ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ಟಿಲಿನಿಂದ ಯಶಸ್ಸಿನ ಆಗಸಕ್ಕೆ

ಪ್ರೇರಣೆ
Last Updated 6 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಮುಂಬೈನ ಸುದೀಪ್ ಸ್ಟುಡಿಯೊ ಮೆಟ್ಟಿಲುಗಳನ್ನು ಇಳಿಯುತ್ತಿದ್ದ ಆ ಯುವಕ ಬಿಕ್ಕಿಬಿಕ್ಕಿ ಅಳುತ್ತಿದ್ದ. ಹೆಜ್ಜೆಗಳು ಭಾರವಾಗಿ ಮೆಟ್ಟಿಲುಗಳ ಮೇಲೆ ಕುಸಿದು ಕುಳಿತ.
 
ಕಣ್ಣೀರು ಒರೆಸಲು ಯಾರೂ ಬರಲಿಲ್ಲ. ತಾನು ಹಾಡಿದ್ದ ಎರಡು ಚಿತ್ರಗೀತೆಗಳನ್ನು ಮತ್ತೆ ಬೇರೆ ಯಾರಿಂದಲೋ ಹಾಡಿಸಿದ್ದಕ್ಕೆ ಒತ್ತರಿಸಿಕೊಂಡು ಬಂದಿದ್ದ ದುಃಖ ಅದು. ಹದಿನೇಳನೇ ವಯಸ್ಸಿನಲ್ಲೇ ಮುಂಬೈನಲ್ಲಿ ‘ಹಿಂದಿ ಸಿನಿಮಾ ಹಿನ್ನೆಲೆ ಗಾಯಕ ಆಗಬೇಕು’ ಎಂದು ಅಡ್ಡಾಡುತ್ತಿದ್ದ ಹುಡುಗನ ಮನಸ್ಸು ಕಾಮಗಾರಿ ನಡುವೆ ಕಿತ್ತುಹೋದ ರಸ್ತೆಯಂತಾಗಿತ್ತು. 
 
ಒಂದಿಷ್ಟು ಹೊತ್ತು ಕಳೆದ ಮೇಲೆ ತನಗೆ ತಾನೇ ಸಮಾಧಾನ ಹೇಳಿಕೊಂಡು ಎದ್ದು ನಡೆದಿದ್ದ. 
 
ಇನ್ನೊಂದು ದಿನ. ಬೇರೆ ಸ್ಟುಡಿಯೊ. ರಾಜಸ್ತಾನಿ ಹಾಡುಗಳನ್ನು ರೆಕಾರ್ಡ್ ಮಾಡುತ್ತಿದ್ದ. ಆ ಕಂಠ ಕೇಳಿ ಆಡಿಯೊ ಕಂಪೆನಿಯ ‘ಬಾದ್‌ಷಾ’ ಎನಿಸಿದ್ದ ಗುಲ್ಶನ್ ಕುಮಾರ್ ಕರಗಿದರು. ತರುಣನಿಗೆ ಅವಕಾಶ ಕೊಟ್ಟರು. 1990ರ ದಶಕದ ಮೊದಲ ಭಾಗದಲ್ಲಿ ಜನರ ಹೃದಯಕ್ಕೆ ಪ್ರತಿಭಾವಂತನ ಕಂಠ ಇಳಿಯತೊಡಗಿತು.
 
ಒಂದು ಪೈಸೆ ಹಣವನ್ನೂ ಪಡೆಯದೆ ಮಾಡಿಕೊಟ್ಟ ‘ದೀವಾನಾ’ ಎಂಬ ಹಿಂದಿ ಆಲ್ಬಂ ಜನಪ್ರಿಯತೆಯನ್ನೂ ದೊಡ್ಡ ಸಂಖ್ಯೆಯ ಲಲನಾಭಿಮಾನಿಗಳನ್ನೂ ದಕ್ಕಿಸಿ ಕೊಟ್ಟಿತು. ಮುಂದೆ ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದದ್ದು ಅದೇ ಗಾಯಕ. ಪ್ರಶಸ್ತಿ ಪಡೆದ ಆ ದಿನ ಕಲಾಂ ಅವರಂತೆಯೇ ಗಾಯಕನ ಕೇಶವಿನ್ಯಾಸವೂ ಇತ್ತು. 
 
ಮೆಟ್ಟಿಲುಗಳ ಮೇಲೆ ಬಿಕ್ಕಿ, ಆಮೇಲೆ ಅವಕಾಶದ ಆಕಾಶ ಎಟುಕಿಸಿಕೊಂಡ ಗಾಯಕ ಸೋನು ನಿಗಮ್. 
 
ಹರಿಯಾಣದ ಫರೀದಾಬಾದ್‌ನ ಅಗಮ್ ಕುಮಾರ್ ನಿಗಮ್, ಶೋಭಾ ನಿಗಮ್ ಮಗ ಸೋನು. ಅಪ್ಪ ಆರ್ಕೆಸ್ಟ್ರಾಗಳಲ್ಲಿ ಮೊಹಮ್ಮದ್ ರಫಿಯ ಹಾಡುಗಳನ್ನು ಹಾಡುತ್ತಿದ್ದರು. ನಾದದಲೆಗಳ ಕಿವಿಗಿಳಿಸಿಕೊಂಡೇ ಬೆಳೆದ ಬಾಲಕ ಸೋನು, ತಾನೂ ಅಪ್ಪನ ಜತೆ ವೇದಿಕೆ ಮೇಲೆ ಹಾಡಬೇಕೆಂದು ಹಟ ಹಿಡಿದ. ಅಲ್ಲಿದ್ದವರು ತಡೆದಾಗ ಗೋಳೋ ಎಂದು ಅತ್ತಿದ್ದ. 1976ರ ಸೆಪ್ಟೆಂಬರ್‌ನ ಆ ದಿನ ಇನ್ನೂ ಸೋನು ನಿಗಮ್‌ಗೆ ನೆನಪಿದೆ. 3 ವರ್ಷ 2 ತಿಂಗಳ ಮಗು ಅಪ್ಪನ ಜತೆ ಹಾಡಬೇಕೆಂದು ರಚ್ಚೆ ಹಿಡಿದ ದಿನವದು. ಮಗುವನ್ನು ಸಮಾಧಾನ ಪಡಿಸಲು ಯಾರಿಗೂ ಆಗಲಿಲ್ಲ. ಕೊನೆಗೆ ವೇದಿಕೆಗೆ ಕರೆತಂದರು. ಅಪ್ಪನ ಜತೆ ಬಾಲಕನೂ ‘ಕ್ಯಾ ಹುಆ ತೇರಾ ವಾದಾ’ ಹಾಡಿಗೆ ದನಿಯಾದಾಗ ಜೋರು ಚಪ್ಪಾಳೆ. 
 
ಟಿ.ವಿ. ರಿಯಾಲಿಟಿ ಷೋ ‘ಸರಿಗಮಪ’ ಮೂಲಕ ತನ್ನ ವಿದ್ವತ್ತು, ಸಂಗೀತ ಪ್ರೀತಿಯನ್ನು ಹಂಚಿದ ಸೋನು ನೋಡನೋಡುತ್ತಲೇ ಮನೆ ಮಾತಾದರು. ಆದರೆ, ಸಿನಿಮಾ ಹಾಡಿನಿಂದ ದೊಡ್ಡ ಬ್ರೇಕ್ ಸಿಕ್ಕಿದ್ದು ಆರು ವರ್ಷಗಳ ನಂತರ; ‘ಪರ್್ದೇಸ್’ ಚಿತ್ರದ ‘ಯೇ ದಿಲ್ ದೀವಾನಾ’ ಗೀತೆಯ ಮೂಲಕ. ಆಮೇಲೆ ಸೋನು ಬೆಳೆದರು. ‘ಮುಂಗಾರು ಮಳೆ’ ಚಿತ್ರಗೀತೆಗಳ ಅಭೂತಪೂರ್ವ ಯಶಸ್ಸು ಕನ್ನಡದಲ್ಲಿ ಅವರಿಗೊಂದು ಪರ್ಯಾಯ ಮಾರುಕಟ್ಟೆಯನ್ನೇ ಒದಗಿಸಿತು. ಅಮೆರಿಕದಲ್ಲಿ ಕುಳಿತುಕೊಂಡು ಕನ್ನಡದ ಹಾಡುಗಳನ್ನು ರೆಕಾರ್ಡ್ ಮಾಡುವಷ್ಟು ಬೇಡಿಕೆ ಅವರಿಗೆ ಬಂದಿತು. 
 
ಮುಂಗೋಪದ ಹುಡುಗ ಮೆಟ್ಟಿಲುಗಳ ಮೇಲೆ ಕುಸಿದ ನಂತರ ದಿಗ್ಗನೆದ್ದುದು ಒಂದು ಕಥೆ. ಹಿನ್ನೆಲೆ ಗಾಯಕನಾಗಿ ಬೆಳೆದು, ವಿವಾದಗಳಿಗೆ ಪಕ್ಕಾದದ್ದು ಇನ್ನೊಂದು ಕಥೆ. ಗಾಯಕರಿಗೆ ರಾಯಲ್ಟಿ ಕೊಡಬೇಕು ಎಂದು ದನಿಯೆತ್ತಿ ಸಲ್ಮಾನ್ ಖಾನ್ ತರಹದವ ರಿಂದಲೂ ಮಾತಿನ ವಿರೋಧ ಎದುರಿಸಿದವರು. 
 
‘ರೋಬೊ’ ಚಿತ್ರದ ಹಾಡೊಂದಕ್ಕೆ ದನಿಯಾಗುವಂತೆ ಎ.ಆರ್. ರೆಹಮಾನ್ ಕರೆದಾಗ, ‘ಸಾಹಿತ್ಯ ಕೆಟ್ಟದಾಗಿದೆ, ಹಾಡಲಾರೆ’ ಎಂದು ಕಡ್ಡಿ ತುಂಡುಮಾಡಿದಂತೆ ಹೇಳಿದವರು. ಅವಕಾಶ ಕೊಟ್ಟ ಗುಲ್ಶನ್ ಕುಮಾರ್ ಅವರನ್ನು ಸ್ಮರಿಸುತ್ತಲೇ, ಗುಲ್ಶನ್ ಪುತ್ರ ಭೂಷಣ್ ಮಾಡಿದ ಹಳವಂಡಗಳನ್ನು ಖಂಡಿಸಿದವರು. 
 
ಎಲ್ಲ ಏಳುಬೀಳುಗಳ ನಂತರ ಕಾಡುತ್ತಲೇ ಇರುವುದು ಸೋನು ಕಂಠ; ಅದರಲ್ಲಿನ ಆರ್ದ್ರ ಭಾವಗಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT