ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೊಬೈಲ್ ಗೀಳು...

ಕಾಳಜಿ
Last Updated 6 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಮಲಗುವ ಮುನ್ನ ಕಥೆ ಹೇಳುವಂತೆ ಅಜ್ಜಿ–ತಾತ, ಅಪ್ಪ–ಅಮ್ಮನನ್ನು ಪೀಡುಸುತ್ತಿದ್ದ ಮಕ್ಕಳು ಈಗಿಲ್ಲ. ‘ಬಾಲಮಂಗಳ’, ‘ಚಂದಮಾಮ’ಗಳನ್ನು ಹಿಡಿಯುತ್ತಿದ್ದ ಕೈಗಳಲ್ಲಿ ಇಂದು ಮೊಬೈಲ್‌- ಟ್ಯಾಬ್‌ಗಳು ಬಂದಿವೆ.
 
ಮೊಬೈಲ್‌ ಚಟಕ್ಕೆ ವಯೋಮಿತಿಯ ಹಂಗಿಲ್ಲ. ಮಕ್ಕಳಿಂದ ಮುದುಕರವರೆಗೂ ಎಲ್ಲರೂ ಮೊಬೈಲ್‌ ದಾಸರೆ. ಇದರ ಪರಿಣಾಮ ಮಕ್ಕಳ ಮೇಲೆಯೇ ಹೆಚ್ಚು.
6–14 ವರ್ಷದ ಮಕ್ಕಳು ಮೊಬೈಲ್‌ಗೆ ಸುಲಭವಾಗಿ ದಾಸರಾಗುತ್ತಿದ್ದಾರೆ. ಗೇಮ್, ಸಾಮಾಜಿಕ ಜಾಲತಾಣ ವೀಕ್ಷಣೆ, ಯೂಟ್ಯೂಬ್‌, ಅಶ್ಲೀಲ ಚಿತ್ರ ವೀಕ್ಷಣೆ ಇನ್ನೂ ಹಲವು ಕಾರಣಗಳಿಗಾಗಿ ಮೊಬೈಲ್ ಬಳಸುತ್ತಿರುವ ಮಕ್ಕಳು ಮೊಬೈಲ್‌ಗೆ ಅಂಟಿಕೊಂಡು ವಿವಿಧ ರಿತಿಯ ಮನೋ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
 
ಮೊಬೈಲ್‌ ಚಟದಿಂದ ಮಕ್ಕಳಲ್ಲಿ ನಾನಾ ರೀತಿಯ ಮಾನಸಿಕ ಮತ್ತು ದೈಹಿಕ ಕಾಯಿಲೆಗಳು ಉಂಟಾಗುತ್ತವೆ ಎನ್ನುತ್ತಾರೆ ವೈದ್ಯರು.
 
‘ಮೊಬೈಲ್ ಚಟ ಹೊಂದಿದ ಮಕ್ಕಳ ಸಂವಹನ ಸಾಮರ್ಥ್ಯ ಕಡಿಮೆಯಾಗುತ್ತದೆ. ಕುಟುಂಬದ  ಬಗ್ಗೆ ಅಸಡ್ಡೆ, ಸ್ವಾರ್ಥ ಹೆಚ್ಚಾಗುವ ಸಾಧ್ಯತೆ ಇದೆ. ಸಿಟ್ಟು ಬೇಗ ಬರುವುದು, ಚಿಕ್ಕಪುಟ್ಟ ಕಾರಣಗಳಿಗೂ ರೇಗುವುದು, ಸಂಘ ಜೀವನದಿಂದ ವಿಮುಖ ಮನೋಭಾವ ಸೇರಿದಂತೆ ಇನ್ನೂ ಹಲವು ಮಾನಸಿಕ ಪರಿಣಾಮ ಮಕ್ಕಳ ಮೇಲಾಗುತ್ತದೆ’ ಎನ್ನುತ್ತಾರೆ ಮಕ್ಕಳ ವೈದ್ಯ ದೀಪಕ್‌ ಷಾ.
 
ಅನವಶ್ಯಕವಾಗಿ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು, ಖಾಸಗಿ ವಿಚಾರಗಳನ್ನು ಬಹಿರಂಗಪಡಿಸುವುದು, ಇತರರ ಖಾಸಗಿ ಬದುಕಿನ ಬಗ್ಗೆ ಅತಿಯಾದ ಕುತೂಹಲ, ಕುಟುಂಬದ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತೆರೆದಿಡುವುದು ಇತ್ಯಾದಿ. ಇವುಗಳಿಂದ ಮಕ್ಕಳು ಸ್ವತಃ ಸಮಸ್ಯೆಗೆ ಸಿಲುಕುವುದರ ಜೊತೆಗೆ ಕುಟುಂಬವನ್ನೂ ಸಮಸ್ಯೆಗೆ ಸಿಲುಕಿಸುತ್ತಾರೆ.
 
ಮೊಬೈಲ್ ಚಟ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕ ಕಾಯಿಲೆಗಳಿಗೂ ಕಾರಣವಾಗುತ್ತದೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆ, ನಿದ್ರಾಹೀನತೆ, ಬೇಗ ಸುಸ್ತಾಗುವುದು ಆಗುತ್ತದೆ. ಅಲ್ಲದೆ ಅಶ್ಲೀಲ ಚಿತ್ರಗಳ ವೀಕ್ಷಣೆಯಿಂದ ಲೈಂಗಿಕ ವಿಷಯಗಳ ಬಗೆಗೆ ತಿಳಿದುಕೊಳ್ಳುವ ಅನಗತ್ಯ ಕುತೂಹಲ ಹೆಚ್ಚಬಹುದು.
 
**
 
ಮೊಬೈಲ್‌ಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳುವಂತೆ ಮಾಡುವುದು ಪೋಷಕರ ಜವಾಬ್ದಾರಿ.
–ಡಾ.ದೀಪಕ್‌ ಷಾ,
ನಿರ್ದೇಶಕರು, ಸತ್ವಂ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು
 
**
ಮಕ್ಕಳ ಮೊಬೈಲ್ ಚಟ ಬಿಡಿಸಲು ಕೆಲವು ಸರಳ ಉಪಾಯಗಳನ್ನು ಪೋಷಕರು ಅನುಸರಿಸಬಹುದು.
* ಮಕ್ಕಳು ಯಾವ ಸಮಯದಲ್ಲಿ ಮೊಬೈಲ್ ಹೆಚ್ಚು ಬಳಸುತ್ತಿದ್ದಾರೆಂದು ಗಮನಿಸಿ ಆ ಸಮಯದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಾ ಕಳೆಯಲು ಪ್ರಯತ್ನಿಸಿ.

* ದೈಹಿಕ ಶ್ರಮ ಬೇಡುವ ಆಟವಾಡುವಂತೆ ಮಕ್ಕಳನ್ನು ಪ್ರೇರೇಪಿಸಿ.

* ಮೊಬೈಲ್ ಬಳಕೆಗೆ ಸಮಯ ನಿಗದಿ ಮಾಡುವುದು, ಮೊಬೈಲ್ ಬಳಸದಂತೆ ಪಾಸ್‌ವರ್ಡ್‌ ಇಡುವುದು, ವೆಬ್‌ಸೈಟ್‌ ಬ್ಲಾಕ್ ಆಪ್ಷನ್ ಬಳಸಿ ಅಶ್ಲೀಲ ಚಿತ್ರಗಳಿರುವ ವೆಬ್‌ಸೈಟ್‌ ಪುಟ ತೆರೆಯದಂತೆ ತಡೆಯುವುದು.

* ಎಲ್ಲಕ್ಕಿಂತ ಮುಖ್ಯವಾಗಿ ಪೋಷಕರೂ ಅನವಶ್ಯಕವಾಗಿ ಮೊಬೈಲ್‌ ಬಳಸದೆ ಇದ್ದು ಮಕ್ಕಳಿಗೆ ಮಾದರಿಯಾಗುವಂತೆ ವರ್ತಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT