂ ಒಂದಕ್ಕಿಂತ ಇನ್ನೊಂದು ಭಿನ್ನವಾಗಿದೆ. ಒಬ್ಬರನ್ನು ಇನ್ನೊಬ್ಬರು ಅನುಕರಿಸಿ ಅಳವಡಿಸಿಕೊಳ್ಳುವಂತಿಲ್ಲ. ಇದು ನಮ್ಮ ಸಂಘದ ಅಲಿಖಿತ ಷರತ್ತು. ಚಾರಣಿಗರನ್ನು ಕರೆದು ಹೋಗುವ ಹೋಮ್ ಸ್ಟೇ ಮುಖ್ಯಸ್ಥರು, ಗೈಡ್‌ಗಳು ಅಡವಿಯ ನಿಯಮ ಪಾಲಿಸಬೇಕು. ಇದಕ್ಕೆ ತಪ್ಪಿದವರನ್ನು ಮುಲಾಜಿಲ್ಲದೇ ತರಾಟೆಗೆ ತೆಗೆದುಕೊಳ್ಳುತ್ತೇವೆ. ನಮಗೇ ನಾವೇ ಮೂಗುದಾರ ಹಾಕಿಕೊಳ್ಳುವ ಕ್ರಮವಿದು. ಜೊಯಿಡಾ ಕಾಡು ನೋಡಿ ಎಲ್ಲಾದರೂ ಪ್ಲಾಸ್ಟಿಕ್ ಸಿಕ್ಕರೆ ಹೇಳಿ ನೋಡೋಣ’ ಎಂದು ಅವರು ನಮಗೆ ಸವಾಲೆಸೆದರು.
 
‘ಪರಿಸರ ಪ್ರವಾಸೋದ್ಯಮ ಮೂಲ ನಿವಾಸಿಗಳಿಗೆ ನೇರ ಹಾಗೂ ಪರೋಕ್ಷವಾಗಿ ಬದುಕು ಕೊಟ್ಟಿದೆ. ಕುಣಬಿಗರು, ಮರಾಠಿಗರು ಬೆಳೆದ ಶುದ್ಧ ಸಾವಯವ ಅಕ್ಕಿ, ತರಕಾರಿ, 10–12 ಜಾತಿಯ ಗಡ್ಡೆಗೆಣಸುಗಳು ತಂಗುಮನೆ ಅಡುಗೆಯ ರುಚಿ ಹೆಚ್ಚಿಸಿವೆ. ಸ್ಥಳೀಯ ಹೈನುಗಾರರು ನೀಡುವ ಹಾಲು– ಮೊಸರು, ಪ್ಯಾಕೆಟ್ ಉತ್ಪನ್ನಗಳನ್ನು ಬದಿಗೆ ಸರಿಸಿದೆ. ಹೋಮ್ ಸ್ಟೇಗಳಲ್ಲಿ ಅಡುಗೆ ಸಹಾಯಕರು, ಪರಿಚಾರಕರೆಲ್ಲರೂ ಸ್ಥಳೀಯರೇ. ಮಹಿಳೆಯರು ಬಿಡುವಿನ ವೇಳೆಯಲ್ಲಿ ಹಪ್ಪಳ, ಅರಿಶಿಣ ಪುಡಿ, ಮಸಾಲೆ ಪುಡಿ, ಕಷಾಯ ಪುಡಿ, ವೈವಿಧ್ಯ ಉಪ್ಪಿನಕಾಯಿ, ಚಟ್ನಿಪುಡಿ ಸಿದ್ಧಪಡಿಸಿ ಹೋಮ್ ಸ್ಟೇಗಳಿಗೆ ಪೂರೈಕೆ ಮಾಡುತ್ತಾರೆ. ಹಸಿವಿದ್ದಷ್ಟು ಊಟ ಕೊಡಲಾಗುತ್ತಿಲ್ಲ ನಿಜ ಆದರೆ ಉದ್ಯೋಗದ ಬೇಡಿಕೆ ತಗ್ಗಿಸುವಲ್ಲಿ ಪರಿಸರ ಪ್ರವಾಸೋದ್ಯಮದ ಮುನ್ನುಡಿ ಬರೆದಿದೆ’ ಎನ್ನುತ್ತ ಅವರು ಅಪರೂಪದ ಕಳಲೆ ಉಪ್ಪಿನಕಾಯಿ ಸವಿಯಲು ಕೊಟ್ಟರು. 
 
ಕುಣಬಿಗರ ಕಂದಮೂಲ ಕೃಷಿ: ಕಂದಮೂಲ ಕೃಷಿಯಲ್ಲಿ ಕುಣಬಿಗರು ಎತ್ತಿದ ಕೈ. ಅವರ ಕೈತೋಟದಲ್ಲಿ ಬೆಳೆದ 10–12 ಜಾತಿಯ ಕೆಸುವಿನ ಗಡ್ಡೆಗಳು ಹೋಮ್ ಸ್ಟೇಗಳ ಅಡುಗೆಮನೆ ಅಲಂಕರಿಸುತ್ತವೆ. ‘ನಾವು ಸಿದ್ಧಪಡಿಸುವ ಕೆಸುವಿನ ಫ್ರೈ, ಕುಣಬಿಗರ ಸಾಂಪ್ರದಾಯಿಕ ತಿನಿಸು ಬಾಕ್ರಿ, ಹಳ್ಳಿಮನೆಯ ನೀರು ದೋಸೆ, ಕೊಟ್ಟೆ ಇಡ್ಲಿ, ಕೆಸುವಿನ ಫ್ರೈ, ಅಕ್ಕಿವಡೆ, ಹಸಿರು ತಂಬುಳಿ, ಅಪ್ಪೆಹುಳಿ ಅತಿಥಿಗಳಿಗೆ ಅಚ್ಚುಮೆಚ್ಚು’ ಎನ್ನುತ್ತಾರೆ ಗ್ರಾಮದ ಲಕ್ಷ್ಮಿ ದೇಸಾಯಿ.
 
ಕೃಷಿ ಕಠಿಣ
ಸಮೃದ್ಧ ನೆಲ ಜಲದ ಈ ನಾಡು ಭತ್ತದ ಕಣಜ. ಭತ್ತವೇ ಇಲ್ಲಿನ ಪ್ರಧಾನ ಬೆಳೆ. ಸಂರಕ್ಷಿತ ಅರಣ್ಯದ ಮಗ್ಗಲಲ್ಲಿರುವ ಭೂಮಿಯಲ್ಲಿ ಕೃಷಿ ಕಠಿಣ. ಕಾಡುಕೋಣ, ಜಿಂಕೆ, ಕಾಡು ಹಂದಿ ಹಾವಳಿ ಕೃಷಿಕರನ್ನು ಹೈರಾಣಾಗಿಸಿದೆ. ಕೃಷಿಗಿಂತ ಕೂಲಿಯೇ ಲೇಸು ಎಂದು ಗೋವಾಕ್ಕೆ ನಿತ್ಯ ಪಾದಯಾತ್ರೆ ಬೆಳೆಸುತ್ತಾರೆ ಕುಣಬಿಗರು. ಹೀಗಾಗಿ ಜೊಯಿಡಾದಲ್ಲಿ ಭತ್ತ ಕೃಷಿ ಕೊನೆಯ ಸುತ್ತಿನಲ್ಲಿದೆ. 
 
ಗಣಿ ಕೆಲಸಕ್ಕೆ ತಿಲಾಂಜಲಿ ನೀಡಿ ಜೀಪೊಂದನ್ನು ಖರೀದಿಸಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡ ಕುಣಬಿಗ ಉದಯ ವೆಳೀಪ ತಮ್ಮ ಅನುಭವ ಬಿಚ್ಚಿಟ್ಟರು. ‘ಅನ್ನ, ಉಸಿರಿನೊಂದಿಗೆ ಒಳಸೇರಿ ಹೊಟ್ಟೆ ಕದಡುವ ದೂಳು, ಮನಸ್ಸು ಕದಡುವ ಗಣಿದಣಿಗಳ ಬೈಗುಳ ಸಹಿಸಿಕೊಂಡು ಗೋವಾದ ಗಣಿಯಲ್ಲಿ ದುಡಿಯುತ್ತಿದ್ದೆ. ಆ ಜೀವನ ಸಾಕೆನಿಸಿತು,14 ವರ್ಷಗಳ ನರಕದ ಸಹವಾಸಕ್ಕೆ ವಿದಾಯ ಹೇಳಿ ಊರಿಗೆ ಬಂದೆ. ಇಲ್ಲಿ ಕೂಲಿ ಕೆಲಸಕ್ಕೂ ಬರ. ಕೈಯಲ್ಲಿ ಕಾಸಿಲ್ಲದಾಯಿತು. ಒಮ್ಮೆ ರಸ್ತೆಯಲ್ಲಿ ಹೋಗುತ್ತಿರುವಾಗ ಪಟ್ಟಣಿಗರ ಗುಂಪನ್ನು ಕಂಡೆ. ವೇಷಭೂಷಣ, ಹಾವಭಾವದಲ್ಲೇ ಅವರು ಶಹರದ ಜನರೆಂದು ತಿಳಿಯಿತು. ಇಂಥವರೆಲ್ಲ ನಮ್ಮೂರಿಗೆ ಬರುತ್ತಾರಲ್ಲ ಎಂದು ಯೋಚಿಸಿ ಜೀಪ್ ಖರೀದಿಸಲು ಮುಂದಾದೆ. ಜೀಪ್ ಬಂದ ಮೇಲೆ ಮತ್ತೆಂದೂ ಕಿರಾಣಿ ಅಂಗಡಿಗೆ ಹೋಗಿ ಉದ್ರಿ ಕೇಳಲಿಲ್ಲ’ ಎನ್ನುವ ಅವರ ಮಾತಿನಲ್ಲಿ ಆತ್ಮವಿಶ್ವಾಸ ಬೀಗುತ್ತಿತ್ತು. 
 
‘ಈಗ ಕೆಲಸಕ್ಕೆ ಬಿಡುವೇ ಇಲ್ಲ. ಒಮ್ಮೆ ಇಲ್ಲಿ ಚಾರಣಕ್ಕೆ ಬಂದವರು ಮತ್ತೆ ಬಂದೇ ಬರುತ್ತಾರೆ. ಕಣಿವೆ ಕಾಡಿನಲ್ಲಿ ಪ್ರವಾಸಿಗರನ್ನು ಸಫಾರಿ, ಜಲಪಾತ, ಗುಹೆ, ನೀರಾಟಕ್ಕೆ ಕರೆದೊಯ್ಯುವಾಗ ಸ್ವಚ್ಛಂದವಾಗಿ ಹಾರಾಡುವ ಬಾನಾಡಿಗಳನ್ನು ಅವರಿಗೆ ಪರಿಚಯಿಸುತ್ತೇನೆ. ಅವರಿಂದ ಕಲಿತ ಅನುಭವದಿಂದ ಸುಮಾರು 30 ಪಕ್ಷಿಗಳನ್ನು ಗುರುತಿಸಿ ಅವುಗಳ ವಿಶೇಷತೆ ಹೇಳಬಲ್ಲೆ’ ಎಂದು ಕೊಂಕಣಿಮಿಶ್ರಿತ ಕನ್ನಡದಲ್ಲಿ ಹೇಳಿದರು. 
 
ಗೋವಾದ ಗಡಿಯಲ್ಲಿರುವ ಜೊಯಿಡಾದ ಜನರು ಕೊಂಕಣಿ ಭಾಷಿಕರು. ಕೊಂಕಣಿ ಮಾತನಾಡಿದರೆ ಕುಣಬಿಗರೊಡನೆ ತಾಸುಗಟ್ಟಲೇ ಹರಟೆ ಹೊಡೆಯಬಹುದು. ಕನ್ನಡದಲ್ಲಿ ಮಾತಿಗಿಳಿದರೆ ಒಂದೆರಡು ವಾಕ್ಯಕ್ಕೆ ಪೂರ್ಣವಿರಾಮ ಹಾಕಿ ಹೊರಟು ಬಿಡುವವರೇ ಹೆಚ್ಚು.  
 
ದಶಕದ ಹಿಂದೆ
‘ದಶಕದ ಹಿಂದೆ ಮುಂಬೈನ ಉದ್ಯಮಿಯೊಬ್ಬರು ಮೂಲೆಯ ಜೊಯಿಡಾಕ್ಕೆ ಬಂದು ಅಡವಿ ಮಧ್ಯೆ ರೆಸಾರ್ಟ್‌ ಪ್ರಾರಂಭಿಸಿದಾಗ ಹುಬ್ಬೇರಿಸಿದ್ದೆವು. ಹಿತ್ತಲ ಗಿಡ ಮದ್ದಲ್ಲವಂತೆ ಹಾಗೇ ನಮ್ಮೂರಿನ ಮಹತ್ವ ತಿಳಿಯಲು ತಡವಾಯಿತು. ಚಾರಣಿಗರು ಇಲ್ಲಿನ ಪರಿಸರ ಕಂಡು ಹುಚ್ಚಾಗುತ್ತಾರೆ. ಹೆಬ್ಬಯಲಿನಂತಿರುವ ಬುಡೇರಿಯಾ (ಸೂಪಾ ಡ್ಯಾಂನ ಹಿನ್ನೀರು ಪ್ರದೇಶ, ಕೊಂಕಣಿಯಲ್ಲಿ ಬುಡೇರಿಯಾ ಎಂದರೆ ಮುಳುಗಡೆ ಪ್ರದೇಶ), ನಿಸರ್ಗದ ವಿಸ್ಮಯಗಳು ಪ್ರವಾಸಿಗರಲ್ಲಿ ನವಚೈತನ್ಯ ಮೂಡಿಸುತ್ತವೆ’ ಎನ್ನುತ್ತಾರೆ ಹೋಮ್ ಸ್ಟೇ ಮಾಲೀಕರಾದ ನವೀನ್ ಕಾಮತ್. 
 
‘ಏಳು ವರ್ಷಗಳ ಹಿಂದೆ ಜೊಯಿಡಾಕ್ಕೆ ಪ್ರವಾಸಿಗರನ್ನು ಕರೆ ತರಲು ಎಷ್ಟೆಲ್ಲ ಸಾಹಸ ಮಾಡಬೇಕಿತ್ತು. ಹುಬ್ಬಳಿ, ಬೆಳಗಾವಿ, ಗೋವಾಕ್ಕೆ ಬರುವ ಪ್ರವಾಸಿಗರನ್ನು ನಮ್ಮ ವಾಹನದಲ್ಲಿ ಜೊಯಿಡಾಕ್ಕೆ ಕರೆದುತಂದು ಉಪಚರಿಸುತ್ತಿದ್ದೆವು. ಖಾಲಿ ಖೋಲಿಗಳಿದ್ದ ಮನೆಯಲ್ಲಿ ಉಳಿಸುತ್ತಿದ್ದೆವು. ಮರುದಿನ ನಮ್ಮ ವಾಹನದಲ್ಲಿಯೇ ಹೋಗಿ ಬಿಟ್ಟು ಬರುವಾಗ ಪ್ರವಾಸೋದ್ಯಮದ ಕಷ್ಟ ಸಾಕೆನಿಸುತ್ತಿತ್ತು. ಈಗ ಇಲ್ಲಿಗೆ ಬಂದವರು ಅವರ ಪರಿಚಿತರಲ್ಲಿ ಜೊಯಿಡಾ ಭೇಟಿ ನೀಡುವ ಉತ್ಕಟತೆ ಹುಟ್ಟಿಸುತ್ತಾರೆ. ಅದೇ ನಮ್ಮ ಹಳ್ಳಿಮನೆ ಆತಿಥ್ಯದ ಹೆಗ್ಗಳಿಕೆ’ ಎಂದವರು ಸಾಂಗ್ವಿ ಹೋಮ್‌ ಸ್ಟೇ ಮಾಲೀಕ ವಿಕ್ರಮ್ ಸೋಗಿ. 
 
ತೀರಾ ಇತ್ತೀಚೆಗೆ ಜೊಯಿಡಾಕ್ಕೆ ಪದವಿ ಕಾಲೇಜು, ಡಿಪ್ಲೊಮಾ ಕಾಲೇಜು ಬಂದಿವೆ. ಒಂದೆರಡು ಬ್ಯಾಚ್ ವಿದ್ಯಾರ್ಥಿಗಳು ಹೊರಬಂದಿದ್ದಾರೆ. ಅವರೆಲ್ಲ ಊರಿನಲ್ಲಿ ನೆಲೆ ನಿಲ್ಲಬಹುದೇ, ಜೊಯಿಡಾಕ್ಕೂ ನಗರ ವಲಸೆಯ ಕಾವು ತಟ್ಟಬಹುದೇ ಎಂಬ ಪ್ರಶ್ನೆ ಹಿರಿಯ ತಲೆಮಾರಿನ ಮುಂದಿದೆ. ಹೋಮ್ ಸ್ಟೇ ನಡೆಸುವವರಲ್ಲಿ ಪದವಿ ಪಡೆದವರು ಒಂದಿಬ್ಬರು ಮಾತ್ರ. ಇವರಿಗೆಲ್ಲ ಸಸ್ಯಗಳ ವೈಜ್ಞಾನಿಕ ಹೆಸರು ಗೊತ್ತಿಲ್ಲ, ಆದರೆ ಹಿರಿಯಜ್ಜಿ ಕಲಿಸಿದ ಮನೆಮದ್ದಿನ ಪಾಠ ನೆನಪಿದೆ. ಪಕ್ಷಿತಜ್ಞರ ಹಾಗೆ ಪಕ್ಷಿಗಳ ಇಂಗ್ಲಿಷ್ ಹೆಸರು ಹೇಳಲು ತಿಳಿಯದು, ಆದರೆ ಕಾಡಿನ ಸಾಂಗತ್ಯ ಇವರಿಗೆ ಪಕ್ಷಿಗಳ ಜೀವನ ಚಕ್ರದ ಅರಿವು ಬೆಳೆಸಿದೆ. ಈ ನೆಲಮೂಲದ ಜ್ಞಾನ, ಅನುಭವದ ಅರಿವು, ಬುಡಕಟ್ಟು ಜನರ ಮುಗ್ಧತೆ, ಹಳ್ಳಿ ಸಂಸ್ಕೃತಿಯ ಅನಾವರಣ 
 
ಜೊಯಿಡಾದ ಪ್ರವಾಸೋದ್ಯಮಕ್ಕೊಂದು ಹೊಸ ಆಯಾಮ ನೀಡಿದೆ.
 
**
ನೇಚರ್ ಕ್ಯಾಂಪ್ 
‘ಜೊಯಿಡಾದಲ್ಲಿ ಹೋಮ್ ಸ್ಟೇಗಿಂತ ಮೊದಲು ಹುಟ್ಟಿದ್ದು ಅರಣ್ಯ ಇಲಾಖೆಯ ನೇಚರ್ ಕ್ಯಾಂಪ್. ಕುಳಗಿ, ಅಣಶಿ, ಕ್ಯಾಸಲ್‌ರಾಕ್ ಈ ಮೂರು ಕಡೆಗಳಲ್ಲಿರುವ ನೇಚರ್ ಕ್ಯಾಂಪ್‌ಗೆ ರಾಜ್ಯ, ಹೊರರಾಜ್ಯಗಳ ಚಾರಣಿಗರು ಬರುತ್ತಾರೆ. ಕಳೆದ ನಾಲ್ಕೈದು ವರ್ಷಗಳಿಂದ ಜೊಯಿಡಾಕ್ಕೆ ಬರುವವರ ಸಂಖ್ಯೆ ವೃದ್ಧಿಸಿದೆ. ಇಲಾಖೆ ನಡೆಸುವ ಜಂಗಲ್ ಸಫಾರಿ, ಪಕ್ಷಿ ವೀಕ್ಷಣೆ, ಚಾರಣ, ಟಿಂಬರ್ ಟ್ರಯಲ್ (ಸಸ್ಯ ಗುರುತಿಸುವಿಕೆ) ಅನ್ನು ಪ್ರವಾಸಿಗರು ಇಷ್ಟಪಡುತ್ತಾರೆ. 
– ಓ. ಪಾಲಯ್ಯ,
ಕಾಳಿ ಹುಲಿ ಸಂರಕ್ಷಿತ ತಾಣದ ನಿರ್ದೇಶಕ 
 
**
ಪರಿಸರ ಪಾಠ ಕಡ್ಡಾಯ
ಜೊಯಿಡಾದ ಅರಣ್ಯವು ಜಗತ್ತಿನಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಸಣ್ಣ ಕೀಟ, ಸರೀಸೃಪಗಳಿಂದ ಹುಲಿ, ಕಪ್ಪು ಚಿರತೆ, ಆನೆಯಂತಹ ಪ್ರಾಣಿಗಳಿರುವ ಅಖಂಡ ಕಾಡು ಪ್ರದೇಶವಿದು. ಇಡೀ ತಾಲ್ಲೂಕಿನಲ್ಲಿ ಶೇ 7ರಷ್ಟು ಮಾತ್ರ ಜನವಸತಿ ಪ್ರದೇಶವಿದೆ. ಇನ್ನುಳಿದ ಶೇ 93 ಭೂ ಪ್ರದೇಶವನ್ನು ಅರಣ್ಯ ಆವರಿಸಿದೆ. ಭಾರತದಲ್ಲಿರುವ ಎಂಟು ಬಗೆಯ ಹಾರ್ನ್‌ಬಿಲ್ ಪಕ್ಷಿಗಳಲ್ಲಿ ನಾಲ್ಕು ಜಾತಿಯ ಹಾರ್ನ್‌ಬಿಲ್ ನೆಲೆಸಿರುವ ಅಪರೂಪದ ತಾಣ ಇದು. 
 
‘ಪಕ್ಷಿ ವೀಕ್ಷಣೆಗೆಂದೇ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಅಧ್ಯಯನ ವರದಿ ಪ್ರಕಾರ 410 ಜಾತಿಯ ಪಕ್ಷಿಗಳು ಇಲ್ಲಿನ ಪರಿಸರದಲ್ಲಿವೆ. ದಶಕದ ಹಿಂದೆ ಇಲ್ಲಿಯೂ ವನ್ಯಜೀವಿಗಳ ಬೇಟೆ ಕದ್ದುಮುಚ್ಚಿ ನಡೆಯುತ್ತಿತ್ತು. ಪ್ರಾಣಿ, ಪಕ್ಷಿಗಳು ನೋಟಕ್ಕೆ ದುರ್ಲಭವಾದಾಗ ಸ್ಥಳೀಯರು ಜಾಗೃತರಾದರು. ಪ್ರಾಣಿಗಳ ಉಳಿವಿನಲ್ಲಿ ನಮ್ಮ ಭವಿಷ್ಯ ಅಡಗಿದೆ ಎಂಬ ಪ್ರಜ್ಞೆ ಈಗ ಜನರಲ್ಲಿ ಮೂಡಿದೆ. ಪಕ್ಷಿ ಪೋಷಣೆಯ ಪಾಠ ಕಲಿತಿದ್ದಾರೆ. ಇಲ್ಲಿನ ಪುಟ್ಟ ಬಾಲಕ ಸಹ 25–30 ಪಕ್ಷಿಗಳನ್ನು ಗುರುತಿಸಬಲ್ಲ’ ಎನ್ನುತ್ತಿರುವಾಗಲೇ ಅವರ ಕಾಡುಮನೆ ಅಂಗಳದ ಅಂಚಿನ ಮರದ ಮೇಲಿದ್ದ ದೈತ್ಯ ಅಳಿಲು (ಜೈಂಟ್ ಸ್ಕ್ವಿರಲ್) ನಮಗೆ ಹಾಯ್ ಎಂದು ಹೋಯಿತು.
 
‘ನೇಚರ್ ವಾಕ್ ಹೋಗುವಾಗ ಕಾಡಿನ ನೀರವತೆಯಲ್ಲಿ ಒಂದಾಗಬೇಕು. ಮುಖಕ್ಕೆ ಮುತ್ತಿಕ್ಕುವ ಹಸಿರೆಲೆಗಳು, ಕಾಲಿಗೆ ತಡವರಿಸುವ ಬಳ್ಳಿಬೀಳುಗಳು, ವನಸಿರಿಯ ಖುಷಿ ಅನುಭವಿಸಬೇಕು. ಕಾಡುಜೀವಿಗಳ ಖಾಸಗಿತನ ಕದಡುವ ಅಬ್ಬರದ ಸಂಗೀತ, ಹಕ್ಕಿಪಕ್ಷಿಗಳ ಕಲರವ ಕೇಳಿ ಹುಚ್ಚೆದ್ದು ಕುಣಿವ ಸಂಸ್ಕೃತಿಗೆ ನಮ್ಮಲ್ಲಿ ಅವಕಾಶವಿಲ್ಲ. ಕಾಡು ಪ್ರವೇಶಿಸುವ ಮುನ್ನ 10 ನಿಮಿಷಗಳ ಈ ಪರಿಸರ ಪಾಠವನ್ನು ಪ್ರವಾಸಿಗರು ತಾಳ್ಮೆಯಿಂದ ಕೇಳಬೇಕು. ಅಡವಿಯ ಒಡನಾಟದಿಂದ ವಾಪಸ್ ಊರಿಗೆ ಮರಳುವ ಪ್ರವಾಸಿಗನಿಗೆ ಪ್ರಕೃತಿ ಆರಾಧನೆಯ ಭಾವ ಮನದಲ್ಲಿ ಮೊಳೆಯಬೇಕು’ ಎಂದ ನರಸಿಂಹ ಅವರ ಪಾಠವನ್ನು ನಾವೂ ಕೇಳಿದೆವು. 
 
ಕಾಳಿ ನದಿಯಲ್ಲಿ ಜಂಗಲ್ ಲಾಡ್ಜ್‌ ನಡೆಸುವ ರ್‍ಯಾಫ್ಟಿಂಗ್ ಪ್ರವಾಸಿಗರಿಗೆ ಥ್ರಿಲ್ ಕೊಡುತ್ತದೆ. ಆದರೆ ಇದೊಂದೇ ಇಲ್ಲಿನ ಪ್ರವಾಸದ ಬೆರಗಲ್ಲ; ಪರಿಸರ, ನದಿ, ಚಾರಣ, ಪಕ್ಷಿ ವೀಕ್ಷಣೆ, ಫೋಟೊಗ್ರಫಿ, ಮಾನ್‌ಸೂನ್ ಟೂರಿಸಂ ಇಲ್ಲಿನ ವಿಶೇಷತೆಗಳು. ಸಿಂಥೇರಿ ರಾಕ್ಸ್, ಕವಳಾ ಗುಹೆ, ಉಳವಿ ಗುಹೆ, ಚನ್ನಬಸವೇಶ್ವರ ದೇವಾಲಯ, ದೂದ್‌ಸಾಗರ ಫಾಲ್ಸ್, ಮೊಸಳೆ ಪಾರ್ಕ್ ಸುತ್ತಲಿನ ಆಕರ್ಷಣೆಗಳು. 
 
**
ಬಲಿಯಾದ ಕಾಡು 
1980ರಲ್ಲಿ ಧುತ್ತನೆ ಬಂದ ಜಲವಿದ್ಯುತ್ ಯೋಜನೆಗೆ ಸೂಪಾ ಊರೇ ಆಹುತಿಯಾಯಿತು. 26 ಹಳ್ಳಿಗಳು ಸಂಪೂರ್ಣ ಮುಳುಗಿದವು. 21 ಹಳ್ಳಿಗಳು ಭಾಗಶಃ ಮುಳುಗಿವೆ. ಭತ್ತದ ಗದ್ದೆ, ಅರಣ್ಯ ಪ್ರದೇಶಗಳು ಅಣೆಕಟ್ಟಿನ ಅಡಿಯಲ್ಲಿ ಕರಗಿದವು. 13,960 ಹೆಕ್ಟೇರ್ ಪ್ರದೇಶ ಮುಳುಗಡೆಯಾಯಿತು. 
 
*
ಗಂಜಿಕೇಂದ್ರ ಜೊಯಿಡಾ
ಜೊಯಿಡಾ ತಾಲ್ಲೂಕಿನ ಏಳು ಗ್ರಾಮಗಳಲ್ಲಿ ಜನವಸತಿಯೇ ಇಲ್ಲ. ಶೇ 50ರಷ್ಟು ಜನವಸತಿ 28 ಹಳ್ಳಿಗಳಲ್ಲಿ ಕೇಂದ್ರಿತವಾಗಿದೆ. ಸೂಪಾ ಡ್ಯಾಂ ನಿರಾಶ್ರಿತರಿಗೆ ರಾಮನಗರದಲ್ಲಿ ಕಾಲೊನಿ ನಿರ್ಮಾಣವಾಯಿತು. ಮೂಲ ಸೌಕರ್ಯವಿಲ್ಲದ ಕಾಲೊನಿ ತೊರೆದು ಅನೇಕರು ಜೊಯಿಡಾಕ್ಕೆ ಬಂದು ಜಮೀನು ಖರೀದಿಸಿದರು.
 
 
 
ಕೊಡಸಳ್ಳಿ ನಿರಾಶ್ರಿತರಿಗೆ ಸರ್ಕಾರ ಪರ್ಯಾಯ ಭೂಮಿ ನೀಡಿದ್ದು ಸಹ ಜೊಯಿಡಾದಲ್ಲಿ. ಪರಿಸರ ಪ್ರವಾಸೋದ್ಯಮ ತೆರೆದುಕೊಂಡಿರುವ ಜೊಯಿಡಾದಲ್ಲಿ ಭೂಮಿಗೆ ಬೆಲೆ ಬಂದಿದೆ. 5 ವರ್ಷಗಳ ಹಿಂದೆ ಎಕರೆಗೆ ₹1.5 ಲಕ್ಷ ಮೌಲ್ಯ ದೊಡ್ಡ ಮಾತಾಗಿತ್ತು. ಇಂದು ಇದೇ ಭೂಮಿಗೆ ₹ 20 ಲಕ್ಷ ಬೆಲೆ. ಅಡವಿಯ ನಡುವೆ ಫಾರ್ಮ್ ಕಟ್ಟಿಕೊಂಡು ವೀಕ್ಎಂಡ್ ಕಳೆಯಲು ಬರುವವರ ಜಮೀನು ಖರೀದಿ ಜೋರಾದ ಮೇಲೆ ದರ ದುಪ್ಪಟ್ಟುಗೊಂಡಿದೆ ಎಂಬುದು ಸ್ಥಳೀಯರ ಅಭಿಪ್ರಾಯ. 
 
*
ಹಾರ್ನ್‌ಬಿಲ್ ಸಂರಕ್ಷಿತ ಪ್ರದೇಶ 
ಭಾರತದಲ್ಲಿರುವ ಎಂಟು ಜಾತಿಯ ಹಾರ್ನ್‌ಬಿಲ್‌ಗಳಲ್ಲಿ ನಾಲ್ಕು ಜಾತಿಯವು ಜೊಯಿಡಾ ಕಾಡಿನಲ್ಲಿವೆ. ಮಲಬಾರ್ ಪೈಡ್, ಮಲಬಾರ್ ಗ್ರೇ, ಇಂಡಿಯನ್ ಗ್ರೇ, ಗ್ರೇಟ್ ಪೈಡ್ ಇಲ್ಲಿಯೇ ಸಂತಾನೋತ್ಪತ್ತಿ ನಡೆಸುತ್ತವೆ. ವನ್ಯಜೀವಿ ಸಂರಕ್ಷಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ 2011ರಲ್ಲಿ ದಾಂಡೇಲಿ, ಜೊಯಿಡಾ ಸುತ್ತಲಿನ ಅರಣ್ಯವನ್ನು ಹಾರ್ನ್‌ಬಿಲ್ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. 
 
*
ರೋಚಕ ರ್‍್ಯಾಫ್ಟಿಂಗ್
ಜಂಗಲ್ ಲಾಡ್ಜ್ ವತಿಯಿಂದ ಕಾಳಿನದಿಯಲ್ಲಿ ನಡೆಯುವ ರ್‍್ಯಾಫ್ಟಿಂಗ್ ಪ್ರವಾಸಿಗರಿಗೆ ಮುದ ನೀಡುತ್ತದೆ. ನವೆಂಬರ್‌ನಿಂದ ಮೇವರೆಗೆ ಸಾಹಸಮಯ ರ್‍ಯಾಫ್ಟಿಂಗ್‌ನ ಮಜಾ ಅನುಭವಿಸಬಹುದು. ಅಣೆಕಟ್ಟೆಯಲ್ಲಿ ನೀರು ಬಿಟ್ಟಾಗ ಮಾತ್ರ ಈ ಖುಷಿ ಎಂಬುದು ನೆನಪಿರಲಿ. ನದಿಯಂಚಿನಲ್ಲಿರುವ ಹೋಮ್ ಸ್ಟೇಗಳು ನಡೆಸುವ ಜಲಕ್ರೀಡೆಗಳು ಕಚಗುಳಿಯಿಡುತ್ತವೆ. ಕಾಡಿನ ನಾಡು ಜೊಯಿಡಾ ಕಳೆದ ಎರಡು ವರ್ಷಗಳಿಂದ ಬರಗಾಲ ಎದುರಿಸುತ್ತಿದೆ. ಮಳೆಯ ಪ್ರಮಾಣ ಕಡಿಮೆಯಾಗಿದೆ. ಕಾಳಿ ಮಂದಗಮನೆಯಾಗಿ ಹರಿಯುತ್ತಿದ್ದಾಳೆ. 
 
*
ಐಶಾರಾಮಿ ರೆಸಾರ್ಟ್‌ 
ಕಾಡಿನ ಮಡಿಲಲ್ಲಿ ಆರೆಂಟು ಐಶಾರಾಮಿ ರೆಸಾರ್ಟ್‌ಗಳಿವೆ. ತುಸು ದುಬಾರಿಯಾದರೂ ರೆಸಾರ್ಟ್‌ಗಳ ವೈವಿಧ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಖಾಸಗಿ ವಾಹನಗಳಿದ್ದರಷ್ಟೇ ಸುಲಭವಾಗಿ ರೆಸಾರ್ಟ್ ತಲುಪಬಹುದು. ಜೊಯಿಡಾದಲ್ಲಿ ಬಸ್‌ ಸಂಚಾರ ಬಹುವಿರಳ. ಹೋಮ್‌ ಸ್ಟೇಗಳಲ್ಲಿ ದೇಸಿ ಊಟವೇ ವಿಶೇಷವಾದರೆ ರೆಸಾರ್ಟ್‌ಗಳಲ್ಲಿ ಇದರ ಜತೆಗೆ ಉತ್ತರ ಭಾರತ, ದಕ್ಷಿಣ ಭಾರತದ ಅಡುಗೆ ಸವಿಯಬಹುದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT